ರಾಷ್ಟ್ರೀಯ

ಅನಿವಾಸಿಗಳಿಗಿರುವ ಮತಹಕ್ಕು ಭಾರತದಲ್ಲಿ ವಲಸೆಯವರಿಗಿಲ್ಲ!

Pinterest LinkedIn Tumblr

ಭಾರತದಲ್ಲಿ ವಲಸೆ ಜನರ ಪ್ರಮಾಣ ಅನಿವಾಸಿ ಭಾರತೀಯರಿಗಿಂತ 40 ಪಟ್ಟು ಹೆಚ್ಚು. ಆದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾಯಿಸಲು ಬಹುತೇಕ ವಲಸೆ ಜನರಿಗೆ ಸಾಧ್ಯವಾಗುತ್ತಿಲ್ಲ

-ಮೃದುಲಾ ಚಾರಿ
immi

ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಕಳೆದ ಸೋಮವಾರ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಇವರು ಮತ ಚಲಾಯಿಸಲು ತಮ್ಮ ಕ್ಷೇತ್ರಗಳಿಗೆ ತೆರಳುವುದು ಕಡ್ಡಾಯವಲ್ಲ. ಚುನಾವಣಾ ಪ್ರಕ್ರಿಯೆ ಆರಂಭವಾದ ಎಂಟು ವಾರದ ಒಳಗೆ ಇ-ವೋಟಿಂಗ್ ಮೂಲಕ ತಮ್ಮ ಹಕ್ಕು ಚಲಾಯಿಸಲು ಅವಕಾಶವಿರಬೇಕು ಎಂದು ಸ್ಪಷ್ಟಪಡಿಸಿದೆ. ಆದರೆ ದೇಶದ ಒಳಗೇ ಇರುವ ಲಕ್ಷಗಟ್ಟಲೆ ವಲಸೆ ಕಾರ್ಮಿಕರಿಗೆ ಇಂಥ ಯಾವ ಹಕ್ಕೂ ಇಲ್ಲ; ಅನಿವಾರ್ಯವಾಗಿ ಅವರು ಚುನಾವಣಾ ಪ್ರಕ್ರಿಯೆಯಿಂದ ಹೊರಗೆ ಉಳಿಯಲೇಬೇಕಾಗಿದೆ.

ವಿವಿಧ ಕಾರಣಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋದ ಜನ ಸ್ವಕ್ಷೇತ್ರಗಳಿಗೆ ತೆರಳದೇ ಮತದಾನ ಮಾಡುವ ಆಯ್ಕೆ ಇಲ್ಲ. ಪ್ರಯಾಣವೆಚ್ಚದ ಕಾರಣವಾಗಿಯೇ ಬಹುತೇಕ ವಲಸೆ ಮಂದಿ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದುಬಿಡುತ್ತಾರೆ. ಆದರೆ ಆಂತರಿಕ ವಲಸೆ ಜನರಿಗೆ ಮತದಾನದ ಹಕ್ಕು ನೀಡುವ ಅಧಿಕಾರದ ಬಗೆಗಿನ ಚರ್ಚೆ ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲಿಲ್ಲ ಎನ್ನುವುದು ವಾಸ್ತವ. ಕಳೆದ ವರ್ಷದ ನವೆಂಬರ್ 14ರಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಎನ್‌ಆರ್‌ಐ ಮತಹಕ್ಕಿನ ಬಗ್ಗೆ ಮಾಹಿತಿ ಕೇಳಿತ್ತು. ಅನಿವಾಸಿ ಭಾರತೀಯರಿಗೆ ಪರೋಕ್ಷ ಮತದಾನ ಅಂದರೆ ಇ-ವೋಟಿಂಗ್ ಮೂಲಕ ಮತದಾನಕ್ಕೆ ಅವಕಾಶ ನೀಡುವ ಸಂಬಂಧ ಚುನಾವಣಾ ಆಯೋಗ ಸಲ್ಲಿಸಿದ ಪ್ರಸ್ತಾವಕ್ಕೆ ಸರಕಾರ ತಾಂತ್ರಿಕವಾಗಿ ಸಿದ್ಧವಿದೆಯೇ ಎಂದು ಕೇಳಿತ್ತು. ಈ ಶಿಫಾರಸ್ಸನ್ನು ಒಪ್ಪಿಕೊಂಡಿರುವುದಾಗಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಹೇಳಿದೆ. ಈ ಯೋಜನೆಯ ಅನ್ವಯ ಅನಿವಾಸಿ ಭಾರತೀಯರಿಗೆ ಖಾಲಿ ಅಂಚೆ ಮತಪತ್ರವನ್ನು ಎಲೆಕ್ಟ್ರಾನಿಕ್ ವಿಧಾನದಲ್ಲಿ ಕಳುಹಿಸಲಾಗುತ್ತದೆ. ಅವರು ತಮ್ಮ ಹಕ್ಕು ಚಲಾಯಿಸಿ, ಆಯಾ ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಬೇಕು.

