Uncategorized

ಸೈಕಲ್ ಹತ್ತಿ ಹಿಮಗಿರಿಯ ನೆತ್ತಿ ಮುಟ್ಟಿ…

Pinterest LinkedIn Tumblr

cycle._0

ಭೀಕರ ಚಳಿಯ ಕಡಿದಾದ ಹಿಮ ದಾರಿಯಲ್ಲಿ ಸೈಕ್ಲಿಂಗ್ ಮಾಡುವ ಸಾಹಸಕ್ಕಿಳಿದಿದ್ದಾರೆ ಬೆಂಗಳೂರಿನ ರಾಜೇಶ್ ಹಾಗೂ ಶರತ್. ಆರುನೂರು ಕೀಲೋಮೀಟರ್‌ ಸೈಕ್ಲಿಂಗ್‌ ಮಾಡುವ ಅಪಾಯಕಾರಿ ಯಾತ್ರೆಗೆ ಇವರು ಇಟ್ಟ ಹೆಸರು ‘ಫ್ರೋಜೆನ್ ಹೈವೇ’ (ಹೆಪ್ಪುಗಟ್ಟಿದ ಹೆದ್ದಾರಿ). ಹಿಮಾಲಯದ ಮಡಿಲಲ್ಲಿ ಸೈಕಲ್‌ ಯಾತ್ರೆಗೆ ಹೊರಟಿರುವ ಇವರ ಸಾಹಸ ಕಥನದ ಪೂರ್ವನೋಟ ಇಲ್ಲಿದೆ.

ಬೆಂಗಳೂರಿನವರೇ ಆದ ರಾಜೇಶ್‌, ವೃತ್ತಿಯಲ್ಲಿ ಹೋಂ ಫರ್ನಿಷಿಂಗ್‌ ಕಂಪೆನಿಯಲ್ಲಿ ಫ್ರೀಲಾನ್ಸರ್‌ ಕನ್ಸಲ್ಟೆಂಟ್‌. ಚಾರಣ ಇವರ ಆಸಕ್ತಿಯ ಕ್ಷೇತ್ರ. ಅವರು ಸೈಕಲ್ ಹತ್ತಿದ್ದೂ ಈ ಆಸಕ್ತಿಯ ಭಾಗವಾಗಿಯೇ. ಸ್ನೇಹಿತರ ಸಂಗದಿಂದ ಸೈಕ್ಲಿಂಗ್‌ನತ್ತ ಒಲವು ಬೆಳೆಸಿಕೊಂಡ ರಾಜೇಶ್‌ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಮೈಲಿಗಳನ್ನು ಸೈಕಲ್ ಮೇಲೆ ಕ್ರಮಿಸಿದ್ದಾರೆ.

ಇವರ ಮೊದಲ ಸೈಕಲ್‌ ಯಾತ್ರೆ ಆರಂಭವಾಗಿದ್ದು 2011ರಲ್ಲಿ. ಎಂಟು ಜನ ಸ್ನೇಹಿತರ ಗುಂಪಿನಲ್ಲಿ ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿ 650ಕಿ.ಮೀ ಸೈಕಲ್‌ ತುಳಿದಿದ್ದು ರಾಜೇಶ್‌ಗೆ ರೋಮಾಂಚನಕಾರಿ ಅನುಭವವನ್ನು ಕಟ್ಟಿಕೊಟ್ಟಿತ್ತು. ಆ ಅನುಭವ ಕೊಟ್ಟ ಉಮೇದಿನಲ್ಲಿಯೇ ಅವರು ಸೈಕಲ್‌ ಹ್ಯಾಂಡಲ್‌ ಹಿಡಿದು ಹಿಮಾಲಯದ ಲೇಹ್‌–ಲಡಾಖ್, ಸಿಕ್ಕಿಂನಲ್ಲಿನ ಭಾರತದ ಎರಡನೇ ದೊಡ್ಡ ಸರೋವರ ಗುರುಡೋಂಗ್‌ಮರ್‌ ಲೇಕ್‌, ಕರ್ನಾಟಕ, ಕೇರಳ ರಾಜ್ಯಗಳ ಪಶ್ಚಿಮ ಘಟ್ಟದ ಗುಡ್ಡಗಳು ಹೀಗೆ ಇದುವರೆಗೆ ಸುಮಾರು ಮೂರು ಸಾವಿರ ಕಿ.ಮೀಗಳಷ್ಟು ಪೆಡಲ್‌ ತುಳಿದಿದ್ದಾರೆ.

