ಕರ್ನಾಟಕ

ಹೊಳಲ್ಕೆರೆ: ಆತಂಕ ಸೃಷ್ಟಿಸಿದ ಬ್ಯಾಗ್‌; ಶ್ವಾನದಳದಿಂದ ಪರಿಶೀಲನೆ

Pinterest LinkedIn Tumblr

bag

ಹೊಳಲ್ಕೆರೆ: ಪಟ್ಟಣದ ಗಣಪತಿ ರಸ್ತೆಯ ಬೀದಿಯೊಂದರಲ್ಲಿ ಶನಿವಾರ ಅನುಮಾನಾಸ್ಪದವಾಗಿ ಒಂದು ಬ್ಯಾಗ್‌ ದೊರೆತಿದ್ದು, ಅದರಲ್ಲಿ ಬಾಂಬ್‌ ಇರಬಹುದು ಎಂಬ ಅನು­ಮಾ­ನದಿಂದ ನಾಗರಿಕರು ಆತಂ­ಗೊಂಡ ಘಟನೆ ನಡೆದಿದೆ. ಆದರೆ ಕೊನೆಯಲ್ಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದು, ಬ್ರೆಡ್‌ ಬಿಸ್ಕಿಟ್‌!

ಇಲ್ಲಿನ ನಿವಾಸಿ ಮಂಜಣ್ಣ ಎಂಬುವರು ಹೊಸದಾಗಿ ಮನೆ ಕಟ್ಟಿಸುತ್ತಿದ್ದು, ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಬಟ್ಟೆ ಅಂಗಡಿಯ ಒಂದು ಕವರ್‌, ರಗ್ಗು, ಬೆಡ್‌ಶೀಟ್‌ ಪತ್ತೆಯಾಗಿವೆ. ಇದ­ರಿಂದ ಭಯಗೊಂಡ ಕಾರ್ಮಿಕರು ಸುತ್ತಲಿನ ಜನರಿಗೆ ತೋರಿಸಿದರು. ತಕ್ಷಣವೇ ಇಲ್ಲಿನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಂಪರ್ಕಿಸಿದರು.

ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಪಟ್ಟಣದ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದರು. ಪೊಲೀಸರು ಬ್ಯಾಗ್‌ನ ಹತ್ತಿರ ಹೋಗದಂತೆ ಜನರನ್ನು ತಡೆದರು. ಡಿವೈಎಸ್‌ಪಿ ಕವಳಪ್ಪ, ಪಿಎಸ್‌ಐ ರಂಗಸ್ವಾಮಿ ಸ್ಥಳಕ್ಕೆ ಧಾವಿಸಿದರು.

ಸ್ಥಳಕ್ಕೆ ಶ್ವಾನದಳ ಪರಿಶೀಲನೆ ನಡೆಸಿದಾಗ ಯಾವುದೇ ಸ್ಫೋಟಕ ವಸ್ತು  ಪತ್ತೆಯಾಗಲಿಲ್ಲ. ಬ್ಯಾಗ್‌ ತೆಗೆದು ನೋಡಿದಾಗ ಅದರಲ್ಲಿ ಬಿಸ್ಕತ್ತು, ಬ್ರೆಡ್‌, ಸಿಹಿತಿಂಡಿ, ಶಾಂಪೂ ಮತ್ತಿತರ ವಸ್ತುಗಳು ಪತ್ತೆಯಾದವು. ಪೊಲೀಸರು ಸೇರಿದಂತೆ ನೆರೆದವರೆಲ್ಲ ನಿಟ್ಟುಸಿರು ಬಿಟ್ಟರು. ಯಾರೋ ಬುದ್ದಿಮಾಂದ್ಯ ವ್ಯಕ್ತಿ ಇವುಗಳನ್ನು ಬಿಟ್ಟುಹೋಗಿರಬಹುದು ಎಂದು ಜನ ಮಾತನಾಡಿಕೊಂಡರು.

Write A Comment