ಕರ್ನಾಟಕ

ರೈತರ ಕೈಗೆ ಟ್ಯಾಬ್ : ದೇಶದಲ್ಲೇ ಪ್ರಥಮ ಪ್ರಯೋಗ

Pinterest LinkedIn Tumblr

tam-for-frmat

ಬೆಂಗಳೂರು, ಜ.24: ದೇಶದಲ್ಲೇ ಪ್ರಥಮ ಬಾರಿಗೆ ರೈತರ ಮನೆ ಬಾಗಿಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ತಲುಪಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗಳ ನೆರವಿನಲ್ಲಿ ಹಮ್ಮಿಕೊಂಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಟ್ಯಾಬ್ (ಮೊಬೈಲ್)ಗಳನ್ನು ಬಿಡುಗಡೆ ಮಾಡಿ ರೈತರಿಗೆ ವಿತರಿಸಿದರು.

ಬಾಗಲಕೋಟೆ-ವಿಜಯಪುರ ಜಿಲ್ಲೆಯ 1500 ಗ್ರಾಮಗಳ ರೈತರಿಗೆ ಉಚಿತ ಟ್ಯಾಬ್‌ಗಳನ್ನು ಒದಗಿಸಲಾಗಿದೆ. ಇದರಲ್ಲಿ ಕೃಷಿಗೆ ಅಗತ್ಯವಾದ ಸಾಂದರ್ಭಿಕ ಮತ್ತು ಅತ್ಯಾಧುನಿಕ ಮಾಹಿತಿಗಳು, ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ದೊರೆಯಲಿವೆ. ಮೊದಲ ಮೂರು ತಿಂಗಳವರೆಗೂ ಏರ್‌ಟೆಲ್ ಸಂಸ್ಥೆ ಉಚಿತ ಡಾಟಾ ನೆಟ್‌ವರ್ಕ್ ಸೌಲಭ್ಯ ಒದಗಿಸುತ್ತಿದೆ.

ಈ ಟ್ಯಾಬ್ 8ಜಿಬಿ ಒಳ ದಾಸ್ತಾನು ಹಾಗೂ 1 ಜಿಬಿ ರ್ಯಾ ಮ್ ಸಾಮರ್ಥ್ಯ ಹೊಂದಿದೆ. ಅಲ್ಲದೆ, 3ಜಿಬಿ, 4ಜಿಬಿ, ವೈ-ಫೈ ನೆಟ್‌ವರ್ಕ್ ಸಂಪರ್ಕ ಹೊಂದುವುದರ ಜತೆಗೆ ಎಲ್ಲ ರೀತಿಯ ವಿಡಿಯೋ ಮತ್ತು ಆಡಿಯೋಗಳು ಇದರಲ್ಲಿ ಲಭ್ಯವಿರುತ್ತದೆ. ಅತ್ಯಾಧುನಿಕ ಕ್ಯಾಮೆರಾ ಒಳಗೊಂಡ ಈ ಟ್ಯಾಬ್‌ನಲ್ಲಿ ಒಂದು ಬಟನ್ ಒತ್ತಿದರೆ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ಸಹಾಯ ಕೇಂದ್ರಕ್ಕೆ ಸಂದೇಶ ರವಾನೆಯಾಗುತ್ತದೆ. ಅಲ್ಲಿಂದ ರೈತರಿಗೆ ಕರೆ ಬಂದು ಸಮಸ್ಯೆಯ ಮಾಹಿತಿ ಪಡೆಯಲಾಗುತ್ತದೆ. ಅಗತ್ಯಬಿದ್ದರೆ ಕೃಷಿತಜ್ಞರ ಸಲಹೆ ಕೊಡಿಸುವುದು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೃಷಿ ತಜ್ಞರನ್ನು ಸ್ಥಳಕ್ಕೆ ಕಳುಹಿಸುವ ಪ್ರಯತ್ನವೂ ನಡೆಯುತ್ತದೆ.

ಇದರಲ್ಲಿ ಹವಾಮಾನ ವೈಪರೀತ್ಯ, ಆಲಿಕಲ್ಲು ಮಳೆ, ಶೀತ ಮಾರುತಗಳ ಮುನ್ಸೂಚನೆ, ಬೆಳೆ ಮಾದರಿ ರಾಸಾಯನಿಕ ಬಳಕೆ, ರೋಗ ಶೀತ ಬಾಧೆಗಳ ವಿವರ, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿದಿನವೂ ಈ ಟ್ಯಾಬ್‌ಗೆ ಸಂದೇಶ ರವಾನೆಯಾಗುತ್ತದೆ.