ಮೊದಲ ಸೈಕಲ್‌ ಯಾತ್ರೆಯಿಂದ ರಾಜೇಶ್‌ ಅವರಿಗೆ ಬರೀ ಸೈಕ್ಲಿಂಗ್‌ ಬಗ್ಗೆಯಷ್ಟೇ ಅಲ್ಲ, ಹಿಮಾಲಯವೆಂಬ ಗಿರಿಕನ್ಯೆಯ ಜತೆಗೂ ಪ್ರೇಮವಾಯಿತು. ಈ ಹಿಮಗೆಳತಿಯ ಕರೆಗೆ ಮರುಳಾಗಿ ರಾಜೇಶ್‌ ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ಹಿಮಾಲಯಕ್ಕೆ ಹೋಗಿ ಬಂದಿದ್ದಾರೆ. ಈಗ ರಾಜೇಶ್‌ ನಾಯಕ್‌ ತಮ್ಮ ಅಂತರಂಗದ ಸಂಗಾತಿಯ ಮಡಿಲಿಗೆ ಮರಳಲು ಮತ್ತೆ ಸಜ್ಜಾಗಿದ್ದಾರೆ. ಇದು ಸಾದಾಸೀದಾ ಯಾತ್ರೆಯಲ್ಲ. ನಡುಕ ಹುಟ್ಟಲೂ ಅವಕಾಶವಿರದಂತೆ ಗಟ್ಟಿಗೊಳಿಸುವ ಭೀಕರ ಚಳಿಯಲ್ಲಿ, ಸೈಕಲ್‌ ಏರಿ ಹಿಮನದಿ ಘನೀಭವಿಸಿ ರೂಪುಗೊಂಡ ಬರ್ಫಿನ ಮೇಲೆ 600 ಕಿ.ಮೀ. ಸಾಗುವ ಅಪಾಯಕಾರಿ ಪರ್ಯಟನೆ. ಇವರ ಚಳಿಗಾಲದ ಸಾಹಸಯಾನ ಯೋಜನೆಯ ಹೆಸರು ‘ಹೆಪ್ಪುಗಟ್ಟಿದ ಹೆದ್ದಾರಿ’ (ಫ್ರೋಜೆನ್‌ ಹೈವೇ).

‘ಲೇಹ್‌–ಲಡಾಖ್‌ನಂತಹ ಜಾಗದಲ್ಲಿ ಅನೇಕರು ಸೈಕ್ಲಿಂಗ್‌ ಮಾಡುತ್ತಾರೆ. ಆದರೆ ಹೀಗೆ ಹಿಮಕಣಿವೆಯಲ್ಲಿ ನದಿ ಮೇಲಿನ ನಿರ್ಗಲ್ಲ ದಾರಿಯಲ್ಲಿ ಇಷ್ಟು ದೂರ ಸೈಕ್ಲಿಂಗ್‌ ಮಾಡುವುದು ಸುಲಭವಲ್ಲ. ಅಲ್ಲದೇ ನಾವು ಸೈಕ್ಲಿಂಗ್‌ ಮಾಡುವ ಸಮಯದಲ್ಲಿ ಅಲ್ಲಿನ ಉಷ್ಣಾಂಶ ಮೈನಸ್‌ 20ರಿಂದ ಮೈನಸ್‌ 30 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುವ ಸಾಧ್ಯತೆ ಇದೆ. ಇದು ಎಷ್ಟು ಅಪಾಯಕಾರಿ ಎಂದರೆ ಜೀವಕ್ಕೇ ಎರವಾಗಬಹುದು. ಆದರೆ ಇದು ಕಷ್ಟಕರ ಎಂಬುದೇ ನಮ್ಮನ್ನು ಈ ಪರ್ಯಟನೆಗೆ ಪ್ರೇರೇಪಿಸಿದೆ’ ಎಂದು ತಮ್ಮ ಯೋಜನೆಯ ವಿಶೇಷತೆಯ ಬಗ್ಗೆ ವಿವರಿಸುವ ರಾಜೇಶ್‌ ಅವರಿಗೆ ಈ ಬಾರಿ ಶರತ್‌ ವಿಷ್ಣು ಎಂಬ ಇನ್ನೊಬ್ಬ ಪರ್ವತಪ್ರೇಮಿಯ ಜತೆಯೂ ದೊರಕಿಗಿದೆ.
ಎಂ.ಇ.ಎಸ್‌ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಶರತ್‌ಗೆ ಸೈಕ್ಲಿಂಗ್‌ ಜತೆಗೆ ಪರ್ವತಾರೋಹಣದ ವ್ಯಾಮೋಹವೂ ಇದೆ. ಮೌಂಟೆನಿಂಗ್‌ ವಿಶೇಷ ತರಬೇತಿಯನ್ನೂ ಪಡೆದುಕೊಂಡಿರುವ ಅವರ ಪಾಲಿಗೆ ಈ ಹಿಮಕಣಿವೆ ಸಹವಾಸ ಹೊಸ ಸಾಹಸದ ಸಾಧ್ಯತೆಯಾಗಿ ಕಂಡಿದೆ. ಸೈಕ್ಲಿಂಗ್‌ನಲ್ಲಿನ ಆಸಕ್ತಿಯೇ ಈ ಇಬ್ಬರನ್ನೂ ಒಂದುಗೂಡಿಸಿದೆ.

