ಮನೋರಂಜನೆ

ಚಿಕ್ಕಣ್ಣನ ಕಾಮಿಡಿ ಕನಸು: ಹಾಸ್ಯ ಪಾತ್ರಗಳಿಂದ ಸಿನಿಮಾ ಜೀವನ ಆರಂಭಿಸಿದ ನಟ

Pinterest LinkedIn Tumblr

kbec22chikkanna

ಚಿಕ್ಕಣ್ಣ ಚಿಕ್ಕ ಚಿಕ್ಕ ಹಾಸ್ಯ ಪಾತ್ರಗಳಿಂದ ಸಿನಿಮಾ ಜೀವನ ಆರಂಭಿಸಿದ ನಟ. ಅಣ್ತಮ್ಮ ಎಂದು ಕರೆಸಿಕೊಳ್ಳುತ್ತಲೇ ಚಿತ್ರ ರಸಿಕರಿಗೆ ಪರಿಚಯವಾದ ಚಿಕ್ಕಣ್ಣ ಈಗ ಹಲವಾರು ಯಶಸ್ವಿ ಚಿತ್ರಗಳ ಭಾಗವಾಗಿದ್ದಾರೆ. ಅವರು ತಮ್ಮ ಸಿನಿಮಾ, ಬದುಕಿನ ಕುರಿತು ಜೊತೆ ಮಾತನಾಡಿದ್ದಾರೆ.

* ಹೆಸರಿಗೆ ತಕ್ಕನಾಗೇ ಇದ್ದೀರಿ. ಇದರ ಗುಟ್ಟೇನು?
ನಾ ಹೀಗೇ ಇರ್ತೀನಿ ಅಂತ ಅಪ್ಪ ಅಮ್ಮಂಗೆ ಮೊದಲೇ ಗೊತ್ತಿದ್ದಂತೂ ಹೆಸರಿಟ್ಟಂಗಿಲ್ಲ. ಅದೇನೋ ಗೊತ್ತಿಲ್ಲ. ದೊಡ್ಡಣ್ಣ ಆಗೋಕೆ ಪ್ರಯತ್ನ ಮಾಡಿದ್ರೂ ಏನೂ ಪ್ರಯೋಜನ ಆಗಲ್ಲ ಅನ್ಸುತ್ತೆ.

* ಚಿಕ್ಕಣ್ಣೋರ ದೊಡ್ಡ ಆಸೆ ಏನು?
ಸಿನಿಮಾ ಬಿಟ್ಟು ಬೇರೆ ಏನೂ ಇಲ್ಲ. ಸಿನಿಮಾನೇ ಎಲ್ಲ. ಒಳ್ಳೆ ಹಾಸ್ಯ ನಟ ಆಗಬೇಕು ಎಂಬುದೇ ದೊಡ್ಡಾಸೆ.

* ಅಧ್ಯಕ್ಷ ಗಾದಿ ಮೇಲೆ ಕಣ್ಣುಂಟಾ?
ಆ ಸಹವಾಸವೇ ಬೇಡ. ಒಮ್ಮೆ ಶರಣ್ ಅವರಿಗೆ ಸೆಡ್ಡು ಹೊಡೆದು ಅಧ್ಯಕ್ಷ ಪಟ್ಟ ಗಿಟ್ಟಿಸೋಕೆ ಹೋಗಿ ಸೋತುಬಿಟ್ಟೆ, ಸಾಕು. ಆಗ್ಲೇ ಸುಮ್ನಾಗ್ಬಿಟ್ಟಿದೀನಿ. ಮತ್ತೆ ಆ ಪ್ರಯತ್ನ ಮಾಡಲ್ಲ. ಸಾಮಾನ್ಯನಾಗೇ ಇದ್ಬಿಡ್ತೀನಿ.

* ಗ್ಲಾಮರ್ ಆಗಿ ಕಾಣಿಸ್ಕೊಳ್ಳೋ ಆಸೆ ಇಲ್ವಾ?
ಆಸೆ ಏನೋ ಇದೆ. ಆದರೆ ನಾನು ಗ್ಲಾಮರ್ ಆಗಲ್ಲ. ಹಾಗಾಗಿ ಅದು ಈಡೇರೋದಂತೂ ಸಾಧ್ಯ ಇಲ್ಲ. ಕಪ್ಪು ಬಣ್ಣ, ಗುಂಗುರು ಕೂದಲು, ಕುರುಚಲು ಗಡ್ಡ ಇವೆಲ್ಲ ನನ್ನ ಟ್ರೇಡ್ ಮಾರ್ಕ್ ಆಗಿಬಿಟ್ಟಿದೆ.

