ಅಂತರಾಷ್ಟ್ರೀಯ

ಪಾಕ್‌: ಉಗ್ರ ಸಂಘಟನೆಗಳ ಮೇಲೆ ನಿಷೇಧ

Pinterest LinkedIn Tumblr

23janvidhafiz

ಇಸ್ಲಾಮಾಬಾದ್: ಅಮೆರಿಕದ ಒತ್ತಡ ಹೆಚ್ಚಿದ್ದರಿಂದ ಪಾಕಿ­ಸ್ತಾನ ಸರ್ಕಾ­ರವು ಭಯೋತ್ಪಾದಕರ ವಿರುದ್ಧದ ತನ್ನ ನೀತಿಯಲ್ಲಿ ಆಮೂ­ಲಾಗ್ರ ಬದ­ಲಾ­ವಣೆ ಮಾಡಿದ್ದು, 26/11ರ ಮುಂಬೈ ದಾಳಿ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್- ಉದ್-ದಾವಾ (ಜೆಯುಡಿ), ತೀವ್ರ ಅಪಾಯಕಾರಿ ಎನಿ­ಸಿದ ಹಖಾನಿ ಹಾಗೂ ಇತರ ಒಂಬತ್ತು ಉಗ್ರಗಾಮಿ ಸಂಘ­ಟನೆಗಳನ್ನು ನಿಷೇಧಿಸಿ ಗುರು­­ವಾರ ಆದೇಶ ಹೊರಡಿಸಿದೆ.

ಪೆಶಾವರ ಶಾಲೆಯ ಮೇಲೆ ತಾಲಿ­ಬಾನ್ ಭಯೋತ್ಪಾದಕರು ದಾಳಿ ಮಾಡಿ 136 ಮಕ್ಕಳೂ ಸೇರಿದಂತೆ 150 ಜನ­ರನ್ನು ಹತ್ಯೆ ಮಾಡಿದ ನಂತರ ಒಳ್ಳೆಯ ಮತ್ತು ಕೆಟ್ಟ ಉಗ್ರ ಸಂಘಟನೆ ಎಂಬ ನೆಪ ಹೂಡುತ್ತ ಕಾಲ ಕಳೆಯದೆ ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ನಿಷೇ­­­ಧಿಸಬೇಕು ಎಂಬ ಒತ್ತಡಕ್ಕೆ ಪಾಕಿ­ಸ್ತಾನ ಸರ್ಕಾರ ಕೊನೆಗೂ ಮಣಿದಿದೆ.

ಜೆಯುಡಿ ಮತ್ತು ಇತರ ಭಯೋ­ತ್ಪಾದಕ ಉಗ್ರ ಸಂಘಟನೆಗಳನ್ನು ನಿಷೇ­ಧಿ­ಸುವ ನಿರ್ಧಾರವನ್ನು ಸರ್ಕಾರ ಕೆಲವು ದಿನಗಳ ಹಿಂದೆಯೇ ತೆಗೆದು­ಕೊಂ­ಡಿದೆ. ನಿಷೇಧಾಜ್ಞೆಯನ್ನು ಯಾವ ರೀತಿ ಜಾರಿ ಮಾಡಬೇಕು ಎಂಬ ತೀರ್ಮಾನವನ್ನು ಆಂತರಿಕ ಭದ್ರತಾ ಸಚಿವಾಲಯಕ್ಕೆ ಬಿಟ್ಟಿದ್ದ­ರಿಂದ ಈಗ ಅಧಿಕೃತ­ವಾಗಿ ನಿಷೇಧ ಕ್ರಮ­ವನ್ನು ಪ್ರಕಟಿಸಲಾಗು­ತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಯೀದ್ ನೇತೃತ್ವದ ಇನ್ನೊಂದು ಸಂಘ­ಟನೆ ಫಲಾಹಿ ಇನ್ಸಾನಿಯತ್ ಪ್ರತಿ­ಷ್ಠಾನವನ್ನೂ ನಿಷೇಧಿತ ಸಂಘಟನೆ­ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದ­ಲ್ಲದೆ, ಸಯೀದ್ ವಿದೇಶ ಪ್ರವಾಸವನ್ನೂ ನಿಷೇಧಿಸ­ಲಾಗಿದೆ. ಹಖಾನಿ ಮತ್ತು ಜೆಯುಡಿ ನಿಷೇಧಿ­ಸುವಂತೆ ಅಮೆರಿಕ ಮತ್ತು ಅಂತರ­ರಾಷ್ಟ್ರೀಯ ಸಮುದಾಯ ಒತ್ತಡ ಹೇರು­ತ್ತಲೇ ಇದ್ದವು. ಆದರೆ ಪಾಕಿಸ್ತಾನ ಸರ್ಕಾರ ನೆಪಗಳನ್ನು ಹೇಳುತ್ತ ಕಾಲ ಕಳೆಯುತ್ತಿತ್ತು. ಈಗ ಅಮೆರಿಕ ಅಧ್ಯಕ್ಷ ಒಬಾಮ ಗಣರಾ­ಜ್ಯೋತ್ಸ­ವದ ಮುಖ್ಯ ಅತಿಥಿ­ಯಾಗಿ ಭಾರತಕ್ಕೆ ಭೇಟಿ ನೀಡುತ್ತಿರುವುದ­ರಿಂದ ತರಾತು­ರಿ­ಯಿಂದ ಉಗ್ರ ಸಂಘಟ­ನೆ­ಗಳ ನಿಷೇಧ ಕ್ರಮವನ್ನು ಪ್ರಕಟಿಸಿದೆ ಎನ್ನಲಾಗಿದೆ.

