ಕನ್ನಡ ವಾರ್ತೆಗಳು

ಮಡಾಮಕ್ಕಿ; ಸಿಪಿ‌ಐ ಮಾವೋವಾದಿ ಸಂಘಟನೆ ಹೆಸರಿನಲ್ಲಿ ಕೈ ಬರಹದ ಬ್ಯಾನರ್, ಕರಪತ್ರಗಳು,ಗೋಡೆ ಬರಹಗಳು ಪತ್ತೆ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ

Pinterest LinkedIn Tumblr

ಕುಂದಾಪುರ: ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಮನೆ ಗ್ರಾಮದ ಅರಸಮ್ಮಕಾನು ಪೇಟೆಯಲ್ಲಿ ಶುಕ್ರವಾರ ರಾತ್ರಿ ವೇಳೆ ಸಿಪಿ‌ಐ ಮಾವೋವಾದಿ ಪಕ್ಷದ ಹೆಸರಿನಲ್ಲಿ ಕೈ ಬರಹದ ಬ್ಯಾನರ್, ಕರಪತ್ರಗಳು,ಗೋಡೆ ಬರಹಗಳು ಶನಿವಾರ ಬೆಳಗ್ಗೆ ಕಂಡು ಬಂದಿದ್ದು ಸ್ಥಳೀಯರಲ್ಲಿ ಈ ಬಗ್ಗೆ ಆತಂಕ ಮೂಡಿದೆ.

Madamakki_Mavovadhi_Posters (2) Madamakki_Mavovadhi_Posters (3) Madamakki_Mavovadhi_Posters Madamakki_Mavovadhi_Posters (1)

