ಕರ್ನಾಟಕ

ಮೈಸೂರು ಅರಮನೆ ಬಳಿ ಸುರಂಗ ಮಾರ್ಗ ಪತ್ತೆ

Pinterest LinkedIn Tumblr

mysore21

ಮೈಸೂರು: ಪಾರಂಪರಿಕ ನಗರಿಯ ‘ಗನ್‌ಹೌಸ್‌’ ಸಮೀಪದ ವಿಶ್ವಮಾನವ ಉದ್ಯಾನದ ಪಕ್ಕದಲ್ಲಿ ಒಳಚರಂಡಿ ಕಾಮಗಾರಿ ವೇಳೆ ಸುರಂಗ ಮಾದರಿಯ ಮಾರ್ಗ  ಪತ್ತೆಯಾಗಿದ್ದು, ನಾಗರಿಕರಲ್ಲಿ ಕುತೂ­ಹಲ ಕೆರಳಿಸಿದೆ.

ವಿಶ್ವಮಾನವ ಉದ್ಯಾನದ ಪಕ್ಕದಲ್ಲಿ ಒಳಚರಂಡಿ ನಿರ್ಮಾಣಕ್ಕೆ ನಂಜನ­ಗೂಡು ಸಂಪರ್ಕ ಮಾರ್ಗದ ಅಡ್ಡರಸ್ತೆ­ಯನ್ನು ಜೆಸಿಬಿಯಿಂದ ಅಗೆಯುತ್ತಿದ್ದಾಗ ಮೂರು ಅಡಿ ಎತ್ತರ, ನಾಲ್ಕು ಅಡಿ ಅಗಲದ ಕಮಾನಿನ ಆಕಾರದ ಕಿಂಡಿಯೊಂದು ಗೋಚರಿಸಿತು. ಕೆಂಪು ಇಟ್ಟಿಗೆ, ಸುಣ್ಣದ ಗಾರೆಯಿಂದ ನಿರ್ಮಿಸಿ­ರುವ ಸುರಂಗದೊಳಗೆ ಸುಮಾರು 10ರಿಂದ 12 ಅಡಿ ಕ್ರಮಿಸಬಹು­ದಾಗಿದೆ. ಮುಂದಕ್ಕೆ ಸಾಗಲು ಮಣ್ಣು ಅಡ್ಡವಾಗುತ್ತದೆ. ಚರಂಡಿ ನಿರ್ಮಾಣಕ್ಕೆ ಭೂಮಿಯ ಮೇಲ್ಮಟ್ಟದಿಂದ ಸುಮಾರು 12 ಅಡಿ ಆಳಕ್ಕೆ ಭೂಮಿ ಅಗೆಯಲಾಗಿದೆ.

ಚರಂಡಿ ತಳಮಟ್ಟದಿಂದ ಸುಮಾರು 5 ಅಡಿ ಮೇಲ್ಭಾಗದಲ್ಲಿ ಈ ಸುರಂಗ ಮಾದರಿಯ ಮಾರ್ಗ ಇದೆ. ಇದಕ್ಕೆ ಸಮಾನಾಂತರ ಮಟ್ಟದಲ್ಲಿ ಮತ್ತೊಂದು ಬದಿಯಲ್ಲಿ ಚೌಕಾಕಾರದಲ್ಲಿ ಮತ್ತೊ ಂದು ಮಾರ್ಗ ಪತ್ತೆಯಾಗಿದೆ. ಸುತ್ತ ಇಟ್ಟಿಗೆ ಕಟ್ಟಿ ಮೇಲೆ ಕಲ್ಲು ಚಪ್ಪಡಿ ಹಾಕಿ ನಿರ್ಮಿಸಿರುವ ಈ ಮಾರ್ಗ­ದೊಳಗೆ ಸುಮಾರು ಆರು ಅಡಿ ಕ್ರಮಿ­ಸಲು ಸಾಧ್ಯ ಇದೆ. ನಂತರ ಕಲ್ಲಿನಿಂದ ನಿರ್ಮಿಸಿರುವ ಬಾವಿಯೊಪಾದಿಯ ಸುಮಾರು 15 ಅಡಿ ಉದ್ದದ ಗುಂಡಿ ಇದೆ. ಗುಂಡಿಯೊಳಗೆ ಇಳಿಯಲು ಅಲ್ಲೊಂದು ಇಲ್ಲೊಂದು ಮೆಟ್ಟಿಲು ಇದ್ದರೂ  ಹಿಡಿ ದುಕೊಳ್ಳಲು ಆಸರೆ ಇಲ್ಲದಿರುವುದರಿಂದ ಸುಲಭ ವಾಗಿ ಇಳಿಯಲು ಸಾಧ್ಯವಿಲ್ಲ. ಗುಂಡಿಯೊಳಕ್ಕೆ ಕಲ್ಲು ಹಾಕಿದರೆ ನೀರಿರುವುದು ಗೊತ್ತಾಗುತ್ತದೆ.

