ಕುಂದಾಪುರ: ಸಿದ್ದಾಪುರದಲ್ಲಿ ನಡೆಯುತ್ತಿರುವ ವರಾಹಿ ನೀರಿಗಾಗಿ ಧರಣಿ ಸತ್ಯಾಗ್ರಾಹಕ್ಕೆ ಪಕ್ಷಬೇಧ ಮರೆತು, ಬೆಂಬಲ ವ್ಯಕ್ತಪಡಿಸಿದ ಕುಂದಾಪುರ ತಾಲ್ಲೂಕು ಪಂಚಾಯಿತಿಯ 35 ಮಂದಿ ಸದಸ್ಯರು, ಶನಿವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆದಿದೆ.
ಘಟನೆಯ ವಿವರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಬೇಕಾಗಿದ್ದ, ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದ್ದಂತೆ, ಚರ್ಚೆಯನ್ನು ಪ್ರಾರಂಭಿಸಿದ್ದ ಸದಸ್ಯರುಗಳು, ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿಯ ಬಗ್ಗೆ ಅಸಮಧಾನಗಳನ್ನು ವ್ಯಕ್ತಪಡಿಸಿದರು. 35 ವರ್ಷಗಳಿಂದ ನನಗುದಿಗೆ ಬಿದ್ದಿರುವ ವರಾಹಿ ಯೋಜನೆಯ ಕುರಿತು ಶಾಸಕ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರ ನೇತ್ರತ್ವದಲ್ಲಿ ಜಿಲ್ಲಾ ರೈತ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಾಹಕ್ಕೆ ಹಾಗೂ ತಾಲ್ಲೂಕಿನ ಮಲೆನಾಡ ಭಾಗದ ಜನರನ್ನು ಗೊಂದಲಕ್ಕೆ ಒಡ್ಡಿರುವ ಕಸ್ತೂರಿ ರಂಗನ್ ವರದಿಯ ಕುರಿತಾದ ಹೋರಾಟಗಳಿಗೆ ಅಧಿಕಾರಿಗಳ ಪ್ರತಿಸ್ಪಂದನವಿಲ್ಲದೆ ಇರುವುದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದೆ ವಿಚಾರಕ್ಕೆ ಪೂರಕವಾಗಿ ಮಾತನಾಡಿದ ಕೆದೂರು ಸದಾನಂದ ಶೆಟ್ಟಿಯವರು, ತಾಲ್ಲೂಕಿನ ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ನೀರನ್ನು ಒದಗಿಸಲು ವರಾಹಿ ಯೋಜನೆಯ ಅಧಿಕಾರಿಗಳು ತೋರುತ್ತಿರುವ ವಿಳಂಭ ನೀತಿಯಿಂದಾಗಿ ಕಳೆದ 35 ವರ್ಷಗಳಿಂದ ಈ ಭಾಗದ ರೈತರಿಗೆ ಮೋಸ ಮಾಡಲಾಗುತ್ತಿದೆ. ಇದೀಗ ಸರಿಯಾದ ಕಾಲಘಟ್ಟದಲ್ಲಿ ಜಿಲ್ಲಾ ರೈತ ಸಂಘಟನೆ ಧರಣಿ ಸತ್ಯಾಗ್ರಾಹ ನಡೆಸುತ್ತಿರುವುದರಿಂದ, ತಾನು ಇಂದಿನ ಸಭೆಯನ್ನು ಬಹಿಷ್ಕರಿಸಿ, ಸತ್ಯಾಗ್ರಾಹದಲ್ಲಿ ಭಾಗವಿಸುವುದಾಗಿ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಎಸ್.ರಾಜೂ ಪೂಜಾರಿ, ಬೆಳ್ಳಾಡಿ ಶಂಕರ ಶೆಟ್ಟಿ, ಎಚ್.ಮಂಜಯ್ಯ ಶೆಟ್ಟಿ, ಪ್ರದೀಪ್‌ಕುಮಾರ ಶೆಟ್ಟಿ ಕಾವ್ರಾಡಿ, ಪ್ರದೀಪ್ಚಂದ್ರ ಶೆಟ್ಟಿ ಬಿದ್ಕಲ್‌ಕಟ್ಟೆ ಮುಂತಾದವರು ತಾವು ಈ ನಿಲುವನ್ನು ಬೆಂಬಲಿಸುವುದಾಗಿ ತಿಳಿಸಿದರು. ಈ ವಿಚಾರಕ್ಕೆ ಅಧ್ಯಕ್ಷರಾದಿಯಾಗಿ ಸಹಮತವನ್ನು ವ್ಯಕ್ತಪಡಿಸಿದ ಸರ್ವ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಸಭಾಂಗಣದಿಂದ ನೆಲ ಅಂತಸ್ತಿಗೆ ಬಂದ ಸದಸ್ಯರು, ಅಲ್ಲಿ ಅನೌಪಚಾರಿಕ ಸಭೆಯನ್ನು ನಡೆಸಿ, ಸರ್ವ ಸದಸ್ಯರು ಸಿದ್ದಾಪುರದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಾಹದಲ್ಲಿ ಪಾಲ್ಗೊಳ್ಳುವ ಒಕ್ಕೂರಲ ತೀರ್ಮಾನವನ್ನು ಕೈಗೊಂಡರು.