ಒಂದು ವರ್ಷದಿಂದ ಸಿದ್ಧತೆ
‘ಮೊದಲ ಸಲ ಹಿಮಾಲಯಕ್ಕೆ ಭೇಟಿ ನೀಡಿದಾಗಲೇ ನನ್ನನ್ನು ಅಲ್ಲಿಯ ಸಹಜ ಸೌಂದರ್ಯ ಸೆಳೆದಿತ್ತು. ಇಲ್ಲಿಯೇ ಒಂದು ಅಸಾಮಾನ್ಯವಾದ ಯಾತ್ರೆ ಮಾಡಬೇಕು ಎಂದು ಆಗಲೇ ಅಂದುಕೊಂಡಿದ್ದೆ. ಅದು ಈಗ ನೆರವೇರುತ್ತಿದೆ’ ಎಂದು ಈ ಯಾತ್ರೆಯ ಹಿಂದಿನ ಪ್ರೇರಣೆಯನ್ನು ವಿವರಿಸುತ್ತಾರೆ ರಾಜೇಶ್‌. ತಾವು ಅಂದುಕೊಂಡಿರುವ ಯೋಜನೆ ಸುಲಭದ್ದಲ್ಲ ಎಂಬುದು ಈ ಈರ್ವರಿಗೂ ಮೊದಲೇ ತಿಳಿದಿತ್ತು. ಆದರೆ ಸುಲಭವಾಗದೇ ಇರುವುದನ್ನೇ ಮಾಡಿತೋರಿಸಬೇಕು ಎಂಬ ಛಲವೂ ಅವರಲ್ಲಿತ್ತು. ಅದಕ್ಕೆ ತಕ್ಕಂತೆ ಕಳೆದ ಒಂದು ವರ್ಷದಿಂದ ಈ ಯೋಜನೆಗೆ ಹಲವು ರೀತಿಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ ರಾಜೇಶ್‌ ಮತ್ತು ಶರತ್‌. ಇಬ್ಬರೂ ಈ ಮುನ್ನ ಹಲವಾರು ಬಾರಿ ಹಿಮಾಲಯದ ಜತೆ ಒಡನಾಡಿ ಬಂದಿದ್ದರಿಂದ ಅಲ್ಲಿನ ವಾತಾವರಣದ ಸ್ಥೂಲ ಪರಿಚಯ ಇವರಿಗಿದೆ. ಆದರೂ ಕಳೆದೊಂದು ವರ್ಷದಿಂದ ಅಲ್ಲಿನ ಹವಾಮಾನದಲ್ಲಿನ ಏರುಪೇರುಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ರಾಜೇಶ್‌ ನಾಯಕ್‌ ಈಗ ಸೈಕ್ಲಿಂಗ್‌ ಮಾಡಲು ಯೋಜಿಸಿರುವ ದಾರಿಯಲ್ಲಿಯೇ ಹದಿನಾಲ್ಕು ದಿನಗಳ ಕಾಲ ಚಾರಣ ಕೈಗೊಂಡು ಅಲ್ಲಿ ಎದುರಾಗಬಹುದಾದ ಸವಾಲುಗಳನ್ನು ಅಭ್ಯಸಿಸಿದ್ದಾರೆ.

