ಕರ್ನಾಟಕ

ಹೋರಾಟದ ಮಹಾ ಒಕ್ಕೂಟ ಸ್ಥಾಪನೆಗೆ ಚಿಂತನೆ; ಸಶಸ್ತ್ರ ಹೋರಾಟದಿಂದ ಪರಿಹಾರ ಅಸಾಧ್ಯ: ನೂರ್‌ ಶ್ರೀಧರ್‌ ಅಭಿಮತ

Pinterest LinkedIn Tumblr

noor

ಬೆಂಗಳೂರು: ‘ಕರ್ನಾಟಕದ ಪ್ರಜಾ ಚಳವಳಿ ಹೊಸ ಮಾರ್ಗದ ಹುಡುಕಾಟ ಆರಂಭಿಸಿರುವ ಈ ಕಾಲಘಟ್ಟದಲ್ಲಿ ಎಲ್ಲ ಹೋರಾಟದ ಧಾರೆಗಳನ್ನು ಒಂದು­ಗೂಡಿಸಿ ಪ್ರವಾಹ ಸ್ವರೂಪದ ಮಹಾ ಒಕ್ಕೂಟ ಸ್ಥಾಪಿಸಲು ಯತ್ನಿಸಲಿದ್ದೇವೆ’

–ನಕ್ಸಲ್‌ ಚಳವಳಿಯಿಂದ ಈಚೆ­ಗಷ್ಟೇ ಹೊರಬಂದು ಮುಖ್ಯವಾಹಿನಿ ಸೇರಿರುವ ಸಿರಿಮನೆ ನಾಗರಾಜ್‌ ಮತ್ತು ನೂರ್‌ ಶ್ರೀಧರ್‌ ತಮ್ಮ ಮುಂದಿರುವ ಮಾರ್ಗವನ್ನು ತೆರೆದಿಟ್ಟಿದ್ದು ಹೀಗೆ. ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಇದುವರೆಗಿನ ಹೋರಾಟದ ಹಾದಿಯ ಮೇಲೂ ಬೆಳಕು ಚೆಲ್ಲಿದರು.

‘ನಮ್ಮ ಸಮಾಜ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನು ಕೇಳುತ್ತಿದೆ. ಅಂದಿನ ಸಂಗ್ರಾಮ ಪರಕೀಯ ಶಕ್ತಿಗಳ ವಿರುದ್ಧ ನಡೆದರೆ, ಇಂದಿನ ಸಂಗ್ರಾಮ ಈ ನೆಲದ ಪ್ರತಿಗಾಮಿ ಶಕ್ತಿಗಳ ವಿರುದ್ಧ ನಡೆಯಬೇಕಿದೆ. ಅಂತಹ ಸಾಮಾಜಿಕ ಕೃಷಿಗೆ ಬೇಕಾದ ಬೀಜ, ಗೊಬ್ಬರ, ಉಪ­ಕರಣ ಹಾಗೂ ವಾತಾವರಣ ನಮ್ಮ ನಡು­ವೆಯೇ ಇದೆ’ ಎಂದು ವ್ಯಾಖ್ಯಾನಿಸಿದರು.

‘ಚಳವಳಿಗೆ ತುರ್ತಾಗಿ ಅಗತ್ಯವಿರುವ ಹೋರಾಟಗಾರರ ನಡುವಿನ ಬಂಧ ಬೆಳೆಸುವ ಹಾಗೂ ಹೋರಾಟಕ್ಕೊಂದು ಮುನ್ನೋಟ ರೂಪಿಸಿಕೊಳ್ಳುವ ಕೆಲಸ­ದಲ್ಲಿ ಎಲ್ಲರ ಜತೆ ಕಾರ್ಯ ನಿರ್ವಹಿ­ಸಲಿ­ದ್ದೇವೆ. ಸಮಾನ ಮನಸ್ಕರ ಜತೆಗಿನ ಸಮಾ­ಲೋಚನೆ ಅದರ ಮೊಟ್ಟ­ಮೊದಲ ಹೆಜ್ಜೆ. ಮುಂದಿನ ಮೂರು ತಿಂಗಳು ರಾಜ್ಯದಾದ್ಯಂತ ಸುತ್ತಾಡಿ ಎಲ್ಲ ಜನಪರ ಸಂಘಟನೆಗ­ಳೊಂ­ದಿಗೆ ಮಾತು­ಕತೆ ನಡೆಸಲಿದ್ದೇವೆ’ ಎಂದು ವಿವರಿಸಿದರು.

