ಕರ್ನಾಟಕ

ಧಾರವಾಡ ಸಾಹಿತ್ಯ ಸಂಭ್ರಮ ಮೂರನೇ ಆವೃತ್ತಿ ಉದ್ಘಾಟನೆ; ಕಾಣದ ಚಲನೆ: ಶಿವಪ್ರಕಾಶ್‌ ಕಳವಳ

Pinterest LinkedIn Tumblr

shiva

ಸಾಹಿತ್ಯ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಗೆ ಬಂದ ಎಚ್‌.ಎಸ್‌.­ಶಿವ­ಪ್ರಕಾಶ್‌ ಅವರನ್ನು ಗಿರೀಶ ಕಾರ್ನಾಡ ಬರಮಾಡಿಕೊಂಡರು

ಧಾರವಾಡ: ‘ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇಂದು ಪಂಥ­ಗಳಿವೆ; ಚಳವಳಿಗಳಿಲ್ಲ. ಚಟು­ವಟಿಕೆ ಇದೆ; ಚಲನೆ ಇಲ್ಲ. ಜಗಳಗಳಿವೆ; ಸಂವಾದ­ಗಳಿಲ್ಲ’ ಎಂದು ಕವಿ ಮತ್ತು ನಾಟಕಕಾರ ಎಚ್‌.ಎಸ್‌. ಶಿವಪ್ರಕಾಶ್‌ ಕಳವಳ ವ್ಯಕ್ತಪಡಿಸಿದರು.

ಆದರೆ, ಹೊಸ ಹೊಸ ಆವಿಷ್ಕಾರ­ಗಳಿಗೆ ಸಂವಾದಗಳು ಬೇಕು ಎಂದು ಅವರು ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ಆರಂಭ­ವಾದ ಮೂರು ದಿನಗಳ ಧಾರವಾಡ ಸಾಹಿತ್ಯ ಸಂಭ್ರಮದ ಮೂರನೇ ಆವೃತ್ತಿಯ ಉದ್ಘಾಟನಾ ಸಮಾರಂಭ­ದಲ್ಲಿ ಆಶಯ ನುಡಿಗಳನ್ನಾಡಿದ ಶಿವ­ಪ್ರಕಾಶ್‌, ‘ನವ್ಯ ಮತ್ತು ಬಂಡಾಯದ ಕಾಲದಲ್ಲಿ ಚರ್ಚೆ ಇತ್ತು. ಸಂವಾದ ಇತ್ತು. ಪಂಥ ಚಳವಳಿಗಳಿಂದ ಇಂದು ಚಟುವಟಿಕೆಗಳಿಗೆ ಚಾಲನೆ ಇಲ್ಲ­ದಂತಾ­ಗಿದೆ. ಇಂಥ ಸಂದರ್ಭದಲ್ಲಿ ಸಂಸ್ಕೃತಿ ಜೀವಂತವಾಗಿರಬೇಕಾದರೆ ಚಳವಳಿ­ಗಳು ಇರಬೇಕು. ಆದರೆ, ಸಾಮಾಜಿಕ ಚಳವಳಿಗಳು ಇಂದು ಸ್ಥಗಿತಗೊಳ್ಳುವ  ಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಭಾರತದ ಸಂಸ್ಕೃತಿ ಬಹುಮುಖಿಯಾಗಿದೆ. ಆದರೆ, ಅದನ್ನು ಏಕಮುಖಿಯಾಗಿಸುವ ಪ್ರಯತ್ನ ನಡೆದಿದೆ. ಹಳ್ಳಿಗಳಿಗೆ ಕಂಪ್ಯೂಟರ್‌
ಕರ್ನಾಟಕ ಸಂಸ್ಕೃತಿಯ ಉತ್ಸವ ಮೂರ್ತಿ­ಗಳಾಗಿ ಬೆಂಗಳೂರು, ಮೈಸೂರುಗಳಿವೆ. ಮೂಲ ಮೂರ್ತಿಗಳಾಗಿ ಧಾರವಾಡ, ವಿಜಯಪುರಗಳಿವೆ. ಕನ್ನಡ ಸಂಸ್ಕೃತಿಗೆ ಧಾರವಾಡದ ಕೊಡುಗೆ ಮಹತ್ತರವಾದುದು
–ಎಚ್.ಎಸ್.ಶಿವಪ್ರಕಾಶ