ಅರಮನೆ ಮತ್ತು ಸುತ್ತಲಿನ ಕಟ್ಟಡಗಳ ಮಳೆ ನೀರನ್ನು ದೊಡ್ಡಕೆರೆಗೆ ಸರಾಗವಾಗಿ ಹರಿಯಲು ಈ ಸುರಂಗ ಮಾದರಿ ಮಾರ್ಗ ನಿರ್ಮಿಸಿರಬಹುದು ಎಂದು ಪುರಾತತ್ವ ಇಲಾಖೆ ಅಧಿಕಾರಿ­ಗಳು ಹೇಳಿ ದ್ದಾರೆ. ಸುರಂಗ ಮಾದರಿಯ ಮಾರ್ಗ ಪತ್ತೆಯಾಗಿ ರುವುದು ತಿಳಿದ ಕೂಡಲೇ ನೂರಾರು ನಾಗರಿಕರು ಸ್ಥಳದಲ್ಲಿ ಜಮಾಯಿಸಿದ್ದರು.

ಕೆಲ ತಿಂಗಳ ಹಿಂದೆ ಗನ್‌ಹೌಸ್ ಬಳಿ ಚಾಮರಾಜ ಜೋಡಿ ಮಾರ್ಗ ಸಂಪರ್ಕಿಸುವ ರಸ್ತೆಯ ಮಧ್ಯಭಾ ಗದಲ್ಲಿ ‘ಮ್ಯಾನ್‌ಹೋಲ್‌’ ಮಾದರಿಯ ಸುಮಾರು 15 ಆಡಿ ಆಳದ ಮೆಟ್ಟಿಲು­ಗಳುಳ್ಳ ಗುಂಡಿ ಪತ್ತೆ ಯಾಗಿದ್ದವು.

ರಹಸ್ಯ ಮಾರ್ಗವಾಗಿರಲಿಕ್ಕಿಲ್ಲ
‘ಗನ್‌ಹೌಸ್‌’ ಬಳಿ ಪತ್ತೆಯಾಗಿರುವ ಸುರಂಗ ಮಾದರಿಯ ಮಾರ್ಗ ಕಿರಿದಾಗಿದ್ದು ವ್ಯಕ್ತಿಯೊಬ್ಬ ಸರಾಗವಾಗಿ ಸಂಚರಿಲು ಸಾಧ್ಯ ಇಲ್ಲವಾಗಿದೆ. ಅರಮನೆಗೆ ರಹಸ್ಯ ಸಂಪರ್ಕ ಕಲ್ಪಿಸಲು ಈ ಸುರಂಗ ತೋಡಿರಬಹುದು ಎಂಬ ವದಂತಿ ಪುಷ್ಟೀಕರಿಸುವ ಯಾವುದೇ ಪುರಾವೆಗಳು ಇಲ್ಲ.  ಚರಂಡಿಯಾಗಿ ಈ ಸುರಂಗ ಬಳಕೆಯಾಗಿರುವ ಸಾಧ್ಯತೆ ಇದೆ. ಸನಿಹದಲ್ಲೇ ‘ಗನ್‌ಹೌಸ್‌’ ಇರುವುದರಿಂದ ಮದ್ದುಗುಂಡುಗಳನ್ನು ಸಂಗ್ರಹಿಸಲು ಇದನ್ನು ನಿರ್ಮಿಸಿರ­ಬಹುದು. ಪುರಾತತ್ವ ಇಲಾಖೆಯು ವ್ಯವಸ್ಥಿತ ಅಧ್ಯಯನ ಕೈಗೊಂಡರೆ ಈ ಸುರಂಗದ ಐತಿಹ್ಯವನ್ನು ಪತ್ತೆ ಹೆಚ್ಚಲು ಸಾಧ್ಯ ಇದೆ.
– ಪ್ರೊ.ಎನ್‌.ಎಸ್‌. ರಂಗರಾಜು, ನಿವೃತ್ತ ಪ್ರಾಧ್ಯಾಪಕ, ಪ್ರಾಚೀನ ಇತಿಹಾಸ –ಪುರಾತತ್ವ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ

