ಕರ್ನಾಟಕ

ವಾಯುಪಡೆಗೆ ತೇಜಸ್ ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ಹಸ್ತಾಂತರ 32 ವರ್ಷಗಳಷ್ಟು ಹಿಂದಿನ ಕನಸು ಕೊನೆಗೂ ಸಾಕಾರ

Pinterest LinkedIn Tumblr

Tejas

ಬೆಂಗಳೂರು, ಜ.17: ದೇಶೀಯವಾಗಿ ನಿರ್ಮಿಸಲಾಗಿರುವ ‘ತೇಜಸ್’ ಲಘು ಯುದ್ಧ ವಿಮಾನವನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಚ್ೀ ಮಾರ್ಷಲ್ ಅನುಪ್ ರಾಹಾ ಅವರಿಗೆ ಶನಿವಾರ ಹಸ್ತಾಂತರಿಸಲಾಯಿತು.

ಇಲ್ಲಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಆವರಣದಲ್ಲಿ ನಡೆದ ಸರಳ ಸಮಾರಂಭದಿಂದ ಪತ್ರಕರ್ತರು, ಛಾಯಾಗ್ರಾಹಕರನ್ನು ಹೊರಗಿಡಲಾಗಿತ್ತು. ಸದ್ದುಗದ್ದಲವಿಲ್ಲದೆ ವಿಮಾನದ ಹಸ್ತಾಂತರ ಸಮಾರಂಭ ನಡೆದಿದ್ದು ವಿಶೇಷವಾಗಿತ್ತು.

‘ತೇಜಸ್’ ಸರಣಿಯ ಮೊದಲ ವಿಮಾನ (ಎಲ್‌ಸಿಎ-ಎಸ್‌ಪಿ1) ಇದಾಗಿದೆ. ಸುಮಾರು 32 ವರ್ಷಗಳ ಹಿಂದಿನ ಕೂಸು ಇದು. ಬಹಳ ದೀರ್ಘಾವಯ ಕಾಯುವಿಕೆಯ ನಂತರ ಭಾರತೀಯ ವಾಯುಪಡೆಯ ಬಳಕೆಗೆ ಕೊನೆಗೂ ಲಭ್ಯವಾಗಿದೆ. 2014, ಅಕ್ಟೋಬರ್ ಒಂದರಂದು ಏರ್ ಕೊಮೊಡೊರ್ (ನಿವೃತ್ತ) ಕೆ.ಎ.ಮುತ್ತಣ್ಣ ಅವರು ಮೊತ್ತಮೊದಲ ಬಾರಿಗೆ ಎಲ್‌ಸಿಎ-ಎಸ್‌ಪಿ1 ವಿಮಾನದ ಪರೀಕ್ಷಾ ಹಾರಾಟ ನಡೆಸಿದ್ದರು. ವಿಮಾನವು ಈಗ ಆರಂಭಿಕ ಹಾರಾಟದ ಒಪ್ಪಿಗೆ ಹಂತದಲ್ಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಅಂತಿಮ ಹಾರಾಟದ ಒಪ್ಪಿಗೆ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಈ ಆವೃತ್ತಿಯ ವಿಮಾನಗಳಲ್ಲಿ ಅತ್ಯಾಧುನಿಕವಾದ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳ ಸೌಲಭ್ಯವಿರುವುದಿಲ್ಲ. ಎರಡು ವಾರಗಳ ಹಿಂದೆಯಷ್ಟೇ ಒಂದು ಲಘು ವಿಮಾನಕ್ಕೆ ಈ ಸೌಲಭ್ಯಗಳನ್ನು ಜೋಡಿಸಲಾಗಿದೆ. ಆಕಾಶದಲ್ಲಿ ಹಾರಾಟ ನಡೆಸುತ್ತಿರುವಾಗಲೇ ಇಂಧನ ತುಂಬಿಸುವಿಕೆ, ದೀರ್ಘವ್ಯಾಪ್ತಿಯ ಕ್ಷಿಪಣಿಗಳ ಸಾಮರ್ಥ್ಯಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ವಿಮಾನಕ್ಕೆ ಅಂತಿಮ ಹಂತದ ಒಪ್ಪಿಗೆ ಲಭಿಸಿದ ನಂತರ ಜೋಡಿಸಲಾಗುವುದು.

‘ತೇಜಸ್’ ಲಘು ಯುದ್ಧ ವಿಮಾನ ಎರಡು ತಿಂಗಳ ಹಿಂದೆಯೇ ಸಿದ್ಧಗೊಂಡಿತ್ತು. 2015ರ ಮಾರ್ಚ್ ಹೊತ್ತಿಗೆ ಎಲ್‌ಸಿಎ ಭಾರತೀಯ ವಾಯುಪಡೆಗೆ ಲಭಿಸಲಿದೆ ಎಂದು ಪಾರಿಕ್ಕರ್ ಡಿಸೆಂಬರ್‌ನಲ್ಲಿ ಲೋಕಸಭೆಗೆ ತಿಳಿಸಿದ್ದರು.

