ರಾಷ್ಟ್ರೀಯ

ಕೇಜ್ರಿ ಆಸ್ತಿ ಕುಸಿತ, ಕೇಸ್‌ಗಳು ಹೆಚ್ಚಳ: ಆಸ್ತಿ ಲೆಕ್ಕದಲ್ಲಿ ಮಾಕನ್ ಫಸ್ಟ್, ಕಿರಣ್ ಬಳಿ 5 ಗ್ರಾಂ ಬಂಗಾರ

Pinterest LinkedIn Tumblr

kejri

ಹೊಸದಿಲ್ಲಿ: ದಿಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸಾರಥ್ಯವಹಿಸಿರುವ ಅಜಯ್ ಮಾಕನ್, ಬಿಜೆಪಿಯ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವರಿಗೆ ಹೋಲಿಸಿದರೆ ಅರವಿಂದ್ ಕೇಜ್ರಿವಾಲ್ ಅವರ ಆಸ್ತಿಯೇ ಕಡಿಮೆ. ಕಳೆದ ವರ್ಷದ ಲೋಕಸಭೆ ಚುನಾವಣೆಯಿಂದ ಈಚೆಗೆ ಕೇಜ್ರಿವಾಲ್ ಆಸ್ತಿ ಸುಮಾರು 5 ಲಕ್ಷದಷ್ಟು ಕಡಿಮೆಯಾಗಿದೆ. ಆದರೆ, ಅಲ್ಲಿಂದ ಈ ತನಕ ಅವರ ವಿರುದ್ಧದ ಪೊಲೀಸ್ ಪ್ರಕರಣಗಳು ಮಾತ್ರ ಹೆಚ್ಚಿವೆ.

ಕೇಜ್ರಿವಾಲ್ ಅವರು ಬುಧವಾರ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ಪ್ರಕಟಿಸಿದ್ದು, ಒಟ್ಟು ಮೊತ್ತ ಸುಮಾರು 2.09 ಕೋಟಿ ರೂಪಾಯಿ. ಕಳೆದ ಲೋಕಸಭೆ ಚುನಾವಣೆಯಲ್ಲಿ 2.14 ಕೋಟಿ ಆಸ್ತಿ ಹೊಂದಿರುವುದಾಗಿ ಅವರು ಘೋಷಿಸಿದ್ದರು. ತಮ್ಮ ಬಳಿ ಸ್ವಂತದ ಕಾರ್ ಇಲ್ಲ, ತಮ್ಮಲ್ಲಿನ ನೀಲಿ ಬಣ್ಣದ ‘ಮಾರುತಿ ವ್ಯಾಗನ್ ಆರ್’ ಉಡುಗೊರೆ ರೂಪದಲ್ಲಿ ಬಂದ ವಾಹನ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ. ಅವರ ಬ್ಯಾಂಕ್ ಖಾತೆಯಲ್ಲಿದ್ದ ಮೊತ್ತ ಹಿಂದಿನ 4 ಲಕ್ಷದಿಂದ 2.28 ಲಕ್ಷ ರೂ.ಗೆ ಇಳಿಕೆಯಾಗಿದೆ. ದಿಲ್ಲಿಯ ಉಪನಗರ ಕೌಶಂಬಿಯಲ್ಲಿ ಕೇಜ್ರಿವಾಲ್‌ರ 56 ಲಕ್ಷ ರೂ. ಮೌಲ್ಯದ ಫ್ಲಾಟ್, ಗುರ್ಗಾಂವ್‌ನಲ್ಲಿ ಪತ್ನಿ ಸುನೀತಾ ಅವರ ಕೋಟಿ ರೂ.ಮೌಲ್ಯದ ಫ್ಲಾಟ್ ಇದೆ. 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ, 24 ಸಾವರ ಮೌಲ್ಯದ 24 ಗ್ರಾಂ ಬೆಳ್ಳಿ ಸೇರಿದಂತೆ ತಮ್ಮ ಚರ ಆಸ್ತಿ 2.25 ಲಕ್ಷ ಮತ್ತು ಪತ್ನಿಯ ಆಸ್ತಿ 15.28 ಲಕ್ಷ ರೂ. ಮಾತ್ರ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.

ತಮ್ಮ ಬಳಿ ನಗದು 15 ಸಾವಿರ, ಪತ್ನಿ ಬಳಿ 10 ಸಾವಿರ ಹೊಂದಿರುವುದಾಗಿ ಕೇಜ್ರಿವಾಲ್ ಹೇಳಿದ್ದು, ತಮ್ಮ ಒಟ್ಟು ಆದಾಯವು 2013-14ರಲ್ಲಿ 2.07 ಲಕ್ಷ ರೂ. ಎಂದಿದ್ದಾರೆ. ಪತ್ನಿಯ ಆದಾಯವು ಇದೇ ಅವಧಿಯಲ್ಲಿ 11.83 ಲಕ್ಷದಷ್ಟಿದೆ.