ಕೃಷಿ ಕ್ಲಬ್: ಬಾಗಲಕೋಟೆ, ವಿಜಾಪುರ ಜಿಲ್ಲೆಗಳ 1500 ಹಳ್ಳಿಗಳಲ್ಲಿ 15 ಜನ ರೈತರನ್ನೊಳಗೊಂಡಂತೆ ಕೃಷಿ ಕ್ಲಬ್‌ಗಳನ್ನು ರಚಿಸಲಾಗುತ್ತದೆ. ಕ್ಲಬ್‌ಗೆ ಒಂದರಂತೆ ಈ ಟ್ಯಾಬ್‌ಅನ್ನು ಹಂಚಿಕೆ ಮಾಡಲಾಗುತ್ತದೆ. ಆರಂಭದ ಮೂರು ತಿಂಗಳು ಉಚಿತ ನೆಟ್‌ವರ್ಕ್ ಸಂಪರ್ಕವಿದ್ದು, ಅನಂತರ ಪ್ರತೀ ರೈತರು ತಮ್ಮ ಕೈಯಿಂದ ಹಣ ಹಾಕಿ ಇಂಟರ್‌ನೆಟ್ ಸೌಲಭ್ಯ ಪಡೆದುಕೊಳ್ಳಬೇಕು. ಒಂದು ಟ್ಯಾಬ್‌ನಲ್ಲಿ ಗರಿಷ್ಠ 50 ಮಂದಿ ತಮ್ಮ ಖಾತೆ ಸ್ಥಾಪಿಸಿ ಲಾಗಿನ್ ಆಗಬಹುದು. ಬೆಳೆಗೆ ಯಾವುದಾದರೂ ರೋಗ-ರುಜಿನ ಕಾಣಿಸಿಕೊಂಡರೆ ಫೋಟೋ ತೆಗೆದು ತಕ್ಷಣ ಅಪ್‌ಲೋಡ್ ಮಾಡಿದರೆ ಶೀಘ್ರದಲ್ಲೇ ಸಹಾಯವಾಣಿ ಕೇಂದ್ರದಿಂದ ಕರೆ ಬಂದು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ದೊರೆಯಲಿದೆ.

ಟ್ಯಾಬ್ ಬಿಡುಗಡೆ ನಂತರ ಮಾತನಾಡಿದ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್, ಇದು ದೇಶದಲ್ಲೇ ಮೊದಲ ಬಾರಿಗೆ ರೈತರ ಮನೆ ಬಾಗಿಲಿಗೆ ಅತ್ಯಾಧುನಿಕ ತಂತ್ರಜ್ಞಾನ ತಲುಪಿಸುವ ಯೋಜನೆಯಾಗಿದ್ದು, ಪ್ರಾಯೋಗಿಕವಾಗಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು. ಈ ಯೋಜನೆಗೆ ಬೊಕ್ಕಸದಿಂದ ಒಂದು ರೂಪಾಯಿ ಹಣ ಸಹ ಖರ್ಚಾಗಿಲ್ಲ. ಅನಿವಾಸಿ ಭಾರತೀಯ ಯುವಕರ ಪಡೆಯೊಂದು ನಮ್ಮ ರೈತ (ಇ-ಕಿಸಾನ್) ಯೋಜನೆ ಜಾರಿಗೊಳಿಸಲು ಮುಂದೆ ಬಂದಿದೆ. ಈ ಎರಡೂ ಜಿಲ್ಲೆಗಳಲ್ಲಿ ಪ್ರತ್ಯೇಕ ಕಾಲ್‌ಸೆಂಟರ್ ಸ್ಥಾಪಿಸಲಾಗುವುದು. ಇದರಿಂದ ಸುಮಾರು 25 ಸಾವಿರ ರೈತರಿಗೆ ಪ್ರಯೋಜನ ತಲುಪಲಿದೆ ಎಂದರು.

ಇ-ಕಿಸಾನ್ ಮುಖ್ಯಸ್ಥ ಗೌರಿಶಂಕರ ರಂಗನಗೌಡರ್ ಮಾತನಾಡಿ, ಇಂಗ್ಲೆಂಡ್, ಅಮೆರಿಕ, ಜಪಾನ್‌ನಂತಹ ದೇಶಗಳಲ್ಲಿ ರೈತರಿಗೆ ಅತ್ಯಾಧುನಿಕ ತಂತ್ರಜ್ಞಾನ ನೀಡಿ ಕೃಷಿಯನ್ನು ಸದೃಢಗೊಳಿಸಲಾಗಿದೆ. ಅದೇ ರೀತಿ ನಮ್ಮ ರೈತರಿಗೂ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಸುಮಾರು 2 ಕೋಟಿ ರೂ. ವೆಚ್ಚ ಮಾಡಿ ಅನಿವಾಸಿ ಭಾರತೀಯ ಯುವಕರ ಪಡೆ ಈ ಯೋಜನೆ ಆರಂಭಿಸಿದೆ ಎಂದು ಹೇಳಿದರು. ಪ್ರಮೀತ್ ಮಾಕೋಡಿ ಮಾತನಾಡಿ, ಬಾಗಲಕೋಟೆ, ವಿಜಾಪುರ ಜಿಲ್ಲೆಯಾದ್ಯಂತ ವೈ-ಫೈ ಸೌಲಭ್ಯ ಒದಗಿಸಲು ಮೈಕೋ ಸಾಫ್ಟ್ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ವೈ-ಫೈ ಸೌಲಭ್ಯ ದೊರೆಯಲಿದೆ ಎಂದರು.

ಈ ಟ್ಯಾಬ್ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವುದರಿಂದ ನಾಟ್‌ರೀಚಬಲ್ ಸಮಸ್ಯೆ ಇರುವುದಿಲ್ಲ ಎಂದು ಅವರು ವಿವರಿಸಿದರು.

Write A Comment