ಮನೋರಂಜನೆ

ದೇವನೂರರ ‘ಮಾರಿಕೊಂಡವರು’ – ‘ಡಾಂಬರು ಬಂದುದು’ ಕಥೆಗಳ ಆಧರಿಸಿದ ಸಿನಿಮಾದ ಚಿತ್ರೀಕರಣ

Pinterest LinkedIn Tumblr

crec23Marikondavaru_0

ದೇವನೂರರ ‘ಮಾರಿಕೊಂಡವರು’ ಹಾಗೂ ‘ಡಾಂಬರು ಬಂದುದು’ ಕಥೆಗಳನ್ನು ಆಧರಿಸಿದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದರೆ, ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕಥೆಯನ್ನು ಚಿತ್ರರೂಪಕ್ಕೆ ಒಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡದ ಎರಡು ಅಪೂರ್ವ ಕಥನಗಳು ಒಮ್ಮೆಗೇ ಸಿನಿಮಾ ಆಗುತ್ತಿರುವುದು ‘ಕಥೆಗಳಿಲ್ಲ’ ಎಂದು ವೃಥಾ ಕೊರಗುವ ಕನ್ನಡ ಚಿತ್ರರಂಗದಲ್ಲಿ ಒಂದು ಅಪೂರ್ವ ವಿದ್ಯಮಾನ.

ಕನ್ನಡ ಸಾಹಿತ್ಯದ ಅಪೂರ್ವ ಕಥೆಗಳಲ್ಲೊಂದಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕಥೆಯನ್ನು ಸಿನಿಮಾ ಮಾಡಲು ನಿರ್ದೇಶಕಿ ಸುಮನಾ ಕಿತ್ತೂರು ಸಿದ್ಧತೆ ನಡೆಸುತ್ತಿದ್ದಾರೆ. ಗಯ್ಯಾಳಿಗಳ ಕಥೆಯನ್ನು ಸಿನಿಮಾ ಮಾಡಬೇಕೆಂದು ಆಸೆಪಟ್ಟ ನಿರ್ದೇಶಕರಲ್ಲಿ ಸುಮನಾ  ಮೊದಲಿಗರೇನಲ್ಲ. ಅನೇಕ ಮಂದಿ ನಿರ್ದೇಶಕರು ಕಥೆಯ ಹಕ್ಕು ಪಡೆದರೂ, ಗಯ್ಯಾಳಿಗಳಿಗೆ ಸಿನಿಮಾ ರೂಪು ಬರಲೇ ಇಲ್ಲ. ಈಗ ಹಲವು ಕೈ ಬದಲಿಸಿರುವ ಕಥೆಯ ಹಕ್ಕುಗಳು ಸುಮನಾ ಅವರ ಕೈಗೆ ಬಂದಿವೆ. ‘ಎದೆಗಾರಿಕೆ’ ಸಿನಿಮಾದ ನಿರ್ದೇಶಕಿಗೆ ಕಥೆಯ ಹಕ್ಕುಗಳನ್ನು ರಾಜೇಶ್ವರಿ ತೇಜಸ್ವಿ ಅವರು ಸಂತೋಷದಿಂದಲೇ ನೀಡಿದ್ದು, ‘ಒಳ್ಳೆಯ ಸಿನಿಮಾ ಆಗಲಿ’ ಎಂದು ಹರಸಿದ್ದಾರೆ.

‘ಕಳ್ಳರ ಸಂತೆ’, ‘ಸ್ಲಂಬಾಲ’, ‘ಎದೆಗಾರಿಕೆ’ಯಂಥ ರಾಜಕೀಯ ವಿಡಂಬನೆ ಹಾಗೂ ಭೂಗತಲೋಕದ ಕಥೆಗಳನ್ನು ಸಿನಿಮಾ ಮಾಡಿದ ಸುಮನಾ ಅವರು ಒಮ್ಮೆಗೇ ಗಯ್ಯಾಳಿಗಳಂಥ ವಿಭಿನ್ನ ಕಥೆ ಆಯ್ಕೆ ಮಾಡಿಕೊಳ್ಳಲು ಕಾರಣವಾದರೂ ಏನು? ‘ಅದು ನನ್ನ ಕನಸು’ ಎನ್ನುತ್ತಾರೆ ಸುಮನಾ.

