ಮನೋರಂಜನೆ

ಡಾ.ರಾಜ್‌ ಕುಟುಂಬದ 3ನೇ ತಲೆಮಾರಿನ ವಿನಯ್‌ ರಾಜ್‌ಕುಮಾರ್ ರ ‘ಸಿದ್ಧಾರ್ಥ’ ಇಂದು ತೆರೆಗೆ

Pinterest LinkedIn Tumblr

crec23siddhartha

ವರನಟ ಡಾ.ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿ ವಿನಯ್‌ ರಾಜ್‌ಕುಮಾರ್ ಕೂಡ ನಟನೆಗೆ ತೊಡಗಿದ್ದು ಗೊತ್ತೇ ಇದೆ. ‘ಸಿದ್ಧಾರ್ಥ’ ಅವರ ಮೊದಲ ಚಿತ್ರ. ‘ಸಿದ್ಧಾರ್ಥ’ ಇಂದು (ಜ. 23) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ವಿನಯ್‌ ‘ಸಿನಿಮಾ ರಂಜನೆ’ ಜೊತೆ ಮಾತನಾಡಿದ್ದಾರೆ.

*ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದು ಹೇಗಿತ್ತು?
ಚಿತ್ರಕ್ಕಾಗಿ ಕ್ಯಾಮೆರಾ ಎದುರಿಸಿದ್ದು ಮೊದಲ ಬಾರಿಯೇ ಆದರೂ ಅದಕ್ಕೂ ಮೊದಲು ಸಾಕಷ್ಟು ಕಾರ್ಯಾಗಾರಗಳಲ್ಲಿ ಭಾಗಿಯಾಗಿದ್ದೆ. ಬಿ.ಎಂ.ಗಿರಿರಾಜ್ ಅವರ ನಿರ್ದೇಶನದಲ್ಲಿ ನಾಟಕವನ್ನೂ ಮಾಡಿದ್ದೇನೆ. ‘ಸಿದ್ಧಾರ್ಥ’ ಆರಂಭವಾ­ಗುವುದಿಕ್ಕಿಂತ ಮೊದಲು ಚಿತ್ರೀಕರಣ ಸುಲಭವಾಗ­ಲೆಂದು ಸ್ಕ್ರಿಪ್ಟ್ ಇಟ್ಟುಕೊಂಡು ಅಭ್ಯಾಸ ಕೂಡ ಮಾಡಿದ್ದೆ. ಚಿತ್ರಕ್ಕೆ ಮೊದಲೇ ನೃತ್ಯ, ಫೈಟಿಂಗ್ ಅಭ್ಯಾಸ ಮಾಡಿದ್ದೆ. ನಮ್ಮದೇ ಪ್ರೊಡಕ್ಷನ್. ನಿರ್ದೇಶಕ ಪ್ರಕಾಶ್ ಜಯರಾಂ ಅವರೂ ಪರಿಚಯ. ತಂಡದ ಹೆಚ್ಚಿನವರು ಗೊತ್ತಿರುವವರೇ. ಹಾಗಾಗಿ ಅಷ್ಟೇನು ಕಷ್ಟ ಅನ್ನಿಸಲಿಲ್ಲ. ಹಾಗಿದ್ದರೂ ಪ್ರಾಕ್ಟೀಸ್‌– ಪ್ರಾಕ್ಟಿಕಲ್‌ಗ ಸಾಕಷ್ಟು ವ್ಯತ್ಯಾಸವಿತ್ತು. ಒಂದೆರಡು ದಿನ ಹೆದರಿದ್ದೆ. ಆರಂಭದಲ್ಲೇ ಸ್ನೇಹಿತರ ಜೊತೆ ಶೂಟಿಂಗ್ ಇತ್ತು. ಹಾಗಾಗಿ ನಿಧಾನಕ್ಕೆ ಪಿಕ್‌ಅಪ್ ಆಯ್ತು.

