ಕರ್ನಾಟಕ

ಸಾಹಿತ್ಯದಲ್ಲೂ ಹೊಲಗೇರಿ, ಮಾದಿಗರ ಕೇರಿ ಬಾರದಿರಲಿ: ಪ್ರೊ.ಅರವಿಂದ ಮಾಲಗತ್ತಿ

Pinterest LinkedIn Tumblr

aravi

ಧಾರವಾಡ: ‘ಸಮಾಜದಲ್ಲಂತೂ ಹೊಲಗೇರಿ, ಮಾದಿಗರ ಕೇರಿ ಇದೆ. ಸಾಹಿತ್ಯದಲ್ಲಿ ಇದು ಬಾರದೇ ಇರಲಿ.’ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅವರ ಆಶಯ ಇದು. ಇದಕ್ಕೆ ವೇದಿಕೆಯಾಗಿದ್ದು ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಶನಿವಾರ ನಡೆದ ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ, ಮಹಿಳಾ, ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ?’ ಎಂಬ ಗೋಷ್ಠಿ.

ಟಿ.ಪಿ. ಅಶೋಕ ನಿರ್ದೇಶನದಲ್ಲಿ ನಡೆದ ಚರ್ಚೆಯಲ್ಲಿ ಅರವಿಂದ ಮಾಲಗತ್ತಿ, ವೈದೇಹಿ, ಅಬ್ದುಲ್‌ ರಷೀದ್‌ ಮತ್ತು ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಹಲವರು ಭಾಗಿಯಾಗಿ ಉದ್ವೇಗದ ಹರಿದಾಟಕ್ಕೂ ಕಾರಣರಾದರು.

ಲೇಖಕ ಅಬ್ದುಲ್‌ ರಷೀದ್, ‘ನಾನೊಬ್ಬ ಲೇಖಕ ಎಂದು ನನ್ನನ್ನು ಇಲ್ಲಿಗೆ ಕರೆದಿದ್ದರೆ ಓಕೆ. ನಾನು ಮುಸ್ಲಿಂ ಎಂಬ ಕಾರಣಕ್ಕೆ, ನನ್ನನ್ನು ಇಲ್ಲಿಗೆ ಕರೆದಿದ್ದರೆ ಅದು ನನಗೆ ಮತ್ತು ನನ್ನ ಸಮುದಾಯಕ್ಕೆ ಮಾಡಿದ ಅಪಮಾನ’ ಎಂದು ಹೇಳಿದ್ದರಿಂದ ಚರ್ಚೆಯ ಬಿಸಿ ಏರಿತು. ಕನ್ನಡದಲ್ಲಿ ಮಾತ್ರ ಇಂತಹ ವರ್ಗೀಕರಣ ಇದೆ. ಇದೆಲ್ಲ ನಗೆಪಾಟಲು, ತಮಾಷೆ ಎನಿಸುತ್ತದೆ. ಇಂತಹ ಸಂಕುಚಿತ ವರ್ಗೀಕರಣ ಸರಿಯಲ್ಲ ಎಂದು ಖಚಿತವಾಗಿ ಹೇಳಿದರು.

ಇದಕ್ಕೆ ಮಾಲಗತ್ತಿ ತುಸು ಆವೇಶದಿಂದಲೇ ಉತ್ತರಿಸಿ, ‘ಚರಿತ್ರೆಯಲ್ಲಾದ ಅಪರಾಧಗಳ ಪ್ರತ್ಯುತ್ಪನ್ನವೇ ಈ ಚಳವಳಿ. ದಲಿತರ ನೋವಿನ ಶಾಖ ಅವರನ್ನು (ರಷೀದ್‌) ತಲುಪಿಲ್ಲ. ಅದಕ್ಕೇ ಇದು ನಗೆಪಾಟಲು ಎನಿಸುವುದು. ಆದರೆ ನಗೆಪಾಟ­ಲಿನ ಸಂಗತಿ ಎಲ್ಲ ಸಂದರ್ಭಕ್ಕೂ ಸರಿ ಎನ್ನಲಾಗದು’ ಎಂದರು.