ಕೇಜ್ರಿವಾಲ್ ವಿರುದ್ಧ ನಾನಾ ಕೋರ್ಟ್‌ಗಳಲ್ಲಿ 10 ಪ್ರಕರಣಗಳಿವೆ. ಕಳೆದ ಸಲ ಅವರು 7 ಪ್ರಕರಣ ಇರುವುದಾಗಿ ಘೋಷಿಸಿಕೊಂಡಿದ್ದರು.

ಕಿರಣ್ ಆಸ್ತಿ 11 ಕೋಟಿ:
ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಮತ್ತು ಅವರ ಪತಿಯ ಸ್ಥಿರ ಮತ್ತು ಚರ ಆಸ್ತಿಯ ಒಟ್ಟು ಮೌಲ್ಯ 11.65 ಕೋಟಿ ರೂ. ತಮ್ಮ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಕೇಸ್‌ಗಳಿಲ್ಲವೆಂದು ಕಿರಣ್ ಘೋಷಿಸಿಕೊಂಡಿದ್ದಾರೆ. ದ್ವಾರಕಾ ಮತ್ತು ಉದಯ್ ಪಾರ್ಕ್(ದಿಲ್ಲಿ), ಗೌತಮ್ ಬುದ್ಧ ನಗರ್‌ನಲ್ಲಿ(ಉ.ಪ್ರ) ಆರೂವರೆ ಕೋಟಿ ಮೌಲ್ಯದ ಮೂರು ಪ್ಲಾಟ್‌ಗಳು, 25 ಸಾವಿರ ಮೌಲ್ಯದ 5 ಗ್ರಾಂ ಚಿನ್ನ ಸೇರಿದಂತೆ 3.14 ಕೋಟಿ ಚರ ಆಸ್ತಿ ಹೊಂದಿರುವುದಾಗಿ ಅವರು ವಿವರ ನೀಡಿದ್ದಾರೆ.

ಬೇಡಿ ಅವರು ಮಾರುತಿ 800 ಕಾರ್, ಕೃಷಿ ಭೂಮಿಯನ್ನು ಪುಣೆ(1.60 ಕೋಟಿ) ಮತ್ತು ಗುರ್ಗಾಂವ್‌ನಲ್ಲಿ(25 ಲಕ್ಷ ರೂ.) ಹೊಂದಿದ್ದಾರೆ. ತಮ್ಮ ಬಳಿ 55,750 ನಗದು, ಪತಿ ಬಳಿ 15,500 ನಗದು ಹೊಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ನಾಲ್ಕು ಉಳಿತಾಯ ಖಾತೆಗಳಲ್ಲಿ 25,43,852 ರೂ. ಹಣವನ್ನು ಅವರು ಹೊಂದಿದ್ದಾರೆ. 2013-14ರಲ್ಲಿ ತಮ್ಮ ಆದಾಯ ರೂ. 67,15,464 ಎಂದಿರುವ ಬೇಡಿ, ಪತಿ ಆದಾಯವನ್ನು ಪ್ರಸ್ತಾಪಿಸಿಲ್ಲ.

ಮಾಕನ್ ಆಸ್ತಿ ದುಪ್ಪಟ್ಟು:
ಚುನಾವಣೆ ಪ್ರಚಾರದ ಸಾರಥ್ಯವಹಿಸಿರುವ ಕಾಂಗ್ರೆಸ್‌ನ ಅಜಯ್ ಮಾಕನ್ ಆಸ್ತಿ ಕಳೆದ ಲೋಕಸಭೆ ಚುನಾವಣೆಯಿಂದ ಈಚೆಗೆ ಎರಡು ಪಟ್ಟು ಹೆಚ್ಚಳವಾಗಿದೆ. ಅವರ ಆಸ್ತಿ ಮೌಲ್ಯ 12.34 ಕೋಟಿ ರೂಪಾಯಿ. ಕಳೆದ ವರ್ಷದ ಲೋಕಸಭೆ ಚುನಾವಣೆ ವೇಳೆ 5.76 ಕೋಟಿ ಆಸ್ತಿ ಹೊಂದಿರುವುದಾಗಿ ಮಾಕನ್ ಪ್ರಕಟಿಸಿದ್ದರು.

ತಾವು ಚರ ಆಸ್ತಿ 2.99 ಕೋಟಿ, ಪತ್ನಿಯು 1.20 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಮಾಕನ್ ಘೋಷಿಸಿದ್ದಾರೆ. ಅವರು ಹರಿಯಾಣಾ ಮತ್ತು ದಿಲ್ಲಿಯಲ್ಲಿ ಜಮೀನು ಮತ್ತು ನಿವೇಶನಗಳನ್ನು ಹೊಂದಿದ್ದಾರೆ. ಇದರ ಒಟ್ಟು ಮೌಲ್ಯ 8.14 ಕೋಟಿ. ಕಳೆದ ಸಲ ಅವರು ಘೋಷಿಸಿದ್ದು 2.21 ಕೋಟಿ ರೂ.

Write A Comment