ಮನೋರಂಜನೆ

ಸಂಪೂರ್ಣ ಹೊಸಬರ ತಂಡದ ‘ಮಿರ್ಚಿ ಮಂಡಕ್ಕಿ ಕಡಕ್ ಚಾಯ್’ ಇಂದು ತೆರೆಗೆ

Pinterest LinkedIn Tumblr

m

ಸಂಪೂರ್ಣ ಹೊಸಬರದೇ ತಂಡ ನಿರ್ಮಿಸಿರುವ ‘ಮಿರ್ಚಿ ಮಂಡಕ್ಕಿ ಕಡಕ್ ಚಾಯ್’ ಚಿತ್ರ ಇಂದು (ಜ.23) ತೆರೆಗೆ ಬರುತ್ತಿದೆ. ನಿರ್ದೇಶಕಿ ಸಂಜೋತಾ ಅವರಿಗೆ ಇದು ಮೊದಲ ಅನುಭವ. ಅಲ್ಲದೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣ ಹೀಗೆ ಚಿತ್ರದ ಬಹುತೇಕ ಜವಾಬ್ದಾರಿ ಹೊತ್ತಿರುವ ಸಂಜೋತಾ ಅವರ ಮುಖದಲ್ಲಿ ಸಂತಸದ ಜೊತೆಗೆ ಕೊಂಚ ಆತಂಕವೂ ಇಣುಕುತ್ತಿತ್ತು.

ಸಂಜೋತಾ ಅವರೇ ಹೇಳಿದಂತೆ, ಈಗಾಗಲೇ ಒಂದು ಮಗುವಿನ ತಾಯಿಯಾದ ಅವರಿಗೆ ಈಗ ಎರಡನೆಯ ಬಾರಿ ಹೆರಿಗೆ ಆದ ಅನುಭವ ಆಗಿದೆಯಂತೆ. ಅಂತಹ ಹೆರಿಗೆಯ ನೋವು ಮತ್ತು ಆ ನಂತರದ ಖುಷಿ ಅವರದ್ದು. ಚಿತ್ರದ ಪೋಸ್ಟರ್‌ಗಳಲ್ಲಿ ಇರುವ ಒಂದು ದೊಡ್ಡ ಚಕ್ರ ಹಾಗೂ ಮತ್ತೊಂದು ಚಿಕ್ಕ ಚಕ್ರದ ಬಗ್ಗೆ, ‘ಚಿತ್ರ ಗೆದ್ದರೆ ಈ ಚಕ್ರಗಳು ಮೋಟರ್ ಸೈಕಲ್ ಆಗುತ್ತವೆ. ಒಂದು ವೇಳೆ ಸೋತರೆ ಅದೇ ವ್ಹೀಲ್ ಚೇರ್ ಆಗುತ್ತದೆ’ ಎಂಬ ವಿವರಣೆ ಅವರದು.

ನಟಿ ನಮ್ರತಾ ಅವರು ‘ಕಡಕ್ ಚಾಯ್’ ಆಗಿ ಕಡಕ್ ಪಾತ್ರವನ್ನೇ ನಿರ್ವಹಿಸಿದ್ದಾರಂತೆ. ಅವರಿಗೆ ಜೊತೆಯಾಗಿ ನಟಿಸಿರುವ ವಿಶಾಲ್ ಅವರು ಚಿತ್ರದಲ್ಲಿ ಮುದ್ದುಕೃಷ್ಣ ಎಂಬ ಪಾತ್ರದ ಹೆಸರಿಗೆ ತಕ್ಕಂತೆ ಮೊದ್ದು ಮೊದ್ದಾಗಿ ಕಾಣಿಸಿಕೊಂಡಿದ್ದಾರಂತೆ. ಅವರ ಪಾತ್ರಕ್ಕೆ ಮಹಿಳಾ ದೃಷ್ಟಿಕೋನದ ಸ್ಪರ್ಷವೂ ಇದೆಯಂತೆ. ಸಚಿನ್ ಅವರ ಗಂಭೀರ, ಸಾಚಾ ಸ್ವಭಾವಕ್ಕಾಗಿ ‘ಮಂಡಕ್ಕಿ’ ಹೆಸರು ಪ್ರಾಪ್ತಿಯಾಗಿದೆ. ಅವರಿಗೆ ಜೋಡಿಯಾಗಿ ಅಪೂರ್ವ ನಟಿಸಿದ್ದಾರೆ. ಅವರು ಇಲ್ಲಿ ನಯ ನಾಜೂಕಿನ ಹಳ್ಳಿ ಹುಡುಗಿಯಂತೆ. ‘ಮೂವರು ಮುಖ್ಯ ಪಾತ್ರಧಾರಿಗಳ ಏಳು ಬೀಳುಗಳನ್ನು ಚಿತ್ರದಲ್ಲಿ ಕಾಣಬಹುದು’ ಎನ್ನುತ್ತಾರೆ ಮಿಥುನ್ ಅಲಿಯಾಸ್ ಚಿತ್ರದ ‘ಮಿರ್ಚಿ’.

ಚಿತ್ರಕ್ಕೆ ‘ಯು’ ಪ್ರಮಾಣಪತ್ರ ದೊರೆತಿರುವುದು ಇದೊಂದು ಕೌಟುಂಬಿಕ ಮನರಂಜನೆಯ ಚಿತ್ರ ಎನ್ನುವುದಕ್ಕೆ ಪುಷ್ಟಿ. ‘ಯೂ ಟ್ಯೂಬ್‌’ನಲ್ಲಿ ಈಗಾಗಲೇ ಮೂವತ್ತೆರಡು ಸಾವಿರ ಜನ ಟ್ರೇಲರ್ ನೋಡಿದ್ದಾರಂತೆ. ಹೀಗಾಗಿ ಚಿತ್ರವೂ ಹಿಟ್ ಆಗುವ ನಂಬಿಕೆ ತಂಡದ್ದು. ಚಿತ್ರಕ್ಕೆ ಹರಿಕಾವ್ಯ ಅವರ ಸಂಗೀತ, ರತೀಶ್ ಕೆ.ಜಿ ಅವರ ಛಾಯಾಗ್ರಹಣ ಇದೆ. ಸುಮಾರು ಐವತ್ತು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

Write A Comment