ಕನ್ನಡ ವಾರ್ತೆಗಳು

ಮುದೂರು : ದಾಖಲೆ ಪೋರ್ಜರಿ ಮಾಡಿ ಲಕ್ಷಾಂತರ ಮೌಲ್ಯದ ಭೂಮಿ ವಂಚನೆ

Pinterest LinkedIn Tumblr

fraud

ಕುಂದಾಪುರ : ಬೇರೊಬ್ಬರ ಸ್ವಾಧೀನವಿದ್ದ ಭೂಮಿಯನ್ನು ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದಲ್ಲದೇ ಭೂ ಖರೀದಿ ಮಾಡಿದವ ಬ್ಯಾಂಕೊಂದರಿಂದ ಭೂಮಿಯ ಮೇಲೆ ಲಕ್ಷಾಂತರ ರೂಪಾಯಿಗಳ ಸಾಲವನ್ನೂ ಪಡೆದು ವಂಚಿಸಿದ ಘಟನೆ ತಾಲೂಕಿನ ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೂರಿನಲ್ಲಿ ನಡೆದಿದೆ. ಮೂಲ ಕೇರಳ ನಿವಾಸಿ ಎನ್.ಎಂ. ಅಬ್ದುಲ್ ಮಜೀದ್ ಎಂಬುವರೇ ಭೂಮಿ ಕಳೆದುಕೊಂಡವರಾಗಿದ್ದರೆ, ಸ್ಥಳೀಯ ನಿವಾಸಿಗಳಾದ ರಂಜಿತ್, ಕೆ.ಕೆ. ಮ್ಯಾಥ್ಯೂ, ಸಿಜೋ ಥಾಮಸ್ ಪೋರ್ಜರಿ ನಡೆಸಿ ವಂಚಿಸಿದ್ದು, ರಂಜಿತ್ ಪತ್ನಿ ಕವಿತಾ ಎಂಬಾಕೆ ಭೂಮಿಯ ಮೇಲೆ ಸಾಲ ಮಾಡಿ ವಂಚಿಸಿದ್ದಾರೆ. ವಕೀಲ ಹೆಚ್. ಉದಯಕುಮಾರ್ ಶೆಟ್ಟಿ ನಕಲಿ ದಾಖಲೆಗಳನ್ನು ಆಧಾರವಾಗಿ ಧೃಢೀಕರಿಸಿದ್ದಾರೆ ಎಂದು ಎನ್.ಎಂ. ಅಬ್ದುಲ್ ಮಜೀದ್ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ: ಕೇರಳ ನಿವಾಸಿ ಎನ್.ಎಂ.ಅಬ್ದುಲ್ ಮಜೀದ್ ಎಂಬುವರು ಮುದೂರಿನಲ್ಲಿ ಹಿದಾಯತ್ ರಬ್ಬರ್ ಎಸ್ಟೇಟ್ ಎನ್ನುವ 110 ಎಕ್ರೆ ರಬ್ಬರ್ ಎಸ್ಟೇಟ್ ಹೊಂದಿದ್ದು, ಅದನ್ನು ಎಂ.ಪಿ.ವಿನ್ಸೆಂಟ್ ಎನ್ನುವವರು ಉಸ್ತುವಾರಿ ನೋಡುತ್ತಿದ್ದರು. ಆ ಜಾಗದ ಅಳತೆಗಾಗಿ ಬ್ರೋಕರ್ ರಂಜಿತ್ ಎಂಬುವರೊಂದಿಗೆ ಮಾತುಕತೆ ನಡೆಸಿದ್ದರು. ರಂಜಿತ್ ಜಾಗದ ಅಳತೆಗೆ ಅರ್ಜಿಸಲ್ಲಿಸಲು ಮಜೀದರ ತಾಯಿಯ ಭಾವಚಿತ್ರ ಬೇಕು ಎಂಬುದಾಗಿ ಸುಳ್ಳು ಹೇಳಿ ಭಾವಚಿತ್ರ ಪಡೆದುಕೊಂಡಿದ್ದು, 2013 ನವೆಂಬರ್‌ನಲ್ಲಿ ಆರೋಪಿ ರಂಜಿತ್ ಹಾಗೂ ಸ್ಥಳೀಯ ಕೆಕೆ ಮ್ಯಾಥ್ಯೂ ಎಂಬುವರು ಇನ್ನೋರ್ವ ಆರೋಪಿ ಸಿಜೋ ಥಾಮಸ್ ಎಂಬುವರ ಜೊತೆಗೂಡಿ ಪೋರ್ಜರಿ ಜನರಲ್ ಫವರ್ ಆಫ್ ಅಟಾರ್ನಿ ಮಾಡಿಸಿದ್ದು, ಅದಕ್ಕೆ ಮಜೀದ್‌ರ ತಾಯಿಯ ಭಾವಚಿತ್ರ ಅಂಟಿಸಿ ಕುಂದಾಪುರದ ನೋಟರಿ ಹಾಗೂ ವಕೀಲ ಹೆಚ್. ಉದಯಕುಮಾರ್ ಎಂಬುವರಿಂದ ದೃಢೀಕರಿಸಿದ್ದು, ಇದಕ್ಕೆ ಸಿಜೋ ಥಾಮಸ್ ಏಜೆಂಟ್ ಆಗಿ ಕೆಲಸ ಮಾಡಿದ್ದಾರೆ. ನಂತರ ಅದೇ ಸರ್ವೆ ನಂಬ್ರ 26/74 ರಲ್ಲಿ 415 ಎಕ್ರೆ ಜಾಗವನ್ನು ಸುಳ್ಳು ಜಿ.ಪಿ.ಎ ಅಡಿಯಲ್ಲಿ ಶಂಕರನಾರಾಯಣ ರಿಜಿಸ್ಟ್ರೇಷನ್ ಕಚೇರಿಯಲ್ಲಿ 28 ಲಕ್ಷ ರೂಪಾಯಿಗಳ ಮೌಲ್ಯಕ್ಕೆ ಅದೇ ವರ್ಷ ಡಿಸೆಂಬರ್ 2 ನೇ ತಾರೀಖಿನಂದು ಸಿಜೋ ಥೋಮಸ್ ಎಂಬಾತನ ಹೆಸರಿಗೆ ನೋಂದಣಿ ಮಾಡಿಸಲಾಗಿದೆ ಎಂದು ಮಜೀದ್ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತು ಅದೇ ದಿನ ಎಂ.ವಿ.ರಂಜಿತ್ ಎಂಬುವರ ಪತ್ನಿಯ ಹೆಸರಿನಲ್ಲಿ ಅದೇ ಜಾಗದ ಮೇಲೆ ಕುಂದಾಪುರದ ಕರ್ಣಾಟಕ ಬ್ಯಾಂಕಿನಿಂದ ಇಪ್ಪತ್ತೈದು ಲಕ್ಷ ರೂಪಾಯಿಗಳ ಸಾಲವನ್ನೂ ಪಡೆಯಲಾಗಿದೆ ಎಂದವರು ದೂರಿನಲ್ಲಿ ತಿಳಿದಿದ್ದಾರೆ. ಆರೋಪಿಗಳ ವಿರುದ್ಧ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment