ಕರ್ನಾಟಕ

ರಾಘವೇಶ್ವರ ಭಾರತಿ ಸ್ವಾಮಿ ಪೀಠ ತ್ಯಾಗಕ್ಕೆ ಆಗ್ರಹಿಸಿ ‘ಜಾಗೋ ಹವ್ಯಕ’ ಆಂದೋಲನ

Pinterest LinkedIn Tumblr

madi

ಬೆಂಗಳೂರು: ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು ಎಂಬ ಉದ್ದೇಶದಿಂದ  ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ದೇವಮಾನವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದಕ್ಕಾಗಿ ಅವರು ಮಡಿ ಮಾಫಿಯಾವನ್ನು ಪೋಷಿಸು ತ್ತಿದ್ದಾರೆ’ ಎಂದು ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್ ಆರೋಪಿಸಿದರು.

ಮಠದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಸಮಾನ ಮನಸ್ಕ ಹವ್ಯಕರ ವೇದಿಕೆಯ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಆಯೋಜಿಸಿದ್ದ ಚಿಂತನ–ಮಂಥನ, ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವಾಮೀಜಿ ಹಾಗೂ ಅವರ ಶಿಷ್ಯರಿಂದ ಡಜನ್‌ಗಟ್ಟಲೆ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ತುಟಿಗೆ ತುಟಿ ಸೇರಿಸುವುದು ಕನ್ಯಾ ಸಂಸ್ಕಾರವಾ’ ಎಂದು ಪ್ರಶ್ನಿಸಿದ ಅವರು, ‘ಭವಿಷ್ಯ ಹಾಳಾಗುತ್ತದೆ ಎಂಬ ಕಾರಣದಿಂದ ಮಹಿಳೆಯರು ದೂರು ನೀಡಲು ಹಿಂಜರಿ ಯುತ್ತಿದ್ದಾರೆ. ಸ್ವಾಮೀಜಿ ಅವರು ಹವ್ಯಕ ಸಮಾಜವನ್ನು ಒಡೆಯುತ್ತಿದ್ದಾರೆ. ಧ್ವನಿ ಎತ್ತಿದವರ ವಿರುದ್ಧ ಗದಾಪ್ರಹಾರ ನಡೆಸುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಸ್ವಾಮೀಜಿ ಮಠದ ಗೌರವವನ್ನು ರಸ್ತೆಗೆ ಎಸೆದರು. ಅವರ ಶಿಷ್ಯರು ಅದನ್ನು ಈಗ ಚರಂಡಿಗೆ ಎಸೆದಿದ್ದಾರೆ. ಆರೋಪ ಬಂದ ಕೂಡಲೇ ಸ್ವಾಮೀಜಿ ಅವರು ಪೀಠದ ಮೇಲೆ ಪಾದುಕೆ ಇಟ್ಟು ಪಕ್ಕದಲ್ಲೇ ಮಣೆ ಹಾಕಿಕೊಂಡು ಕುಳಿತು ದೇವರ ಪೂಜೆ ಯಲ್ಲಿ ತಲ್ಲೀನರಾಗಬೇಕಿತ್ತು.  ಆರೋಪಮುಕ್ತರಾದ ಕೂಡಲೇ ಅವರನ್ನು ನಾವೇ ಪೀಠದಲ್ಲಿ ಕೂರಿಸುತ್ತಿದ್ದೆವು’ ಎಂದು ಅವರು ಹೇಳಿದರು.

‘ಸ್ವಾಮೀಜಿ ಅವರು ಕೆಲವು ವರ್ಷಗಳ ಹಿಂದೆ ಗೋ ಸಂವರ್ಧನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈಗ ಮಠದ ಗೋಶಾಲೆ ಪೂರ್ತಿ ಖಾಲಿಯಾಗಿದೆ. ಅನೇಕ ಜಾನುವಾರುಗಳು ಮೇವು ಸಿಗದೆ ಸಾವನ್ನಪ್ಪಿವೆ. ‘ಮಲೆನಾಡು ಗಿಡ್ಡ’, ‘ಮಲೆನಾಡು ದೊಡ್ಡ’ ತಳಿಗಳು ನೆಗೆದು ಬಿದ್ದು ಹೋಗಿವೆ” ಎಂದು ಅವರು ವ್ಯಂಗ್ಯವಾಡಿದರು.

‘ಮಠ ಹಾಗೂ ಮಠದ ಪರಂಪರೆ ಬೇರೆ. ಪೀಠಾಧಿಪತಿ ಬೇರೆ. ನಮ್ಮ ಹೋರಾಟ ಮಠದ ವಿರುದ್ಧ ಅಲ್ಲ. ಅನರ್ಹತೆ ಪ್ರಶ್ನೆ ಬಂದ ಕೂಡಲೇ ಸ್ವಾಮೀಜಿ  ಪೀಠ ತ್ಯಾಗ ಮಾಡಬೇಕಿತ್ತು’ ಎಂದು ಅವರು ಸಲಹೆ ನೀಡಿದರು.