ವಿಶೇಷ ಸೈಕಲ್‌
ಸಾಮಾನ್ಯ ಯಾತ್ರೆಗಳಿಗೆ ಬಳಸುವ ಸೈಕಲ್‌ಗಳಲ್ಲಿ ಈ ಹಿಮಚ್ಛಾದಿತ ಕಣಿವೆಯಲ್ಲಿ ಸಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಇವರಿಬ್ಬರೂ ತಮ್ಮ ‘ಹೆಪ್ಪುಗಟ್ಟಿದ ಹೆದ್ದಾರಿ’ ಯೋಜನೆಗಾಗಿಯೇ ವಿಶೇಷ ಸೈಕಲ್‌ ಅನ್ನು ವಿದೇಶದಿಂದ ತರಿಸಿಕೊಂಡಿದ್ದಾರೆ. ಈ ಸಾಹಸಯಾತ್ರೆಯ ಬೆಂಬಲಕ್ಕೆ ನಿಂತಿರುವ ಇಂಡೋನೇಷ್ಯಾದ ‘ಪಾಲಿಗಾನ್‌’ ಕಂಪೆನಿ ತಯಾರಿಸಿದ ಈ ವಿಶೇಷ ಸೈಕಲ್‌ ಬೆಲೆ ₨1.30 ಲಕ್ಷ.

ವಿಡಿಯೊ ಚಿತ್ರೀಕರಣ
ಸಾಮಾನ್ಯವಾಗಿ ಈ ತರಹದ ಸೈಕಲ್ ಸಾಹಸ ಯಾತ್ರೆಗಳು ಜನವಸತಿ ಅಷ್ಟಾಗಿ ಇರದ ಪ್ರದೇಶಗಳಲ್ಲಿಯೇ ನಡೆಯುವುದರಿಂದ ಜನರಿಗೆ ಅದನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ತಮ್ಮ ಇಡೀ ಸೈಕ್ಲಿಂಗ್‌ ಕಸರತ್ತನ್ನು ಚಿತ್ರೀಕರಿಸುವುದು ಅವರ ಯೋಜನೆ. ರಾಜೇಶ್‌ ಮತ್ತು ಶರತ್‌ ಅವರ ಈ ಉದ್ದೇಶಕ್ಕೆ ಸಾಥ್‌ ನೀಡಿದವರು ಡಾಕ್ಯುಮೆಂಟರಿ ಫಿಲಂ ಮೇಕರ್‌ ಪ್ರಶಾಂತ್‌ ನಾಯಕ್‌. ಇವರಿಗೆ ಚಂದ್ರಶೇಖರ್‌ ಅವರ ಸಹಾಯವೂ ಇರಲಿದೆ.

‘ಸೈಕ್ಲಿಂಗ್‌ ಬಗ್ಗೆ ಜನರಲ್ಲಿ ಅಭಿರುಚಿ ಹುಟ್ಟಿಸುವುದು ನಮ್ಮ ಈ ಯಾತ್ರೆಯ ಮೂಲ ಉದ್ದೇಶಗಳಲ್ಲಿ ಒಂದು. ಇಂತಹ ಸೈಕ್ಲಿಂಗ್‌ಗಳನ್ನು ಜನರಿಗೆ ನೇರವಾಗಿ ತೋರಿಸಲು ಸಾಧ್ಯವಿಲ್ಲ. ಅಲ್ಲದೇ ಇಂತಹ ಯಾತ್ರೆಗಳಲ್ಲಿ ಸೈಕ್ಲಿಸ್ಟ್‌ಗಳಲ್ಲಿ ತುಂಬ ಕಠಿಣ ಶ್ರಮ, ಸಾಹಸಗಳಿರುತ್ತವೆ. ಅದು ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಆದ್ದರಿಂದಲೇ ನಮ್ಮ ಇಡೀ ಪ್ರಯಾಣವನ್ನು ಚಿತ್ರೀಕರಣ ಮಾಡಲು ಯೋಜಿಸಿದ್ದೇವೆ. ಪ್ರಶಾಂತ್ ಒಳ್ಳೆಯ ಸಾಕ್ಯ್ಷಚಿತ್ರ ನಿರ್ಮಾಪಕ. ಅವರು ನಮ್ಮ ಯಾತ್ರೆಯನ್ನು ಚಿತ್ರೀಕರಿಸಲು ಒಪ್ಪಿದ್ದಾರೆ’ ಎಂದು ರಾಜೇಶ್‌ ಚಿತ್ರೀಕರಣದ ಹಿಂದಿನ ಉದ್ದೇಶವನ್ನು ಹಂಚಿಕೊಳ್ಳುತ್ತಾರೆ. ಹಾಗೆಂದು ದಾಖಲೀಕರಣವಷ್ಟೇ ಇದರ ಉದ್ದೇಶವಲ್ಲ. ಅದಕ್ಕೊಂದು ಕಲಾತ್ಮಕ ಆಯಾಮವೂ ಇರುವಂತೇ ಸಾಕ್ಯ್ಷಚಿತ್ರ ರೂಪಿಸಲು ಪ್ರಶಾಂತ್‌ ಸಜ್ಜಾಗಿದ್ದಾರೆ. ಮುಂದೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಈ ಸಾಕ್ಯ್ಷಚಿತ್ರವನ್ನು ಕಳಿಸಿಕೊಡಬೇಕು ಎನ್ನುವ ದೂರಾಲೋಚನೆಯೂ ಅವರಿಗಿದೆ.

