ಕರ್ನಾಟಕ

142 ಮಾರ್ಕೊಪೋಲೊ ಬಸ್‌ ಗುಜರಿಗೆ

Pinterest LinkedIn Tumblr

pvec10jan15jBMTC-Marcoplo-B

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಮತ್ತು ಮೈಸೂರು ನಗರ ಸಾರಿಗೆಯಲ್ಲಿ ಸಂಚರಿ­ಸುತ್ತಿರುವ 1೪2 ಮಾರ್ಕೊಪೋಲೊ ಬಸ್‌­ಗಳನ್ನು ಗುಜರಿಗೆ ಹಾಕುವ ನಿರ್ಧಾರ­ವನ್ನು ಸಚಿವ ಸಂಪುಟ ಕೈಗೊಂಡಿದೆ. ಈ ಬಸ್‌ಗಳ ಖರೀದಿ ಬಗ್ಗೆ ತನಿಖೆಗೂ ತೀರ್ಮಾನಿಸಲಾಗಿದೆ.

೨೦೦೯ರಲ್ಲಿ ಬಿಎಂಟಿಸಿ ಬಳಕೆಗಾಗಿ ಖರೀದಿಸಿರುವ ೯೮ ಹವಾನಿಯಂತ್ರಿತ ಮಾರ್ಕೊಪೋಲೊ ಬಸ್‌ಗಳು ಮತ್ತು ಮೈಸೂರಿನಲ್ಲಿ ಸಂಚಾರಕ್ಕಾಗಿ ಅದೇ ವರ್ಷ ಖರೀದಿಸಿದ್ದ  ಹವಾನಿಯಂತ್ರಿತ­ವಲ್ಲದ ೪೪ ಮಾರ್ಕೊಪೋಲೊ ಬಸ್‌­ಗಳು ಗುಜರಿಗೆ ಹೋಗಲಿವೆ.

ಬಿಎಂಟಿಸಿಯ 98 ಮಾರ್ಕೊ­ಪೋಲೊ ಬಸ್‌ಗಳನ್ನು ಮಾತ್ರ ಗುಜರಿಗೆ ಹಾಕುವ ಪ್ರಸ್ತಾವ ಶುಕ್ರವಾರದ ಸಂಪುಟ ಸಭೆಯ ಮುಂದಿತ್ತು. ಈ ವಿಷಯ ಚರ್ಚೆಗೆ ಬಂದಾಗ ಮೈಸೂರಿನಲ್ಲಿ ಸಂಚ­ರಿಸುತ್ತಿರುವ ೪4 ಬಸ್‌ಗಳ ವಿಷಯವೂ ಪ್ರಸ್ತಾಪವಾಗಿದೆ. ಒಟ್ಟು 1೪2 ಬಸ್‌­ಗಳನ್ನೂ ಗುಜರಿಗೆ ಕಳುಹಿಸಲು ಸಂಪುಟ ನಿರ್ಣಯ ಕೈಗೊಂಡಿದೆ.

ಸಂಪುಟ ಸಭೆ ಬಳಿಕ ವಿವರ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜೆನರ್ಮ್‌ ಯೋಜನೆಯಡಿ ಪ್ರತಿ ಬಸ್‌ಗೆ ₨ 31 ಲಕ್ಷ ನೀಡಿ ಖರೀದಿಸಲಾಗಿತ್ತು. ಈ ಬಸ್‌ಗಳಿಂದ ತಿಂಗಳಿಗೆ ₨ 1.56 ಕೋಟಿ ನಷ್ಟ ಆಗು­ತ್ತಿದೆ. ಹೀಗೆಯೇ ಮುಂದು­ವರಿದರೆ ಒಂದು ವರ್ಷದಲ್ಲಿ ನಷ್ಟದ ಪ್ರಮಾಣ ₨ 67 ಕೋಟಿ ತಲುಪ­ಬಹುದು ಎಂದು ಅಂದಾಜು ಮಾಡಲಾ­ಗಿತ್ತು ಎಂದರು.

‘ಮಾರ್ಕೊಪೋಲೊ ಬಸ್‌ಗಳು ನಿತ್ಯವೂ ಕೆಟ್ಟು ನಿಲ್ಲುತ್ತಿವೆ. ತಾಂತ್ರಿಕ ಗುಣಮಟ್ಟವೂ ಇಲ್ಲ. ದುರಸ್ತಿ ಮಾಡಿ, ಮತ್ತೆ ಸಂಚಾರಕ್ಕೆ ಬಿಟ್ಟರೂ ನಷ್ಟ ಖಚಿತ. ಈ ಕಾರಣದಿಂದಾಗಿಯೇ ಮಾರ್ಕೊ­ಪೋಲೊ ಬಸ್‌ಗಳನ್ನು ಸಂಚಾರದಿಂದ ಹಿಂದಕ್ಕೆ ಪಡೆದು ಗುಜರಿಗೆ ಕಳುಹಿಸುವ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಹೇಳಿದರು.

