ಕರ್ನಾಟಕ

ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ: ಸಾರಿಗೆ ಇಲಾಖೆ

Pinterest LinkedIn Tumblr

psmec23Helmet1

ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡ್ತೀವಿ ಎಂದು ಹೊರಟಿದ್ದಾರೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು. ಅದಾಗಲೇ ಬೇಕು– ಬೇಡ, ಅನುಕೂಲ–ಅನಾನುಕೂಲಗಳ ಬಗ್ಗೆ ನಗರದೆಲ್ಲೆಡೆ ಚರ್ಚೆಗಳು ಎದ್ದಿವೆ…

‘ನಾವು ಹಿಂದುಳಿದವರು; ಅಂದರೆ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು. ಸ್ಕಾರ್ಫ್ ಸುತ್ತಿಕೊಂಡರೆ ಸಾಕು. ಈ ಹೆಲ್ಮೆಟ್ ತಲೆ ಬಿಸಿ ಏನಿದ್ದರೂ ಬೈಕ್ ಓಡಿಸುವವರಿಗೆ ಮಾತ್ರ’ ಎಂದುಕೊಂಡು ನಿರುಮ್ಮಳವಾಗಿದ್ದ ಹಿಂಬದಿ ಸವಾರರೂ ತುಸು ತಲೆ ಕೆಡಿಸಿಕೊಳ್ಳಬೇಕಾದ ಸಮಯ ಬಂದಿದೆ.

ಹಿಂಬದಿ ಸವಾರರ ತಲೆಗೆ ಭಾರೀ ಬೆಲೆ ಕಟ್ಟಲು ಮುಂದಾಗಿರುವ ಸಾರಿಗೆ ಇಲಾಖೆ, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.

ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವ ಹಾಗೂ ಮಾರಣಾಂತಿಕವಾಗಿ ಗಾಯಗೊಳ್ಳುವ ಹಿಂಬದಿ ಸವಾರರ ಜೀವ ರಕ್ಷಣೆಗೆ ಈ ಹೊಸ ನೀತಿ ಎನ್ನುವುದು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ವಿವರಣೆ. ಆದರೆ ಯಾರಿಗೆ ಬೇಕು ಅರ್ಥವಿಲ್ಲದ ಕಾನೂನು ಎನ್ನುವ ತಗಾದೆ ಅನೇಕ ಜನರದ್ದು.

ಫೇಸ್‌ಬುಕ್ ಕ್ರಾಂತಿ
ಯಾವುದೇ ರೀತಿಯ ವೈಯಕ್ತಿಕ ಹಾಗೂ ಸಾರ್ವಜನಿಕ ಚರ್ಚೆ, ಸಂವಾದಗಳಲ್ಲಿ ತನ್ನದೇ ಆದ ಪಾತ್ರ ವಹಿಸುವ ಸಾಮಾಜಿಕ ಜಾಲತಾಣಗಳು ಈ ಹೆಲ್ಮೆಟ್ ಬಿಸಿಗೂ ವೇದಿಕೆ ಆಗಿವೆ.

ಫೇಸ್‌ಬುಕ್, ಟ್ವಿಟರ್ನಲ್ಲಿ ಅನೇಕರು ಈ ಬಗ್ಗೆ ಪರ ಮತ್ತು ವಿರೋಧ ಭಾವನೆಗಳನ್ನು ಹೊರಹಾಕಿದ್ದಾರೆ. ಬೆಂಗಳೂರು ಪೊಲೀಸರ ಫೇಸ್ಬುಕ್ ಪುಟದಲ್ಲಿಯೂ ಜನ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು ‘ಯಾಕೆ ಸ್ವಾಮಿ ಬೇಕಿಲ್ಲದ ವಿಷಯಗಳಿಗೆ ತಲೆ ಹಾಳು ಮಾಡ್ತೀರಿ?’ ಎಂದು ಕಾಮೆಂಟ್ ಹಾಕಿದರೆ, ಇನ್ನು ಕೆಲವರು ‘ಕಾಲೆಳೆಯುವವರಿಗೆ ಕಿವಿಗೊಡಬೇಡಿ, ಇದು ಒಳ್ಳೆಯ ನಿರ್ಧಾರ’ ಎಂದು ಬೆನ್ನು ತಟ್ಟಿದ್ದಾರೆ.

