ಗಯಾ,ಜ.25: ರಾಷ್ಟ್ರೀಯ ಪರಿಹಾರ ನಿಧಿಗೆ 130 ಕೋಟಿ ಡಾಲರ್ ದೇಣಿಗೆ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಇಮೇಲ್ ರವಾನಿಸಲು ಯತ್ನಿಸುತ್ತಿದ್ದ ಎಂದು ಆರೋಪಿಸಿ ಬುದ್ದ ಗಯಾ ನಗರದ ಸೈಬರ್ ಕೆಫೆಯೊಂದರಲ್ಲಿ 49 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸುಧೀರ್ ಕುಮಾರ್ ಎಂಬವರ ಸೈಬರ್ ಕೆಫೆಗೆ ಬಂದ ವ್ಯಕ್ತಿ ತಾನು ಅಮೆರಿಕ ಅಧ್ಯಕ್ಷ ಒಬಾಮ ಅವರಿಗೆ ಒಂದು ಇಮೇಲ್ ಕಳುಹಿಸಬೇಕು ಎಂದು ಹೇಳಿದ್ದಾನೆ. ಈ ಬಗ್ಗೆ ತಕ್ಷಣ ಎಚ್ಚರಿಕೆ ವಹಿಸಿದ ಕುಮಾರ್ ಬುದ್ಧ ಗಯಾ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದರು ಎಂದು ಗಯಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಸೈಬರ್ ಕೆಫೆಗೆ ಬಂದ ವ್ಯಕ್ತಿ ಒಬಾಮಗೆ ಎರಡು ಪುಟಗಳ ಪತ್ರವೊಂದನ್ನು ಉರ್ದು ಭಾಷೆಯಲ್ಲಿ ಟೈಪ್ ಮಾಡಿ, ಅದರಲ್ಲಿ ರಾಷ್ಟ್ರೀಯ ಪರಿಹಾರ ನಿಧಿಗೆ 130 ಕೋಟಿ ಡಾಲರ್ ವಂತಿಗೆ ಪಾವತಿಸಬೇಕು ಎಂದು ಸ್ವತಃ ತಾನೇ ಘೋಷಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯನ್ನು 49 ವರ್ಷದ ಇನಾಮ್ ರಝಾ ಎಂದು ಗುರುತಿಸಲಾಗಿದ್ದು, ಭಾಗಲ್ಪುರ್ ಜಿಲ್ಲೆಯ ಬೆಳ್ಳಾರ್‌ಚಾಕ್ ಗ್ರಾಮದವನು. ಅವನ ಬಳಿ ಮನೋರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೆಲವು ಚೀಟಿಗಳಿದ್ದು, ವ್ಯಕ್ತಿ ಮಾನಸಿಕ ಅಸ್ವಸ್ಥ(ಮೆಂಟಲ್) ಇರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಭಯೋತ್ಪಾದಕ ಚಟುವಟಿಕೆ ವಿರೋಧಿ ದಳಕ್ಕೆ ಮಾಹಿತಿ ನೀಡಿದ್ದು, ಅವರು ವ್ಯಕ್ತಿಯ ತನಿಖೆ ನಡೆಸುವರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.