ಬೆಂಗಳೂರು: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಭಾನುವಾರ ನಗರದಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ‘ಈದ್ ಮಿಲಾದ್’ ಹಬ್ಬವನ್ನು ಆಚರಿಸಿದರು.
ಮುಸ್ಲಿಮರು ಬಾಹುಳ್ಯವಿರುವ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ವಾತಾವರಣ ಮನೆ ಮಾಡಿತ್ತು. ಅಬಾಲವೃದ್ಧರಾದಿಯಾಗಿ ಪರಸ್ಪರರು ಹಬ್ಬದ ಶುಭಾಶಯ ಕೋರಿದರು.
ಮೈಸೂರು ರಸ್ತೆ, ಕಾಟನ್ ಪೇಟೆ, ನೀಲಸಂದ್ರ, ಮಲ್ಲೇಶ್ವರ, ಶಿವಾಜಿನಗರ, ತಿಲಕ್ ನಗರ, ಬನಶಂಕರಿ, ಬೊಮ್ಮನಹಳ್ಳಿ, ಜೆ.ಪಿ.ನಗರ, ಬಿಸ್ಮಿಲ್ಲಾ ನಗರ, ಸಿದ್ಧಾಪುರ ಸೇರಿದಂತೆ ಅನೇಕ ಪ್ರದೇಶಗಳಿಂದ ಸಾವಿರಾರು ಜನರು ಅಲಂಕೃತ ವಾಹನಗಳೊಂದಿಗೆ ಹಬ್ಬದ ಜುಲೂಸ್‌ಗಳಲ್ಲಿ (ಮೆರವಣಿಗೆ) ನಗರದ ನೃಪತುಂಗ ರಸ್ತೆಯಲ್ಲಿರುವ ವೈಎಂಸಿಎ ಮೈದಾನಕ್ಕೆ ಬಂದರು.
ಮೈದಾನದಲ್ಲಿ ‘ಮರ್ಕಜಿ ಮಿಲಾದ್–ಒ–ಸೀರತ್ ಸಮಿತಿ ಸುನ್ನಿ ಜಮಾತ್ ಆಲ್ ಕರ್ನಾಟಕ’ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮ ಗುರುಗಳ ಉಪನ್ಯಾಸವನ್ನು ಆಲಿಸಿದರು. ಸಚಿವರಾದ ಕೆ.ಜೆ.ಜಾರ್ಜ್, ಆರ್.ರೋಷನ್ ಬೇಗ್, ಶಾಸಕ ತನ್ವೀರ್ ಸೇಠ್, ಕಾಂಗ್ರೆಸ್ ಮುಖಂಡ ಜಿ.ಎ. ಬಾವಾ ಮತ್ತಿತರರು ಉಪಸ್ಥಿತರಿದ್ದರು.
ಟ್ಯಾನರಿ ರಸ್ತೆ: ಯಲಹಂಕ, ಶಿಡ್ಲಘಟ್ಟ, ಹೊಸಕೋಟೆ, ಹೆಗಡೆ ನಗರ, ಸಾರಾಯಿ ಪಾಳ್ಯ, ಮುನಿರೆಡ್ಡಿ ಪಾಳ್ಯ ಸೇರಿದಂತೆ ಸುಮಾರು 15 ಪ್ರದೇಶಗಳಿಂದ ಹೊರಟ ಹಬ್ಬದ ಜುಲೂಸ್‌ಗಳು ಟ್ಯಾನರಿ ರಸ್ತೆಯಲ್ಲಿರುವ ಹಜರತ್ ಬಿಲಾಲ್ ಮಸೀದಿಯ ಬಳಿ ಬಂದು ಸೇರಿದವು.
ಮಸೀದಿ ಬಳಿಯ ‘ಅಶುರ್ ಖಾನಾ–ಇ–ಬಿಬಿ ಜೈನಾಭಿಯಾ’ದಲ್ಲಿ ಮಧ್ಯಾಹ್ನ ‘ಆಲ್ ಕರ್ನಾಟಕ ಮಿಲಾದ್ ಒ ಜುಲೂಸ್ ಎ ರಹ್ಮತುಲ್ ಆಲಮೀನ್ ಸಮಿತಿ’ ನೇತೃತ್ವದಲ್ಲಿ ಧಾರ್ಮಿಕ ಧ್ವಜಾರೋಹಣ ನೆರವೆರಿಸಲಾಯಿತು.
ನಂತರ ಅವರು ಅಲ್ಲಿಂದ ಬೃಹತ್ ಮೆರವಣಿಗೆಯಲ್ಲಿ ಹೊರಟು ಹೆನ್ಸ್ ರಸ್ತೆ, ಜೈನ್ ದೇವಾಲಯ ರಸ್ತೆ, ಚಾರ್‌ಮಿನಾರ್ ರಸ್ತೆ, ರಸಲ್ ಮಾರುಕಟ್ಟೆಯ ಮಾರ್ಗವಾಗಿ ಬಂಬೂ ಬಜಾರ್‌ನ ಮದೀನಾ ಮಸೀದಿ ಮೈದಾನಕ್ಕೆ ಬಂದು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಶರೀಫ್, ಉಪಾಧ್ಯಕ್ಷ ಶೇಖ್ ಹುಸೇನ್, ಜಂಟಿ ಕಾರ್ಯದರ್ಶಿ ಅಮೃತ್ ಜೈ ಮತ್ತು ಸಮುದಾಯದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಸಂಚಾರ ದಟ್ಟಣೆ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭಾನುವಾರ ನಗರದ ವಿವಿಧೆಡೆ ಸಂಚಾರ ವಿಭಾಗದ ಪೊಲೀಸರು ಸಂಚಾರ ವ್ಯವಸ್ಥೆ ಬದಲಾವಣೆ ಮಾಡಿದ್ದರು. ಆದರೂ, ಸಂಜೆ ವೇಳೆ ಹಡ್ಸನ್ ವೃತ್ತ ಸೇರಿದಂತೆ ಕೆಲ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂತು.
ಮೂಲಭೂತವಾದಿಗಳಿಂದ ಧರ್ಮಕ್ಕೆ ಕೆಡಕು
ವೈಎಂಸಿಎ ಮೈದಾನದಲ್ಲಿ ನಡೆದ ಈದ್ ಮಿಲಾದ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ‘ಧರ್ಮಗಳ ನಡುವೆ ಗೋಡೆ ಕಟ್ಟುವ, ಸಮಾಜದಲ್ಲಿ ವಿಷಬೀಜ ಬಿತ್ತುವ ಮೂಲಭೂತವಾದಿಗಳಿಂದ ಧರ್ಮಕ್ಕೆ ಕೆಡಕು ಉಂಟಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬ ಪ್ರಜ್ಞಾವಂತರು ಕೋಮು ಸೌಹಾರ್ದ ಕದಡುವವರ ವಿರುದ್ಧ ಧ್ವನಿ ಎತ್ತಬೇಕು’ ಎಂದು ಹೇಳಿದರು.
‘ಯಾವುದೇ ಧರ್ಮ ಹಿಂಸೆಯನ್ನು ಬೋಧಿಸುವುದಿಲ್ಲ. ಶಾಂತಿ, ನೆಮ್ಮದಿ ಪ್ರವಾದಿ ಮೊಹಮ್ಮದ್ ಅವರ ಆಶಯವಾಗಿದೆ. ನಾವು ಸಹಬಾಳ್ವೆಯ ಮೂಲಕ ಅವರ ಕನಸನ್ನು ನನಸು ಮಾಡಬೇಕಿದೆ’ ಎಂದು ತಿಳಿಸಿದರು.