‘ಯಾವ ಸೈದ್ಧಾಂತಿಕ ಮಡಿವಂತಿಕೆ­ಯನ್ನೂ ಇಟ್ಟುಕೊಳ್ಳದೆ ಎಲ್ಲ ಪ್ರಾಮಾ­ಣಿಕ ವ್ಯಕ್ತಿ ಹಾಗೂ ಶಕ್ತಿಗಳ ಜತೆ ಮಾತು­ಕತೆಗೆ ನಾವು ಮುಕ್ತರಾಗಿದ್ದೇವೆ. ಈ ಓಡಾಟ, ಒಡನಾಟದಿಂದ ಮುಂದಿನ ಹೋರಾಟಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತದೆ’ ಎಂದು ವಿಶ್ವಾಸದಿಂದ ನುಡಿದರು.
‘ಮಾವೋವಾದಿ ಪಕ್ಷದೊಳಗಿನ ನಮ್ಮ ಹೋರಾಟದ ಬದುಕು ವಿವರಿ­ಸಲು ಅಸಾಧ್ಯವಾದ ಅನುಭವ, ಬದ್ಧತೆ ಹಾಗೂ ಚಿಂತನೆಯನ್ನು ನಮ್ಮಲ್ಲಿ ಬೆಳೆಸಿದೆ.

ಹೋರಾಟದ ಸಾಗರದಲ್ಲಿ ಮೂಡುವ ಸಹಜ ಅಲೆಗೆ ತಕ್ಕಂತೆ ಹುಟ್ಟು ಹಾಕದಿದ್ದರೆ ನಮ್ಮೆಲ್ಲ ಮಹತ್ವಾ­ಕಾಂಕ್ಷೆಗಳು ಕನಸುಗಳಾಗಿ ಉಳಿದು ಬಿಡುತ್ತವೆ ಎನ್ನುವುದು ಮಾವೋ­ವಾ­ದದ ವೈಫಲ್ಯ ನಮಗೆ ಕಲಿಸಿರುವ ಪಾಠವಾಗಿದೆ’ ಎಂದು ನೂರ್‌ ಶ್ರೀಧರ್‌ ಹೇಳಿದರು.
‘ಜಗತ್ತಿನ ಎಲ್ಲ ಭಾಗದ ಸಮಸ್ಯೆಗಳಿಗೆ ಸಶಸ್ತ್ರ ಹೋರಾಟವೇ ಪರಿಹಾರ ಎನ್ನು­ವುದು ಮಾವೋವಾದಿ ಪಕ್ಷದ ಸಿದ್ಧಾಂತ. ಅಸಮಾನತೆ ತೊಡೆದು­ಹಾಕುವ ಅದರ ಆಶಯ ಸರಿಯಾ­ಗಿ­ದ್ದರೂ ದಾರಿ ಸರಿಯಿರಲಿಲ್ಲ.

ಸಮಾಜದ ಲಯಕ್ಕೆ ಹೊಂದಿಕೊಳ್ಳದ ಕಾರಣ ಹೋರಾಟದ ದಾರಿ ತಪ್ಪಿ ತಾನೇ ಸೃಷ್ಟಿಸಿದ ಸುಳಿಯಲ್ಲಿ ಸಿಲುಕಿಕೊಂಡಿತು. ಇದನ್ನೆಲ್ಲ ಅರ್ಥ ಮಾಡಿಕೊಂಡು ಭ್ರಮೆಯಿಂದ ಹೊರ­ಬಂದಿ­ರುವ ನಾವು ನೆಲದ ಮೇಲೆ ನಡೆಯುವ ತೀರ್ಮಾನ ಮಾಡಿದ್ದೇವೆ’ ಎಂದು ವಿವರಿಸಿದರು.