ವಿಳಂಭಕ್ಕೆ ತಾ.ಪಂ ಅಧ್ಯಕ್ಷರ ಆಕ್ರೋಶ: ಸಿದ್ದಾಪುರದಲ್ಲಿ ಜಿಲ್ಲಾ ರೈತ ಸಂಘಟನೆಯ ನೇತ್ರತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಾಹದಲ್ಲಿ ಪಾಲ್ಗೊಂಡು ಮಾತನಾಡಿದ ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ಕೋಣಿ ಅವರು ಅಧಿಕಾರಿಗಳ ವರ್ತನೆಗಳು ನಾವಿನ್ನು ಬ್ರಿಟೀಷರ ಆಳ್ವಿಕೆಯಲ್ಲಿ ಇದ್ದೇವೂ ಏನೋ ಎನ್ನುವ ಭೃಮೆ ಹುಟ್ಟಿಸುತ್ತಿದೆ. ಜನ ಸಾಮಾನ್ಯರ ಕೈಗೆ ಅಧಿಕಾರ ನೀಡಬೇಕು ಎನ್ನುವ ಉದ್ದೇಶದಿಂದ, ರೂಪಿಸಲಾದ ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಗಳನ್ನೆ ದಿಕ್ಕರಿಸುವ ಕೆಲಸಗಳು ನಡೆಯುತ್ತಿದೆ. ತಾಲ್ಲೂಕು ಪಂಚಾಯಿತಿ ನಿಯಮಾವಳಿಗಳಿಗೆವಿಭಿನ್ನ ವ್ಯಾಖ್ಯಾನ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗುತ್ತಿದೆ. ವರಾಹಿ ಒಂದೆ ಕಾರಣದಿಂದ ಉಡುಪಿ ಜಿಲ್ಲೆಯ ನೆಮ್ಮದಿಯ ವಾತಾವರಣ ಹಾಳಾಗುತ್ತಿದ್ದರೂ, ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಾಲ್ಲೂಕು ಪಂಚಾಯಿತಿಯ ಸದಸ್ಯರುಗಳಾದ ಎಸ್.ರಾಜು ಪೂಜಾರಿ, ಎಚ್.ಮಂಜಯ್ಯ ಶೆಟ್ಟಿ ಹರ್ಕೂರು, ಗೌರಿ ದೇವಾಡಿಗ, ಸುಜಾತ ಖಾರ್ವಿ, ಹೇಮಾವತಿ ಪೂಜಾರಿ, ಪೂರ್ಣಿಮಾ, ಕಾಳಾವರ ದೀಪಕ್‌ಕುಮಾರ ಶೆಟ್ಟಿ, ಪ್ರದೀಪ್‌ಚ್ಚಂದ್ರ ಬಿದ್ಕಲ್‌ಕಟ್ಟೆ ಮುಂತಾದವರು ಧರಣಿ ಸತ್ಯಾಗ್ರಾಹ ಸಭೆಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಾಸಕ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಸಂಘಟನೆಯ ಪ್ರಮುಖರಾದ ವಕೀಲರುಗಳಾದ ಉಮೇಶ್ ಶೆಟ್ಟಿ ಶಾನ್ಕಟ್ಟು, ವಿಕಾಸ ಹೆಗ್ಡೆ ಬಸ್ರೂರು ಇದ್ದರು.