ಕರ್ನಾಟಕ

ವರದಕ್ಷಿಣೆ ಕಿರುಕುಳ, 2ನೇ ಮದುವೆ ಸರಕಾರಿ ನೌಕರರ ನೌಕರಿಗೇ ಕುತ್ತು: ಸರಕಾರಿ ನೌಕರರಿಗೆ ಎಚ್ಚರಿಕೆ

Pinterest LinkedIn Tumblr

marriage

ಸರಕಾರಿ ನೌಕರರೇ, ಕೈತುಂಬಾ ಸಂಬಳವಿದೆಯೆಂದು ಎರಡನೇ ಮದುವೆಯಾದರೆ, ಯಾರಿಗೆ ಸಾಲುತ್ತೆ ಸಂಬಳ ಎಂದು ವರದಕ್ಷಿಣೆ ಕಿರುಕುಳ ಕೊಟ್ಟರೆ ಕಡ್ಡಾಯ ನಿವೃತ್ತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಅಂತಹ ಎರಡು ಪ್ರಕರಣಗಳಲ್ಲಿ ಇಬ್ಬರನ್ನು ‘ಸರಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ’ ತಾಂತ್ರಿಕ ಶಿಕ್ಷಣ ಇಲಾಖೆ ಹೊರಡಿಸಿದೆ. ದೊಡ್ಡ ಹುದ್ದೆಯಲ್ಲಿದ್ದವರು, ಮಂತ್ರಿ ಮಹೋದಯರು ಎರಡನೇ ಮದುವೆಯಾದರೆ ಹೇಗೋ ‘ಅಡ್ಜಸ್ಟ್’ ಮಾಡಿಕೊಂಡೋ, ಇಲ್ಲಾ ವಿಚ್ಚೇದನೆ ಪಡೆದು ನೆಮ್ಮದಿಯಾಗಿರುತ್ತಾರೆ. ಆ ದಾರಿ ತೋಚದ ಇಬ್ಬರು ಸರಕಾರಿ ನೌಕರರು ಕೆಲಸಕ್ಕೆ ಆಪತ್ತು ತಂದುಕೊಂಡ ಎರಡು ಪ್ರಕರಣಗಳು ಇಲ್ಲಿವೆ.

ಡಿ.25ರಂದು ಪ್ರಕಟವಾದ ರಾಜ್ಯಪತ್ರದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಇಬ್ಬರು ಸರಕಾರಿ ನೌಕರರನ್ನು ಕಡ್ಡಾಯ ನಿವೃತ್ತಿಗೊಳಿಸಿ ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ.

ಎರಡನೇ ಮದುವೆ ಕೆಲಸಕ್ಕೆ ಕುತ್ತು
ಹೆಸರಘಟ್ಟದಲ್ಲಿರುವ ಸರಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಡಿ ದರ್ಜೆ ನೌಕರರಾಗಿದ್ದ ಎನ್. ನರಸಿಂಹರಾಜು ಎಂಬಾತ ಕಾನೂನು ಬಾಹಿರವಾಗಿ 2ನೇ ಮದುವೆಯಾಗಿದ್ದಾರೆಂದು 2011ರ ಜುಲೈ 28ರಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಅವರ ಮೊದಲ ಪತ್ನಿ ಸ್ಫೂರ್ತಿ ದೂರು ಸಲ್ಲಿಸಿದ್ದರು. ದೂರಿನಲ್ಲಿ ”2007ರ ಮೇ 4ರಂದು ಧರ್ಮಸ್ಥಳದಲ್ಲಿ ನರಸಿಂಹರಾಜು ನನ್ನನ್ನು ಮದುವೆಯಾಗಿ, 2007ರ ಮೇ 25ರಂದು ಜಯನಗರದ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು. ಇನ್ನೊಬ್ಬಳಿಗೆ ಮೋಸ ಮಾಡಿದ ಗಂಡನ ವಿರುದ್ಧ ಕ್ರಮ ಜರುಗಿಸುವಂತೆ,”ಕೋರಿದ್ದರು.

ಏತನ್ಮಧ್ಯೆ 2011ರ ಜುಲೈ 25(ಎರಡನೇ ಮದುವೆಯ ಬಳಿಕ)ರಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದ ನರಸಿಂಹರಾಜು, ”ನನಗೆ ಸರಸ್ವತಿ ಒಬ್ಬರೇ ಪತ್ನಿಯಿದ್ದು, ನನ್ನ ಮಗ ದರ್ಶನ್ ಇವರ ಹೆಸರನ್ನು ಸೇವಾಪುಸ್ತಕದಲ್ಲಿ ನಮೂದಿಸಿ,”ಎಂದು ಕೋರಿದ್ದರು. ಸರಸ್ವತಿಯನ್ನು ಮದುವೆಯಾಗಿದ್ದಕ್ಕೆ 2007ರ ಡಿ.14ರಂದು ಜೆ.ಪಿ. ನಗರದ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ ದಾಖಲೆಯನ್ನು ಲಗತ್ತಿಸಿದ್ದರು.

