ಕರ್ನಾಟಕ

ಸ್ತಬ್ಧಚಿತ್ರದ ಬೆರಗಿನ ಹಿಂದೆ…

Pinterest LinkedIn Tumblr

psmec22Doll2

ಒಂದಲ್ಲ ಎರಡಲ್ಲ ಬರೋಬ್ಬರಿ ನಲವತ್ತು ದಿನ ಹಗಲು ರಾತ್ರಿ ನಿರಂತರವಾಗಿ ಕೆಲಸ ಸಾಗುತ್ತಲೇ ಇದೆ. ಡಿಸೆಂಬರ್‌ ಚಳಿ ಮೈಯನ್ನು ಪತರಗುಟ್ಟಿಸಿದರೂ ಕೆಲಸ ನಿಲ್ಲುವಂತಿಲ್ಲ. ಇಪ್ಪತ್ತಕ್ಕೂ ಹೆಚ್ಚು ಜನ ಮೌಲ್ಡರ್‌ಗಳು, ಹದಿನಾರು ಮಂದಿ ಮರ ಗೆಲಸದವರು ಜೊತೆಗೆ ಹತ್ತಾರು ನುರಿತ ಬಣ್ಣಗಾರರು ಬೃಹತ್‌ ಕೆಲಸವೊಂದಕ್ಕೆ ದುಡಿಯುತ್ತಿದ್ದು, ಇದೀಗ ಇವರ ದುಡಿಮೆಯ ಪ್ರತಿರೂಪ ದೆಹಲಿಯ ದಾರಿಯಲ್ಲಿ ಸಾಗಿದೆ.

ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ ಸಾಗಿಬರುವ ಕರ್ನಾಟಕದ ಹೆಮ್ಮೆಯ ಸ್ತಬ್ಧಚಿತ್ರ ಚನ್ನಪಟ್ಟಣದ ಗೊಂಬೆ ಸಿದ್ಧವಾದುದು ಬೆಂಗಳೂರಿನ ಸೋಲದೇವನಹಳ್ಳಿ ಪ್ರತಿರೂಪಿ ಕಾರ್ಯಾಗಾರದಲ್ಲಿ.

ನಂದಿಬೆಟ್ಟ ಸಾಲುಗಳಿಂದ ಮಳೆಗಾಲದಲ್ಲಿ ಹರಿದುಬರುವ ನೀರಿನಿಂದ ಶುರುವಿನಲ್ಲೇ ತುಂಬುವ ಕೆರೆಗಳಲ್ಲಿ ಒಂದಾದ ಹೆಸರಘಟ್ಟ ಕೆರೆ ಹೊಸ ಬೆಂಗಳೂರಿಗೆ ಮೊದಮೊದಲು ಕುಡಿಯುವ ನೀರುಣಿಸುತ್ತಿದ್ದ ಕೆರೆ. ನಗರದ ತೆಕ್ಕೆಯಲ್ಲಿರುವ ಹೆಸರಘಟ್ಟ ಕೆರೆ ಸನಿಹದ ಸೋಲದೇವನಹಳ್ಳಿಯಲ್ಲಿರುವ ಕಾರ್ಯಾಗಾರದಲ್ಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಸಂಚರಿಸುವ ಸ್ತಬ್ಧಚಿತ್ರದ ಬಹುಪಾಲು ಕೆಲಸಗಳೆಲ್ಲವೂ ನಡೆದಿದ್ದು.

ದೆಹಲಿಯಲ್ಲಿ ಈ ವರ್ಷ ಚಳಿ–ಹಿಮ ಹೆಚ್ಚಾಗಿದ್ದುದರಿಂದ ಬಣ್ಣಗಾರಿಕೆಗೆ ಅಡ್ಡಿಯಾಗುವುದೆಂಬ ಶಂಕೆ ಇತ್ತು. ಆದ್ದರಿಂದ ಸ್ತಬ್ಧಚಿತ್ರದ ಬಹುಪಾಲು ಎಲ್ಲಾ ಕೆಲಸಗಳನ್ನೂ ಬೆಂಗಳೂರಿನಲ್ಲೇ ಪೂರ್ಣಗೊಳಿಸಬೇಕಾದ ಅನಿವಾರ್ಯ ಉಂಟಾಯಿತೆಂದರು ಹೆಸರಾಂತ ಕಲಾವಿದ ಶಶಿಧರ ಅಡಪ.