ಕಾಯ್ದೆ ತಿದ್ದುಪಡಿ
ಭಾರತೀಯ ಪಾಸ್‌ಪೋರ್ಟ್ ಹೊಂದಿರುವ, ಅನಿವಾಸಿ ಭಾರತೀಯರು ಮತದಾನದ ಹಕ್ಕು ಪಡೆಯಲು ಅನುಕೂಲವಾಗುವಂತೆ ಕೇಂದ್ರ ಸರಕಾರ 2010ರಲ್ಲಿ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. 2011ರಲ್ಲಿ ಸರಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿ, ವಿದೇಶದಲ್ಲಿರುವ ಭಾರತೀಯರು, ತಮ್ಮ ಮೂಲಮನೆ ಇರುವ ಕ್ಷೇತ್ರದ ಮತಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಅರ್ಜಿ ಸಲ್ಲಿಸುವಂತೆ ಸೂಚಿಸಿತು. ಆದರೆ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು ಮತದಾನಕ್ಕೆ ಸ್ವಕ್ಷೇತ್ರಗಳಿಗೆ ಬರಬೇಕಿತ್ತು. ಈ ಕಾರಣದಿಂದ 2013ರ ಅಂತ್ಯದ ವರೆಗೆ ಕೇವಲ 11,328 ಮಂದಿ ಮಾತ್ರ ಹೆಸರು ನೋಂದಾಯಿಸಿದ್ದರು. ಚುನಾವಣಾ ಆಯೋಗದ ಹೊಸ ಪ್ರಸ್ತಾವದಿಂದಾಗಿ ಸುಮಾರು ಒಂದು ಕೋಟಿಯಷ್ಟಿರುವ ಅನಿವಾಸಿ ಭಾರತೀಯರು ತಮ್ಮ ಹಕ್ಕನ್ನು ಸುಲಭವಾಗಿ ಚಲಾಯಿಸಲು ಅನುಕೂಲವಾಗಲಿದೆ.
ಆದರೆ ದೇಶದಲ್ಲಿ ಸುಮಾರು 40 ಕೋಟಿಯಷ್ಟಿರುವ ಆಂತರಿಕ ವಲಸೆ ಜನರ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಇವರು ತಮ್ಮ ತಾತ್ಕಾಲಿಕ ನಿವಾಸಗಳನ್ನು ಹೊಂದಿರುವ ಅಥವಾ ಕೆಲಸ ಮಾಡುವ ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಅವಕಾಶವಿಲ್ಲ. ಅನಿವಾಸಿ ಭಾರತೀಯರಿಗೆ ಮತದಾನ ಸೌಲಭ್ಯ ಕಲ್ಪಿಸುವ ಸರಕಾರ, ಆಂತರಿಕ ವಲಸೆ ಜನರನ್ನೂ ಕಡೆಗಣಿಸುವಂತಿಲ್ಲ. ಈ ವಿಚಾರದಲ್ಲಿ ಸರಕಾರದ ನಿರ್ಧಾರದಲ್ಲಿ ಸ್ಪಷ್ಟತೆ ಅಗತ್ಯ ಎಂದು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ನ ಪ್ರೊಫೆಸರ್ ಶರಿತ್ ಭೌಮಿಕ್ ಅಭಿಪ್ರಾಯಪಡುತ್ತಾರೆ. ವಲಸೆ ಜನ ಭಾರತೀಯ ಪ್ರಜೆಗಳಾಗಿದ್ದರೆ, ಅವರಿಗೂ ಮತದಾನದ ಅವಕಾಶ ಕಲ್ಪಿಸಬೇಕು ಎನ್ನುವುದು ಅವರ ವಾದ.