* ನಾಯಕನಾಗಿ ಖಳರೊಂದಿಗೆ ಗುದ್ದಾಟ, ನಾಯಕಿಯೊಂದಿಗೆ ಮುದ್ದಾಟದ ಕನಸು ಏನಾದ್ರೂ…?
ಕನಸಿದೆ. ಆದರೆ ಒಂದು ಪ್ರಾಬ್ಲಂ ಇದೆ. ಹೀರೊ ಆಗಿ ಗುದ್ದಾಡೋಕೆ ನಾನು ವಿಲನ್‌ಗಳಿಗೂ ಕಾಣಿಸಲ್ಲ. ಮುದ್ದಾಡೋಕೆ ಹೀರೋಯಿನ್‌ಗೂ ಕಾಣಿಸಲ್ಲ. ನಮ್ ಕಲರ್ರೂ ಹಂಗೇ ಇದೆ. ಸೈಜೂ ಹಂಗೇ ಇದೆ. ಸೋ ಇದೂ ನನಸಾಗುವುದಲ್ಲ. ಅದಕ್ಕಿಂತಲೂ ನಾನೇ ಖಳನಾಯಕನಾಗುವ ಅವಕಾಶ ಸಿಕ್ಕರೆ ತುಂಬಾನೇ ಇಷ್ಟಪಟ್ಟು ಮಾಡ್ತೀನಿ. ಆದರೆ ನೋಡುವವರು ಹೇಗೆ ಸ್ವೀಕರಿಸ್ತಾರೋ ಗೊತ್ತಿಲ್ಲ. ನಾನು ಅವಾಜ್ ಹಾಕಿದಾಗಲೂ ಅವರು ನಕ್ಕು ಬಿಟ್ರೆ ಏನ್ ಮಾಡೋದು.

* ಹಾರರ್ ಚಿತ್ರಕ್ಕೆ ನೀವು ಹೀರೊ ಆದ್ರೆ!?
ಓ ತುಂಬಾ ಈಸಿ. ವಿದೌಟ್ ಮೇಕಪ್ ಚಿತ್ರ ಮಾಡ್ಬಿಡ್ತೀನಿ.

* ಆರಂಭದಲ್ಲಿ ‘ಕಾಮಿಡಿ ಕಿಲಾಡಿ’. ಮುಂದೆ ‘ಕಾಮಿಡಿ ಕಿಂಗಾ’?
ಏನೂ ಹೇಳಕ್ಕಾಗಲ್ಲ. ಸದ್ಯ ಅಣ್ತಮ್ಮ ಆಗಿದೀನಿ. ಜನ ನನ್ನನ್ನ ಕಲಾವಿದ ಅಂತ ನೋಡಲ್ಲ, ‘ನಮ್ಮಲ್ಲೊಬ್ಬ’ ಅಂತ ನೋಡ್ತಾರೆ. ಹೀಗಿರೋದೆ ಇಷ್ಟ. ನಾಳೆಯೆಂಬುದ ಬಲ್ಲವನಾರು. ಹೇಗೆ ಬರುತ್ತೋ ಹಾಗೆ ನಡೆಯೋದಷ್ಟೇ ನಮ್ಮ ಕೈಲಿ ಇರೋದು. ಉಳಿದಿದ್ದೆಲ್ಲ ಜನಗಳಿಗೆ ಬಿಟ್ಟದ್ದು.

* ಏಳನೇ ತರಗತಿಯಲ್ಲಿ ಹಿಂದಿಯನ್ನೇ ಹದಗೆಡಿಸಿದ್ರಂತೆ?
ಹ್ಞೂ. ಆಗ ನನಗೆ ಹಿಂದಿ ಅಂದ್ರೆ ಏನು, ಎತ್ತ ಗೊತ್ತಿರಲಿಲ್ಲ. ಯಾರೋ ತಪ್ಪು ಹೇಳಿಕೊಟ್ಟಿದ್ರು. ನಾನೂ ಅವರು ಹೇಳಿದ್ದನ್ನ ಚಾಚೂ ತಪ್ಪದೆ ಪ್ರಶ್ನೆಯಲ್ಲಿರೋ ಶಬ್ದಗಳನ್ನೇ ಹಿಂದೂ ಮುಂದೂ ಮಾಡಿ ಉತ್ತರ ಬರ್ದಿದ್ದೆ. ಹಂಗೂ ಹಿಂಗೂ ಜಸ್ಟ್ ಪಾಸ್!

* ನೀವು ಹೈಸ್ಕೂಲಲ್ಲೇ ಹುಡ್ಗೀರಿಗೆ ಹೀರೊ ಆಗಿದ್ದೋರಲ್ವಾ?
ಈಗ ಹೀರೊ ಆಗದಿದ್ರೂ ಆಗಲೇ ಹೀರೊ ಆದೋರು ನಾವು. ಯಾವುದೋ ಒಬ್ಬಳು ಹುಡುಗಿ ನನ್ನ ಹೆಸರನ್ನು ಪೇಪರ್‌ನಲ್ಲೆಲ್ಲ ಬರ್ಕೊಂಡಿದ್ಲು. ಆಗ ನಂಗೆ ಏನೂ ಗೊತ್ತಿರ್ಲಿಲ್ಲ. ನಾನು ಮೇಷ್ಟ್ರ ಹತ್ರ ಹೇಳಿ ಅವಳಿಗೆ ಹೊಡೆಸಿಬಿಟ್ಟಿದ್ದೆ. ಆಮೇಲೆ ಎಲ್ಲ ಹುಡ್ಗೀರು ನನ್ನ ಬೈಕೊಂಡಿ ದ್ರಂತೆ, ‘ಇವನ್ಯಾವನು ಲೂಸು’ ಅಂತ. ಈಗ ಯಾರಾದ್ರೂ ಹಂಗೆ ಬರ್ಕೊಂಡ್ರೆ ಖುಷಿ ಪಡ್ತೀನಿ, ನನ್ನ ಅಭಿಮಾನಿನಿ ಅಂತ.

Write A Comment