ಕರ್ನಾಟಕ

ಹುಲಿ ಸಂತತಿ ಹೆಚ್ಚಿದರೂ ವಾಸಸ್ಥಾನ ಮೊಟಕು: ಕಾಡಿನ ರಾಜ’ನ ಸಾಮ್ರಾಜ್ಯದಲ್ಲಿ ಶೇ 48ರಷ್ಟು ಕುಸಿತ

Pinterest LinkedIn Tumblr

pvec21Jan15Tiger-new

ಬೆಂಗಳೂರು: ‘ಕಾಡಿನ ರಾಜ’ ಹುಲಿಗಳ ಸಂಖ್ಯೆ ದೇಶದಲ್ಲಿ ಹೆಚ್ಚಿದ್ದರೂ ಅರಣ್ಯ ಪ್ರದೇಶ­ದಲ್ಲಿ ಅವುಗಳ ಸಾಮ್ರಾಜ್ಯ (ಆವಾಸ­ಸ್ಥಾನದ ವಿಸ್ತೀರ್ಣ) 1.80 ಲಕ್ಷ ಚದರ ಕಿ.ಮೀ.ಯಷ್ಟು ಕಡಿಮೆ­ಯಾಗಿದೆ!
–ಹುಲಿ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿರುವ ಹಿರಿಯ ವನ್ಯಜೀವಿ ತಜ್ಞ ಹಾಗೂ ವೈಲ್ಡ್‌ಲೈಫ್‌ ಕನ್ಸರ್ವೇಷನ್‌ ಸೊಸೈಟಿ (ಡಬ್ಲ್ಯುಸಿಎಸ್‌) ಮುಖ್ಯಸ್ಥ ಡಾ. ಉಲ್ಲಾಸ್‌ ಕಾರಂತ ನೀಡಿರುವ ಮಾಹಿತಿ ಇದಾಗಿದೆ.

‘ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಹುಲಿಗಳ ಸಂರಕ್ಷಣೆಯಲ್ಲಿ ಜಗತ್ತಿನಲ್ಲಿಯೇ ಭಾರತ ಮುಂಚೂಣಿಯಲ್ಲಿದೆ ಎಂಬುದು ಇದ­ರಿಂದ ವೇದ್ಯವಾ­ಗುತ್ತದೆ. ಆದರೆ, ಕಳವಳ ಮೂಡಿಸುವ ಇತರ ಸಂಗತಿಗಳ ಮೇಲೂ ಗಮನಹರಿ­ಸುವುದು ಅಗತ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಒಟ್ಟು 3.80 ಲಕ್ಷ ಚದರ ಕಿ.ಮೀ. ಅರಣ್ಯ ಪ್ರದೇಶ ಈ ಹಿಂದೆ ಹುಲಿಗಳ ಆವಾಸ ಸ್ಥಾನ ಆಗಿತ್ತು. ಆದರೆ, ಅದರ ಪ್ರಮಾಣ ಶೇ 48ರಷ್ಟು ಕಡಿಮೆಯಾಗಿದ್ದು 2 ಲಕ್ಷ ಚದರ ಕಿ.ಮೀ.ಗೆ ಇಳಿದಿದೆ. ಆ ಪ್ರದೇಶದ ಶೇ 20ರಷ್ಟು ಭಾಗದ­ಲ್ಲಿಯೇ ಒಟ್ಟು ಹುಲಿಗಳಲ್ಲಿ ಶೇ 90ರಷ್ಟು ನೆಲೆ ಕಂಡುಕೊಂಡಿವೆ’ ಎಂದು ವಿವರಿಸಿದ್ದಾರೆ.

‘1973ರಷ್ಟು ಹಿಂದೆಯೇ ಹುಲಿ ಯೋಜನೆ ಆರಂಭಿಸಲಾಗಿದೆ. ಆ ಸಂದರ್ಭ­­ದಲ್ಲಿ ಕಣ್ಮರೆಯಾಗುವತ್ತ ಭರದಿಂದ ಹೆಜ್ಜೆ ಹಾಕಿದ್ದ ಹುಲಿಗಳ ಸಂತತಿಯನ್ನೇನೋ ಉಳಿಸಿಕೊಂಡು ಬರಲಾಗಿದೆ. ಆದರೆ, ಕಳೆದ 42 ವರ್ಷ­­ಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸು­ವಲ್ಲಿ ಸುಸ್ಥಿರ ಪ್ರಗತಿಯನ್ನು ಸಾಧಿಸ­ಲಾಗಿಲ್ಲ’ ಎಂದು ಬೆಳಕು ಚೆಲ್ಲಿದ್ದಾರೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರ­ಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಹುಲಿ­ಗಳ ಸಂಖ್ಯೆ ಹೆಚ್ಚಿಸುವಲ್ಲಿ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸ­ಬೇಕಿದೆ. ನಮ್ಮ ದೇಶದಲ್ಲಿ 5 ಸಾವಿರ­ದಿಂದ 10 ಸಾವಿರದಷ್ಟು ಹುಲಿಗಳನ್ನು ಬೆಳೆಸುವ ಗುರಿ ಹಾಕಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತರ ರಾಜ್ಯಗಳಿಗೆ ಮಾದರಿ: ‘ಹುಲಿಗಳ ರಕ್ಷಣೆಯಲ್ಲಿ ಕರ್ನಾಟಕ, ಮಧ್ಯಪ್ರ­ದೇಶ, ಮಹಾರಾಷ್ಟ್ರ, ಉತ್ತರಾ­ಖಂಡ ಹಾಗೂ ಅಸ್ಸಾಂ ರಾಜ್ಯಗಳು ಕೈಗೊಂಡ ಕ್ರಮ  ಇತರ ರಾಜ್ಯ­ಗಳಿಗೂ ಮಾದರಿ­ಯಾ­ಗಿವೆ. ಈ ಅವಧಿಯಲ್ಲಿ ಸರ್ಕಾರೇ­ತರ ಸಂಸ್ಥೆಗಳು ನೀಡಿದ ಕೊಡುಗೆ ಕೂಡ ದೊಡ್ಡದಾಗಿದೆ.  ಈ ಎಲ್ಲ ಪ್ರಯತ್ನಗಳ ಫಲವಾಗಿ ಹುಲಿ­ಗಳ ಸಂತತಿಯಲ್ಲಿ ಏರಿಕೆಯಾಗಿದೆ’ ಎಂದು ವಿವರಿಸಿದ್ದಾರೆ.
‘ಸಮೀಕ್ಷೆಯ ಸಮಗ್ರ ವರದಿಯನ್ನು ಮುಂದಿಟ್ಟುಕೊಂಡು ಈ ಸಂಬಂಧ ಹೆಚ್ಚಿನ ವಿಶ್ಲೇಷಣೆ ನಡೆಸುವ ಅಗತ್ಯ­ವಿದೆ’ ಎಂದು ಅವರು ಹೇಳಿದ್ದಾರೆ.

Write A Comment