ಅರಸಮ್ಮಕಾನು ಪೇಟೆಯಲ್ಲಿನ ಗ್ರಾಮ ಪಂಚಾಯಿತಿ ಪ್ರಯಾಣಿಕರ ತಂಗುದಾಣ, ಸೇರಿದಂತೆ ಸುತ್ತ ಮುತ್ತಲಿನ ಅಂಗಡಿಗಳ ಗೋಡೆಗಳ ಮೇಲೆ “ಕ್ರಾಂತಿ ಎಂದರೆ ಬಾಂಬು ಬಂದೂಕಿನ ಆರಾಧನೆಯಲ್ಲ, ದುಡಿಯುವ ಜನತೆಯ ಹಬ್ಬ_ ಭಗತ್‌ಸಿಂಗ್, ಮಹಿಳಾ ಶೋಷಣೆ ಇರುವ ದೇಶ ಸ್ವಂತತ್ರವಲ್ಲ,_ ಕ್ಲಾರಾಜೆಟ್ಕಿನ್, ಜನ ವಿರೋಧಿ ಕಸ್ತೂರಿ ರಂಗನ್ ವರದಿ ರದ್ದಾಗಲಿ, ಸಿ.ಪಿ.ಐ (ಮಾವೋವಾದಿ)ಜಿಂದಾಬಾದ್, (ಗೋಡೆ ಬರಹಗಳು), ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಒಗ್ಗೂಡೊಣ,ಜನವಿರೋಧಿ ಹುಲಿ ಯೋಜನೆಯನ್ನು ಹೋರಾಡಿ ರದ್ದುಗೊಳಿಸೋಣ, ಪುರುಷ ಪ್ರಧಾನ ಸಮಾಜದ ಕ್ರೂರ ಮಹಿಳಾ ಶೋಷಣೆಯ ವಿರುದ್ಧ ಸಂಘಟಿತರಾಗಿ ಹೋರಾಡೋಣ, ಪಶ್ಚಿಮ ಘಟ್ಟವನ್ನು ಸಾಮ್ರಾಜ್ಯಶಾಯಿ ಲೂಟಿಗೊಪ್ಪಿಸುವ ಎಲ್ಲಾ ಜನವಿರೋಧಿ ಯೋಜನೆಗಳನ್ನು ಸಂಘಟಿತರಾಗಿ ಹೋರಾಡಿ ರದ್ದುಗೊಳಿಸೋಣ ( ಸಿಪಿ‌ಐ ಮಾವೋವಾದಿ) ಸಂಘಟನೆ ಹೆಸರಿನಲ್ಲಿ ಗೋಡೆಗೆ ಅಂಟಿಸಿದ ಕರಪತ್ರಗಳು, ದೇಶಿ ವಿದೇಶೀ ಕಂಪೆನಿಗಳ ಹಿತ ಕಾಯುವ ಜನವಿರೋಧಿ ಹುಲಿ ಯೋಜನೆಯನ್ನು ಹಿಮ್ಮೆಟ್ಟಿಸೋಣ ! ಜನರ ಬದುಕಿನ ಉಳಿವಿಗಾಗಿ ರಾಜಕೀಯ ರಹಿತವಾಗಿ ಹೋರಾಡೋಣ, ಸಿಪಿ‌ಐ ಮಾವೋವಾದಿ ಪಕ್ಷದ ಹತ್ತನೇ ವಾರ್ಷಿಕೋತ್ಸವವನ್ನು ಎತ್ತಿ ಹಿಡಿಯೋಣ! ಪ್ರಜಾತಾಂತ್ರಿಕಾ ಭಾರತದ ನಿರ್ಮಾಣಕ್ಕಾಗಿ ಈ ಪಕ್ಷದ ನಾಯಕತ್ವದಲ್ಲಿ ಒಗ್ಗೂಡೋಣ ! ಎನ್ನುವ ಕೈ ಬರಹದ ಬಟ್ಟೆ ಬ್ಯಾನರ್‌ಗಳು ಅರಸಮ್ಮಕಾನು ಪೇಟೆಯಲ್ಲಿ ಶನಿವಾರ ಬೆಳಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ಸ್ಥಳೀಯರು ಅಮಾಸೆಬೈಲು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾನರ್ ಹಾಗೂ ಗೋಡೆಗೆ ಅಂಟಿಸಿದ ಕರಪತ್ರಗಳನ್ನು ತೆಗೆದು, ಗೋಡೆ ಬರಹಗಳನ್ನು ಅಳಿಸಿ ಆ ಭಾಗಗಳಿಗೆ ಬಣ್ಣ ಹಚ್ಚಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಭಾಗಗಳು ಕಸ್ತೂರಿರಂಗನ್ ವರದಿ ಜಾರಿ ಕುರಿತು ಇನ್ನಷ್ಟು ಭಯವನ್ನು ಸೃಷ್ಟಿಸಿದೆ. ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ಕರೆಲವು ದಿನಗಳ ಹಿಂದಷ್ಟೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಮನೆ, ಅರಸಮ್ಮಕಾನು ನಿಂದ ಭಾರೀ ಸಂಖ್ಯೆಯ ಸ್ಥಳೀಯರು ಪಾದಯಾತ್ರೆ ಮೂಲಕ ಮಾಂಡಿಮೂರುಕೈ ಎಂಬಲ್ಲಿ ಬೈಂದೂರು_ ವಿರಾಜಪೇಟೆ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ನಂತರದ ದಿನಗಳಲ್ಲಿ ಪುನಃ ಕಸ್ತೂರಿರಂಗನ್ ವರದಿ ಸಾಧಕ, ಭಾಧಕಗಳ ಕುರಿತು ಸಭೆಯಲ್ಲಿ ಸಾವಿರಾರೂ ಜನರು ಪಾಲ್ಗೊಂಡಿದ್ದರು. ಈ ಭಾಗದಲ್ಲಿ ಕಸ್ತೂರಿರಂಗನ್ ವರದಿಗೆ ಸ್ಥಳೀಯರಿಂದ ಭಾರೀ ವಿರೋಧವಿದೆ. ಅರಸಮ್ಮಕಾನು ಸಮೀಪದ ಬೆಪ್ಡೆ ಸಮೀಪದ ಬಸ್ಸು ತಂಗುದಾಣದಲ್ಲಿ ಕಳೆದು ಕೆಲವು ವರ್ಷಗಳ ಹಿಂದೆ ನಕ್ಸಲ್ ಸಂಘಟನೆ ಬರಹಗಳು ಸ್ಥಳೀಯರ ಅಂತಕಕ್ಕೆ ಎಡೆ ಮಾಡಿದ ಬಳಿಕ ಇದೀಗ ಈ ಭಾಗಗಳಲ್ಲಿ ಸಿಪಿ‌ಐ ಮಾವೋವಾದಿ ಸಂಘಟನೆ ಹೆಸರಿನಲ್ಲಿ ಕೈ ಬರಹದ ಬ್ಯಾನರ್, ಕರಪತ್ರಗಳು,ಗೋಡೆ ಬರಹಗಳು ಸ್ಥಳೀಯರಲ್ಲಿ ಇನ್ನಷ್ಟು ಅಂತಕಕ್ಕೆ ಕಾರಣವಾಗಿದೆ.

ತನಿಖೆ ನಡೆಸ್ತಿದ್ದೇವೆ: ಈ ಭಾಗದಲ್ಲಿ ನಕ್ಸಲ್ ಓಡಾಟದ ಹಾಗೂ ಚಟುವಟಿಕೆಯ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಆದರೇ ಈ ಘಟನೆಗೆ ಸಂಬಂಧಿಸಿದಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ತನಿಖೆ ನಡೆಸುತ್ತಿದ್ದೇವೆ ಎಂದು ಉಡುಪಿ ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.

Write A Comment