ಕರ್ನಾಟಕ

ಶಿಕ್ಷಣದಲ್ಲಿ ಸಾಹಿತ್ಯದ ಸ್ಥಾನ ಇಳಿಮುಖ: ಶಿಕ್ಷಕನೇ ನಂ1 ಆರೋಪಿ

Pinterest LinkedIn Tumblr

edu

ಧಾರವಾಡ: ಟೀಕೆ, ವ್ಯಂಗ್ಯ, ಕಳಕಳಿ, ಹತಾಶೆಯ ಪ್ರತಿಕ್ರಿಯೆಗಳ ಮೂಲಕವೇ ‘ಶಿಕ್ಷಣ ವ್ಯವಸ್ಥೆಯಲ್ಲಿ ಸಾಹಿತ್ಯದ ಸ್ಥಾನ ಇಳಿಮುಖವಾಗುತ್ತಿದೆಯೇ?’ ಗೋಷ್ಠಿ ಚರ್ಚೆ ಗಂಭೀರವಾಯಿತು.

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಹಮ್ಮಿಕೊಂಡಿರುವ ಸಾಹಿತ್ಯ ಸಂಭ್ರಮದ ಮೂರನೇ ದಿನದ ಮೊದಲ ಗೋಷ್ಠಿ­ಯಲ್ಲಿ ಶಿಕ್ಷಣದಲ್ಲಿ ಸಾಹಿತ್ಯದ ಸ್ಥಾನ ಇಳಿಮುಖಗೊಳ್ಳಲು ಕಾರಣವಾದ ಅಂಶಗಳನ್ನು ಸಂಪನ್ಮೂಲ ವ್ಯಕ್ತಿಗಳು ವಾದ– ಸಂವಾದಗಳ ಮೂಲಕ ಅನಾವರಣಗೊಳಿಸಿದರು.

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆ, ಶಿಕ್ಷಕರು– ವಿದ್ಯಾರ್ಥಿಗಳ ಮನೋ­ಭಾವ, ಜಾಗತಿಕ ಮನಸ್ಥಿತಿ– ಇವು­ಗ­ಳಿಂದ ಶಿಕ್ಷಣದಲ್ಲಿ ಸಾಹಿತ್ಯ ಮತ್ತು ಭಾಷೆಯ ಸ್ಥಾನ ತುಂಬಾ ಕಡಿಮೆ­ಯಾ­ಗುತ್ತಿದೆ ಎಂದು ಇಡೀ ಗೋಷ್ಠಿ ಪ್ರತಿಪಾ­ದಿಸಿತು. ಮೊದಲು ಶಿಕ್ಷಕರ ಮೇಲೆ ಆರೋಪ ಪಟ್ಟಿ ಸಿದ್ಧಪಡಿಸಲಾಯಿತು. ತದನಂತರ ಪಠ್ಯಕ್ರಮ, ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳನ್ನು ಕೊನೆಯಲ್ಲಿ ಪಟ್ಟಿ ಮಾಡಲಾಯಿತು.

‘ಸಾಹಿತ್ಯವನ್ನು ಆಸಕ್ತಿಯಿಂದ ಕಲಿಸುವ ಶಿಕ್ಷಕರು ಎಲ್ಲಿದ್ದಾರೆ ಹೇಳಿ’ ಎನ್ನುತ್ತಲೇ ಚರ್ಚೆಗೆ ಕಿಡಿ ಹಚ್ಚಿದವರು ರಾಜಪ್ಪ ದಳವಾಯಿ.  ಶಿಕ್ಷಕರು, ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ. ಆತ್ಮರತಿಯಲ್ಲಿ ಸುಖಿಸುತ್ತಿದ್ದಾರೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಇದಕ್ಕೆ, ‘ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಸ್ಫೂರ್ತಿ–ಪ್ರೇರಣೆ ನೀಡುವ ಅಧ್ಯಾಪಕ ವೃಂದವೇ ಕಣ್ಮರೆಯಾಗಿದೆ’ ಎಂದು ಶ್ರೀನಿವಾಸ ಕುಲಕರ್ಣಿ ಅವರು ಪ್ರತಿಕ್ರಿಯಿಸಿದರೆ, ‘ಶಿಕ್ಷಕರಿಗೆ ಯಾವುದೇ ಪರಂಪರೆಯ ಜ್ಞಾನ ಇಲ್ಲ. ಹಗಲು ಕಾಗೆ, ರಾತ್ರಿ ಕೋಗಿಲೆ ಎನ್ನುವಷ್ಟರ ಮಟ್ಟಿನ ಜ್ಞಾನ ನಮ್ಮ ಶಿಕ್ಷಕರದ್ದು’ ಎಂದು ಮ.ಗು.ಬಿರಾದಾರ ಅಭಿಪ್ರಾಯ ಸೇರಿಸಿದರು.