ಕರ್ನಾಟಕ ಸರ್ಕಾರದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸ್ತುತಪಡಿಸುವ ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಕೀ ಮಾಡಲ್‌ ಮಾಡಿಕೊಟ್ಟವರು ಶಶಿಧರ ಅಡಪ. ಆಕರ್ಷಕವಾದ ಈ ಸ್ತಬ್ಧಚಿತ್ರ ರೂಪಿಸುವುದಕ್ಕಾಗಿ ಟೊಂಕ ಕಟ್ಟಿರುವವರೂ ಅವರೇ.
ಪಥ ಸಂಚಲನದಲ್ಲಿರುವ ಸ್ತಬ್ಧಚಿತ್ರ ವಾಹನದಲ್ಲಿ ಸಾಗಲಿರುವ ಬೊಂಬೆಗಳು 42. ಇವುಗಳಲ್ಲಿ ಒಂದೂವರೆ ಅಡಿಯಿಂದ ಹಿಡಿದು ಹತ್ತು ಅಡಿಯವರೆಗೆ ವಿವಿಧ ಅಳತೆಗಳಿರುವ ಬೊಂಬೆಗಳಿವೆ. ಆಡುವ ಮಕ್ಕಳಿವೆ. ನೀರೆಯರ ದಂಡು, ರಾಜರಾಣಿಯರ ಜೋಡಿ, ಸೈನಿಕರ ಸಾಲು, ಜಗತ್ತಿನಲ್ಲೆಲ್ಲಾ ಹೆಸರಾಗಿರುವ ಚನ್ನಪಟ್ಟಣ ಆಟಿಕೆ ತಯಾರಿಸುವ ಕುಶಲಕರ್ಮಿಗಳ ಪ್ರತಿಕೃತಿಗಳೂ ಈ ಸಮೂಹದಲ್ಲಿವೆ.

ಎರಡು ಶತಮಾನಕ್ಕೂ ಹೆಚ್ಚು ಕಾಲದಿಂದ ಜನಮನದಲ್ಲಿ ಹಾಸುಹೊಕ್ಕಾಗಿರುವ ಚನ್ನಪಟ್ಟಣದ ಬೊಂಬೆಗಳು ಮರ–ಅರಗಿನಿಂದ ತಯಾರಾಗುತ್ತವೆಯಾದರೂ ಅವುಗಳಿಗೆ ಜೀವವಿದೆ. ಆಕರ್ಷಕ ಬಣ್ಣಗಳ ಸೊಗಸಿದೆ. ಎಲ್ಲಾ ವಯೋಮಾನದವರಿಗೆ, ವಿಶೇಷವಾಗಿ ಮಕ್ಕಳಿಗೆ ಮುದ ಕೊಡುವ ಚನ್ನಪಟ್ಟಣದ ಬೊಂಬೆಗಳಿಗೆ ಸ್ತಬ್ಧಚಿತ್ರದಲ್ಲೂ ಜೀವಂತಿಕೆ ತಂದುಕೊಡುವ ಕೆಲಸ ನಡೆದಿದೆ. ಹೀಗಾಗಿ ಸ್ತಬ್ಧಚಿತ್ರದ ವೇದಿಕೆಯಲ್ಲೂ ಕೆಲವು ಬೊಂಬೆಗಳಿಗೆ ಜೀವ ಕೊಡಲಾಗಿದೆ.

ತಿರುಗುವ ಚಿಣ್ಣರು, ರಾಜ–ರಾಣಿಯರು ಸ್ತಬ್ಧಚಿತ್ರದಲ್ಲಿ ನೋಡಲು ಲಭ್ಯ. ಇದಕ್ಕಾಗಿ ವಿಶೇಷ ತಂತ್ರಜ್ಞಾನವನ್ನು ಉಪಯೋಗಿಸಿದ್ದು, ನೈಜವಾಗಿ ಮೂಡಿಬರುವಂತೆ ಮಾಡಲು ಚನ್ನಪಟ್ಟಣದ ಕಸುಬುದಾರರೇ ನೆರವಾದರು.

ಆರು ತಿಂಗಳ ಅವಧಿಯ ಸ್ತಬ್ಧಚಿತ್ರ ಪ್ರಕ್ರಿಯೆಯಲ್ಲಿ ಎದುರಿಸಬೇಕಾಗುವ ಸವಾಲಿನ ಕೆಲಸವನ್ನು ಆರಂಭದ ಹಂತದಲ್ಲೇ ಸುಲಭ ಮಾಡಿದ್ದು ಚನ್ನಪಟ್ಟಣದ ಗೊಂಬೆಗಳ ಸ್ತಬ್ಧಚಿತ್ರದ ವೈಶಿಷ್ಟ್ಯ ಎಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌, ಕರ್ನಾಟಕ ಆರನೇ ಬಾರಿಯೂ ಸತತವಾಗಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಒಂದು ದಾಖಲೆ ಎಂದರು.

ಪಾರಂಪರಿಕ ಗೊಂಬೆ ಸಂಸ್ಕೃತಿಯನ್ನು ಸ್ತಬ್ಧಚಿತ್ರದಲ್ಲಿ ನೈಜವಾಗಿ ರೂಪಿಸಲು ಅಗತ್ಯವಾದ ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದ್ದು, ಇದಕ್ಕೆಲ್ಲ ಟನ್ನುಗಟ್ಟಲೆ ಕಬ್ಬಿಣ, ಫೈಬರ್‌ ಹಾಗೂ ಮರ ಉಪಯೋಗವಾಗಿದೆ. ಆಟಿಕೆ ಮತ್ತು ಬೊಂಬೆಗಳು ವಿಶಿಷ್ಟ ಕೆತ್ತನೆ, ಆಕರ್ಷಕ ವಿನ್ಯಾಸ, ಬಣ್ಣಗಳಿಂದ ತುಂಬಿಕೊಳ್ಳುವಂತೆ ಮಾಡಲು ಚನ್ನಪಟ್ಟಣ ಕುಶಲಕರ್ಮಿಗಳು ನೆರವಾಗಿದ್ದು, ಸೂಕ್ಷ್ಮ ಹಾಗೂ ನವಿರಾದ ಕೃತಿಗಳು ಹೊರಬರಲು ಕಾರಣರಾಗಿದ್ದಾರೆ.