ನಾಲ್ಕೇ ಜನರ ತಂಡ
ಒಂದಷ್ಟು ಸ್ನೇಹಿತರ ತಂಡ ಕಟ್ಟಿಕೊಂಡು ಸೈಕ್ಲಿಂಗ್ ಹೊರಡುವುದು ರೂಢಿ. ಆದರೆ ಈ ಅಪಾಯಕಾರಿ ‘ಹೆಪ್ಪುಗಟ್ಟಿದ ಹೆದ್ದಾರಿ’ಯನ್ನು ನಾಲ್ಕೇ ಜನರ ತಂಡ ಕ್ರಮಿಸಲಿದೆ. ‘ಮಾರ್ಗದರ್ಶಿ, ಸಹಾಯಕರು, ವೈದ್ಯಕೀಯ ಸೇವೆ ಹೀಗೆ ದೊಡ್ಡದೊಂದು ತಂಡ ಕಟ್ಟಿಕೊಂಡು ಇಂತಹ ಯಾತ್ರೆಗಳನ್ನು ಮಾಡುವುದು ಸುಲಭ. ಆದರೆ ನಾವಿಬ್ಬರು ಸೈಕ್ಲಿಸ್ಟ್‌ ಮತ್ತಿಬ್ಬರು ಸಾಚಿತ್ರಕಾರರು ಹೀಗೆ ನಾಲ್ಕೇ ಜನ ಹೊರಡುತ್ತಿದ್ದೇವೆ. ನದಿಯ ಮೇಲಿನ ಹಿಮದಾರಿಯಲ್ಲಿ ಮಾತ್ರ ಸ್ಥಳೀಯರ ಸಹಾಯ ಪಡೆದುಕೊಳ್ಳಲು ಯೋಜಿಸಿದ್ದೇವೆ’ ಎಂದು ರಾಜೇಶ್‌ ವಿವರಿಸುತ್ತಾರೆ.

ಪಯಣದ ರೂಪುರೇಷೆಗಳು
ರಾಜೇಶ್‌ ಮತ್ತು ಶರತ್‌ ಇದೇ 20ರಂದು ಬೆಂಗಳೂರಿಂದ ತೆರಳಿ ಲೇಹ್‌ ಪಟ್ಟಣದಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಸಾಹಸಯಾತ್ರೆ ಆರಂಭಕ್ಕೂ ಮೂರು ನಾಲ್ಕು ದಿನ ಮುಂಚಿತವಾಗಿ ಹಿಮಾಲಯಕ್ಕೆ ತೆರಳಿ ಅಲ್ಲಿನ ವಾತಾವರಣಕ್ಕೆ ತಮ್ಮ ದೇಹವನ್ನು ಒಗ್ಗಿಸಿಕೊಳ್ಳುವುದು ಇದರ ಉದ್ದೇಶ. ಈ ಯಾತ್ರೆಯಲ್ಲಿ ಯಾವ ದಿನ ಎಷ್ಟು ದೂರ ಕ್ರಮಿಸಬೇಕು, ಎಲ್ಲಿ ಆಶ್ರಯ ಪಡೆದುಕೊಳ್ಳಬೇಕು, ಯಾವ ಮಾರ್ಗದಲ್ಲಿ ಹೋಗಬೇಕು ಎಂಬೆಲ್ಲ ರೂಪುರೇಷೆಗಳನ್ನು ರಾಜೇಶ್‌ ಸ್ವತಃ ತಾವೇ ರೂಪಿಸಿದ್ದಾರೆ. ಅಲ್ಲಿನ ವಾತಾವರಣದ ಅನುಕೂಲತೆಯನ್ನು ಆಧರಿಸಿ ಇದೇ ತಿಂಗಳ 23 ಅಥವಾ 24ರಂದು ಹಿಮದ ದಾರಿಯಲ್ಲಿ ಸೈಕಲ್‌ ಏರುವುದು ಅವರ ಯೋಜನೆ.
‘ಸೈಕ್ಲಿಂಗ್‌ನ ಮೊದಲ ಭಾಗದಲ್ಲಿ ಲೇಹ್‌ನಿಂದ 30 ಕಿ.ಮೀ ರಸ್ತೆಯಲ್ಲಿಯೇ ಸಾಗಿ ನಂತರ ರಸ್ತೆಯಿಂದ ಕಣಿವೆಗೆ ಇಳಿಯುತ್ತೇವೆ.