*ಸ್ನೇಹಿತರ ಬಗ್ಗೆ?
ನಾವು ಐವರು ಒಳ್ಳೆಯ ಸ್ನೇಹಿತರು. ರಿಚರ್ಡ್ ಲೂಯಿಸ್ ಅವರ ಮಗ ಜೀವನ್ ನನಗೆ ಕಾಲೇಜು ದಿನಗಳಿಂದ ಸ್ನೇಹಿತ. ಅವನಿಗೆ ಒಳ್ಳೆಯ ಹಾಸ್ಯ ಪ್ರಜ್ಞೆ ಇದೆ. ಇನ್ನೊಬ್ಬ ಅಲೋಕ್. ಅವನು ‘ನಿನ್ನಿಂದಲೇ’ಯಲ್ಲಿ ನಟಿಸಿದ್ದ. ಚೆನ್ನಾಗಿ ಗಿಟಾರ್ ನುಡಿಸುತ್ತಾನೆ. ಅವನಿಂದಲೇ ನಾನು ಗಿಟಾರ್ ಹಿಡಿಯುವ ಸ್ಟೈಲ್, ಟ್ಯೂನ್ ಎಲ್ಲ ಕಲಿತಿದ್ದು. ಅಭಯ್ ಸೂರಿ ಎಂಬ ಇನ್ನೊಬ್ಬನ ಜೊತೆ ನಾನು ನಾಟಕದಲ್ಲಿ ಕೆಲಸ ಮಾಡಿದ್ದೆ. ನಮ್ಮ ತಂಡದ ಏಕೈಕ ಸದಸ್ಯೆ ನಯನಾ. ಹಾಗಂತ ಅವಳು ಚಿತ್ರದಲ್ಲಿ ಹುಡುಗರಿಗಿಂತ ಏನೂ ಕಡಿಮೆ ಇಲ್ಲ. ಚಿತ್ರದಲ್ಲಿ ಅವಳನ್ನು ‘ಡಿ’ ಅಂತಲೇ ಕರೆಯುವುದು. ಮತ್ತೊಬ್ಬ ವಿನೋದ್. ನಮ್ಮ ನಡುವೆ ಒಳ್ಳೆಯ ಬಾಂಡಿಂಗ್ ಇತ್ತು. ಅದು ತೆರೆಯ ಮೇಲೂ ಕಾಣುತ್ತದೆ.

*‘ಸಿದ್ಧಾರ್ಥ’ದಲ್ಲಿನ ನಿಮ್ಮ ಪಾತ್ರದ ಬಗ್ಗೆ?
ಚಿತ್ರದಲ್ಲಿ ನಾವು ಕಾಲೇಜು ವಿದ್ಯಾರ್ಥಿಗಳು. ಕಾಲೇಜಿನಲ್ಲಿ ‘ಮ್ಯೂಸಿಕ್ ಬ್ಯಾಂಡ್’ ಕಟ್ಟಿಕೊಂಡಿರುತ್ತೇವೆ. ಓದುವುದರ ಜೊತೆ ಸ್ನೇಹಿತರೊಡನೆ ಮೋಜು ಮಾಡುವ ಸ್ವತಂತ್ರ ವ್ಯಕ್ತಿ ನಾನು. ಸುತ್ತಾಡುವುದಕ್ಕೆ, ಪಾರ್ಟಿ ಮಾಡುವುದಕ್ಕೆ ಯಾವುದಕ್ಕೂ ಹೆತ್ತವರ ಮೇಲೆ ಅವಲಂಬನೆ ಆಗಿರುವುದಿಲ್ಲ. ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಒಳ್ಳೆಯ ಗಿಟಾರಿಸ್ಟ್ ಕೂಡ. ನನಗೆ ಒಬ್ಬಳು ಗರ್ಲ್‌ಫ್ರೆಂಡ್ ಇರುತ್ತಾಳೆ. ಹೀಗೆ ಇಂದಿನ ಯುವಜನರ ಪ್ರತಿನಿಧಿ. ನನ್ನ ಪಾತ್ರಕ್ಕೆ ನಾನೇ ದನಿ ನೀಡಿದ್ದೇನೆ.