‘ದೊಡ್ಡದಾದ ಮೇಲೆ ಬೊಂಬೆಗಳಲ್ಲಿ ಅಂಕುಡೊಂಕು ಇರದಂತೆ ಮಾಡಲು ವಿಶೇಷ ರೀತಿಯ ಮೌಲ್ಡಿಂಗ್‌ ಮಾಡಲಾಗಿದೆ. ಇದರಿಂದ ಬೃಹತ್‌ ಬೊಂಬೆಗಳಲ್ಲಿ ನುಣುಪು ಹಾಗೂ ಹೊಳಪು ಬರಲಿದ್ದು ಇದು ಒಟ್ಟಾರೆ ಚಲನರೂಪಕದ ಅಂದ ಹೆಚ್ಚಿಸುತ್ತದೆ’ ಎನ್ನುತ್ತಾರೆ ನಿರ್ಮಾಣ ಮೇಲುಸ್ತುವಾರಿ ವಹಿಸಿರುವ ದಾಮು.

ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಅವಕಾಶ ಸಿಕ್ಕುವುದು ಅಸಾಧ್ಯ. ಅನೇಕ ಕಟ್ಟುನಿಟ್ಟಾದ ರಿವಾಜುಗಳನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಆಯ್ಕೆ ಸಾಧ್ಯ. ‘ಚನ್ನಪಟ್ಟಣ ಚಲನರೂಪಕದ ಪರಿಕಲ್ಪನೆಯೇ ವಿಶಿಷ್ಟವಾಗಿದ್ದು, ಕೇಂದ್ರ ರಕ್ಷಣಾ ಇಲಾಖೆಯ ಉನ್ನತ ಸಮಿತಿ ರೂಪಿಸಿರುವ ನಿಯಮಾವಳಿಗಳ ವ್ಯಾಪ್ತಿಯಲ್ಲಿ ಅದು ಇದ್ದಿದ್ದರಿಂದ ಮೊದಲ ಹಂತದಲ್ಲಿಯೇ ಆಯ್ಕೆಯಾಗಲು ಸಾಧ್ಯವಾಯಿತು’ ಎಂದರು ಚಲನರೂಪಕ ವಿಭಾಗದ ಉಪನಿರ್ದೇಶಕ ಎಸ್‌.ವಿ. ಲಕ್ಷ್ಮೀನಾರಾಯಣ್‌.

‘ಮನಸೆಳೆಯುವ ವರ್ಣ ವೈಭವದೊಂದಿಗೆ ಚನ್ನಪಟ್ಟಣ ಗೊಂಬೆ ಚಲನರೂಪಕಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಪ್ರವೀಣ್‌ ಡಿ. ರಾವ್‌ ಮಾಧುರವಾದ ಸಂಗೀತ ಕೊಟ್ಟಿದ್ದು ಸ್ತಬ್ಧಚಿತ್ರ ವೈವಿಧ್ಯವಾಗಿ ಹೊರಹೊಮ್ಮಲು ಕಾರಣ’ ಎನ್ನುವುದು ಜಂಟಿ ನಿರ್ದೇಶಕ ಎಂ. ರವಿಕುಮಾರ್‌ ಅಭಿಪ್ರಾಯ.

ಸ್ತಬ್ಧಚಿತ್ರ ಇರಿಸಲಾಗುವ ಬೃಹತ್‌ ವೇದಿಕೆಯ ಅಂಚುಗಳೂ ಪಾರಂಪರಿಕ ಚನ್ನಪಟ್ಟಣ ಮಣಿಗಳಿಂದ ಅಲಂಕೃತಗೊಳ್ಳಲಿದ್ದು, ಇದಕ್ಕೆ ನವನವೀನ ಬಗೆಯ ವಿನ್ಯಾಸ ಮತ್ತು ವರ್ಣಗಳ ಚಿತ್ತಾರವೂ ಇರಲಿದೆ. ಪಾರಂಪರಿಕ ಕುಶಲ ಕಲೆಯಿಂದಲೇ ಪ್ರಸಿದ್ಧವಾಗಿರುವ ಚನ್ನಪಟ್ಟಣದ ಗೊಂಬೆಗಳು ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ, ಅದೂ ಅಮೆರಿಕ ಅಧ್ಯಕ್ಷರ ಸಮಕ್ಷಮದಲ್ಲಿ ಅನಾವರಣಗೊಳ್ಳಲು ನುರಿತ ಕಲಾವಿದರ ಗುಂಪು ಕೈಜೋಡಿಸಿರುವುದು ಉಲ್ಲೇಖನೀಯ.

Write A Comment