ಕರ್ನಾಟಕ

ರಾಯಚೂರು ವೈಟಿಪಿಎಸ್ ದುರಂತ: ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು

Pinterest LinkedIn Tumblr

pvec17115rc17ep

ರಾಯಚೂರು ಸಮೀಪ ವೈಟಿಪಿಎಸ್‌ನಲ್ಲಿ ಶುಕ್ರವಾರ ಕೆಲಸ ಮಾಡುವಾಗ ಮಣ್ಣು ಕುಸಿದು ಮೃತಪಟ್ಟ ಕಾರ್ಮಿಕರ ದೇಹಗಳನ್ನು ನೋಡಲು ನೂರಾರು ಕಾರ್ಮಿಕರು ಜಮಾಯಿಸಿರುವುದು ಪ್ರಜಾವಾಣಿ ಚಿತ್ರ/ಶ್ರೀನಿವಾಸ ಇನಾಂದಾರ

ರಾಯಚೂರು: ನಿರ್ಮಾಣ ಹಂತ ದಲ್ಲಿರುವ ಯರ­ಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್) ಮುಖ್ಯ ಘಟಕದಿಂದ ತಂಪು ಗೋಪುರಕ್ಕೆ 8 ರಿಂದ 10 ಅಡಿ ಆಳದಲ್ಲಿ ಅಳ ವಡಿಸಿದ ಬಿಸಿನೀರು ಪೂರೈಕೆ ಬೃಹತ್ ಕೊಳವೆ ಸುತ್ತ ಕಬ್ಬಿಣದ ಸರಳು ಕಟ್ಟುತ್ತಿ ರುವಾಗ ಮೇಲ್ಭಾಗದಿಂದ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮುಖಿಲೇಶ್‌ (25) ಮತ್ತು ಮತಿನ್( 53) ಮೃತಪಟ್ಟಿದ್ದು, ಇಬ್ಬರೂ ಪಶ್ಚಿಮ ಬಂಗಾಳ ರಾಜ್ಯ ದವರಾಗಿದ್ದಾರೆ. ಸಯ್ಯದ್ ಹುಸೇನ್ ನಜೀವುಲ್ಲಾ ಹಾಗೂ ಸಯ್ಯದ್ ಉಲ್ ಹಸನ್ ಅವರು ಗಾಯಗೊಂಡಿದ್ದು, ರಾಯ­ಚೂರು ವೈದ್ಯಕೀಯ ಕಾಲೇಜಿನ (ರಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಲು ತೂರಿದ ಕಾರ್ಮಿಕರು: ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊ­ಯ್ಯಲು ಬಂದ ಆಂಬುಲೆನ್ಸ್ ಮೇಲೆ ನೂರಾರು ಕಾರ್ಮಿಕರು ಮುಗಿಬಿದ್ದರು. ಅನೇಕರು ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಆದರೂ ಆಂಬುಲೆನ್ಸ್  ಸಿಬ್ಬಂದಿ ಪ್ರಾಣಭಯವನ್ನೂ ಲೆಕ್ಕಿಸದೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊ­ಯ್ದರು. ಈ ಸಂದರ್ಭದಲ್ಲಿ ಸುದ್ದಿ ವಾಹಿನಿಯ ಛಾಯಾಗ್ರಾಹಕನ ತಲೆಗೆ ಗಾಯವಾಗಿದೆ.

