ಕರ್ನಾಟಕ

ರಾಘವೇಶ್ವರ ಶ್ರೀ ರಿಟ್‌ ಪ್ರಕರಣ: ವಿಚಾರಣೆ:ಹಿಂದೆ ಸರಿದ ಇನ್ನಿಬ್ಬರು

Pinterest LinkedIn Tumblr

raghaveshwara-shree01

ಬೆಂಗಳೂರು: ತಮ್ಮ ಮೇಲೆ ಹಾಕಿರುವ ಅತ್ಯಾಚಾರ ಪ್ರಕ­ರಣದ ಎಫ್‌ಐಆರ್‌ ರದ್ದು ಕೋರಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ­ಯಿಂದ ನ್ಯಾಯಮೂರ್ತಿ ಎಚ್‌.ಜಿ.­ರಮೇಶ್‌ ಮತ್ತು ಪಿ.ಬಿ.ಬಜಂತ್ರಿ ಗುರುವಾರ ಹಿಂದೆ ಸರಿದಿದ್ದಾರೆ.  ಇದರಿಂದಾಗಿ ಈ ಪ್ರಕರಣದಲ್ಲಿ ಹಿಂದೆ ಸರಿದ ನ್ಯಾಯ­ಮೂರ್ತಿಗಳ ಸಂಖ್ಯೆ ಐದಕ್ಕೆ ಏರಿದೆ.

ಗುರುವಾರ ಎಚ್‌.ಜಿ.ರಮೇಶ್‌, ಬಜಂತ್ರಿ ಅವರ ವಿಭಾ­ಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಮಧ್ಯಾಹ್ನ 1.30ರ ವೇಳೆಗೆ ಪ್ರಕರಣ ವಿಚಾರಣೆಗೆ ಬರುತ್ತಿ­ದ್ದಂತೆಯೇ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಅವರು, ‘ಈ ಪ್ರಕರಣದಲ್ಲಿ ಹಿರಿಯ ವಕೀಲರಾದ ಬಿ.ವಿ. ಆಚಾರ್ಯ ಅವರು ಹಾಜರಾಗುತ್ತಿರುವುದರಿಂದ ನಾನು ವಿಚಾರಣೆ ನಡೆಸುವುದಿಲ್ಲ. ಆಚಾರ್ಯ ಅವರ ಬಳಿ ನಾನು ಕಿರಿಯ ವಕೀಲನಾಗಿ ಕೆಲಸ ಮಾಡಿದ್ದೆ’ ಎಂದು ಹೇಳಿ, ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು.

ಇದೇ ರೀತಿ ನ್ಯಾಯಮೂರ್ತಿ ಪಿ.ಬಿ.ಬಜಂತ್ರಿ ಕೂಡ, ‘ನಾನೂ ಈ ಪ್ರಕರಣದ ವಿಚಾರಣೆ ನಡೆಸಲು ಬಯಸು­ವುದಿಲ್ಲ’ ಎಂದು ತಿಳಿಸಿದರು. ಪ್ರಾಸಿಕ್ಯೂಷನ್‌ ಪರವಾಗಿ ಅಡ್ವೊ­ಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಹಾಜರಾಗಿದ್ದರು.

‘ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂ­ಧಿ­ಸಿದಂತೆ ನನ್ನ ವಿರುದ್ಧ ಸಲ್ಲಿಸಲಾಗಿರುವ ಎಫ್‌­ಐಆರ್‌ ರದ್ದುಗೊಳಿಸಬೇಕು’ ಎಂದು ರಾಘವೇಶ್ವರ ಶ್ರೀಗಳು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ನ್ಯಾಯ­ಮೂರ್ತಿ ಕೆ.ಎನ್.ಫಣೀಂದ್ರ ಅವರ ಏಕಸದಸ್ಯ ಪೀಠವು ಈ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

ಹಿಂದೆ ಸರಿದ ನ್ಯಾಯಮೂರ್ತಿಗಳು
ನ್ಯಾ. ಎಚ್‌.ಜಿ.ರಮೇಶ್‌, ಪಿ.ಬಿ.ಬಜಂತ್ರಿ

ಒಳ್ಳೆ ಬೆಳವಣಿಗೆ ಅಲ್ಲ
ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯು­ತ್ತಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ. ಎಂಥದ್ದೇ ಒತ್ತಡ ಎದುರಾದರೂ ಅದನ್ನು ಎದುರಿಸಿ ತೀರ್ಪು ನೀಡುವುದು ನ್ಯಾಯಾಂಗದ ಕರ್ತವ್ಯ.
– ಎಚ್‌.ಎನ್‌. ನಾಗಮೋಹನ ದಾಸ್‌, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ಈ ಮೊದಲು
ಈ ಪ್ರಕರಣದಲ್ಲಿ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ, ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದಲ್ಲಿದ್ದ  ನ್ಯಾಯಮೂರ್ತಿ ರಾಮ­ಮೋಹನ ರೆಡ್ಡಿ ಹಾಗೂ ಮತ್ತೊಂದು ವಿಭಾಗೀಯ ಪೀಠದ ನ್ಯಾಯಮೂರ್ತಿ ಎನ್‌. ಕುಮಾರ್‌ ಅವರು ವಿಚಾರಣೆ­ಯಿಂದ ಹಿಂದೆ ಸರಿದಿದ್ದರು.

Write A Comment