*‘ಈ ಸಿದ್ಧಾರ್ಥ ಬುದ್ಧ ಅಲ್ಲ’ ಅಂತೀರಿ. ಯಾವ ಅರ್ಥದಲ್ಲಿ…?
ಹೌದು. ಚಿತ್ರದ ಸಿದ್ಧಾರ್ಥ ಬುದ್ಧ ಅಲ್ಲ. ಆದರೆ ಅದು ಯಾವ ರೀತಿಯಲ್ಲಿ ಎಂದು ಖಡಾಖಂಡಿತವಾಗಿ ಹೇಳುವುದು ಕಷ್ಟ. ಒಂದೊಂದು ದೃಶ್ಯದಲ್ಲೂ ಬೇರೆ ಬೇರೆ ಅರ್ಥದಲ್ಲಿ ಈ ವಾಕ್ಯ ನಿಜವಾಗುತ್ತದೆ. ಟ್ರೇಲರ್ ನೋಡಿದರೆ ಇಂದಿನ ಸಾಮಾನ್ಯ ಹುಡುಗನಂತೆ ಮಜವಾಗಿ ಖುಷಿಯಿಂದ ಇರುವುದನ್ನು ಕಾಣುತ್ತೀರಿ. ಆದರೆ ಅದೊಂದೇ ಬಗೆಯಲ್ಲಿ ಈ ವಾಕ್ಯವನ್ನು ಅರ್ಥೈಸಲು ಸಾಧ್ಯವಿಲ್ಲ. ಚಿತ್ರ ನೋಡಿದರೆ ನಿಮಗೇ ಗೊತ್ತಾಗುತ್ತದೆ.

*‘ಸಿದ್ಧಾರ್ಥ’ನ ವಿಶೇಷತೆ?
ಒಬ್ಬ ಹುಡುಗನ ಭಾವನೆಗಳು, ಹೆತ್ತವರು–ಸ್ನೇಹಿತರ ಜೊತೆ ಇರುವ ಬಾಂಧವ್ಯ, ಮೆಚ್ಚಿದ ಹುಡುಗಿಯ ಜೊತೆಗಿನ ಸಂಬಂಧ ಹೀಗೆ ಹಲವು ರೀತಿಯಲ್ಲಿ ಇಂದಿನವ ಸಿದ್ಧಾರ್ಥ. ಒಬ್ಬ ಕಾಲೇಜು ವಿದ್ಯಾರ್ಥಿ ಚಿತ್ರ ನೋಡಿದರೆ ಅದರಲ್ಲಿನ ಪಾತ್ರ ನೋಡಿ ತನಗೆ ಹೋಲಿಸಿಕೊಳ್ಳುತ್ತಾನೆ. ಪೋಷಕರು ನೋಡಿ, ಓಹ್, ನನ್ನ ಮಗನೂ ಹೀಗೆ ಇರಬಹುದಲ್ಲವೇ, ಅವನಲ್ಲೂ ಇಂಥ ಭಾವನೆಗಳು ಇರಬಹುದಲ್ಲವೇ ಎಂದು ರಿಲೇಟ್ ಮಾಡಿಕೊಳ್ಳುತ್ತಾರೆ. ಇಂತಹ ತಾಜಾ ಅಂಶಗಳೇ ಸಿದ್ಧಾರ್ಥನ ವಿಶೇಷ.

*‘ಸಿದ್ಧಾರ್ಥ’ನಿಗೂ ವಿನಯ್‌ಗೂ ಏನಾದರೂ ಹೋಲಿಕೆ?
ಚಿತ್ರದ ಟ್ರೇಲರ್ ನೋಡಿದರೆ ಸಿದ್ಧಾರ್ಥ ಸಾಕಷ್ಟು ಚೆಲ್ಲಾಟವಾಡುವವನಂತೆ ಕಾಣುತ್ತಾನೆ.
‘ಥೂ ಪೋಲಿ ಎಷ್ಟು ಹುಡ್ಗೀರು ಬೇಕು ನಿಂಗೆ’ ಎಂದೆಲ್ಲ ಕೇಳಿಸಿಕೊಳ್ಳುತ್ತೀನಿ. ಆದರೆ ಸಿನಿಮಾ ಬೇರೆ. ನಿಜ ಜೀವನ ಬೇರೆ ಎಂದಷ್ಟೇ ಹೇಳುತ್ತೇನೆ. ಅದನ್ನು ಬಿಟ್ಟರೆ ಯಾರಾದರೂ ಏನಾದರೂ ಹೇಳಿದರೆ ಚೆನ್ನಾಗಿ ಕೇಳಿಕೊಂಡು, ಅದನ್ನು ಅಳವಡಿಸಿಕೊಂಡು ನನ್ನದೇ ರೀತಿಯಲ್ಲಿ ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