ಶುಕ್ರವಾರ ಬೆಳಿಗ್ಗೆ ನೆಲಮೈಯಲ್ಲಿ ಅಳವಡಿಸಿದ ಬಿಸಿನೀರು ಪೂರೈಕೆ ಕೊಳವೆಯ ಅಕ್ಕಪಕ್ಕ ಕಬ್ಬಿಣದ ಸರಳು ಕಟ್ಟುವ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದರು. ಒಂದು ಬದಿ ಮೇಲ್ಭಾಗದಿಂದ ಹಠಾತ್ ಮಣ್ಣು ಕುಸಿದಿದೆ. ಆರು ಮಂದಿ ಕಾರ್ಮಿಕರು ಆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಮಣ್ಣು ಕುಸಿಯುತ್ತಿರುವಾಗಲೇ ಇಬ್ಬರು ಕಾರ್ಮಿಕ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

‘ಜೆಸಿಬಿ ಯಂತ್ರಗಳ ಮೂಲಕ ಮಣ್ಣು ತೆರವು ಕಾರ್ಯಾಚರಣೆ ಮುಂದುವ­ರಿಸಲಾಗುವುದು. ನಂತರ ವಷ್ಟೇ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.

ಎಂಜಿನಿಯರ್ ಹೇಳಿಕೆ: ‘ವಿದ್ಯುತ್ ಉತ್ಪಾದನೆಯ ಮುಖ್ಯ ಘಟಕಗಳಲ್ಲಿ ಬಳಕೆ ಮಾಡಿದ  ನೀರು ಬಿಸಿಯಾಗಿರುತ್ತದೆ. ಆ ಬಿಸಿನೀರನ್ನು ತಂಪು ಗೋಪುರಕ್ಕೆ ಪೂರೈಸಲಾ­ಗುವುದು. ಅಲ್ಲಿ ಬೃಹತ್ ಫ್ಯಾನ್‌ಗಳಿಂದ ತಣ್ಣಗಾಗಿಸಿ ಮರು ಬಳಕೆ ಮಾಡಲಾ­ಗುತ್ತದೆ.
ವೈಟಿಪಿಎಸ್‌ನಲ್ಲಿ 800 ಮೆಗಾವಾಟ್‌ನ ಎರಡು ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಮುಖ್ಯ ಘಟಕದಿಂದ ತಂಪು ಗೋಪುರಕ್ಕೆ ಬಿಸಿನೀರು ಪೂರೈಕೆಗೆ 2.7 ಮೀಟರ್ ವ್ಯಾಸದ ಬೃಹತ್ ಕೊಳವೆಯನ್ನು ನೆಲಮೈಯಲ್ಲಿ ಅಳವಡಿಸಲಾಗುತ್ತಿದೆ. ಈ ಕೊಳವೆಯ ಅಕ್ಕಪಕ್ಕ ಕಬ್ಬಿಣದ ಸರಳುಗಳನ್ನು ಕಟ್ಟಿ ಬೆಸೆಯಲಾಗುತ್ತಿದೆ. ಇದು ಹೆಚ್ಚುವರಿ ಕಾಮಗಾರಿ ಯಾಗಿದ್ದು, 350 ಮೀಟರ್‌ ಉದ್ದ ಕೊಳವೆ ಅಳವಡಿಸಲಾಗುತ್ತಿದೆ’ ಎಂದು ವೈಟಿಪಿಎಸ್ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ಜಿ.ಸಿ.ಮಹೇಂದ್ರ ವಿವರಿಸಿದರು.

‘ಬಿಎಚ್‌ಇಎಲ್ ಪ್ರಧಾನ ಗುತ್ತಿಗೆ ಕಂಪೆನಿಯಾಗಿದ್ದು, ಪ್ರಸಾದ್ ಅಂಡ್ ಪವರ್ ಮ್ಯಾಕ್ ಉಪ ಗುತ್ತಿಗೆ ಕಂಪೆನಿ ಈ ಕಾಮಗಾರಿ ನಿರ್ವಹಿಸುತ್ತಿದೆ’ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಾಪಯ್ಯ, ಡಿವೈಎಸ್ಪಿ ವಿಜಯಕುಮಾರ ಮಡಿವಾಳರ, ಸಿಪಿಐ ಬಸವರಾಜ, ಚಂದ್ರಶೇಖರ, ಕರುಣೇಶಗೌಡ ಹಾಗೂ ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಂದೋಬಸ್ತ್  ಕೈಗೊಂಡಿದ್ದರು.

Write A Comment