ಅವಗುಣಗಳೇ ಅಧಿಕ
ಆಂತರಿಕ ವಲಸೆ ಜನ ಸಾಮಾನ್ಯವಾಗಿ ಸರಕಾರದ ಸಾಮಾಜಿಕ ಮತ್ತು ರಾಚನಿಕ ಚೌಕಟ್ಟಿನಿಂದ ದೂರ ಉಳಿದಿರುತ್ತಾರೆ. ಅವರು ತಮ್ಮ ಮನೆಯಲ್ಲಾಗಲೀ ಅಥವಾ ತಾತ್ಕಾಲಿಕ ವಸತಿ ಪ್ರದೇಶಗಳಲ್ಲಾಗಲೀ, ಸಾಮಾಜಿಕ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯುತ್ತಿಲ್ಲ. ಬಹುತೇಕ ಎಲ್ಲರೂ ಗುತ್ತಿಗೆ ಕಾರ್ಮಿಕರಾಗಿದ್ದು, ಅವರಿಗೆ ಕೆಲಸದ ಭದ್ರತೆಯೂ ಇಲ್ಲ; ಅವರು ಮತದಾನವನ್ನೂ ಮಾಡುತ್ತಿಲ್ಲ.
ಆಂತರಿಕ ವಲಸೆ ಜನ ನಿರ್ಲಕ್ಷಿತ ಸಮುದಾಯ ಎನ್ನುತ್ತಾರೆ ಸೊಸೈಟಿ ಫಾರ್ ಲೇಬರ್ ಡೆವಲಪ್‌ಮೆಂಟ್ ಸಂಸ್ಥೆಯ ಸಂಯೋಜಕ ಪರಿಮಾಳ್ ಸುಧಾಕರ್. ಅವರು ಮತದಾನಕ್ಕಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ಅವರ ಮೂಲ ಜಾಗದ ಪ್ರತಿನಿಧಿಗಳು ಇವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರಿಗೆ ಮತದಾನದ ಹಕ್ಕು ಇಲ್ಲ ಎಂಬ ಕಾರಣಕ್ಕಾಗಿ ಅವರು ಹಾಲಿ ಇರುವ ಜಾಗದ ಪ್ರತಿನಿಧಿಗಳು ಕೂಡಾ ಇವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆಂದು ಅವರಲ್ಲಿ ಅಗತ್ಯ ದಾಖಲೆಗಳು ಇಲ್ಲವೆಂದಲ್ಲ. ವಲಸೆ ಕಾರ್ಮಿಕರ ಪೈಕಿ ಶೇಕಡ 65ರಿಂದ 70 ಮಂದಿಗೆ ಮತದಾರರ ಗುರುತಿನ ಚೀಟಿ ಇರುತ್ತದೆ. ಅವರ ಕುಟುಂಬಗಳು ಮೂಲ ಹಳ್ಳಿಯಲ್ಲಿರುವುದರಿಂದ ಅವರಿಗೆ ಪಡಿತರ ಚೀಟಿ ಹಳ್ಳಿಯಲ್ಲೇ ಇರುತ್ತದೆ. ಆದ ಕಾರಣ ಗುರುತಿನ ಚೀಟಿಯಾಗಿ ಇವರು ಮತದಾರರ ಚೀಟಿಯನ್ನು ಇಟ್ಟುಕೊಂಡಿರುತ್ತಾರೆ ಎಂದು ಸುಧಾಕರ್ ವಿಶ್ಲೇಷಿಸುತ್ತಾರೆ.
ಆದರೆ ಬಹುತೇಕ ವಲಸೆ ಕಾರ್ಮಿಕರು ತಮ್ಮ ಮತದಾರರ ಗುರುತಿನ ಪತ್ರವನ್ನು ಮೂಲ ವಿಳಾಸದಲ್ಲೇ ಮಾಡಿಸಿಕೊಂಡಿರುತ್ತಾರೆ. ಕೆಲಸದ ಅಭದ್ರತೆಯ ಕಾರಣದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಬೇಕಾದೀತು ಎಂಬ ಕಾರಣ ಒಂದಾದರೆ, ಅವರು ಮೂಲ ಹಳ್ಳಿಯಲ್ಲಿ ಜಾಗವನ್ನು ಹೊಂದಿದ್ದಾರೆ ಎನ್ನುವುದು ಇನ್ನೊಂದು.
ಆಂತರಿಕ ವಲಸೆ ಕಾರ್ಮಿಕರ ಸಮಸ್ಯೆ ಹಾಗಿರಲಿ; ಮತದಾನದ ದಿನ ಬಿಡುವಿಲ್ಲದ ಕೆಲಸ ಹೊಂದಿರುವ ಚುನಾವಣಾ ಸಿಬ್ಬಂದಿ ಮತ್ತು ಚುನಾವಣಾ ಕಾರ್ಯಕ್ಕೆ ನಿಯುಕ್ತರಾದ ಪೊಲೀಸರ ಪಾಡೇನು? ಎಂದು ಭೌಮಿಕ್ ಪ್ರಶ್ನಿಸುತ್ತಾರೆ. ಇವರ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಆದರೆ ಅನಿವಾಸಿ ಭಾರತೀಯರು ತಕ್ಷಣ ನಮ್ಮ ನೆನಪಿಗೆ ಬರುತ್ತಾರೆ ಎಂದು ಹೇಳುತ್ತಾರೆ.

