ಕರ್ನಾಟಕ

ಶಾಸಕ ಆನಂದ್‌ಸಿಂಗ್ ಬಿಡುಗಡೆಗೆಂದು ನಾಲಿಗೆ ಕತ್ತರಿಸಿ ಹರಕೆ ತೀರಿಸಿದ ಭೂಪ!

Pinterest LinkedIn Tumblr

cut-off-tongue

ಹೊಸಪೇಟೆ, ಜ.25: ಫಲ ಸಿದ್ಧಿಗಾಗಿ ಭಕ್ತರು ವಿವಿಧ ಹರಕೆಗಳನ್ನು ಹೊರುವುದು ಸಹಜ. ಆದರೆ ಇಲ್ಲೊಬ್ಬರು ಶಾಸಕ ಆನಂದ್‌ಸಿಂಗ್ ಬಿಡುಗಡೆಯಾಗಲೆಂದು ಹರಕೆ ಹೊತ್ತು ಇದೀಗ ತಮ್ಮ ನಾಲಿಗೆಯನ್ನೇ ಹರಕೆಯಾಗಿ ನೀಡಿರುವುದು ವಿಶೇಷ. ಹೊಸಪೇಟೆ ಸಮೀಪದ ಕಾರಿಗನೂರು ಗ್ರಾಮದ ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಮುರಳಿ (38) ಎಂಬಾತ ದೇವರಿಗೆ ತಮ್ಮ ನಾಲಿಗೆಯನ್ನೇ ಕತ್ತರಿಸಿಕೊಟ್ಟು ಹರಕೆ ತೀರಿಸಿರುವ ಭೂಪ.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 15 ತಿಂಗಳಿಂದ ವಿಜಯನಗರದ ಶಾಸಕ ಆನಂದ್‌ಸಿಂಗ್ ಜೈಲಿನಲ್ಲಿದ್ದರು. ಅವರು ಶೀಘ್ರ ಬಿಡುಗಡೆಯಾಗಲಿ ಎಂದು ಮುರಳಿ ಸಮೀಪದ ಶ್ರೀಕ್ಷೇತ್ರದ ಹುಲಿಗೆಮ್ಮ ದೇವಿಗೆ ಹರಕೆ ಹೊತ್ತಿದ್ದರು.

ಈತ ಆನಂದ್‌ಸಿಂಗ್ ಅವರ ಅಭಿಮಾನಿಯಾಗಿದ್ದು, ಶಾಸಕರು ಶೀಘ್ರ ಬಿಡುಗಡೆಯಾದರೆ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ಮೊನ್ನೆಯಷ್ಟೆ ಗಾಲಿ ಜನಾರ್ದನರೆಡ್ಡಿ ಜೊತೆಗೆ ಆನಂದ್‌ಸಿಂಗ್ ಸಹ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮುರಳಿ ತನ್ನ ನಾಲಿಗೆ ಕತ್ತರಿಸಿ ಹರಕೆ ತೀರಿಸಲು ಮುಂದಾಗಿದ್ದ. ಅಷ್ಟರಲ್ಲಿ ವಿಷಯ ತಿಳಿದು ಪೊಲೀಸರು ಈತನ ಮನವೊಲಿಸಿ ವಾಪಸ್ ಕರೆತಂದಿದ್ದರು. ಆದರೆ ಹರಕೆ ತೀರಿಸದಿದ್ದರೆ ಶಿಕ್ಷೆ ನೀಡುತ್ತಾಳೆ ಎಂಬ ಅಂಧ ವಿಶ್ವಾಸದಿಂದ ಮುರಳಿ ತನ್ನ ಮನೆಯಲ್ಲಿಯೇ ನಾಲಿಗೆ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಈತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Write A Comment