ಸದರಿ ಪ್ರಕರಣದ ಬಗ್ಗೆ ಇಲಾಖೆ ವಿಚಾರಣೆ ನಡೆಸಿ ಸಮಜಾಯಿಷಿ ಕೇಳಿದ್ದರೂ ನರಸಿಂಹರಾಜು ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ಜಂಟಿ ನಿರ್ದೇಶಕ ನಿರಂಜನ್‌ದಾಸ್ ನೇತೃತ್ವದಲ್ಲಿ ರಚಿಸಿದ್ದ ತನಿಖಾ ಸಮಿತಿಯು 2011ರ ಜುಲೈ 12ರಂದು ಸಲ್ಲಿಸಿದ ವರದಿಯಲ್ಲಿ ನರಸಿಂಹರಾಜು ಇಬ್ಬರನ್ನು ವಿವಾಹವಾಗಿದ್ದನ್ನು ನೋಂದಣಿ ಕಚೇರಿಯಲ್ಲಿ ಹೆಸರು ನೋಂದಾಯಿಸಿದ್ದು, ಇಬ್ಬರ ಹೆಸರನ್ನೂ ನಾಮನಿರ್ದೇಶನ ಮಾಡಿಸಿದ್ದು ಕಾನೂನು ಬಾಹಿರ. ಕರ್ನಾಟಕ ನಾಗರಿಕ ಸೇವಾ ನಡತೆ(ವರ್ತನೆ)ನಿಯಮಗಳು 1966ರ ಪ್ರಕಾರ ದ್ವಿಪತ್ನಿತ್ವ ಕಾನೂನು ಬಾಹಿರವಾಗುತ್ತದೆ ಎಂದು ಹೇಳಿತ್ತು.

ಸತ್ಯಾಸತ್ಯತೆ ತಿಳಿಯಲು ನಿವೃತ್ತ ಜಿಲ್ಲಾ ನ್ಯಾ. ಎಂ.ಜಿ. ಹಿರೇಮಠ್ ಅವರಿಂದ ವಿಚಾರಣೆ ನಡೆಸಲಾಗಿತ್ತು. ಹಿರೇಮಠ್ ಅವರು 2014ರ ಮಾರ್ಚ್ 7ರಂದು ಸಲ್ಲಿಸಿದ ವರದಿಯಲ್ಲಿ ಆರೋಪ ಸಾಬೀತಾಗಿದ್ದು, ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದರು. ಆಪಾದಿತ ನರಸಿಂಹರಾಜುಗೆ ಕಾರಣ ಕೇಳಿ ನೋಟಿಸ್ ನೀಡಿದರೂ ಸಮಜಾಯಿಷಿ ನೀಡಿಲ್ಲ. ಹೀಗಾಗಿ ಸರಕಾರಿ ನಿಯಮ ಉಲ್ಲಂಘನೆ ಹಾಗೂ ದ್ವಿಪತ್ನಿತ್ವ ಹೊಂದಿದ ಆರೋಪದ ಮೇಲೆ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ ಎಂದು ಆದೇಶ ತಿಳಿಸಿದೆ.

ವರದಕ್ಷಿಣೆ ಪಡೆದರೆ ನೌಕರಿಗೆ ಆಪತ್ತು
ಕೆ.ಜಿ.ಎಫ್‌ನ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಬದ್ರುದ್ದೀನ್ ಷರೀಫ್ ತಮಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಅವರ ಪತ್ನಿ ಸೈಯದ್ ಆಸಿ ಅಂಜುಮ್ 2013ರ ಮೇ 9ರಂದು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

”2012ರ ಜುಲೈ 12ರಂದು ನನ್ನನ್ನು ವಿವಾಹವಾಗಿದ್ದ ಷರೀಫ್, ಅತ್ತೆ ವಹೀದಾ ಬೇಗಂ, ಗಂಡನ ತಂಗಿ ಹರ್ಷಿಯಾ ಮತ್ತಿತರು ವರದಕ್ಷಿಣೆಗಾಗಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ. ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ,” ಎಂದು ನಿರ್ದೇಶಕರಿಗೆ ನೀಡಿದ ದೂರಿನ ಪ್ರತಿಯನ್ನಿಟ್ಟು ಕೋಲಾರ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದರು.

ಪೊಲೀಸ್ ಇನ್ಸ್‌ಪೆಕ್ಟರ್, ಷರೀಫ್‌ರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮೂರು ದಿನ ನ್ಯಾಯಾಂಗ ಬಂಧನದಲ್ಲಿದ್ದ ಷರೀಫ್ ಜಾಮೀನು ಪಡೆದಿದ್ದರು. ಸದರಿ ವರದಿಯನ್ನು ವೃತ್ತ ನಿರೀಕ್ಷಕರ ಕಚೇರಿಯು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ರವಾನಿಸಿತ್ತು. ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸುವುದು ಕರ್ನಾಟಕ ನಾಗರಿಕ ಸೇವಾ ನಡತೆ(ವರ್ತನೆ)ನಿಯಮಗಳ ಉಲ್ಲಂಘನೆಯಾಗಿದ್ದು, ಕ್ರಿಮಿನಲ್ ಮೊಕದ್ದಮೆ ಆಗಿರುತ್ತದೆ ಎಂದು ನಿರ್ದೇಶಕರು ತೀರ್ಮಾನಿಸಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್. ಇಂದೂಧರ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿದ್ದರು. ಬದ್ರುದ್ದೀನ್ ಷರೀಫ್ ಅವರ ವಿರುದ್ಧದ ಆರೋಪ ಋಜುವಾತಾಗಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳಲು ನ್ಯಾ. ಇಂದೂಧರ ಶಿಫಾರಸು ಮಾಡಿದ್ದರು. ಆರೋಪಕ್ಕೆ ಷರೀಫ್ ನೀಡಿದ ಸಮಜಾಯಿಷಿಯನ್ನು ನಿರ್ದೇಶಕರು ಒಪ್ಪಲಿಲ್ಲ. ವರದಕ್ಷಿಣೆ ಕಿರುಕುಳ ಕ್ರಿಮಿನಲ್ ಆರೋಪವಾಗಿದೆಯೆಂದು ಷರೀಫ್‌ರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.

Write A Comment