‘ನಾವು ಮುಖ್ಯವಾಹಿನಿಗೆ ಕಾಲಿಡುತ್ತಿ­ರುವ ಕಾಲ ‘ಸಾಮಾಜಿಕ ಗ್ರಹಣ’ದ ಕಾಲವಾಗಿದೆ. ಕಾರ್ಪೋರೇಟ್‌ ಸಂಸ್ಕೃತಿ ಈ ಗ್ರಹಣದ ಕೇಂದ್ರ ಬಿಂದುವಾಗಿದ್ದರೆ, ಗೋಮುಖ ರಾಜಕಾರಣ, ಕೋಮು­ವಾದ, ಜಾತಿವಾದ, ವಿಕೃತ ಲೈಂಗಿಕತೆ, ಇಂಗ್ಲಿಷ್‌ನ ವಿಜೃಂಭಣೆ, ತಣಿಯದ ಕೊಳ್ಳುಬಾಕುತನ ಮೊದಲಾದ ಧಾತು­ಗಳು ಅದರ ಪೋಷಕ ಕವಚಗಳಾಗಿ ಕೆಲಸ ಮಾಡುತ್ತಿವೆ. ಬಲಶಾಲಿ, ವಿಷಕಾರಿ ಹಾಗೂ ಭ್ರಷ್ಟ ಶಕ್ತಿಗಳು ಬೆಳೆಯುತ್ತಿವೆ’ ಎಂದು ವಿಶ್ಲೇಷಿಸಿದರು.

‘ದಿಗಿಲು ಹುಟ್ಟಿಸುವ ಭವಿಷ್ಯದ ನಡುವೆಯೂ ಭರವಸೆ ಮೂಡಿಸುವ ಬೆಳಕು ಕಾಣುತ್ತಿದೆ. ಈ ಹಿಂದೆ ಸಮಾ­ಜಕ್ಕೆ ಹಿಡಿದ ಗ್ರಹಣಗಳನ್ನು ಸಾಮಾಜಿಕ ಆಂದೋಲನಗಳ ಮೂಲಕ ತೊಲಗಿ­ಸಲು ಸಾಧ್ಯವಾಗಿದೆ. ಅಂತಹ ಮತ್ತೊಂದು ಆಂದೋಲನ ಹುಟ್ಟು­ಹಾಕುವ ಆಶಯ ನಮ್ಮದಾಗಿದೆ’ ಎಂದರು.

‘ಪ್ರಜಾತಾಂತ್ರಿಕ ಹೋರಾಟಗಳ ಮುಖ್ಯವಾಹಿನಿಗೆ ಮರಳುವ ಪ್ರಕ್ರಿಯೆ­ಯಲ್ಲಿ ನಾವು ಸದ್ಯಕ್ಕೆ ‘ಬಹಿರಂಗವಾ­ಗುವ’, ‘ಬಂಧನದಿಂದ ಹೊರ­ಬರುವ’ ಎರಡು ಘಟ್ಟಗಳನ್ನು ದಾಟಿ­ದ್ದೇವೆ. ‘ಆರೋಪ ಮುಕ್ತಗೊಳ್ಳುವ’ ಹಾಗೂ ‘ಹೋರಾಟದ ಮುಖ್ಯ­ವಾಹಿನಿ­ಯಲ್ಲಿ ಒಂದುಗೂಡುವ’ ಇನ್ನೆರಡು ಘಟ್ಟಗಳು ಉಳಿದುಕೊಂಡಿವೆ. ಸಮಾಜ­ದಿಂದ ಅಗತ್ಯ ಬೆಂಬಲ ಸಿಗುವ ವಿಶ್ವಾಸ­ವಿದೆ’ ಎಂದು ಸಿರಿಮನೆ ನಾಗರಾಜ್‌ ಹೇಳಿದರು.