ಝನ್ಸ್‌ಕಾರ್‌ ಎಂಬ ನದಿಯ ಮೇಲಿನ ಹೆಪ್ಪುಗಟ್ಟಿದ ದಾರಿಯಲ್ಲಿ ಸಾಗುವುದು ನಮ್ಮ ಯೋಜನೆ. ನದಿ ಮೈಮೇಲಿನ ಬರ್ಫಿನ ದಾರಿಯಲ್ಲಿ 170 ಕಿ.ಮೀ. ಸಾಗಿದರೆ ಪದಂ ಎಂಬ ಹಳ್ಳಿ ಸಿಗುತ್ತದೆ. ವರ್ಷದ ಆರು ತಿಂಗಳು ಸುರಿಯುವ ಹಿಮದಿಂದಾಗಿ ಹೊರಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕ ಕಡಿದುಕೊಳ್ಳುವ ಹಳ್ಳಿಯದು. ಅಷ್ಟು ಅವಧಿಗೆ ಬೇಕಾಗುವಷ್ಟು ಆಹಾರವನ್ನು ಅವರು ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ನಾವು ಝನ್ಸ್‌ಕಾರ್‌ ನದಿ ಮೂಲಕ ಪದಂ ಹಳ್ಳಿ ತಲುಪಿ ಮತ್ತೆ ಅದೇ ದಾರಿಯಲ್ಲಿ ತಿರುಗಿ ಬರಲಿದ್ದೇವೆ. ಹೋಗಿ ಬರುತ್ತ ಸುಮಾರು 350 ಕಿ.ಮೀ. ಸೈಕ್ಲಿಂಗ್‌ನಲ್ಲಿ ಕ್ರಮಿಸಲಿದ್ದೇವೆ’ ಎಂದು ತಮ್ಮ ಯೋಜನೆಯನ್ನು ರಾಜೇಶ್‌ ವಿವರಿಸಿದರು. ಜನವರಿ 24ರಿಂದ ಆರಂಭಿಸಿ ಫೆಬ್ರುವರಿ 7ರವರೆಗೆ, ಅಂದರೆ ಹದಿನೈದು ದಿನಗಳಲ್ಲಿ ಈ ಸಾಹಸಮಯ ಸೈಕ್ಲಿಂಗ್‌ನ ಮೊದಲ ಹಂತ ಪೂರೈಸ ಬೇಕು ಎಂಬುದು ಅವರ ಯೋಜನೆ.