ಬೆಂಗಳೂರಿನ ರಸ್ತೆಗಳಿಗೆ ಈ ಬಸ್‌­ಗಳು ಸರಿ ಹೊಂದುವುದಿಲ್ಲ. ಆದರೂ ಏಕೆ ಖರೀದಿ ಮಾಡಲಾಗಿದೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಜೆನರ್ಮ್ ಯೋಜನೆಯಡಿ ಇದೇ ಬಸ್‌ಗಳ ಖರೀದಿಗೆ ಒತ್ತಡವಿತ್ತು ಎನ್ನಲಾಗಿದೆ. ಆ ಬಗ್ಗೆಯೂ ಪರಿಶೀಲನೆ ನಡೆಸಲಾ­ಗುವುದು ಎಂದರು.

ವಿಚಾರಣೆಗೆ ಒತ್ತಾಯ: ರಾಜ್ಯದ ರಸ್ತೆ ಸಾರಿಗೆ ನಿಗಮಗಳ ನಷ್ಟಕ್ಕೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಆರ್‌. ಅಶೋಕ ಅವರು ಸಾರಿಗೆ ಸಚಿವ­ರಾಗಿದ್ದ ಅವಧಿಯಲ್ಲಿ ಮಾರ್ಕೊಪೋಲೊ ಬಸ್‌ಗಳನ್ನು ಖರೀದಿಸಿದ ಕುರಿತೂ ವಿಚಾರಣೆ ನಡೆಸಬೇಕು. ಈ ಬಸ್‌­ಗಳಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದೆ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಉನ್ನತಮಟ್ಟದ ಸಮಿತಿ
ಬೆಂಗಳೂರಿನ ಸುತ್ತ ಇರುವ ಪಟ್ಟಣಗಳನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ನೆರವಿನಲ್ಲಿ ಅಭಿವೃದ್ಧಿ­ಪಡಿಸುವ ಪ್ರಸ್ತಾವವಿದೆ. ಅದಕ್ಕಾಗಿ ನೀಲನಕ್ಷೆ ರೂಪಿ­ಸಲು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆ­ಯಲ್ಲಿ ಒಂದು ಉನ್ನತಮಟ್ಟದ ಸಮಿತಿ ಮತ್ತು ಒಂದು ಚಾಲನಾ ಸಮಿತಿ ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಜಯಚಂದ್ರ  ತಿಳಿಸಿದರು.

ಟರ್ಫ್‌ ಕ್ಲಬ್‌: ನಿರ್ಧಾರ ಬದಲಿಲ್ಲ
‘ಬೆಂಗಳೂರು ಟರ್ಫ್‌ ಕ್ಲಬ್‌ (ರೇಸ್‌ ಕೋರ್ಸ್‌) ಅನ್ನು ನಗರದಿಂದ ಹೊರಕ್ಕೆ ಸ್ಥಳಾಂತ­ರಿ­ಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಇದೇ 13ರಂದು ಸುಪ್ರೀಂ­ಕೋರ್ಟ್‌ಗೆ ತಿಳಿಸಲಾಗುವುದು’ ಎಂದು ಸಚಿವ ಜಯಚಂದ್ರ ತಿಳಿಸಿದರು.

ಟರ್ಫ್‌ ಕ್ಲಬ್‌ ಸ್ಥಳಾಂತರಕ್ಕೆ ಹಿಂದೆಯೇ ನಿರ್ಧಾರ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಕ್ಲಬ್‌ ಆಡಳಿತ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿ­ಸಿತ್ತು. ಆದರೆ, ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ನಂತರ ಕ್ಲಬ್‌ ಆಡಳಿತ ಮಂಡಳಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಜನವರಿ 13ರಂದು ಅರ್ಜಿಯ ವಿಚಾ­ರಣೆ ನಡೆಯಲಿದೆ. ಆಗ ಸರ್ಕಾರ ನಿಲುವು ಸ್ಪಷ್ಟ­ಪಡಿಸಬೇಕಿದೆ ಎಂದರು.

‘ಪ್ರಕರಣದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಟರ್ಫ್‌ ಕ್ಲಬ್‌ ಸ್ಥಳಾಂತರದ ವಿಷ­ಯ­ದಲ್ಲಿ ನಿರ್ಧಾರ ಬದಲಿಸುವುದಿಲ್ಲ ಎಂಬುದನ್ನು ಸುಪ್ರೀಂಕೋರ್ಟ್‌ಗೆ ತಿಳಿಸಲು ತೀರ್ಮಾನಿಸ­ಲಾ­ಯಿತು’ ಎಂದು ಹೇಳಿದರು.

Write A Comment