ವಿದ್ವಾಂಸ ಕಮಲಾಕರ ಭಟ್ ಮಾತನಾಡಿ, ‘ಈ ಹಿಂದೆ ಖಾದಿ ಕಂಡರೆ ಜನರು ಹೆದರುತ್ತಿದ್ದರು. ಈಗ ಕಾವಿ ಕಂಡರೆ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಅತ್ಯಾಚಾರ ಪ್ರಕರಣದಿಂದಾಗಿ ಇಡೀ ಸಮುದಾಯ ಮಾನಸಿಕ ಅತ್ಯಾಚಾರಕ್ಕೆ ಒಳಗಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಕಾರ್ಯಕ್ರಮದಲ್ಲಿ ಪಾಲ್ಗೊಂ ಡವರು ಮೂರ್ಖರು ಎಂದು ಸಾಮಾ ಜಿಕ ಜಾಲತಾಣಗಳಲ್ಲಿ ಕೆಲವರು ಬರೆಯುತ್ತಾರೆ. ಅವರ ಕುಟುಂಬ ಸದಸ್ಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಇದೇ ರೀತಿಯಲ್ಲಿ ಸಾಮಾ ಜಿಕ ಜಾಲ ತಾಣಗಳಲ್ಲಿ ಬರೆ ಯುತ್ತಿದ್ದರೇ’ ಎಂದು ಅವರು ಪ್ರಶ್ನಿಸಿದರು.

ಸಮಿತಿಯ ಅಧ್ಯಕ್ಷ ವಾರಾಣಸಿ ಸತ್ಯಪ್ರಕಾಶ್ ಮಾತನಾಡಿ, ‘ಸ್ವಾಮೀಜಿ ಅವರು ಭಕ್ತರನ್ನು ವಿಶ್ವಾಸಕ್ಕೆ ತೆಗೆದು ಕೊಂಡಿದ್ದರೆ ಹಲವು ಅನುಮಾನ, ಅವಮಾನಗಳನ್ನು ತಪ್ಪಿಸಬಹುದಿತ್ತು.  ಮಠ ಈಗ ಪಾರಮಾರ್ಥಿಕವಾಗಿ ಉಳಿದಿಲ್ಲ, ವ್ಯಾವಹಾರಿಕ ಆಗಿದೆ’ ಎಂದು ಆರೋಪಿಸಿದರು. ವೇದಿಕೆಯ ಗೌರವಾಧ್ಯಕ್ಷ ನೂಜಿಬೈಲ್‌ ಕೃಷ್ಣ ಭಟ್‌ ಮತ್ತಿತರರು ಇದ್ದರು.

‘ತಿಳಿ ಕೊಳದಲ್ಲಿ ಕೆಸರಿನ ರಾಡಿ’

‘ಗುರುಪೀಠ ತಿಳಿಯಾದ ಕೊಳವಿದ್ದಂತೆ. ಪೀಠದ ಕೆಳಭಾಗದಲ್ಲಿ ಈಗ ಕಲ್ಮಶ ಸೇರಿದೆ. ಮಠದ ಭಕ್ತರಿಗೆ ಸತ್ಯಾಂಶ ತಿಳಿಯುವ ಕುತೂಹಲ ಇದೆ. ಆದರೆ, ಮಠದಲ್ಲಿನ ಶಿಷ್ಯರು ಈ ಕೊಳಕ್ಕೆ ಕೆಸರು ಹಾಕಿ ರಾಡಿ ಎಬ್ಬಿಸುತ್ತಿದ್ದಾರೆ’ ಎಂದು ವಕೀಲ ಅಶೋಕ್‌ ಜಿ.ಭಟ್ ಆರೋಪಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, ‘ಧರ್ಮಪೀಠ ಕಾನೂನಿಗಿಂತ, ಸತ್ಯ, ಧರ್ಮಕ್ಕಿಂತ ದೊಡ್ಡದಲ್ಲ. ಇವುಗಳ ಅಡಿಯಲ್ಲಿ ಬರುವುದು ಗುರುಪೀಠ. ಆದರೆ, ಗುರುಪೀಠ ಇಡೀ ನ್ಯಾಯಾಂಗ ವ್ಯವಸ್ಥೆಗೆ ಸವಾಲು ಎಸೆಯುವ ಕೆಲಸ ಮಾಡುತ್ತಿದೆ. ಇಂತಹ ವ್ಯವಸ್ಥೆಯ ವಿರುದ್ಧ ನಾವೆಲ್ಲ ಧ್ವನಿ ಎತ್ತಬೇಕು’ ಎಂದರು.

‘ಜಾಗೋ ಭಾರತ್‌ ಎಂದು ಘೋಷಣೆ ಕೂಗಿದವರು ಈಗ ಮಠದ ವಕ್ತಾರರ ರೀತಿ ಮಾತನಾಡುತ್ತಿದ್ದಾರೆ. ನಮಗೆ ಬಾಡಿಗೆ ವಕ್ತಾರರು, ಭಾಷಣಕಾರರು ಬೇಕಿಲ್ಲ. ನಮಗೆ ಗುರುಪೀಠದ ಗೌರವ ಉಳಿಯಬೇಕಿದೆ. ಇದಕ್ಕಾಗಿ ‘ಜಾಗೋ ಹವ್ಯಕ’ ಎಂಬ ಆಂದೋಲನ ನಡೆಸಬೇಕಿದೆ’ ಎಂದರು.

Write A Comment