ಎರಡನೇ ಹಂತದಲ್ಲಿ ರಾಜೇಶ್‌ ಮತ್ತು ಶರತ್‌ ಸೈಕಲ್‌ ಹತ್ತಿ ಲಡಾಖ್‌ನ ಖರ್ಧ್‌ಹುಂಗ್‌ ಲಾ ಮತ್ತು ಚಾಂಗ್‌ ಲಾ ಹಿಮಪರ್ವತಗಳ ನೆತ್ತಿಯನ್ನು ಹತ್ತಲು ಉದ್ದೇಶಿಸಿದ್ದಾರೆ. ಖರ್ಧ್‌ಹುಂಗ್‌ ಲಾ ವಾಹನದ ಮೂಲಕ ತಲುಪಬಹುದಾದ ಜಗತ್ತಿನ ಅತೀ ಎತ್ತರದ ಪರ್ವತವಾಗಿದ್ದರೆ, ಚಾಂಗ್‌ ಲಾ ಇಂತಹ ಮೂರನೇ ಅತಿ ಎತ್ತರದ ಪರ್ವತ. ಫೆಬ್ರುವರಿ 9ಕ್ಕೆ ಎರಡನೇ ಹಂತದ ಸೈಕ್ಲಿಂಗ್‌ ಆರಂಭಿಸಿ 11ರಂದು ಈ ಪರ್ವತಗಳನ್ನು ಹಾದು 12ಕ್ಕೆ ಲಡಾಖ್‌ನಿಂದ ದಕ್ಷಿಣಕ್ಕಿರುವ ಚಾಂಗ್‌ಟಾಂಗ್‌ ಪ್ರಸ್ಥಭೂಮಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಫೆಬ್ರುವರಿ 24ಕ್ಕೆ ಲೇಹ್‌ನ ಚುಮಾಥಂಗ್‌ ಕಣಿವೆಯ ತ್ಸೊಮೊರಿರಿ ಸರೋವರ ತಲುಪುವುದು ಈ ಹಂತದ ಕೊನೆಯ ಗುರಿ. ಎರಡು ಹಂತಗಳೂ ಸೇರಿ ಸುಮಾರು 600ಕಿ.ಮೀ ಸೈಕ್ಲಿಂಗ್‌ ಯೋಜನೆಯನ್ನು ಒಂದು ತಿಂಗಳ ಅವಧಿಯಲ್ಲಿ ಪೂರೈಸುವುದು ‘ಹೆಪ್ಪುಗಟ್ಟಿದ ಹೆದ್ದಾರಿ’ಯ ರೂಪುರೇಷೆ.

ಅಪರೂಪದ ಸೈಕ್ಲಿಂಗ್‌ಗೆ ವೆಚ್ಚ ಅಪಾರ
ಇದು ಅಪರೂಪದ ಸೈಕ್ಲಿಂಗ್‌ ಯೋಜನೆಯಾದ್ದರಿಂದ ಇದಕ್ಕೆ ತಗುಲುವ ವೆಚ್ಚವೂ ಅಪಾರ. ರಾಜೇಶ್‌ ಮತ್ತು ಶರತ್‌ ಅಂದಾಜಿನ ಪ್ರಕಾರ ಈ ಯೋಜನೆಗೆ ಹದಿನೈದು ಲಕ್ಷ ವೆಚ್ಚವಾಗಲಿದೆ. ಅಷ್ಟನ್ನು ಸ್ವತಃ ಭರಿಸುವುದಂತೂ ಅಸಾಧ್ಯ. ಆದ್ದರಿಂದ ಪ್ರಾಯೋಜಕರ ಮೊರೆ ಹೋಗುವುದು ಅನಿವಾರ್ಯ. ಆದರೆ ಪ್ರಾಯೋಜಕರ ಹುಡುಕಾಟವೂ ಹರಸಾಹಸದ ಕಷ್ಟವಾಗಿ ಪರಿಣಮಿಸಿದೆ. ‘ಕ್ರಿಕೆಟ್‌ ವಾಲಿಬಾಲ್‌ನಂತಹ ಕ್ರೀಡೆಗಳಿಗೆ ಬೇಕಾದಷ್ಟು ಪ್ರಾಯೋಜಕರು ಸಿಗುತ್ತಾರೆ. ಅವು ಜನರು ಬಂದು ನೋಡುವ ಕ್ರೀಡೆಗಳು. ಅಲ್ಲಿ ಪ್ರಾಯೋಜಕರು ತಮ್ಮ ಬ್ರ್ಯಾಂಡ್‌ ಪ್ರಮೋಟ್‌ ಮಾಡಲು ಅವಕಾಶವಿರುತ್ತದೆ. ಆದರೆ ಸೈಕ್ಲಿಂಗ್‌ ಹಾಗಲ್ಲ. ಇಲ್ಲಿ ನೋಡಲು ಜನರಿರುವುದಿಲ್ಲ. ಆದ್ದರಿಂದಲೇ ಇದಕ್ಕೆ ಯಾವ ಕಾರ್ಪೊರೇಟ್‌ ಕಂಪೆನಿಗಳು ಪ್ರಾಯೋಜನೆಗೆ ಮುಂದೆ ಬರುವುದಿಲ್ಲ.’ ಎಂದು ರಾಜೇಶ್‌ ನೋವಿನಿಂದಲೇ ಹೇಳಿಕೊಳ್ಳುತ್ತಾರೆ. ಈ ಸಂಕಷ್ಟದ ನಡುವೆಯೂ ಒಂದೆರಡು ಕಂಪೆನಿಗಳು ಮತ್ತು ಸ್ನೇಹಿತರ ಬೆಂಬಲ ದೊರಕಿರುವುದು ಈ ಸಾಹಸ ಪ್ರಿಯರಿಗೆ ಸಮಾಧಾನ ತಂದಿದೆ. ಅಲ್ಲದೇ ಹಿಮಗಾಳಿಯ ರಕ್ಷಣೆಗೆ ತೊಡುವ ವಿಶೇಷ ಉಡುಪುಗಳನ್ನೂ ಸ್ನೇಹಿತರಿಂದ ಪಡೆದುಕೊಂಡಿದ್ದಾರೆ.