ನಿಷೇಧಿತ ಇತರ ಭಯೋತ್ಪಾದಕ ಸಂಘಟನೆಗಳು: ಹರ್ಕತ್- ಉಲ್­­-ಜಿಹಾದ್ ಇಸ್ಲಾಮಿ, ಹರ್ಕತ್- ಉಲ್‌-­­ಮುಜಾಹಿದೀನ್, ಉಮ್ಮಾ ತಮೀರ್‌  – ಇ-ನಾವು, ಹಾಜಿ ಖೈರುಲ್ಲಾ ಹಜ್ಜಿ ಸತ್ತಾರ್ ವಿದೇಶಿ ವಿನಿಮಯ ಸಂಸ್ಥೆ, ರಹಾತ್ ಲಿಮಿಟೆಡ್ ಸಂಸ್ಥೆ, ರೋಷನ್ ವಿದೇಶಿ ವಿನಿಮಯ ಸಂಸ್ಥೆ, ಅಲ್‌-ಅಕ್ಬರ್ ಟ್ರಸ್ಟ್ ಮತ್ತು ಅಲ್‌-ರಷೀದ್ ಟ್ರಸ್ಟ್.

ನಿಷೇದಾಜ್ಞೆ ಜಾರಿ ಮಾಡಿದ ನಂತರ ಈ ಸಂಘ­ಟ­ನೆಗಳ ಚರ, ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿ­ಕೊಳ್ಳಲಾಗಿದೆ. ಜೆಯುಡಿ ಮುಖಂಡರ ಹೆಸರು­­ಗಳನ್ನು ‘ಬೇಕಾಗಿದ್ದಾರೆ’ ಪಟ್ಟಿಯಲ್ಲಿ ಸೇರಿ­­ಸ­ಲಾಗುತ್ತಿದೆ. ಈಗಾಗಲೇ ವಿಶ್ವ­ಸಂಸ್ಥೆಯ ಭದ್ರತಾ ಮಂಡಳಿ ಮತ್ತು ಅಮೆರಿಕವು ಅನೇಕ ಭಯೋ­ತ್ಪಾದಕ ಸಂಘ­ಟನೆಗಳ ಮುಖಂಡರುಗಳ ಹೆಸ­ರು­ಗಳನ್ನು ‘ಬೇಕಾಗಿದ್ದಾರೆ’ ಪಟ್ಟಿಯಲ್ಲಿ ಸೇರಿಸಿವೆ.

ಜಲಾಲುದ್ದೀನ್ ಹಖಾನಿ ನೇತೃತ್ವದ ಹಖಾನಿ ಸಂಘಟನೆಯು 2008ರಲ್ಲಿ ಆಫ್ಘಾನಿಸ್ತಾನದಲ್ಲಿನ ಭಾರತೀಯ ರಾಯ­­ಭಾರ ಕಚೇರಿಯ ಮೇಲೆ ದಾಳಿ ನಡೆಸಿ 58 ಜನರನ್ನು ಹತ್ಯೆ ಮಾಡಿತ್ತು. ನಂತರ ಇದೇ ಸಂಘಟನೆ 2011ರಲ್ಲಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯ­ಭಾರ ಕಚೇರಿ ಮೇಲೆ ದಾಳಿ ನಡೆಸಿತ್ತು. ಈ ಸಂಘಟನೆಗೆ ಪಾಕಿಸ್ತಾನದ ಐಎಸ್‌ಐ ಬೆಂಬಲವಿದೆ ಎಂದು ಅಮೆರಿಕ ಮತ್ತು ಆಫ್ಘನ್‌ ಸರ್ಕಾರಗಳು ಆಪಾದಿಸಿದ್ದವು.

ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ: ನಿಷೇಧಿಸಿದ ಎಲ್ಲ ಉಗ್ರಗಾಮಿ ಸಂಘ­ಟನೆಗಳ ಹೆಸರುಗಳನ್ನು ಸಾರ್ವ­ಜನಿಕ­ರಿಗೆ ತಿಳಿ­ಯುವಂತೆ ಬಹಿರಂಗಪಡಿಸ­ಬೇಕು ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್‌ ಗುರು­ವಾರ ಸರ್ಕಾರಕ್ಕೆ ಸೂಚಿಸಿದೆ.

ಇದರಿಂದ ಈ ಸಂಘಟನೆಗಳಿಗೆ ಜನರು ದೇಣಿಗೆ ನೀಡುವುದನ್ನು ನಿಲ್ಲಿಸುವರು ಎಂದು ನ್ಯಾಯಮೂರ್ತಿ ಜವ್ವಾದ್‌ ಖ್ವಾಜಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಹಫೀಜ್‌ ಸಯೀದ್‌ ನೇತೃತ್ವದ ಜೆಯುಡಿ ಸೇರಿದಂತೆ ಹಲವು ಉಗ್ರ­ಸಂಘಟನೆಗಳನ್ನು ಸರ್ಕಾರ ನಿಷೇಧಿ­ಸಿದ ಬೆನ್ನಲ್ಲೇ ಈ ಆದೇಶ ನೀಡಿದ ನ್ಯಾಯ­ಪೀಠವು, ಉಗ್ರರ ವಿರುದ್ಧ ಸರ್ಕಾರವು ಯುದ್ಧ ಸಾರಿರುವ ಸಂದರ್ಭ­ದಲ್ಲಿ ಯಾವ ಉಗ್ರಗಾಮಿ ಸಂಘಟನೆ­ಗಳನ್ನು ನಿಷೇಧಿಸಲಾಗಿದೆ ಎಂಬುದು ಜನತೆಗೆ ತಿಳಿಯಬೇಕು ಎಂದು ಹೇಳಿತು.

Write A Comment