ಕರ್ನಾಟಕ

‘ಪಿಕೆ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಿ: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್

Pinterest LinkedIn Tumblr

pvec11Jan15PK-03

ಬೆಂಗಳೂರು: ‘ಪಿಕೆ’ ಸಿನಿಮಾ ಉತ್ತಮ­ವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಬಿಡುಗಡೆಯಾದಾಗಲೇ ತೆರಿಗೆ ವಿನಾ­ಯಿತಿ ನೀಡಬೇಕಿತ್ತು’ ಎಂದು ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅಭಿಪ್ರಾಯ­ಪಟ್ಟರು. ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ನಗರದಲ್ಲಿ ಶನಿವಾರ ಆಯೋ ಜಿಸಿದ್ದ ‘ಪಿಕೆ ಸಿನಿಮಾ ಕುರಿತ ಸಂವಾದ’ದಲ್ಲಿ ಅವರು ಮಾತನಾಡಿದರು.

‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವೈಚಾರಿಕ ಚಿತ್ರ ನಿರ್ಮಿಸಿದವರನ್ನು ಅಭಿನಂದಿಸಬೇಕು. ತಮ್ಮ ಖ್ಯಾತಿಯನ್ನು ಅಪಾಯಕ್ಕೆ ಒಡ್ಡಿದ ಅಮೀರ್‌ಖಾನ್‌ ಅವರ ಧೈರ್ಯವನ್ನು ಮೆಚ್ಚಬೇಕು. ಇದೇ ಪಾತ್ರವನ್ನು ಹಿಂದೂ ನಟ ಮಾಡಿ­ದ್ದರೆ ಇಂತಹ ಆಕ್ಷೇಪಗಳು ವ್ಯಕ್ತವಾಗು­ತ್ತಿರಲಿಲ್ಲ’ ಎಂದು ಹೇಳಿದರು.

‘ಹಿಂದಿನಿಂದಲೇ ಆಷಾಢಭೂತಿಗಳು ಧರ್ಮ­ವನ್ನು ದುರುಪ­ಯೋಗಪಡಿಸಿ­ಕೊಳ್ಳು­ತ್ತಲೇ ಬಂದಿ­ದ್ದಾರೆ. ಅದನ್ನು ಈ ಪಿಕೆ ಚಿತ್ರದಲ್ಲಿ ಚೆನ್ನಾಗಿ ತೋರಿ­ಸಲಾಗಿದೆ. ಈ ಚಿತ್ರ­ವನ್ನು ಜನರು ನೋಡಲು ಅವಕಾಶ ಸಿಗಬೇಕು. ಆದರೆ, ಗೂಂಡಾ­ಗಿರಿ ಮೂಲಕ ಚಿತ್ರಕ್ಕೆ ತಡೆ­ಯೊಡ್ಡುವ ಯತ್ನ­ಗಳು ನಡೆಯುತ್ತಿವೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಮುಖ್ಯ’ ಎಂದು ತಿಳಿಸಿದರು.

‘ಸಂಗೀತ, ನಾಟಕ, ಸಿನಿಮಾ ಸೇರಿ­ದಂತೆ ಯಾವುದೇ ಸೃಜನಶೀಲ ಕಲೆ­ಯೊಂದನ್ನು ಜನರು ಒಂದಾಗಿ ಕಲೆತು ಆಸ್ವಾದಿಸಬೇಕು. ನಮ್ಮಲ್ಲಿ ಆ ಸ್ಥಿತಿ ಇಲ್ಲ. ಭದ್ರತೆ ಒದಗಿಸಬೇಕಾದ ಪೊಲೀಸರೇ ಗಲಾಟೆ ನೆಪ ಒಡ್ಡಿ ಮೊದಲು ಇಂತಹ­ವುಗಳನ್ನು ನಿರ್ಬಂಧಿ­ಸುತ್ತಾರೆ. ಈ ರೀತಿಯ ಮೂರ್ಖ ಸಂಸ್ಕೃತಿ ನಮ್ಮಲ್ಲಿ ಮಾತ್ರ ಇದೆ’ ಎಂದರು.

‘ಭಗವದ್ಗೀತೆಯಲ್ಲಿ ಇರುವುದೆಲ್ಲ ಪೂರ್ತಿ ಸತ್ಯ ಎನ್ನುವುದಾದರೆ ನಮ್ಮ ಸಂಸ್ಕೃತಿ ಅದರ ತರುವಾಯ ಬೆಳವಣಿಗೆ ಹೊಂದಿಲ್ಲ ಎನ್ನಬೇಕಾಗುತ್ತದೆ. 2000 ಸಾವಿರ ವರ್ಷಗಳ ಇತಿಹಾಸದಲ್ಲಿ ಹೊಸ ವಿಚಾರಗಳು ಹುಟ್ಟಿಲ್ಲವೆ’ ಎಂದು ಪ್ರಶ್ನಿಸಿದರು.

‘ಗಣಪತಿ ಮುಖ ಶಸ್ತ್ರಚಿಕಿತ್ಸೆಯಿಂದ ಕಸಿ ಮಾಡಲಾಗಿದೆ. ಸಾವಿರಾರು ವರ್ಷ­ಗಳ ಹಿಂದೆಯೇ ದೇಶದಲ್ಲಿ ವಿಮಾನ­ಗಳು ಹಾರಾಡುತ್ತಿದ್ದವು ಎನ್ನು­ವಂತಹ ಹೇಳಿಕೆ­ಗಳು ಹಾಸ್ಯಾಸ್ಪದ­ವಾಗಿವೆ. ಇವು ನಮ್ಮ ಸಂಸ್ಕೃತಿಗೆ ನಾವೇ ಅವಹೇಳನ ಮಾಡುವ ಮಾತುಗಳಾ­ಗಿವೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ವಿಮರ್ಶಕ ಡಾ.ಕೆ.ಮರುಸಿದ್ದಪ್ಪ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನ ಮಾಡುವುದು ಪ್ರಜಾಪ್ರಭುತ್ವ­ವನ್ನು ಪತನ ಮಾಡಿದಂತೆ. ಆದ್ದರಿಂದ, ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಜ್ಞಾವಂತರು ಮಾತ್ರವಲ್ಲ ಪ್ರತಿ­ಯೊಬ್ಬರು ಕೈಜೋಡಿಸಬೇಕು. ಇಲ್ಲದಿ­ದ್ದರೆ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದಾದ ಅನಾಹುತಗಳು ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

1 Comment

  1. E girish karnad … madoke bere kelsa illa, kaddi elli alladisli anta kaytirtane…..pracharada hucchu, …

Write A Comment