ಕರ್ನಾಟಕ

ಅವಕಾಶ ವಂಚಿತರಿಗಷ್ಟೇ ಮೀಸಲಾತಿ ಇರಲಿ: ಬಲ ದಲಿತರಿಗೆ ಬೇಡ; ಅಖಿಲ ಭಾರತ ದಲಿತ ಕ್ರಿಯಾ ಸಮಿತಿ

Pinterest LinkedIn Tumblr

pasvan

ಬೆಂಗಳೂರು:  ‘ಮೀಸಲಾತಿಯ ಲಾಭ ಸಬಲ ದಲಿತರಿಗೇ ಸಿಗುತ್ತಿದ್ದು, ಅದನ್ನು ಬದಲಿಸುವ ಕೆಲಸ ಇನ್ನಾದರೂ ಆಗಬೇಕು. ಕಡುಬಡ ದಲಿತರಿಗೆ ಮಾತ್ರ ಮೀಸಲಾತಿಯ ಲಾಭ ದೊರೆಯ ಬೇಕು’ ಎಂದು ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಸಂಜಯ್‌ ಪಾಸ್ವಾನ್‌ ಇಲ್ಲಿ ಅಭಿಪ್ರಾಯ ಪಟ್ಟರು.

ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಶನಿವಾರ ಆಯೋಜಿಸಿದ್ದ ‘ಕೆನೆಪದರ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಆರು ದಶಕಗಳ ಅವಧಿಯಲ್ಲಿ  ಮೂರು ಪೀಳಿಗೆಗಳು ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ ಪಡೆದಿವೆ. ನಾಲ್ಕನೇ ಪೀಳಿಗೆಗೆ ಅದರ ಅಗತ್ಯವಿಲ್ಲ. ಅವರ ಬದಲಿಗೆ ಅವಕಾಶ ವಂಚಿತರಿಗೆ ಮೀಸಲಾತಿ ಸಿಗಬೇಕು’ ಎಂದು ಅವರು ಹೇಳಿದರು.

‘ನನ್ನ ಕುಟುಂಬ ಸೇರಿದಂತೆ ದೇಶದ ಹಲವಾರು ಕುಟುಂಬಗಳು ಮೀಸ­ಲಾತಿ ಲಾಭ ಪಡೆದಿವೆ. ಇದರ ಕಾರಣದಿಂದ ಕುಟುಂಬದ ಸದಸ್ಯರು ರಾಜಕಾರಣ, ಆಡಳಿತ ವ್ಯವಸ್ಥೆ­ಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮೀಸಲಾತಿ ಮೂಲಕ ಸಾಮಾಜಿಕವಾಗಿ ಮೇಲ್ಪ ದರಕ್ಕೆ ತಲುಪಿದ ನಂತರ ಮತ್ತೆ ಮೀಸಲಾತಿ ನಿರೀಕ್ಷಿಸುವುದು ಸರಿಯಲ್ಲ’ ಎಂದರು.

ಸಮೀಕ್ಷೆ: ಪತ್ರಕರ್ತ ಸಮೀವುಲ್ಲಾ ಮಾತನಾಡಿ, ‘ರಾಜ್ಯದಲ್ಲಿ 357 ಜಾತಿ, 819 ಉಪ ಜಾತಿ ಮತ್ತು ಏಳು ಪ್ರವರ್ಗದ ಜನರು ಮೀಸಲಾತಿಯ ಸೌಲಭ್ಯ ಪಡೆಯುತ್ತಿ­ದ್ದಾರೆ. ಮೀಸ ಲಾತಿ ಪಡೆ­ದವರ ಬಗ್ಗೆ,  ಅವರಿಗೆ ಆದ ಅನುಕೂಲ­ಗಳ ಬಗ್ಗೆ  ಇದುವರೆಗೆ ವೈಜ್ಞಾನಿಕ ಸಮೀಕ್ಷೆ ನಡೆದಿಲ್ಲ’ ಎಂದು  ಹೇಳಿದರು.

‘ಕಾಗೋಡು ತಿಮ್ಮಪ್ಪ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಕೆನೆಪದರ ಮೀಸಲಾತಿ ಜಾರಿಗೆ ಪ್ರಯತ್ನ ಪಟ್ಟಿ ದ್ದರು. ಆದರೆ, ನಂತರ ಅದು ಮುಂದು ವರಿಯಲಿಲ್ಲ’ ಎಂದು ವಿವರಿಸಿದರು.

