ಮನೋರಂಜನೆ

ಹಿಂದೂಗಳಾಗಲು ಖಾನ್ ತ್ರಯರಿಗೆ ಮಹಾಸಭಾ ಸಲಹೆ

Pinterest LinkedIn Tumblr

sharuk

ಹೊಸದಿಲ್ಲಿ: ನಿಮ್ಮ ಪತ್ನಿಯರ ಮೇಲೆ ನಿಜವಾದ ಪ್ರೀತಿಯಿದ್ದರೆ ಹಿಂದೂ ಧರ್ಮವನ್ನು ಸ್ವೀಕರಿಸಿ ಎಂದು ಹಿಂದೂ ಮಹಾಸಭಾ ಬಾಲಿವುಡ್ ನಟರಾದ ಖಾನ್‌ತ್ರಯರಿಗೆ ಸವಾಲು ಹಾಕಿದೆ.

ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಹಿಂದೂಧರ್ಮ ಸ್ವೀಕರಿಸುವುದಾದರೆ ತಾನು ‘ಘರ್‌ವಾಪ್ಸಿ’ ಕಾರ‌್ಯಕ್ರಮ ಆಯೋಜಿಸಲು ಸಿದ್ಧ ಎಂದೂ ಅದು ತನ್ನ ಮುಖವಾಣಿ ‘ಹಿಂದೂ ಸಭಾ ವಾರ್ತಾ’ದಲ್ಲಿ ಹೇಳಿದೆ.

ವಿಎಚ್‌ಪಿಯು ತನ್ನ ಪತ್ರಿಕೆಯಲ್ಲಿ ಲವ್ ಜಿಹಾದ್ ಖಂಡಿಸಿ ಬರೆದಿದ್ದ ಲೇಖನದಲ್ಲಿ ನಟಿ ಕರೀನಾ ಕಪೂರ್ ಖಾನ್ ಅವರ ಮಾರ್ಫ್ ಮಾಡಿದ ಚಿತ್ರ ಬಳಸಿದ ವಿವಾದ ಬಿಸಿ ಆರುವ ಮೊದಲೇ ಹಿಂದೂ ಮಹಾಸಭಾ ಈ ಲೇಖನ ಬರೆದಿದೆ.

ಪತ್ನಿಯನ್ನು ಪ್ರೀತಿಸುವಿರಾದರೆ..: ”ಲವ್ ಜಿಹಾದ್ ಮೂಲಕ ಜನರನ್ನು ವಂಚಿಸಲಾಗುತ್ತಿದೆ. ಅನಕ್ಷರಸ್ಥ ಮುಸ್ಲಿಮರಿಂದ ಹಿಡಿದು, ಸುಶಿಕ್ಷಿತರೂ ಇದರಲ್ಲಿ ಭಾಗಿಯಾಗಿದ್ದಾರೆ,” ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ‌್ಯದರ್ಶಿ ಮತ್ತು ‘ಹಿಂದೂ ಸಭಾ ವಾರ್ತಾ’ದ ಸಂಪಾದಕ ಮುನ್ನಾ ಕುಮಾರ್ ಶರ್ಮಾ ಹೇಳಿದ್ದಾರೆ.

”ಶರ್ಮಿಳಾ ಠಾಗೂರ್, ಕರೀನಾ ಕಪೂರ್, ಗೌರಿ ಛಿಬ್ಬರ್, ರೀನಾ ದತ್, ಕಿರಣ್ ರಾವ್ ಅವರು ಪ್ರೇಮಜಾಲದಲ್ಲಿ ಸಿಲುಕಿ ಅನಿವಾರ‌್ಯವಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು. ಒಬ್ಬ ಹಿಂದೂ ಯುವತಿ ಮುಸ್ಲಿ ಯುವಕನನ್ನು ಮದುವೆಯಾದರೆ ಇಸ್ಲಾಂ ಧರ್ಮವನ್ನು ಪಾಲಿಸಬೇಕಾಗುತ್ತದೆ. ಅವರ ಮಕ್ಕಳೂ ಮುಸ್ಲಿಮರೇ ಆಗುತ್ತಾರೆ,” ಎಂದು ಬರೆದಿದ್ದಾರೆ.

”ಆಮೀರ್, ಶಾರುಖ್ ಹಾಗೂ ಸೈಫ್ ಅವರು ನಿಜವಾಗಿಯೂ ತಮ್ಮ ಪತ್ನಿಯನ್ನು ಪ್ರೀತಿಸುವುದಾದರೆ ಹಿಂದೂಧರ್ಮವನ್ನು ಸ್ವೀಕರಿಸಲಿ. ಹಾಗೆ ಮಾಡಿದಾಗಲೇ ಅವರು ಹಿಂದೂ ಯುವತಿಯನ್ನು ನಿಜವಾಗಿಯೂ ಪ್ರೀತಿಸಿದ್ದರು ಎಂಬುದು ಸಾಬೀತಾಗುತ್ತದೆ. ಅದಾಗದಿದ್ದರೆ ಇದೂ ‘ಲವ್ ಜಿಹಾದ್’ನ ಭಾಗವೇ ಎಂಬಂತಾಗುತ್ತದೆ,” ಎಂದಿದ್ದಾರೆ.

ಇಷ್ಟೇ ಅಲ್ಲದೆ ಹಿಂದೂ ಯುವತಿಯರನ್ನು ಪ್ರೀತಿಸಿ ಮದುವೆಯಾಗುವ ಪ್ರಮಾಣ ಮಾಡುವ ಮುಸ್ಲಿಂ ಯುವಕರ ‘ಘರ್‌ವಾಪ್ಸಿ’ ಕಾರ‌್ಯಕ್ರಮ ಆಯೋಜಿಸಲು ಸಿದ್ಧ ಎಂದೂ ಹೇಳಿದ್ದಾರೆ.

ಮತ್ತದೇ ಚಿತ್ರ: ವಿವಾದ ಹುಟ್ಟು ಹಾಕಿದ್ದ ಅರ್ಧ ಮುಖವನ್ನು ಬುರ್ಖಾದಿಂದ ಮುಚ್ಚಿದ್ದ ಕರೀನಾ ಕಪೂರ್ ಅವರ ಮಾರ್ಫ್ ಮಾಡಿದ ಚಿತ್ರವನ್ನೇ ವಿಎಚ್‌ಪಿ ತನ್ನ ಮುಖವಾಣಿಯಲ್ಲೂ ಬಳಸಿದೆ. ಅಷ್ಟೇ ಅಲ್ಲದೆ ಲವ್‌ಜಿಹಾದ್ ವಿರುದ್ಧ ಲೇಖನವನ್ನೂ ಬರೆದಿದ್ದು, ಇದರಲ್ಲಿ ಬಾಲಿವುಡ್ ನಟರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ವಿಎಚ್‌ಪಿಯ ಮಹಿಳಾ ಶಾಖೆ ದುರ್ಗಾವಾಹಿನಿ ತನ್ನ ಮುಖವಾಣಿ ‘ಹಿಮಾಲಯದ ಧ್ವನಿ’ಯಲ್ಲಿ ಕರೀನಾಕಪೂರ್ ಅವರ ಮಾರ್ಫ್ ಮಾಡಿದ ಚಿತ್ರ ವಿವಾದ ಸೃಷ್ಟಿಸಿತ್ತು.

Write A Comment