ಕರ್ನಾಟಕ

ಅರ್ಕಾವತಿ ತನಿಖೆಯಾದರೆ ಬಿಎಸ್‌ವೈ ಸಿಕ್ಕಿ ಬೀಳುತ್ತಾರೆ: ಮಾಜಿ ಸಿಎಂ ವಿರುದ್ಧ ಹಾಲಿ ಸಿಎಂ ಗುಡುಗು

Pinterest LinkedIn Tumblr

siddu

ಮೈಸೂರು/ಬೀದರ್/ಗದಗ/ಕಾರವಾರ: ಬೆಂಗಳೂರಿನ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಸಿಕ್ಕಿ ಬೀಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿ ಬಡಾವಣೆಯ 610 ಎಕರೆ ಭೂಮಿಯನ್ನು ಯಾವುದೇ ಶಿಫಾರಸು ಇಲ್ಲದೇ ಡಿನೋಟಿಫೈ ಮಾಡಿದ್ದಾರೆ. ಲೋಕಾಯುಕ್ತ ತನಿಖಾ ವರದಿ ಹಾಗೂ ಮಹಾಲೇಖಪಾಲರ ವರದಿಯಲ್ಲೂ ಇದು ಉಲ್ಲೇಖವಾಗಿದೆ. ಇಡೀ ಪ್ರಕರಣದ ಕುರಿತು ಸಮಗ್ರ ತನಿಖೆಯಾದರೆ, ಮೊದಲು ಸಿಕ್ಕಿಬೀಳುವುದೇ ಯಡಿಯೂರಪ್ಪ,” ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ಶನಿವಾರ ಹೇಳಿದರು.

”ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಗುಂಟೆ ಜಮೀನನ್ನೂ ಡಿನೋಟಿಫೈ ಮಾಡಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಡಿ ವಿ ಸದಾನಂದಗೌಡರ ಕಾಲದಲ್ಲಿಯೇ ಅಕ್ರಮ ಡಿನೋಟಿಫಿಕೇಷನ್ ಮಾಡಲಾಗಿದೆ,” ಎಂದು ಆರೋಪಿಸಿದರು.

”ಈ ವಿಚಾರ ಮುಂದಿಟ್ಟು ಬಿಜೆಪಿ ರಾಜಕಾರಣ ಮಾಡಲು ಹೊರಟಿದೆ. ರಾಜ್ಯಪಾಲರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳದೆ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಸಿಎಂ ತಿಳಿಸಿದರು.

ಸಿಎಂ ರಾಜೀನಾಮೆ ಖಚಿತ: ಈಶ್ವರಪ್ಪ
”ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಸಂಗ ಬರುತ್ತದೆ,” ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಬೀದರ್‌ನಲ್ಲಿ ಭವಿಷ್ಯ ನುಡಿದರು. ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಈಶ್ವರಪ್ಪ ಅವರು ಸುದ್ದಿಗಾರರ ಜತೆ ಮಾತನಾಡಿ, ”ಸಂತೋಷ್ ಲಾಡ್ ತಪ್ಪೇ ಮಾಡಿಲ್ಲ ಎಂದಿದ್ದ ಸಿಎಂ, ಅವರ ರಾಜೀನಾಮೆ ಪಡೆದಿದ್ದು ಯಾಕೆ? ಸಿಎಂ ಸೇರಿದಂತೆ ಮೂವರು ಸಚಿವರು ರಾಜೀನಾಮೆ ಕೊಡುವ ದಿನಗಳು ದೂರವಿಲ್ಲ,” ಎಂದರು.

”ಸಚಿವರಾದ ದಿನೇಶ್ ಗುಂಡೂರಾವ್ (ಭೂ ಒತ್ತುವರಿ ಆರೋಪ), ಮಹದೇವ್ ಪ್ರಸಾದ್ (ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಆಪಾದನೆ) ಹಾಗೂ ಖಮರುಲ್ ಇಸ್ಲಾಂ (ಭ್ರಷ್ಟಾಚಾರದ ಆರೋಪ) ಕುರಿತು ದಾಖಲೆಗಳನ್ನು ನೀಡಿದ ಮೇಲೂ, ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ,” ಎಂದು ದೂರಿದರು.

ಹೋರಾಟಕ್ಕೆ ಸಿದ್ಧತೆ ಅಂತಿಮ ಘಟ್ಟದಲ್ಲಿ: ಶೆಟ್ಟರ್
”ಅರ್ಕಾವತಿ ಡಿನೋಟಿಫಿಕೇಶನ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಮ್ಮ ಪಕ್ಷದಿಂದ ಕಾನೂನು ಹೋರಾಟ ಕೈಗೆತ್ತಿಕೊಳ್ಳುವ ಸಿದ್ಧತೆಗಳು ಅಂತಿಮ ಘಟ್ಟದಲ್ಲಿವೆ,” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು. ಗದಗಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ”ಅರ್ಕಾವತಿ ಬಡಾವಣೆಯಲ್ಲಿ 707 ಎಕರೆ ಜಮೀನನ್ನುಡಿನೋಟಿಫಿಕೇಶನ್ ಮಾಡಲು ಮುಖ್ಯಮಂತ್ರಿಗಳು ಕಾನೂನು ಸಲಹೆ ಪಡೆದಿಲ್ಲ. ಅವರು ಕಾನೂನು ರೀತಿ ಡಿನೋಟಿಫಿಕೇಶನ್ ಮಾಡಿದ್ದರೆ ದಾಖಲೆ ಸಮೇತ ಉತ್ತರಿಸಬೇಕು. ಹೈಕೋರ್ಟ್ ನಿರ್ದೇಶನ ನೀಡಿದ ಆರು ಮಾರ್ಗಸೂಚಿಗಳನ್ನು ಮೀರಿ ಅವರು ಡಿನೋಟಿಫಿಕೇಶನ್ ಮಾಡಿದ್ದಾರೆ,” ಎಂದು ಆರೋಪಿಸಿದರು.

ನ್ಯಾಯಾಲಯಕ್ಕೆ ಮೊರೆ: ಜೋಶಿ
”ಅರ್ಕಾವತಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧ ವಾರದೊಳಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗುವುದು,” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಕಾರವಾರದಲ್ಲಿ ತಿಳಿಸಿದರು.

ಕಾಲ ಬಂದಾಗ ಮಾತು
”ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಜೆಡಿಎಸ್ ಮೌನ ವಹಿಸಿಲ್ಲ. ಸಮಯ ಬಂದಾಗ ಈ ಕುರಿತು ಮಾತನಾಡುತ್ತೇನೆ,” ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. ”ಈ ದೇವೇಗೌಡ ಸಮಯಪ್ರಜ್ಞೆ ಇರುವ ವ್ಯಕ್ತಿ. ಸೂಕ್ತ ಸಮಯದಲ್ಲಿ ಈ ಕುರಿತು ಮಾತನಾಡಿ ವಿವರ ನೀಡುತ್ತೇನೆ,” ಎಂದು ಮೈಸೂರಿನಲ್ಲಿ ಹೇಳಿದ್ದಾರೆ.

Write A Comment