‘ಕಿರಗೂರಿನ ಗಯ್ಯಾಳಿಗಳು’ ನನಗೆ ತುಂಬಾ ಇಷ್ಟವಾದ ಕಥೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ. ದಾನಮ್ಮನಂಥ ಹಲವು ಹೆಣ್ಣುಮಕ್ಕಳನ್ನು ನಾನು ಬೆಳೆದ ಪರಿಸರದಲ್ಲೇ ಕಂಡಿದ್ದೇನೆ. ಸ್ತ್ರೀಸ್ವಾತಂತ್ರ್ಯವನ್ನು ಅಭಿವ್ಯಕ್ತಿಸುವ ದಾನಮ್ಮನಂಥ ಹೆಣ್ಣುಮಕ್ಕಳು ಹಾಗೂ ಭಾರತದ ಯಾವುದೇ ಹಳ್ಳಿಯನ್ನು ಹೋಲುವ ಕಿರಗೂರು ಈ ಹೊತ್ತಿಗೆ ಅತ್ಯಂತ ಪ್ರಸ್ತುತ. ವರ್ತಮಾನದ ಸಂದರ್ಭದಲ್ಲಂತೂ ದಾನಮ್ಮ ಮತ್ತು ಕಿರಗೂರು ರೂಪಕಗಳಂತೆ ಕಾಡುತ್ತಾರೆ’ ಎಂದು ಸುಮನಾ ಹೇಳುತ್ತಾರೆ.

ಕಥೆಯ ಬಗೆಗಿನ ಪ್ರೀತಿ ಮಾತ್ರವಲ್ಲ, ‘ಕಿರಗೂರಿನ ಗಯ್ಯಾಳಿಗಳು’ ಸುಮನಾ ಅವರಿಗೆ ತಮ್ಮ ವರ್ಚಸ್ಸು ಬದಲಿಸಿಕೊಳ್ಳುವ ಪ್ರಯತ್ನವಾಗಿಯೂ ಮುಖ್ಯವೆನ್ನಿಸಿದೆ.
‘ಎದೆಗಾರಿಕೆ’ಯಂಥ ಚಿತ್ರದ ಜೊತೆಗೆ, ಹೆಣ್ಣುಮಕ್ಕಳ ತವಕತಲ್ಲಣಗಳನ್ನು ಚಿತ್ರಿಸುವುದೂ ನನಗೆ ಗೊತ್ತು ಎನ್ನುವುದನ್ನು ಸಾಬೀತುಪಡಿಸಲು ಈ ಚಿತ್ರ ಸುಮನಾ ಅವರಿಗೆ ಒಂದು ಅದ್ಭುತ ಅವಕಾಶವಾಗಿ ಪರಿಣಮಿಸಿದೆ.

‘ಕಿರಗೂರಿನ ಗಯ್ಯಾಳಿಗಳು’ ಚಿತ್ರಕಥೆಯನ್ನು ಸುಮನಾ ಅವರು ಇನ್ನಷ್ಟೇ ರಚಿಸಬೇಕಿದೆ. ‘ನೂರಾರು ಸಲ ಓದಿರುವ ಈ ಕಥೆಯ ಪದಪದವೂ ನನ್ನ ನೆನಪಿನಲ್ಲಿದೆ’ ಎನ್ನುವ ಸುಮನಾ ಅವರ ಮನಸ್ಸಿನಲ್ಲಂತೂ ಚಿತ್ರಕಥೆ ಈಗಾಗಲೇ ರೂಪುಗೊಂಡಂತಿದೆ.

ಏಪ್ರಿಲ್‌ ಅಥವಾ ಮೇ ವೇಳೆಗೆ ಚಿತ್ರದ ಶೂಟಿಂಗ್‌ ಆರಂಭವಾಗಬಹುದು. ಅಂದಹಾಗೆ, ದಾನಮ್ಮನ ಪಾತ್ರದಲ್ಲಿ ಯಾರು ನಟಿಸಬಹುದು ಎಂಬ ಪ್ರಶ್ನೆಗೆ ‘ಶ್ವೇತಾ ಶ್ರೀವಾಸ್ತವ್’ ಎಂಬ ಉತ್ತರ ಸಿಕ್ಕಿದೆ.

ದೇವನೂರು ಜೊತೆ ಶಿವರುದ್ರಯ್ಯ ಯುಗಳ
ಪ್ರೇಮದ ಉದಾತ್ತತೆ ಹಾಗೂ ಕೋಮುಸೌಹಾರ್ದವನ್ನು ಸಾರುವ ‘ಬೆಳ್ಳಿಕಿರಣಾ’ ಚಿತ್ರದ ನಂತರ ಮೌನವಾಗಿದ್ದ ನಿರ್ದೇಶಕ ಶಿವರುದ್ರಯ್ಯ ಸದ್ದಿಲ್ಲದೆ ದೇವನೂರ ಮಹಾದೇವ ಅವರ ಕಥೆಗಳನ್ನು ಆಧರಿಸಿದ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದಾರೆ.