ಅಷ್ಟರಲ್ಲಿ ರಷೀದ್‌, ‘ನಾನು ವರ್ಗೀಕರಣದ ಬಗ್ಗೆ ಮಾತಾಡಿದೆ. ಸಂವೇದನೆಯ ಕುರಿತಂತೆ ಅಲ್ಲ’ ಎಂದು ಸ್ಪಷ್ಟಪಡಿಸಿದರು. ‘ಈ ವರ್ಗೀಕರಣದಿಂದಾಗಿ ಸಾಕಷ್ಟು ಅವಮಾನ ಎದುರಿಸಿದ್ದೇನೆ’ ಎಂದು ಹೇಳಿಕೊಂಡರು.

ಸಭಿಕರ ಕಡೆಯಿಂದ ವಿಮರ್ಶಕ ಸಿ.ಎನ್‌. ರಾಮಚಂದ್ರನ್, ‘ವರ್ಗೀಕರಣವಿಲ್ಲದೆ ಯಾವ ಕೆಲಸವೂ ಆಗದು. ಅದು ಮೀಸಲಾತಿ ಅಲ್ಲ, ನಾಚಿಕೆಗೇಡೂ ಅಲ್ಲ, ತಮಾಷೆಯಂತೂ ಖಂಡಿತ ಅಲ್ಲ. ವಿಮರ್ಶೆಗೆ, ತೌಲನಿಕ ಅಧ್ಯಯನಕ್ಕೆ ಇದು ಬೇಕೇ ಬೇಕು’ ಎಂದರು.

ವರ್ಗೀಕರಣ ಬೇಕೇ, ಬೇಡವೇ ಎನ್ನುವುದು ಕಡೆಗೂ ಬಗೆಹರಿಯಲಿಲ್ಲ. ಪುರುಷರಲ್ಲಿ ಸ್ತ್ರೀ ಪ್ರಜ್ಞೆ, ಮಹಿಳೆಯರಲ್ಲಿ ಪುರುಷ ಪ್ರಜ್ಞೆ ಇರಲಿ. ಎಲ್ಲರೂ ಮನುಷ್ಯ ಸಂವೇದನೆಗೆ ಮಿಡಿದರೆ ಅವನು ಪರಿಪೂರ್ಣ ಮನುಷ್ಯ ಎಂದು ವೈದೇಹಿ, ರಷೀದ್‌ ಹೇಳಿದರು. ವರ್ಗೀಕರಣದ ನಡುವೆಯೂ ತಟಸ್ಥ­ವಾಗಿ ಬರೆಯುವ ಸಾಹಿತಿಯನ್ನು ಗುರುತಿಸಬೇಕು ಎನ್ನುವ ರಷೀದ್‌ ಮಾತಿಗೆ ಮಾಲಗತ್ತಿ ಸಹಮತ ವ್ಯಕ್ತಪಡಿಸಿದರು.

* * *
ಪುರುಷ ಪಾತ್ರ ಪುರುಷರೇ ಮಾಡಬೇಕು, ಸ್ತ್ರೀ ಪಾತ್ರ ಸ್ತ್ರೀಯರೇ ಮಾಡಬೇಕು ಅಂದ್ರೆ, ರಾಕ್ಷಸ ಪಾತ್ರಕ್ಕೆ ರಾಕ್ಷಸನನ್ನೇ ಕರ್ಕೊಂಬರೋದಾ ಎಂದು ಬಿ.ವಿ.ಕಾರಂತರು ಕೇಳುತ್ತಿದ್ದರು.
–ವೈದೇಹಿ

* * *
ದಲಿತ ಸಂವೇದನೆಯಿಂದ ಯಾರೇ ಸಾಹಿತ್ಯ ರಚಿಸಿ­ದರೂ ಅದು ದಲಿತ ಸಾಹಿತ್ಯ
–ಅರವಿಂದ ಮಾಲಗತ್ತಿ

* * *
ಮಹಿಳೆಯರ ಜೈವಿಕ ರಚನೆ ಬೇರೆ. ಹಾಗಾಗಿ ಅವರ ಸಂವೇದನೆಯಲ್ಲೂ ವ್ಯತ್ಯಾಸ ಸಹಜ
– ಟಿ.ಪಿ. ಅಶೋಕ

Write A Comment