ನವದೆಹಲಿ, ಜ.24: ಮತದಾರರು ಮನೆಯಲ್ಲೇ ಕುಳಿತು ಮತಚಲಾಯಿಸುವಂತೆ ಅವಕಾಶ ಕಲ್ಪಿಸಲು ಇಂಟರ್ನೆಟ್ ಹಾಗೂ ಮೊಬೈಲ್ ವೋಟಿಂಗ್ ವಿಚಾರ ಚರ್ಚೆಯ ಹಂತದಲ್ಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಹರಿಶಂಕರ್ ಬ್ರಹ್ಮ ತಿಳಿಸಿದ್ದಾರೆ. ಇಂಟರ್ನೆಟ್ ಹಾಗೂ ಮೊಬೈಲ್ ವೋಟಿಮಗ್ಗೆ ಅವಕಾಶ ನೀಡುವ ಬಗ್ಗೆ ಕೇಂದ್ರ ಚುನಾವಣಾ ಆಯೊಗ ಚಿಂತನೆ ನಡೆಸಿದೆ. ಇದರ ಎಲ್ಲ ಸಾಧಕ-ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ತೀರ್ಮಾನಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಪ್ರಸಕ್ತ ದಿನಗಳಲ್ಲಿ ಮತದಾರರು ವಿವಿಧ ಕಾರಣಗಳಿಂದ ಮತಗಟ್ಟೆಗೆ ತೆರಳಲು ಸಾಧ್ಯವಾಗದಿದ್ದಾಗ ಇಂಟರ್ನೆಟ್ ಹಾಗೂ ಮೊಬೈಲ್ನಲ್ಲಿ ವೋಟಿಂಗ್ ಮಾಡಬಹುದು. ಮತದಾರರು ತಾವು ಇರುವ ಸ್ಥಳದಲ್ಲೇ ಮತ ಚಲಾಯಿಸುವ ಅವಕಾಶವನ್ನು ಕಲ್ಪಿಸುವ ಈ ಚಿಂತನೆ ಕೋಟ್ಯಂತರ ಯುವ ಮತದಾರರಲ್ಲಿ ಸಂತಸ ಮೂಡಿಸಲಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ವಿಸ್ತರಣೆಗೊಂಡಿಲ್ಲ. ವ್ಯಾಪಕವಾಗಿ ಇಂಟರ್ನೆಟ್ ಗ್ರಾಮೀಣ ಮಟ್ಟದಲ್ಲೂ ಆಗಬೇಕಾಗಿದೆ. ಕೆಲ ದಿನಗಳ ಹಿಂದೆ ಅನಿವಾಸಿ ಭಾರತೀಯರಿಗೆ ಇ-ವ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗಿರುವ ಆಯೋಗದ ತೀರ್ಮಾನವನ್ನು ಕೇಂದ್ರ ಸರ್ಕಾರ ಒಪ್ಪಿದೆ ಎಂದರು. ಮುಂದಿನ ದಿನಗಳಲ್ಲಿ ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ ಎಲ್ಲ ಪೂರ್ವ ಸಿದ್ಧತೆಗಳು ನಡೆದಿವೆ. ಮುಕ್ತ ಹಾಗೂ ನ್ಯಾಯಸಮತ್ತ ಚುನಾವಣೆಗೆ ಆಯೋಗ ಕ್ರಮ ಕೈಗೊಂಡಿದೆ ಎಂದು ಹೇಳಿದರು.