ಕನ್ನಡ ವಾರ್ತೆಗಳು

ಉಡುಪಿ: ನೆಂಚಾರು ವಿದ್ಯಾರ್ಥಿನಿ ಬಾವಿಗೆ ಬಿದ್ದು ಸಾವು

Pinterest LinkedIn Tumblr

ಉಡುಪಿ: ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಮನೆ ಸಮೀಪದ ಬಾವಿಯಿಂದ ನೀರೆತ್ತುವ ಸಂದರ್ಭ ಆಕಸ್ಮಿಕವಾಗಿ ಬಾವಿಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮೃತಪಟ್ಟ ಘಟನೆ ನೆಂಚಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀನಿಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ತಮ್ಮಯ್ಯ ನಾಯ್ಕ್ ಎಂಬುವರ ಪುತ್ರಿ ಪೂರ್ಣಿಮಾ(16) ಎಂದು ತಿಳಿದುಬಂದಿದೆ.

Nencharu_Girl_Death

ಪೂರ್ಣಿಮಾ ಕೂರಾಡಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಳು. ವಿದ್ಯಾರ್ಥಿನಿ ನಿಲಯದಿಂದಲೇ ಶಾಲೆಗೆ ಹೋಗುತ್ತಿದ್ದ ಪೂರ್ಣಿಮಾಗೆ ಕಳೆದ ಒಂದು ವಾರದಿಂದ ವಿಪರೀತ ಕೆಮ್ಮು ಕಾಣಿಸಿಕೊಂಡಿದ್ದರಿಂದ ಶಾಲೆಗೆ ರಜೆ ಹಾಕಿ ಮನೆಗೆ ಬಂದಿದ್ದಳು. ಇತ್ತೀಚೆಗೆ ಹಾಲಾಡಿಯ ಆಸ್ಪತ್ರೆಯಿಂದ ಔಷಧಿ ತೆಗೆದುಕೊಂಡಿದ್ದು, ಮನೆಯಲ್ಲಿಯೇ ಇದ್ದಳು. ೯.೪೫ರ ವೇಳೆಗೆ ಮನೆ ಸಮೀಪದ ಆವರಣವಿಲ್ಲದ ಬಾವಿಯಿಂದ ನೀರೆತ್ತುವ ಸಂದರ್ಭ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಇದೇ ಸಂದರ್ಭ ಮನೆ ಸಮೀಪದ ಮಹಿಳೆಯೊಬ್ಬರು ಇದನ್ನು ನೋಡಿದ್ದಾರೆ. ತಕ್ಷಣ ಮಹಿಳೆ ಮನೆಗೆ ಓಡಿ ಹೋಗಿ ಸುದ್ಧಿ ಮುಟ್ಟಿಸಿದ್ದಾರೆ. ಆದರೆ ಆ ವೇಳೆಗೆ ಆಕೆ ಗಂಭೀರಗೊಂಡಿದ್ದು, ತಕ್ಷಣ ಮೇಲಕ್ಕೆತ್ತಲಾಯಿತು. ನಂತರ ಸಮೀಪದ ರಿಕ್ಷಾವೊಂದರಲ್ಲಿ ಆವರ್ಸೆಗೆ ಕರೆತಂದು, ನಂತರ ಸ್ನೇಹ ಜೀವಿ ಯುವಕ ಮಂಡಲದ ಸದಸ್ಯರ ಸಹಾಯದಿಂದ ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಅತೀ ಕಡುಬಡತನದಲ್ಲಿ ಬದುಕುತ್ತಿರುವ ಪೂರ್ಣಿಮಾ ಕುಟುಂಬದಲ್ಲಿ ಆಕೆಯ ತಂದೆ ತಾಯಿಗೆ ಆರು ಜನ ಮಕ್ಕಳಲ್ಲಿ ಈಕೆ ಐದನೇಯವಳು. ಮಗಳ ದುರ್ಮರಣದಿಂದಾಗಿ ಕುಟುಂಬ ದಿಕ್ಕು ಕಾಣದಂತಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರದ ೧೦೮: ಘಟನೆ ನಡೆದ ತಕ್ಷಣ ೧೦೮ ಅಂಬ್ಯುಲೆನ್ಸ್‌ಗೆ ದೂರವಾಣಿ ಕರೆ ಮಾಡಲಾಗಿದೆ. ಆದರೆ. ಅಲ್ಲಿ ಯಾವುದೇ ವಾಹನಗಳು ಇಲ್ಲ ಎನ್ನುವ ಉತ್ತರ ಬಂದಿದ್ದು, ನಂತರ ಸ್ಥಳೀಯರು ಹಾಗೂ ಸ್ನೇಹ ಜೀವಿ ಯುವಕ ಮಂಡಲದ ಸದಸ್ಯರು ದೂರದ ಊರಿನಿಂದ ಆಟೋ ತರಿಸಿ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ೧೦೮ ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದರೆ ಬಾಲಕಿ ಬದುಕುಳಿಯುತ್ತಿದ್ದಳು ಎಂಬುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Write A Comment