ರಾಷ್ಟ್ರೀಯ

ಭಾರತದಲ್ಲಿ ವೈಮಾನಿಕ ಇಂಧನಕ್ಕಿಂತ ಪೆಟ್ರೋಲ್ ದುಬಾರಿ!

Pinterest LinkedIn Tumblr

petrol

ಹೊಸದಿಲ್ಲಿ: ಬಹುಶಃ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಪೆಟ್ರೋಲ್ ದರ ವಿಮಾನಗಳಲ್ಲಿ ಬಳಸುವ ಇಂಧನಕ್ಕಿಂತಲೂ (ಎಟಿಎಫ್) ಹೆಚ್ಚಾಗಿದೆ. ಸರಕಾರ ದ್ವಿ ಚಕ್ರ ವಾಹನ ಮತ್ತು ಕಾರುಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಪೆಟ್ರೋಲ್‌ಗೆ ಸರಕಾರ ದಾಖಲೆಯ ಅಬಕಾರಿ ಸುಂಕ ವಿಧಿಸಿರುವುದು ಇದಕ್ಕೆ ಕಾರಣ.

ದಿಲ್ಲಿಯಲ್ಲಿ 1 ಲೀಟರ್ ಪೆಟ್ರೋಲ್‌ಗೆ 58.91 ರೂ. ವೆಚ್ಚವಾಗುತ್ತದೆ. ಆದರೆ ವೈಮಾನಿಕ ಇಂಧನ ಎಟಿಎಫ್‌ಗೆ ಪ್ರತಿ ಲೀಟರ್ ದರ 52.42 ರೂ.ಗಳಾಗಿದೆ.

ಸಾಮಾನ್ಯವಾಗಿ ಪೆಟ್ರೋಲ್‌ನ ಗುಣಮಟ್ಟ ಎಟಿಎಫ್‌ಗಿಂತ ಕಡಿಮೆಯಾಗಿದೆ. ಆದರೆ ಮೂರು ತಿಂಗಳುಗಳಲ್ಲಿ ಸತತ ನಾಲ್ಕು ಸಲ ಅಬಕಾರಿ ಸುಂಕ ಏರಿಕೆಯ ಪರಿಣಾಮ ಪೆಟ್ರೋಲ್ ಎಟಿಎಫ್‌ಗಿಂತ ತುಟ್ಟಿಯಾಗಿದೆ. ನಾಲ್ಕು ಸಲ ಸುಂಕ ಏರಿಕೆಯ ಪರಿಣಾಮ ಪ್ರತಿ ಲೀಟರ್‌ಗೆ 7.75 ರೂ. ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ಒಟ್ಟು ಅಬಕಾರಿ ಸುಂಕ 16.95 ರೂ.ಗೆ ಹೆಚ್ಚಳವಾಗಿದೆ. ಪೆಟ್ರೋಲಿಯಂ ಸಚಿವಾಲಯದ ಪ್ರಕಾರ 2002ರ ಏಪ್ರಿಲ್‌ನಲ್ಲಿ ಅಬಕಾರಿ ಸುಂಕ ಪ್ರತಿ ಲೀಟರ್‌ಗೆ 10.53 ರೂ.ಗಳಷ್ಟಿತ್ತು. ಆಗ ಮೊದಲ ಬಾರಿಗೆ ದರವನ್ನು ನಿಯಂತ್ರಣಮುಕ್ತವಾಗಿತ್ತು. 2005 ಮೇ ವೇಳೆಗೆ 14.59 ರೂ.ಗೆ ಹೆಚ್ಚಳವಾಗಿತ್ತು. 2012ರಲ್ಲಿ 9.48 ರೂ.ಗೆ ಕಡಿತವಾಗಿತ್ತು. ಒಂಭತ್ತು ಸಲ ದರ ಕಡಿತದ ನಂತರ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 14.69 ರೂ.ಗಳಷ್ಟು ಕಡಿತವಾಗಿದೆ. ಆದರೆ ಅಬಕಾರಿ ಸುಂಕ ಕಳೆದ ನವೆಂಬರ್ 12ರಂದು 1.50 ರೂ, ಡಿಸೆಂಬರ್ 2ರಂದು 2.25 ರೂ, ಜನವರಿ 2 ಮತ್ತು ಜ.16ರಂದು ತಲಾ 2 ರೂ. ಹೆಚ್ಚಳವಾಗಿದೆ.

ಸರಕಾರ ವಿತ್ತೀಯ ಕೊರತೆಯನ್ನು ನೀಗಿಸಲು ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕಗಳಿಂದ 94,164 ಕೋಟಿ ರೂ. ಸಂಗ್ರಹಿಸಿದೆ. ಪ್ರಸಕ್ತ ಸಾಲಿನಲ್ಲಿ ಸರಕಾರಕ್ಕೆ ಕನಿಷ್ಠ 18,000 ಕೋಟಿ ರೂ. ಹೆಚ್ಚು ಸಂಗ್ರಹಿಸಲು ಅಬಕಾರಿ ಸುಂಕ ಹೆಚ್ಚಳ ಸಹಾಯಕವಾಗಲಿದೆ. ಎಟಿಎಫ್‌ಗೆ ಶೇ.8ರಷ್ಟು ಅಬಕಾರಿ ಸುಂಕವಿದೆ.

Write A Comment