ಕರ್ನಾಟಕ

9 ಮಂದಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ; ಕೊಂಕಣಿ ಅಧ್ಯಯನ ಪೀಠ: ಸಿ.ಎಂ. ಭರವಸೆ

Pinterest LinkedIn Tumblr

konkani

ಬೆಂಗಳೂರು: ಕೊಂಕಣಿ ಭಾಷೆಯ ಬೆಳವಣಿಗೆಗಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮುಂದಿನ ವರ್ಷ ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.

ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಯು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರ­ದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಒಂಬತ್ತು ಸಾಧಕರಿಗೆ 2014ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ‘ಕೊಂಕಣಿಯು ಪುರಾತನ ಭಾಷೆ. ಈ ಭಾಷೆಯ ಸಾಹಿತ್ಯ ಮತ್ತು ಸಂಶೋಧನೆಗೆ ಅಧ್ಯಯನ ಪೀಠ ನೆರವಾಗಲಿದೆ. ಇದಕ್ಕೆ ಅಗತ್ಯವಿರುವ ಹಣಕಾಸು ನೆರವನ್ನು ಮುಂದಿನ ಬಜೆಟ್‌ನಲ್ಲಿ ನೀಡಲಾಗುವುದು’ ಎಂದರು.

‘ಪ್ರಮುಖ ಮೂರು ಧರ್ಮದವರ (ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌) ಮಾತೃಭಾಷೆ ಹಾಗೂ ಬಳಸುವ ಭಾಷೆ ಕೊಂಕಣಿ. ಈ ರೀತಿಮಾತನಾಡುವ ಭಾಷೆ ಜಗತ್ತಿನಲ್ಲಿ ಮತ್ತೊಂದಿಲ್ಲ. ಹಾಗಾಗಿ ಇದೊಂದು ವಿಶಿಷ್ಟ ಭಾಷೆ’ ಎಂದು ಬಣ್ಣಿಸಿದರು. ‘ಕೊಂಕಣಿ ಸಮುದಾಯದವರು ಸ್ವಾಭಿಮಾನಿ­ಗಳು. ನನ್ನ ಪ್ರಕಾರ ಪ್ರತಿಯೊಬ್ಬರೂ ಸ್ವಾಭಿಮಾನಿ­ಗಳಾಗಿರ­ಬೇಕು. ಆತ್ಮಗೌರವವನ್ನು ಬಿಟ್ಟುಕೊಡ­ಬಾರದು ಹಾಗೂ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಈ ರೀತಿ ಬದುಕುವವರ ವ್ಯಕ್ತಿತ್ವ ಉತ್ಕೃಷ್ಟವಾಗಿರುತ್ತದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ‘ಕೊಂಕಣಿ ನಮ್ಮ ಸಹೋದರ ಭಾಷೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಇದಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗು­ವುದು’ ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ತಲಿನೊ, ‘ಶಾಲೆಗಳಲ್ಲಿ ಕೊಂಕಣಿ ಭಾಷೆ ಕಲಿಸಲು ಪ್ರೋತ್ಸಾಹ ನೀಡಲು ಹಾಗೂ ಭಾಷೆಯ ಸಂಶೋಧನೆಗೆ ಒತ್ತು ನೀಡಲು ಅಧ್ಯಯನ ಪೀಠದ ಅಗತ್ಯವಿದೆ. ಇದಕ್ಕಾಗಿ ಹಣಕಾಸು ನೆರವು ಒದಗಿಸಬೇಕು’ ಎಂದು ಮನವಿ ಮಾಡಿದರು.

ಸೆಂಚುರಿ ಬಿಲ್ಡರ್ಸ್‌ ಅಧ್ಯಕ್ಷ ಪಿ. ದಯಾನಂದ ಪೈ, ‘ಅಧ್ಯಯನ ಪೀಠಕ್ಕಾಗಿ ನಾವು ₨ 50 ಲಕ್ಷ ಸಂಗ್ರಹಿಸು­ತ್ತೇವೆ. ಇನ್ನುಳಿದ ಹಣವನ್ನು ಸರ್ಕಾರ ನೀಡಬೇಕು. ಆ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಅದರಿಂದ ಬರುವ ಬಡ್ಡಿಯಿಂದ ಪೀಠದ ಕಾರ್ಯಚಟುವಟಿಕೆ ನಡೆಸು­ತ್ತೇವೆ’ ಎಂದರು. ಗೌರವ ಪ್ರಶಸ್ತಿ ₨ 10 ಸಾವಿರ, ಪುಸ್ತಕ ಬಹುಮಾನ ಪ್ರಶಸ್ತಿ ₨ 5 ಸಾವಿರ ನಗದು, ಫಲಕ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.

Write A Comment