*ರಾಜ್ ಕುಟುಂಬದ ಛಾಯೆ ನಿಮ್ಮ ಮೇಲೆ ಇದ್ದೇ ಇರುತ್ತದೆ. ಅದರ ಕುರಿತು..?
ನಟನೆಗೆ ಶುರುವಿಡುವಾಗಲೇ ನನಗೆ ಈ ವಿಷಯ ತಲೆಯಲ್ಲಿತ್ತು. ರಾಜ್ ಕುಟುಂಬದಿಂದ ಬಂದವನು ಎಂದಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ, ಒತ್ತಡ ಇರುತ್ತದೆ. ಹೋಲಿಸಿ ನೋಡುತ್ತಾರೆ. ಹೇಗೆ ನಿಭಾಯಿಸುವುದು ಎಂಬ ಗೊಂದಲವಿತ್ತು. ಹಲವರು ಈ ಬಗ್ಗೆ ಕೇಳಿಯೂ ಇದ್ದರು. ಆದರೆ ಅಪ್ಪ ಧೈರ್ಯ ತುಂಬಿದರು. ‘ತಾತ ಇನ್ನೂರಕ್ಕೂ ಹೆಚ್ಚು ಚಿತ್ರ ಮಾಡಿದ್ದಾರೆ. ನಾನು ನೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಚಿಕ್ಕಪ್ಪ ಸ್ಟಾರ್. ಆದರೆ ನೀನು ಅದ್ಯಾವುದನ್ನೂ ತಲೆಯಲ್ಲಿ ಹಾಕಿಕೊಳ್ಳಬೇಡ. ರಾಜ್‌ಕುಮಾರ್ ಕುಟುಂಬದವನು ಎಂಬುದನ್ನು ನೆಚ್ಚಿಕೊಳ್ಳಬೇಡ. ನೀನು ವಿನಯ್ ಆಗಿ, ಹೊಸ ನಟನಾಗಿ ನಟಿಸು. ಒಳ್ಳೆಯ ಚಿತ್ರ ಮಾಡಬೇಕು. ಚಿತ್ರ ಒಳ್ಳೆಯದಾಗಿದ್ದರೆ ಮಾತ್ರ ಜನ ನೋಡುವುದು’ ಎಂದು ದೊಡ್ಡಪ್ಪ ಹುರಿದುಂಬಿಸಿದ್ದರು. ನಾನು ಕೂಡ ಅದನ್ನೇ ಮನಸಿನಲ್ಲಿಟ್ಟುಕೊಂಡು ಮುಂದುವರಿಯುತ್ತಿದ್ದೇನೆ.

*ಮುಂದಿನ ಯೋಜನೆಗಳೇನು?
‘ಸಿದ್ಧಾರ್ಥ’ ತೆರೆಗೆ ಬರುವುದನ್ನೇ ಕಾಯುತ್ತಿದ್ದೇನೆ. ಸದ್ಯ ಮತ್ಯಾವ ಚಿತ್ರವೂ ಮಾಡುತ್ತಿಲ್ಲ. ಅದನ್ನು ಬಿಟ್ಟರೆ, ಬಿ.ಕಾಂ. ಮುಗಿಸಿದ್ದೇನೆ. ಈಗ ಚಿತ್ರಲೋಕವೇ ನನ್ನ ಬದುಕು. ಶಿಕ್ಷಣ ಮುಂದುವರಿಸುವ ಆಸಕ್ತಿ ಏನಿಲ್ಲ. ಒಂದು ವೇಳೆ ಏನಾದರೂ ಕಲಿಯುತ್ತೇನಾದರೆ ಅದು ಚಿತ್ರರಂಗಕ್ಕೆ ಸಂಬಂಧಿಸಿದ ತರಬೇತಿಯೇ ಆಗಿರುತ್ತದೆ.

Write A Comment