‘ಸೈಕ್ಲಿಂಗ್‌ ಮಾಡುವುದಕ್ಕಿಂತಲೂ ಹಣ ಹೊಂದಿಸುವುದೇ ಹೆಚ್ಚು ಕಷ್ಟಕರವೆನಿಸಿದೆ’ ಎಂದು ವಿಷಾದದಿಂದ ನಗುತ್ತಾರೆ ಶರತ್‌. ಇಷ್ಟೆಲ್ಲ ಕಷ್ಟ ಪಟ್ಟುಕೊಂಡು ಯಾಕೆ ಇಂಥ ಅಪಾಯಕಾರಿ ಸಾಹಸಕ್ಕೆ ಕೈ ಹಾಕಬೇಕು ಎಂದು ಕೇಳಿದರೆ ಶರತ್‌ ನಗುತ್ತಾರೆ. ‘ಇದುವರೆಗೆ ಹಿಮಾಲಯದಲ್ಲಿ ಕೈಗೊಂಡ ಬಹುತೇಕ ಸಾಹಸಗಳನ್ನು ಮಾಡಿದವರು ಹೊರದೇಶದವರು. ಪ್ರತಿಸಲವೂ ಅವರೇ ಬಂದು ಯಾಕೆ ನಮಗೆ ದಾರಿ ತೋರಿಸಬೇಕು. ನಮ್ಮಿಂದಲೂ ಮಾಡಲು ಸಾಧ್ಯವಿಲ್ಲವೇ? ಛಲ ಇದ್ದರೆ ಯಾರು ಬೇಕಾದರೂ ಸಾಹಸಗಳನ್ನು ಮಾಡಬಹುದು ಎಂದು ಜನರಿಗೆ ತೋರಿಸುವುದೇ ನಮ್ಮ ಉದ್ದೇಶ’ ಎನ್ನುವಾಗ ಅವರ ಮಾತಿನಲ್ಲಿ ಉಳಿದೆಲ್ಲ ಕಹಿಗಳು ಮರೆತು ಹೆಮ್ಮೆಯ ಭಾವ ಇಣುಕುತ್ತದೆ.

ಇಷ್ಟೆಲ್ಲಾ ಕಷ್ಟಪಟ್ಟು ಸಿದ್ಧರಾಗಿದ್ದರೂ ಈ ಯಾತ್ರೆಯ ಯಶಸ್ಸು ನಿಂತಿರುವುದು ಅದೇ ಹಿಮಕನ್ಯೆಯ ಕೃಪೆಯ ಮೇಲೆ. ‘ನಾವು ನೂರಕ್ಕೆ ನೂರರಷ್ಟು ಪೂರ್ಣವಾಗಿ ಸನ್ನದ್ಧರಾಗಿದ್ದೇವೆ. ಆದರೆ ಹಿಮಾಲಯದ ವಾತಾವರಣ ಯಾವಾಗ ಏನು ಬದಲಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಅದು ಮಾತ್ರ ನಮ್ಮ ಕೈಲಿಲ್ಲ. ಇಲ್ಲಿನ ವಾತಾವರಣ ನಮಗೆ ಸಹಕರಿಸಿ ಸೈಕ್ಲಿಂಗ್‌ ಯೋಜನೆ ಯಶಸ್ವಿಯಾಗಿ ಹೆಮ್ಮೆಯಿಂದ ಬೆಂಗಳೂರಿಗೆ ಮರಳುತ್ತೇವೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸದಿಂದ ನುಡಿಯುವ ಈ ಹುಡುಗರ ಹುಮ್ಮಸ್ಸಿಗೆ ನಮ್ಮ ಹಾರೈಕೆಯ ಬೆಂಬಲವೂ ಇರಲಿ ಅಲ್ಲವೇ?

Write A Comment