‘ಹಿಂದಿನ ಸರ್ಕಾರಗಳು ‘ನಕ್ಸಲರು ಮುಖ್ಯವಾಹಿನಿಗೆ ಬರಬೇಕು’ ಎಂಬ ಬೂಟಾಟಿಕೆ ಮಾತುಗಳನ್ನಷ್ಟೇ ಆಡುತ್ತಿ­ದ್ದವು. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಆಡಿದಂತೆ ನಡೆದುಕೊಂಡಿದೆ. ಅವರನ್ನು ಅಭಿನಂದಿಸು­ತ್ತೇವೆ. ನಮ್ಮ ಹೋರಾಟದ ಬದುಕಿಗೆ ತಿರುವು ಕೊಡು­ವಲ್ಲಿ ಸಹಕರಿಸಿದ ಎಲ್ಲರಿಗೂ ಅಭಾರಿ ಆಗಿ­ದ್ದೇವೆ’ ಎಂದು ಕೃತಜ್ಞತೆ ಅರ್ಪಿಸಿದರು.

ಸಿರಿಮನೆ ನಾಗರಾಜ್‌–ನೂರ್‌ ಶ್ರೀಧರ್‌ ಮಾತಿನ ಝಲಕ್‌
*ಇಂದಿನ ಸಂದರ್ಭವನ್ನು ‘ಅಚ್ಛೇ ದಿನ್‌ ಆಯೇ ಹೈ’ (ಒಳ್ಳೆಯ ದಿನಗಳು ಬಂದಿವೆ) ಎಂದು ಹಲವರು ಬಿಂಬಿಸಿದರೆ, ಕೆಲವರು ‘ಏನೂ ಬದಲಾಗಿಲ್ಲ’ ಎನ್ನುತ್ತಾರೆ. ಆದರೆ, ನಮ್ಮ ಅಭಿಪ್ರಾಯವೇ ಬೇರೆ. ಒಳ್ಳೆಯ ದಿನದ ಭ್ರಮೆ ಮೂಡಿಸಿ ಮೋಡಿ ಮಾಡಲಾಗಿದ್ದರೂ ಬದುಕಿನ ಕಾಲು ಬೆಂಕಿಗೆ ಬಿದ್ದಿದೆ. ಕೆಟ್ಟ ದಿನಗಳು ಮುಂದೆ ಇವೆ, ಒಳ್ಳೆಯ ದಿನಗಳು ದೂರ ಇವೆ, ಆದರೆ ದಾರಿಯೂ ಇದೆ. ದೂರದ ಪಯಣಕೆ ಸಿದ್ಧಗೊಳ್ಳುವ ಕಾಲ ನಮ್ಮದಾಗಿದೆ. ‘ಒಡೆದಾಳುವ ನೀತಿ’ಗೆ ‘ಒಡಗೂಡುವ’ ಯುಕ್ತಿ ಅನುಸರಿಸಿದಲ್ಲಿ ಗೆಲುವು ಖಚಿತವಾಗಿದೆ.

* ಹೋರಾಟಗಾರರಲ್ಲಿ ಎರಡು ವಿಧ. ಹೋರಾಟವನ್ನೇ ಉಸಿರಾಗಿಸಿಕೊಂಡ ಗುಂಪು ಒಂದೆಡೆ, ಅದನ್ನೊಂದು ಹಣ ಸಂಪಾ­ದನೆ ಮಾರ್ಗವನ್ನಾಗಿ ಮಾಡಿಕೊಂಡ ಗುಂಪು ಮತ್ತೊಂದೆಡೆ. ಎರಡನೇ ಗುಂಪು ವೈರಸ್‌ನಂತೆ ಎಲ್ಲೆಡೆ ಹರಡುತ್ತಿದೆ.

Write A Comment