ಕರ್ನಾಟಕ

289 ಮಕ್ಕಳ ಮೇಲೆ ಅತ್ಯಾಚಾರ : ಶಿಕ್ಷೆಯಾಗಿದ್ದು ಎರಡೇ..!

Pinterest LinkedIn Tumblr

rape

ಬೆಂಗಳೂರು, ಜ.5: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ 289 ಪ್ರಕರಣಗಳು ದಾಖಲಾಗಿವೆ. ಅಚ್ಚರಿ ಎಂದರೆ ಒಟ್ಟು 289 ಪ್ರಕರಣಗಳ ಪೈಕಿ ಕೇವಲ ಎಂಟೇ ಎಂಟು ಪ್ರಕರಣಗಳ ವಿಚಾರಣೆ ನಡೆದಿದ್ದು, ಬರಿ ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 2014ರ ಉದ್ದಕ್ಕೂ ಬೆಂಗಳೂರು ನಗರದ ಪ್ರತಿಷ್ಠಿತ ಶಾಲೆಗಳೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಪುಟ್ಟ ಮಕ್ಕಳ ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯಗಳು ನಡೆದು ಅನೇಕ ಪ್ರತಿಭಟನೆಗಳನ್ನೂ ಸಾರ್ವಜನಿಕರು ಮಾಡಿದರು.

ಈ ಹಿನ್ನೆಲೆಯಲ್ಲಿ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಎಗೈನ್‌ಸ್ಟ್ ಸೆಕ್ಷುಯಲ್ ಅಫೆನ್ಸ್ ಆಕ್ಟ್ (ಪಿಓಸಿಎಸ್‌ಓ ಪೋಕ್ಸೊ) ಕಾಯ್ದೆಯಡಿ 289 ಪ್ರಕರಣಗಳು ದಾಖಲಾದವು. ಅದರಲ್ಲಿ 8 ಪ್ರಕರಣಗಳ ವಿಚಾರಣೆ ನಡೆದಿವೆ. ಇಬ್ಬರಿಗೆ ಶಿಕ್ಷೆಯಾಗಿದೆ.

ಇದು ನಮ್ಮ ನ್ಯಾಯದಾನದ ವ್ಯವಸ್ಥೆಯಲ್ಲಿ ಉಂಟಾಗುವ ವಿಳಂಬ, ನಿರ್ಲಕ್ಷ್ಯಗಳನ್ನು ದರ್ಶನ ಮಾಡಿಸುತ್ತದೆ. 2014ರ ಜುಲೈನಲ್ಲಿ ಪೂರ್ವ ಬೆಂಗಳೂರಿನ ಶಾಲೆಯೊಂದರಲ್ಲಿ ಇಬ್ಬರು ಜಿಮ್ ತರಬೇತುದಾರರು 3 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಡಿಸೆಂಬರ್‌ನಲ್ಲಿ ಮತ್ತೊಂದು ದಾಖಲೆಯಲ್ಲಿ, ಸಹಾಯಕ ಶಿಕ್ಷಕನೇ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಮತ್ತೊಂದು ಪ್ರಕರಣ ನಡೆದಿತ್ತು.

ಇದನ್ನೆಲ್ಲಾ ಗಮನಿಸಿದ ನಾಗರಿಕರೊಬ್ಬರು, ಜನಪ್ರತಿನಿಧಿಗಳು ನಿದ್ದೆಯಿಂದ ಮೇಲೇಳಬೇಕು, ಸರ್ಕಾರ ಕ್ರಮ ಕೈಗೊಳ್ಳಬೇಕು, ಪೊಲೀಸರು ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎನ್ನುತ್ತಾರೆ. ಐಟಿ ನಗರ ಎಂದೇ ಖ್ಯಾತವಾದ ರಾಜಧಾನಿ ಬೆಂಗಳೂರು ನಗರ ಕಳೆದ ಎರಡು ವರ್ಷಗಳಲ್ಲಿ ಅತ್ಯಾಚಾರಿಗಳ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 289 ಮಕ್ಕಳ ಮೇಲೆ ಅತ್ಯಾಚಾರಗಳು ನಡೆದಿವೆ. ಒಟ್ಟಾರೆ 2012ರಿಂದ 2013ರ ವರೆಗಿನ 2 ಪ್ರಕರಣಗಳಲ್ಲಿ ಮಾತ್ರ ಅತ್ಯಾಚಾರ ಪ್ರಕರಣ ಸಾಭೀತುಪಡಿಸುವಲ್ಲಿ ಮಾತ್ರ ಪೊಲೀಸರಿಗೆ ಸಾಧ್ಯವಾಗಿದೆ.

ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವಿಚಾರಣೆ ವೇಳೆ ಹೀಗೇಕೆ ಬಿದ್ದು ಹೋಗುತ್ತಿವೆ ಎಂಬುದು ಪೊಲೀಸರಿಗೆ ಈಗ ಯಕ್ಷ ಪ್ರಶ್ನೆಯಾಗಿ ತಲೆಯನ್ನು ಕೊರೆಯತೊಡಗಿದೆ. ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳು ತ್ವರಿತವಾಗಿ ವಿಚಾರಣೆ ಮುಗಿದು ಆರೋಪಿಗಳಿಗೆ ಶಿಕ್ಷೆಯಾಗಬೇಕು. ಆದರೆ, ಹಾಗಾಗುತ್ತಿಲ್ಲ. ನ್ಯಾಯಾಲಯಗಳಲ್ಲಿ ಈಗಾಗಲೇ ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದ್ದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಕರಣ ತನಿಖೆಗೆ ತರಬೇತಿ ಪಡೆದ ನ್ಯಾಯಾಧೀಶರ ಅಗತ್ಯವಿದೆ ಎನ್ನುತ್ತಾರೆ ಮಕ್ಕಳ ಹಕ್ಕುಗಳ ಕಾರ್ಯಕರ್ತ ಡಾ.ಶೈಭ್ಯ ಸಲ್ಡಾನಾ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟಿದ್ದರೂ ಆರೋಪಿಗಳ ವಿರುದ್ಧದ ಪ್ರಕರಣಗಳು ಪೂರ್ಣಗೊಳ್ಳುತ್ತಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂಬುದು ಕಳವಳಕಾರಿ ವಿಚಾರವಾಗಿದೆ.

Write A Comment