ಹಾಗೂ ವೈಫೈ ಬೇಕು ಎಂದು ಯೋಜನೆ ರೂಪಿಸುವುದು ಒಂದೆಡೆಯಾದರೆ, ಜಾತಿ ಪಂಥಗಳನ್ನು ಮತ್ತೆ ಮುಂದಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದು ಸಮಾಜದಲ್ಲಿ ಆಳವಾದ ಒಡಕು ಉಂಟು ಮಾಡಲಿದೆ. ಇಂಥ ಸಂದರ್ಭದಲ್ಲಿ ಸಾಹಿತ್ಯವನ್ನು ನೆಲೆಗೊಳಿಸುವುದರ ಜತೆಗೆ ಅದರ ಅಳಿವು ಉಳಿವಿನ ಬಗ್ಗೆ ಚಿಂತನೆ ಮಾಡಬೇಕು’ ಎಂದು ಸಲಹೆ ಮಾಡಿದರು.

‘ಈಗ ಎರಡು ಮಾದರಿಗಳಿವೆ. ಒಂದು ಅಭಿವೃದ್ಧಿಯ ಮಾದರಿ. ಇನ್ನೊಂದು ಘರ ವಾಪಸಿ ಮಾದರಿ. ಇವೆಲ್ಲಾ ಹೇಗೆ ಸಂಸ್ಕೃತಿಯತ್ತ ಸಾಗುವ ಲಕ್ಷಣಗಳಾಗುತ್ತವೆ’ ಎಂದು ಪ್ರಶ್ನಿಸಿದರು.

ಸಂಭ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ‘ದುಷ್ಟ ಮನಸ್ಸುಗಳಿಂದಾಗಿ ಇಂದು ಮಕ್ಕಳು, ಮಹಿಳೆಯರು ಹಾಗೂ ನಾಡು ಆಂತಕಕ್ಕೀಡಾಗಿದೆ. ಜತೆಗೆ ಮನುಷ್ಯನ ಪ್ರಗತಿಗೂ ಮಾರಕವಾಗಿವೆ. ಈ ಕುರಿತು
ಜಾಗೃತಿ ಮೂಡಿಸುವ ನಾಟಕಗಳನ್ನಾಡಿಸಲು ಸಾಹಿತ್ಯದ ಕೊರತೆ ಎದುರಾಗಿದೆ’ ಎಂದು ಹೇಳಿದರು.

‘ಸಾಹಿತ್ಯ ಸಂಭ್ರಮ ಟ್ರಸ್ಟ್‌ನ’ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೆನ್ನವೀರ ಕಣವಿ, ಗಿರೀಶ ಕಾರ್ನಾಡ, ಎಂ.ಎಂ.­ಕಲಬುರ್ಗಿ,  ಸಾಹಿತಿಯೂ ಆಗಿರುವ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ  ಲೋಹಿತ ನಾಯ್ಕರ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಐ.ಎಂ.ವಿಠಲ ಮೂರ್ತಿ, ಕೆ.ಆರ್‌. ರಾಮಕೃಷ್ಣ  ಮತ್ತಿತರರು ಉಪಸ್ಥಿತರಿದ್ದರು.

ಅಗಲಿದ ಸಾಹಿತಿಗಳಾದ ಯು.ಆರ್‌.ಅನಂತ­ಮೂರ್ತಿ, ಜಗದೀಶ ಮಂಗಳೂರುಮಠ, ಶಂಕರ ಕಟಗಿ ಹಾಗೂ ಕಾ.ವೆಂ.ರಾಜಗೋಪಾಲ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.

Write A Comment