ನೆಪಕ್ಕೆ ಮಾತ್ರ
ಇದು ಅರ್ಥವಿಲ್ಲದ ಕಾನೂನು. ಸಾರಿಗೆ ಇಲಾಖೆ ಹೆಲ್ಮೆಟ್ ಕಂಪೆನಿಗಳ ಜೊತೆ ಮಾಡಿಕೊಂಡ ಒಪ್ಪಂದಂತೆ ಕಾಣುತ್ತಿದೆಯಷ್ಟೆ. ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿದೆ. ಪ್ರಾಯೋಗಿಕವಾಗಿ ಇದು ಸಾಧ್ಯವೆ ಎನ್ನುವುದು ಮುಖ್ಯ. ಅಷ್ಟಕ್ಕೂ ಇದು ಲಂಚಗುಳಿತನವನ್ನು ಹೆಚ್ಚಿಸುವ ಕಾನೂನು. ಹೆಲ್ಮೆಟ್ ಹಾಕದ ಸವಾರರು ಸಿಕ್ಕಾಗ ಪೊಲೀಸರಿಗೆ ಕೇವಲ ಇನ್ನೂರು ರೂಪಾಯಿ ಮಾತ್ರ ಸಿಗುತ್ತಿದೆ. ಅದು ಡಬಲ್ ಆಗಬೇಕು ಎಂದಾದರೆ ಡಬಲ್ ಹೆಲ್ಮೆಟ್ ಕೇಸ್‌ಗಳು ಬೇಕು. ಅದಕ್ಕೆ ಇದೆಲ್ಲ.
–ಚಂದ್ರಪ್ಪ, ಹನುಮಂತನಗರ

ಈಗಿರೊ ಕಾನೂನೇ ಸರಿಯಾಗಿ ಪಾಲಿಸುತ್ತಿಲ್ಲ…
ಅಪಘಾತಗಳಾದಾಗ ಹಿಂಬದಿ ಸವಾರರೂ ಗುರಿಯಾಗುವುದಿದೆ. ಆದರೆ ಪ್ರಾಯೋಗಿಕವಾಗಿ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಮತ್ತು ಇದರ ಹಿಂದಿರುವ ನಿಜವಾದ ಉದ್ದೇಶ ಏನು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಅಷ್ಟಕ್ಕೂ ಜೀವ ರಕ್ಷಣೆಗೆ ಕಾನೂನು ಮಾಡ್ತಾ ಇದ್ದಾರೆ ಅನ್ನೋದಾದ್ರೆ ಮೊದಲು ಈಗಿರೊ ಕಾನೂನನ್ನು ನಿಯತ್ತಾಗಿ ಪಾಲಿಸಲಿ. ನಿಜವಾದ ಅರ್ಥದಲ್ಲಿ ಹೆಲ್ಮೆಟ್ ಅಂದ್ರೆ ಅದು ಐಎಸ್ಐ ಮಾರ್ಕ್ ಇರೊ ಹೆಲ್ಮೆಟು. ಆದ್ರೆ ಶೇ 50ರಷ್ಟು ಜನ ಲೋಕಲ್ ಹೆಲ್ಮೆಟೇ ಹಾಕೋದು. ಯಾವ ಪೊಲೀಸೂ ಕೇಳೊಲ್ಲ. ಹೀಗಿರುವಾಗ ಹಿಂಬದಿ ಸವಾರರಿಗೂ ಸುಮ್ಮನೇ ಕಾನೂನು ಮಾಡಿಡೊದು ಸರಿ ಅಲ್ಲ. ಅಲ್ವೆ?
–ವಿ.ಪ್ರಹ್ಲಾದ್, ಚಾಮರಾಜಪೇಟೆ

ಜೀವ ರಕ್ಷಣೆಗೆ ಇಷ್ಟೂ ಬೇಡವೇ?
ಇಂತಹ ಕಾನೂನು ಬೇಕು. ಕಾನೂನು ಇದ್ರೆ ಮಾತ್ರ ಪಾಲಿಸುತ್ತೇವೆ. ಅದರಿಂದ ನಮಗೇ ಒಳ್ಳೆಯದು. ಅಪಘಾತವಾದಾಗ ನಮಗಿಂತ ನಮ್ಮ ಹಿಂದೆ ಕುಳಿತವರಿಗೇ ಹೆಚ್ಚು ಗಾಯವಾಗುವುದೂ ಇದೆ. ಇನ್ನು ಹೆಲ್ಮೆಟ್ ಕ್ಯಾರಿ ಮಾಡೋದು ಸಮಸ್ಯೆ ಅನಿಸಬಹುದು. ಆದರೆ ನಮ್ಮವರ ಜೀವ ರಕ್ಷಣೆಗಾಗಿ ಇಷ್ಟೂ ಕಷ್ಟ ಪಡದಿದ್ದರೆ ಹೇಗೆ?
– ಸುಮೇದಾ