ಆದರೆ ಮಾರ್ಚ್ ಹೊತ್ತಿಗೆ ಎಚ್‌ಎಎಲ್‌ನಲ್ಲಿ ಎರಡನೆ ವಿಮಾನವು ಸಿದ್ಧಗೊಳ್ಳುವ ಸಂಭವವಿದೆ. ‘ತೇಜಸ್’ ವಿಮಾನವನ್ನು ಐದು ಬಾರಿ ಪರೀಕ್ಷಾ ಹಾರಾಟ ನಡೆಸಿದ್ದು, ಬೇರೆಬೇರೆ ಉಪಕರಣಗಳ ಸಂರಚನಾ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ ಎಂದು ಎಚ್‌ಎಎಲ್ ಅಧ್ಯಕ್ಷ ಆರ್.ಕೆ.ತ್ಯಾಗಿ ತಿಳಿಸಿದ್ದಾರೆ. ‘ತೇಜಸ್’ ವಿಮಾನದ ಯೋಜನೆ ವಿಳಂಬಗೊಂಡಿದ್ದರಿಂದಾಗಿ ಒಂದೊಂದು ವಿಮಾನಕ್ಕೂ 160 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ವಿಮಾನಗಳ ಆರಂಭಿಕ ಅಂದಾಜು ವೆಚ್ಚ 120 ಕೋಟಿ ರೂಪಾಯಿಗಳಾಗಿತ್ತು. ಲಘು ಯುದ್ಧ ವಿಮಾನಕ್ಕಾಗಿ ಬಹಳ ದೀರ್ಘ ಸಮಯದಿಂದ ಕಾದಿದ್ದ ಭಾರತೀಯ ವಾಯುಪಡೆ, ಈ ಹಿಂದೆ ಕೆಲವೊಂದು ಆಕ್ಷೇಪಗಳನ್ನು ಸಲ್ಲಿಸಿತ್ತು. 2011, ಜನವರಿ 10ರಂದು ವಿಮಾನಕ್ಕೆ ಆರಂಭಿಕ ಒಪ್ಪಿಗೆ ಲಭಿಸಿದಾಗ ಅಂದಿನ ವಾಯುಪಡೆ ಮುಖ್ಯಸ್ಥ ಏರ್ ಚ್ೀ ಮಾರ್ಷಲ್ ಪಿ.ವಿ.ನಾಯ್ಕಿ ಅವರು, ಐಎಎ್ ಪೈಲಟ್‌ಗಳಿಗೆ ಈ ವಿಮಾನವಿನ್ನೂ ಸಿದ್ಧಗೊಂಡಿಲ್ಲ. ನಮ್ಮ ಹುಡುಗರಿಗೆ (ಪೈಲಟ್‌ಗಳು) ವಿಮಾನದ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದರು.

ತದನಂತರ, 2013ರ ಕೊನೆಯಲ್ಲಿ ಎಲ್‌ಸಿಎಗೆ ಎರಡನೆ ಆರಂಭಿಕ ಹಾರಾಟ ಒಪ್ಪಿಗೆ ಲಭಿಸಿತ್ತು. ಇದು ಬಹಳ ವಿಚಿತ್ರ ಸಂಗತಿ. ಸಾಮಾನ್ಯವಾಗಿ ಆರಂಭಿಕ ಹಾರಾಟ ಒಪ್ಪಿಗೆ ಲಭಿಸಿದ ನಂತರವೇ ಅಂತಿಮ ಹಾರಾಟ ಒಪ್ಪಿಗೆಗೆ ಪಡೆಯಲಾಗುತ್ತದೆ. ‘ತೇಜಸ್’ಗೆ ಇದು ಇನ್ನಷ್ಟೇ ಲಭಿಸಬೇಕಾಗಿದೆ. ಯುದ್ಧ ವಿಮಾನಗಳ ಕೊರತೆಯನ್ನು ಎದುರಿಸುತ್ತಿರುವ ವಾಯುಪಡೆ, ಈ ಹಂತದಲ್ಲೇ ಲಘು ಯುದ್ಧ ವಿಮಾನವನ್ನು ಪಡೆದುಕೊಳ್ಳುತ್ತಿದೆ. ಮೊದಲ ಹಂತದಲ್ಲಿ 20 ಎಲ್‌ಸಿಎಗಳಿಗೆ ಕೋರಿಕೆ ಸಲ್ಲಿಸಿದೆ. ಭವಿಷ್ಯದಲ್ಲಿ 80 ಎಲ್‌ಸಿಎಗಳನ್ನು ಹೊಂದಲು ಉದ್ದೇಶಿಸಿದೆ.

Write A Comment