ಪಠ್ಯ, ಪಠ್ಯಕ್ರಮ: ಹಿಂದೆ ಎಂ.ಎ ತರಗತಿಯಲ್ಲಿ ಸಾಹಿತ್ಯ ವಿಷಯಕ್ಕೆ 600 ಅಂಕಗಳಿದ್ದವು. ಅದು 400ಕ್ಕೆ ಇಳಿಯಿತು. ಈಗ ಸೆಮಿಸ್ಟರ್ ಪದ್ಧತಿ ಬಂದ ಮೇಲೆ ಸಾಹಿತ್ಯದ ಪಠ್ಯಕ್ರಮ ಶೇ 50ರಷ್ಟು ಕಡಿಮೆಯಾಗಿದೆ ಎಂದು ಗೋಷ್ಠಿ ನಿರ್ದೇಶಕ ವಿ.ಎಸ್.ಮಾಳಿ ಗಮನ ಸೆಳೆದರು. ಹಿಂದೆ ಇಡೀ ಕಾದಂಬರಿಯೇ ಪಠ್ಯವಾಗುತ್ತಿತ್ತು. ಈಗ ಅದರ ಕೆಲ ಭಾಗ ಇಡುವ ಪರಿಸ್ಥಿತಿ ಬಂದಿದೆ.

ಹಿಂದೆ ಇಡೀ ತರಗತಿಗೆ ಇಬ್ಬರಷ್ಟೇ ‘ಫಸ್ಟ್‌ಕ್ಲಾಸ್‌’ ಬರುತ್ತಿದ್ದರು. ಈಗ ಎಲ್ಲರೂ ‘ಫಸ್ಟ್‌ಕ್ಲಾಸ್‌’ ಬರುತ್ತಿ ದ್ದಾರೆ. ಸಾಹಿತ್ಯವೇ ಸರಳವಾಯಿತೇ? ಅಥವಾ ಅಷ್ಟು ಚೆನ್ನಾಗಿ ಶಿಕ್ಷಕರೇ ಕಲಿಸು­ತ್ತಿದ್ದಾರೆಯೇ ಎಂದು ಮ.ಗು.ಬಿರಾದಾರ ಅನುಮಾನ ವ್ಯಕ್ತಪಡಿಸಿದರು.
ಸಾಹಿತ್ಯದ ಓದಿನಿಂದ ವ್ಯಕ್ತಿತ್ವ ವಿಕಸನವಾಗುತ್ತದೆಂಬ ಗ್ರಹಿಕೆ ಪಾಲಕರಲ್ಲಿ ಬರಬೇಕು. ಹಳಗನ್ನಡ ಪಠ್ಯ ಇದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಕನ್ನಡ ಎಂ.ಎ ತರಗತಿಗೆ ಸೇರಲು ಹಿಂದೇಟು ಹಾಕಿದ ಪ್ರಸಂಗಗಳೂ ಇವೆ ಎಂದರು ರಾಜಪ್ಪ ದಳವಾಯಿ.

ಕೋತಿ ಆಟ ಹೆಚ್ಚಾಗಿದೆ
ಮೇಸ್ಟ್ರುಗಳ ಸಂಬಳ ಜಾಸ್ತಿ­ಯಾಗಿದೆ. ಹಾಗೆಯೇ, ಅವರ ಕೋತಿ ಆಟವೂ ಹೆಚ್ಚಾಗಿದೆ. ಶಿಕ್ಷಕರು, ಪಠ್ಯಾ­ಧಾರಿತ ಪಾಠ ಮಾಡಿದರೆ ಅದೇ ಸಮಾಜಕ್ಕೆ ನೀಡುವ ದೊಡ್ಡ ಸೇವೆ.
–ರಾಜಪ್ಪ ದಳವಾಯಿ

ಗುಣ ಬದಲಾಗಲಿ
ಬೋಧನೆ ನೌಕರಿ ಆಗಿರುವವ ರೆಗೂ ಸಾಹಿತ್ಯ ಅಮುಖ್ಯವಾಗುತ್ತದೆ. ಅಧ್ಯಾಪಕರ ಗುಣದಿಂದಲೇ ಇಂದಿನ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ.
–ಶ್ರೀನಿವಾಸ ಕುಲಕರ್ಣಿ

ಅಧ್ಯಯನ ಬದಲಾಗಿದೆ
ಸಾಹಿತ್ಯ ಮಾನವೀಯತೆಯ ಜೀವ­ದ್ರವ್ಯ. ಯಾಂತ್ರಿಕತೆ ಹೆಚ್ಚಾದಂತೆ ಸಾಹಿತ್ಯದ ಅವಲಂಬನೆ ಹೆಚ್ಚು. ಆದರೆ, ಅದು ಕಡಿಮೆ ಯಾಗುತ್ತಿದೆ. ನಮ್ಮ ಅಧ್ಯಯನಗಳು ಬದಲಾಗುತ್ತಿ ದ್ದಂತೆ ಸಾಹಿತ್ಯವೂ ಬರಿದಾಗುತ್ತಾ ಹೋಗುತ್ತಿದೆ.  – ವಿ.ಎಸ್‌.ಮಾಳಿ

Write A Comment