ಇನ್ನೊಂದ್ ಹೆಲ್ಮೆಟ್ ಎಲ್ಲಿ ಇಟ್ಕೊಳ್ಳೊದು?
ಹೋಗ್ರಿ… ನಿಮ್ದೊಳ್ಳೆ ಕಥೆ ಆಯ್ತಲ್ಲಾ, ಒಂದೇ ಹೆಲ್ಮೆಟು ತಲೆಗೆ ಭಾರ. ಇನ್ನು, ಎರಡೆರಡು… ಎಲ್ಲೆಲ್ಲಿ ಅಂತ ಇಟ್ಕೊಂಡು ಓಡಾಡೋದು?
ಪಾಪ ಯಾವನೊ ಗೊತ್ತಿದ್ದೋನು ರಸ್ತೇಲಿ ನಡ್ಕಂಡು ಹೋಯ್ತಾ ಇರ್ತಾನೆ,  ಬಾಪ್ಪ ಅಲ್ಲಿತಂಕಾ ಬಿಡ್ರೀನಿ ಹತ್ತಿಸ್ಕೋತೀವಿ… ಅವರಿಗೆಲ್ಲ ಬೇಕು ಅಂತ ಒಂದೊಂದ್ ಎಕ್ಸ್‌ಟ್ರಾ ಹೆಲ್ಮೆಟ್ ಇಟ್ಕೊಂಡ್ ಹೋಗಾಕ್ ಆಯ್ತದಾ? ಮಾಡೋದ್ ಮಾಡ್ತೀರಿ, ಅರ್ಥ ಇರೊ, ಅನುಸರಿಸೋಕೆ ಆಗೊ ಕಾನೂನು ಮಾಡಿ.
–ರಮೇಶ, ಹಾರೋಕೇರಿ

ಜನರ ಅಭಿಪ್ರಾಯ ಕೇಳಿಯೇ ತೀರ್ಮಾನ
ಮಹಾರಾಷ್ಟ್ರ ಮತ್ತು ಗುಜರಾತ್‌, ದೆಹಲಿ, ಚಂಡೀಗಡ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಿಂಬದಿ ಸವಾರರೂ ಕಡ್ಡಾಯ­ವಾಗಿ ಹೆಲ್ಮೆಟ್‌ ಧರಿಸಬೇಕು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ರಾಜ್ಯದಲ್ಲಿಯೂ ಸಾರ್ವಜ­ನಿ­ಕರ ಅಭಿಪ್ರಾಯ ಸಂಗ್ರಹಿಸಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಇದು ನಾವು ನಮಗಾಗಿ, ನಮ್ಮ ಅನುಕೂಲಕ್ಕಾಗಿ ಕಂಡುಕೊಂಡ ಮಾರ್ಗವಂತೂ ಅಲ್ಲ, ಬೈಕ್‌ನಲ್ಲಿ ಹಿಂಬದಿ ಕೂರುವವರು ಹೆಲ್ಮೆಟ್‌ ಧರಿಸದೆ ಇರುವುದರಿಂದ ಸಾಕಷ್ಟು ಜನ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. 2014ರಲ್ಲಿ ಲಭ್ಯವಿರುವ ಅಂಕಿ–ಅಂಶಗಳ ಪ್ರಕಾರ ವಿವಿಧ ಅಪಘಾತ ಪ್ರಕರಣಗಳಲ್ಲಿ ಒಟ್ಟು 94 ಜನ ಹಿಂಬದಿ ಸವಾರರು ಸಾವನ್ನಪ್ಪಿದ್ದು,  532ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಆದ್ದರಿಂದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
–ಬಾಬು ರಾಜೇಂದ್ರ ಪ್ರಸಾದ್ ಡಿಸಿಪಿ, ಪೂರ್ವ ವಿಭಾಗ (ಸಂಚಾರ)

Write A Comment