ದೇವನೂರರ ‘ಮಾರಿಕೊಂಡವರು’ ಹಾಗೂ ‘ಡಾಂಬರು ಬಂದುದು’ ಕಥೆಗಳನ್ನು ಆಧರಿಸಿ ಶಿವರುದ್ರಯ್ಯ ಚಿತ್ರಕಥೆಯನ್ನು ರೂಪಿಸಿದ್ದಾರೆ. ‘ಮೂಡಲಸೀಮೇಲಿ ಕೊಲೆಗಿಲೆ’ ಕಥೆಯ ಒಂದು ಎಳೆಯೂ ಚಿತ್ರದಲ್ಲಿದೆ. ಮರಳು ಮಾಫಿಯಾದ ಎಳೆಯೊಂದನ್ನು ಶಿವರುದ್ರಯ್ಯ ಚಿತ್ರಕಥೆಯಲ್ಲಿ ಸೇರಿಸಿದ್ದಾರೆ. ‘ಅಕ್ಷರ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ಸಿ.ಎಸ್‌. ವೆಂಕಟೇಶ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರವನ್ನು ‘ಮಾರಿಕೊಂಡವರು’ ಹೆಸರಿನಿಂದಲೇ ಚಿತ್ರತಂಡ ಗುರ್ತಿಸುತ್ತಿದೆ.

ತಮ್ಮ ಹಿಂದಿನ ಸಿನಿಮಾಗಳಿಗಿಂತಲೂ ಈ ಸಿನಿಮಾ ತಾಂತ್ರಿಕವಾಗಿ ಹೆಚ್ಚು ಸಶಕ್ತವಾಗಿರಬೇಕು ಎನ್ನುವುದು ಶಿವರುದ್ರಯ್ಯನವರ ಹಂಬಲ. ಅದಕ್ಕಾಗಿ ಅವರು ಪ್ರತಿಭಾವಂತ ತಂತ್ರಜ್ಞರ ತಂಡವೊಂದನ್ನು ಜೊತೆಗಿಟ್ಟುಕೊಂಡಿದ್ದಾರೆ. ಶಶಿಧರ ಅಡಪ, ಮೇಕಪ್‌ ರಾಮಕೃಷ್ಣ, ‘ಬ್ಯಾರಿ’ ಚಿತ್ರದ ಖ್ಯಾತಿಯ ಛಾಯಾಗ್ರಾಹಕ ಮುರಳೀಕೃಷ್ಣ– ಹೀಗೆ ಹಲವು ಕನಸುಗಾರರು ಶಿವರುದ್ರಯ್ಯನವರೊಂದಿಗೆ ದೇವನೂರರ ಕಥೆಗಳಿಗೆ ದೃಶ್ಯರೂಪ ಕೊಡುತ್ತಿದ್ದಾರೆ. ದೇವನೂರ ಬಸವರಾಜು ಚಿತ್ರಕಥೆ ರಚಿಸಿದ್ದು. ನಂಜನಗೂಡು ಪರಿಸರ ಹಾಗೂ ಅಲ್ಲಿನ ಭಾಷೆ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಮೂಡಿಬರುತ್ತಿದೆ. ಎಪ್ಪತ್ತು ಎಂಬತ್ತರ ದಶಕವನ್ನು ಪುನರ್‌ ಸೃಷ್ಟಿಸುತ್ತಿದ್ದೇವೆ ಎಂದು ಶಿವರುದ್ರಯ್ಯ ಹೇಳುತ್ತಾರೆ.
ತಾರಾಗಣವೂ ಕುತೂಹಲಕರವಾಗಿದೆ. ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿರುವ ಸುನೀಲ್‌ಕುಮಾರ್‌ ಎನ್ನುವ ಕನ್ನಡದ ಹುಡುಗ ಕಥಾನಾಯಕ ಶಿವು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಮುಖ ಸ್ತ್ರೀಪಾತ್ರಗಳಲ್ಲಿ ಸೋನು ಹಾಗೂ ಸಂಯುಕ್ತ ಬೆಳವಾಡಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರೀಕರಣ ಆರಂಭಕ್ಕೆ ಮುನ್ನ ಕಲಾವಿದರಿಗಾಗಿ ಕಮ್ಮಟವೊಂದನ್ನು ಶಿವರುದ್ರಯ್ಯ ನಡೆಸಿದ್ದಾರೆ. ಅದರ ಲಾಭ ಚಿತ್ರೀಕರಣ ಸಂದರ್ಭದಲ್ಲಿ ಆಗುತ್ತಿದೆಯಂತೆ.

ಈಗಾಗಲೇ ಚಿತ್ರದ ಮುಕ್ಕಾಲು ಚಿತ್ರೀಕರಣ ಮುಗಿದಿದೆ. ‘ಇದು ನನ್ನ ವೃತ್ತಿಜೀವನದಲ್ಲೇ ಅತ್ಯಂತ ಭಿನ್ನ ಚಿತ್ರವಾಗಲಿದೆ’ ಎನ್ನುವ ಶಿವರುದ್ರಯ್ಯನವರ ಉತ್ಸಾಹ ಈ ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಹೆಚ್ಚಿಸುವಂತಿವೆ.

Write A Comment