ಕನಕಗಿರಿ (ಕೊಪ್ಪಳ ಜಿಲ್ಲೆ):ಸಮೀಪದ ಸೂಳೇಕಲ್ ಗ್ರಾಮದ ಬೃಹನ್ಮಠದ ಭುವನೇಶ್ವರಯ್ಯ ತಾತ ಅವರು ತಮ್ಮ 57ನೇ ಜನ್ಮದಿನಾಚರಣೆಯನ್ನು ರಕ್ತದಾನ ತುಲಾಭಾರ ಆಯೋಜಿಸುವ ಮೂಲಕ ಆಚರಿಸಿಕೊಂಡರು.
ಕೊಪ್ಪಳದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ದಿನ, ಒಂದೇ ಸ್ಥಳದಲ್ಲಿ ಒಟ್ಟು 837 ಮಂದಿಯ ರಕ್ತ ಸಂಗ್ರಹಿಸುವ ಮೂಲಕ ದಾಖಲೆ ಬರೆಯಲಾಯಿತು. ಕಳೆದ ವರ್ಷ ಫೆ. 21ರಂದು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಹಮ್ಮಿಕೊಂಡ ಶಿಬಿರದಲ್ಲಿ 828 ಮಂದಿ ರಕ್ತದಾನ ಮಾಡಿದ್ದರು.
ಇಂದಿನ ಕಾರ್ಯಕ್ರಮ ಆ ದಾಖಲೆ ಮುರಿದಿದೆ. ವಿಶಿಷ್ಟ ರೀತಿಯಲ್ಲಿ ತುಲಾಭಾರ ಹಮ್ಮಿಕೊಂಡ ಈ ಪುಟ್ಟ ಗ್ರಾಮ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ನೂರಾರು ಭಕ್ತರು, ಅಭಿಮಾನಿಗಳು, ಯುವಕರು ಸ್ವಯಂ ಪ್ರೇರಿತರಾಗಿ ಮಠಕ್ಕೆ ಬಂದು ರಕ್ತದಾನ ಮಾಡಿದರು. ರಕ್ತದಾನಿಗಳು ಹಾಗೂ ಭಕ್ತರಿಗೆ ಮಠದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಿಸಲಾಗಿತ್ತು.
ದಾಸೋಹ, ಭಾವೈಕ್ಯಕ್ಕೆ ಹೆಸರಾಗಿದ್ದ ಬೃಹನ್ಮಠದ ಭುವನೇಶ್ವರಯ್ಯ ತಾತ ಅವರ ಈ ಕಾರ್ಯಕ್ರಮ ರಾಜ್ಯದಲ್ಲಿಯೇ ಮಾದರಿ ಎನಿಸಿದೆ ಎಂದು ರೆಡ್ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ತಿಳಿಸಿದರು. ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಅರಳಿ ಹಳ್ಳಿಯ ಗವಿಸಿದ್ದಯ್ಯ ತಾತ, ವಿವಿಧ ರಾಜಕೀಯ ಮುಖಂಡರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಗವಿಮಠ ಜಾತ್ರೆಯಲ್ಲಿ 5 ದಿನಗಳ ಕಾಲ ನಡೆದ ಶಿಬಿರದಲ್ಲಿ 930 ಮಂದಿ ರಕ್ತದಾನ ಮಾಡಿದ್ದರು.