ಮೆಡಿಸನ್ ಸ್ಕಾರ್ ಗಾರ್ಡನ್ ಮತ
ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರ ಮತದಾನ ಪ್ರಕ್ರಿಯೆಯನ್ನು ಸುಲಭ ಮಾಡುವ ಚುನಾವಣಾ ಆಯೋಗದ ಕ್ರಮದ ಹೊರತಾಗಿಯೂ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಖ್ಯೆಯಲ್ಲಿ ಭಾರೀ ಬದಲಾವಣೆಯನ್ನೇನೂ ನಿರೀಕ್ಷಿಸುವಂತಿಲ್ಲ. ಏಕೆಂದರೆ ಹೆಚ್ಚಿನ ಸಂಖ್ಯೆಯ ಅನಿವಾಸಿ ಭಾರತೀಯರು ಇರುವುದು ಗಲ್ಫ್ ರಾಷ್ಟ್ರಗಳಲ್ಲಿ. ಮನೆಗೆಲಸ, ಚಾಲಕ ವೃತ್ತಿ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರೇ ಅಧಿಕ. ಇವರಲ್ಲಿ ಬಹುತೇಕ ಮಂದಿ ತಮ್ಮ ಭಾರತೀಯ ಪೌರತ್ವವನ್ನು ನಿರೂಪಿಸುವುದು ಕಷ್ಟ. ಏಕೆಂದರೆ ಗಲ್ಫ್‌ದೇಶಗಳಲ್ಲಿ ಬಹುತೇಕ ಉದ್ಯೋಗದಾತರು ಇವರ ಪಾಸ್‌ಪೋರ್ಟ್ ಗಳನ್ನು ಕೆಲಸಕ್ಕೆ ಸೇರುವ ವೇಳೆಯೇ ವಶಕ್ಕೆ ಪಡೆದಿರುತ್ತಾರೆ. ಪಾಸ್‌ಪೋರ್ಟ್ ನಮ್ಮಲ್ಲಿದ್ದರೆ ಸುರಕ್ಷಿತ ಎಂಬ ಕಾರಣ ನೀಡಿ ಪಾಸ್‌ಪೋರ್ಟ್ ಪಡೆದಿರುತ್ತಾರೆ ಎಂದು ಭೌಮಿಕ್ ಹೇಳುತ್ತಾರೆ.
ಅಂತಿಮವಾಗಿ ಮೆಡಿಸನ್ ಸ್ಕ್ವ್ಯಾರ್ ಗಾರ್ಡನ್‌ನಲ್ಲಿ ಸಮಾವೇಶಗೊಂಡ ಜನರಂಥವರು ಮಾತ್ರ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುತ್ತದೆ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

Write A Comment