ಬೆಂಗಳೂರು: ಜನನಿಬಿಡ ಪ್ರದೇಶವಾದ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು, ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಅತ್ಯಾಧುನಿಕ ತಂತ್ರಜ್ಞಾನದ 62 ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ.
ಡಿ.28ರಂದು ಚರ್ಚ್‌ಸ್ಟ್ರೀಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಆದರೆ, ಘಟನೆಯ ದೃಶ್ಯಗಳನ್ನು ಪರಿಶೀಲಿಸಲು ಪೊಲೀಸರಿಗೆ ಆ ರಸ್ತೆಯಲ್ಲಿ ಒಂದೇ ಒಂದು ಸಿ.ಸಿ ಕ್ಯಾಮೆರಾ ಲಭ್ಯವಾಗಿರಲಿಲ್ಲ. ಹೀಗಾಗಿ ಸಿಬ್ಬಂದಿ ಮೆಗಾಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ಪಡೆದ 152 ಕ್ಯಾಮೆರಾಗಳಲ್ಲಿ 62 ಕ್ಯಾಮೆರಾಗಳನ್ನು ಚರ್ಚ್‌ಸ್ಟ್ರೀಟ್ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಅಳವಡಿಸುತ್ತಿದ್ದಾರೆ.
‘ಎಂ.ಜಿ.ರಸ್ತೆ, ವಿಠ್ಠಲ್ ಮಲ್ಯ, ಸೇಂಟ್ ಮಾರ್ಕ್ಸ್, ಇನ್‌ಫೆಂಟ್ರಿ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಅಶೋಕನಗರ, ಕಬ್ಬನ್‌ಪಾರ್ಕ್, ಹಲಸೂರು, ಸಿಲ್ವರ್ ಜ್ಯೂಬಿಲಿ ಪಾರ್ಕ್, ಹೈಗ್ರೌಂಡ್ಸ್ ಸೇರಿದಂತೆ ಸಿಬಿಡಿ ವ್ಯಾಪ್ತಿಗೆ ಒಳಪಡುವ ಎಲ್ಲ ರಸ್ತೆಗಳಲ್ಲೂ ಕ್ಯಾಮೆರಾಗಳನ್ನು ಹಾಕಲು ಉದ್ದೇಶಿಸಲಾಗಿದೆ. ಜ.1ರಿಂದ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯುತ್ತಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.
‘ಸಿಬಿಡಿ ಪ್ರದೇಶದಲ್ಲಿ ಅಳವಡಿಸುವ ಅಷ್ಟೂ ಕ್ಯಾಮೆರಾಗಳು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಹೊಂದಿರುತ್ತವೆ. ಹೀಗಾಗಿ ಈ ಪ್ರದೇಶದ ಸಂಪೂರ್ಣ ವಿದ್ಯಮಾನವು ನಿಯಂತ್ರಣ ಕೊಠಡಿಯ ಪರದೆ ಮೇಲೆ ಪ್ರದರ್ಶನವಾಗಲಿದೆ. ದಿನದ 24 ಗಂಟೆಯೂ ಸಿಬ್ಬಂದಿ ಆ ಪರದೆ ವೀಕ್ಷಿಸಲಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ಹಾಗೂ ಅಪರಾಧ ಪ್ರಕರಣ ನಡೆದಾಗ ಆರೋಪಿಗಳ ಪತ್ತೆಗೆ ಈ ಕ್ಯಾಮೆರಾಗಳು ನೆರವಿಗೆ ಬರಲಿವೆ’ ಎಂದು ಹೇಳಿದರು.
‘ಎಚ್.ಡಿ ಗುಣಮಟ್ಟದ ಈ ಕ್ಯಾಮೆರಾಗಳು 360 ಡಿಗ್ರಿ ತಿರುಗುವ ಸಾಮರ್ಥ್ಯ ಹೊಂದಿದ್ದು, ಒಂದು ಸ್ಥಳದಲ್ಲಿ ಅಳವಡಿಸಿದರೆ ಸುತ್ತಮುತ್ತಲ ದೃಶ್ಯಗಳು ಸ್ಪಷ್ಟವಾಗಿ ಗೋಚರವಾಗಲಿದೆ’ ಎಂದು ಮಾಹಿತಿ ನೀಡಿದರು.
₨75 ಕೋಟಿ ಬಿಡುಗಡೆ: ‘ನಗರದ ಜಂಕ್ಷನ್‌ಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲು ಹಾಗೂ ಸಂಚಾರ ದಟ್ಟಣೆಯ ನಿವಾರಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ಮೆಗಾಸಿಟಿ ಯೋಜನೆಯಡಿ ₨ 75 ಕೋಟಿ ಬಿಡುಗಡೆ ಮಾಡಿದೆ. ಪ್ರಾಥಮಿಕ ಹಂತದಲ್ಲಿ 152 ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ಇವುಗಳಲ್ಲಿ ಸಿಬಿಡಿ ಪ್ರದೇಶಕ್ಕೆ 62 ಕ್ಯಾಮೆರಾಗಳನ್ನು ನೀಡಲಾಗಿದೆ. ಹೆಚ್ಚು ಸಿ.ಸಿ ಕ್ಯಾಮೆರಾ ಅಳವಡಿಸಿರುವ ಮಹಾನಗರಗಳ ಪಟ್ಟಿಯಲ್ಲಿ ಶೀಘ್ರದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿರುತ್ತದೆ’ ಎಂದು ನಗರ ಪೊಲೀಸ್ ಕಮಿನಷರ್ ಎಂ.ಎನ್.ರೆಡ್ಡಿ ತಿಳಿಸಿದರು.