ಕೊಳದ ಮಠದ ಶಾಂತವೀರ ಸ್ವಾಮೀಜಿ ಮಾತ­ನಾಡಿ, ‘ಖಾಸಗಿ ಕ್ಷೇತ್ರ ಗಳಲ್ಲೂ ದೀನ ದಲಿತರಿಗೆ ಮೀಸಲಾತಿ ಕಲ್ಪಿಸಲು ಸರ್ಕಾರ ಕ್ರಮ ಕೈಗೊ ಳ್ಳಬೇಕು’ ಎಂದು  ಒತ್ತಾಯಿಸಿದರು.

ವಕೀಲರಾದ ಪ್ರಮೀಳಾ ನೇಸರ್ಗಿ ಅವರು, ‘ರಾಜ್ಯದಲ್ಲಿ 80 ಸಾವಿರ ಜನ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಅಧಿಕಾರದಲ್ಲಿದ್ದಾರೆ. ಇದರಿಂದಾಗಿ ದಲಿತರಿಗೆ ಅನ್ಯಾಯವಾಗುತ್ತಿದೆ’ ಎಂದು ದೂರಿದರು.

ವಿಧಾನಪರಿಷತ್‌ ಬಿಜೆಪಿ ಸದಸ್ಯ ವಿ.ಸೋಮಣ್ಣ, ಆರ್‌ಎಸ್‌ಎಸ್‌ ಮುಖಂಡ  ವಾದಿರಾಜ್‌, ವಕೀಲ ಶ್ಯಾಮಸುಂದರ್‌, ವಾಸ್ತು ತಜ್ಞ ಬಸವರಾಜ ಗುರೂಜಿ, ಪತ್ರಕರ್ತ ಎಸ್‌.ಎಂ. ಮಸೂದ್‌ ಖಾನ್‌ ಮಾತ­ನಾಡಿದರು.

ಸಾಮಾಜಿಕ ನ್ಯಾಯ ಈಗ ಸರಿಯಲ್ಲ
ಸಾಮಾಜಿಕ ನ್ಯಾಯ ಎಂಬುದು ಹಳೆಯ ಪರಿಕಲ್ಪನೆ. ಈಗಿನ ಕಾಲಕ್ಕೆ ಅದು ಸರಿ ಹೊಂದುವುದಿಲ್ಲ ಎಂಬುದು ನನ್ನ ಅನಿಸಿಕೆ. ಎಲ್ಲರನ್ನು ಒಳಗೊಂಡ ಮೀಸಲಾತಿ ಮೂಲಕ ನ್ಯಾಯದ ಹಂಚಿಕೆ­ಯಾಗ­ಬೇಕು.
–ಕೇಂದ್ರದ ಮಾಜಿ ಸಚಿವ ಸಂಜಯ್ ಪಾಸ್ವಾನ್‌

ವಂಚನೆ ಬಗ್ಗೆ ಎಚ್ಚರ
ಅರ್ಹತೆ ಉಳ್ಳವರಿಗೆ ಮೀಸಲಾತಿ ಪಡೆಯುವ ಹಕ್ಕು ಇದೆ. ಅದರಲ್ಲಿ ಶ್ರೀಮಂತ, ಬಡವ ಎಂಬುದಿಲ್ಲ. ಆದರೆ, ಸಮಾಜದ ಇತರೆ ವರ್ಗದವರು ಮಾಡು ತ್ತಿರುವ ವಂಚನೆ ಬಗ್ಗೆ ದಲಿತರು ಜಾಗರೂಕರಾಗಿ ರಬೇಕು.
–ಪ್ರಮೀಳಾ ನೇಸರ್ಗಿ (ವಕೀಲರು)

ನನಗೆ ಮೀಸಲಾತಿ ಬೇಡ…
ಪ್ರಾಸ್ತವಿಕವಾಗಿ ಮಾತನಾಡಿದ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಚಿ.ನಾ. ರಾಮು ಅವರು ‘ಆರ್ಥಿಕವಾಗಿ ನಾನು ಸಬಲನಾಗಿದ್ದೇನೆ. ಈ ಕಾರಣದಿಂದ ನಮ್ಮ ಕುಟುಂಬಕ್ಕೆ ಮೀಸಲಾತಿ ಬೇಡ. ಕೆಲವರು ಸ್ವಾರ್ಥಕ್ಕಾಗಿ ಮೀಸಲಾತಿ ಬಳಸಿಕೊಳ್ಳುತ್ತಿದ್ದಾರೆ. ಮೀಸಲಾತಿ ಮೂಲಕ ರಾಜಕೀಯ ಉನ್ನತ ಸ್ಥಾನಕ್ಕೆ ಏರಿದ ಹಲವು ಮುಖಂಡರು ಈಗಲೂ ತಮ್ಮ ಲಾಭಕ್ಕಾಗಿ ಮೀಸಲಾತಿ­ ಬಳಸಿ­ಕೊಳ್ಳುತ್ತಿದ್ದಾರೆ’ ಎಂದು ದೂರಿದರು.

Write A Comment