ಒಳಚರಂಡಿಯಾಗಿದ್ದ ಸಾಧ್ಯತೆ
ಈ ಸುರಂಗ ಮಾದರಿಯ ಮಾರ್ಗ­ವನ್ನು ಸುಮಾರು 150 ವರ್ಷ ಹಿಂದೆ ನಿರ್ಮಿಸಿರಬಹುದು ಎಂದು ಅಂದಾಜಿಸ­ಬಹುದಾಗಿದೆ. ಇದನ್ನು ನಿರ್ಮಿಸಿರುವ ಸಂದರ್ಭದಲ್ಲಿ ಇಲ್ಲಿನ ಅರಸರು ಬ್ರಿಟಿಷರ ಅಧೀನದಲ್ಲಿದ್ದರು. ಅಲ್ಲದೆ, ಅವರಿಗೆ ಆಕ್ರಮಣದ ಭಯ ಇರಲಿಲ್ಲ. ‘ಗನ್‌ ಹೌಸ್‌’ ಬಳಿ ಪತ್ತೆಯಾದ ಮಾತ್ರಕ್ಕೆ ಇಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿದ್ದರು ಎಂದು ತೀರ್ಮಾನಿ­ಸುವುದು ಸರಿಯಲ್ಲ.

ಒಂದು ಬದಿಯ ಸುರಂಗದಲ್ಲಿ ಗುಂಡಿ ಇದೆ. ಕಲ್ಲು ಚಪ್ಪಡಿ ಮೇಲು ಹಾಸು ಇದೆ. ಈ ಮಾರ್ಗ ಉತ್ತರ (ಅರಮನೆಯ ವರಾಹ ದ್ವಾರ) ದಿಕ್ಕಿನಲ್ಲಿ ಮಾತ್ರ ದ್ವಾರ ಇದ್ದು, ಉಳಿದ ಮೂರು ದಿಕ್ಕಿನಲ್ಲಿ ಯಾವುದೇ ದ್ವಾರ ಇಲ್ಲ. ಗುಂಡಿಯೊಳಗೆ ಒಂದು ಕಡೆ ಸುಮಾರು ಐದು ಇಂಚಿನ ಪೈಪು ಅಳವಡಿಸಿರುವ ಕುರುಹು ಇದೆ. ಒಳಚರಂಡಿಯಾಗಿ ಅಥವಾ ಕುಡಿಯುವ ನೀರಿನ ಸಂಗ್ರಹದ ಬಾವಿಯಾಗಿ ಬಳಸಿರ­ಬಹುದು. ಸೂಕ್ತವಾದ ಸಂಶೋಧನೆ ಕೈಗೊಂಡರೆ ಪಾರಂಪರಿಕ ಸಾಕ್ಷಿ ಪತ್ತೆ ಹಚ್ಚಬಹುದು.
– ಪಿ.ವಿ. ನಂಜರಾಜ ಅರಸು, ಇತಿಹಾಸ ಲೇಖಕರು, ಮೈಸೂರು

Write A Comment