ಕನ್ನಡ ವಾರ್ತೆಗಳು

ಅಸೋಡು : ಕುಂದಾಪುರ ತಾಲೂಕು ಮಟ್ಟದ ಯುವಜನ ಮೇಳಕ್ಕೆ ಚಾಲನೆ

Pinterest LinkedIn Tumblr

ಕುಂದಾಪುರ: ಕಲೆ ಉಳಿಯಲು ರಾಜ ಮಹಾರಾಜರ ಕಾಲದಲ್ಲಿ ರಾಜಾಶ್ರಯ ಪದ್ದತಿ ಇತ್ತು. ಜನಪದೀಯ ಕಲೆ ಇಂದಿನ ದಿನಗಳಲ್ಲಿ ನಶಿಸುತ್ತಿರುವುದು ವಿಷಾಧನೀಯ. ಪುರಾತನವಾದ ಭಾರತೀಯ ಜನಪದ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಜನಪದ ಮೇಳಗಳು ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಯುವಕ ಮಂಡಲಗಳ ಪಾತ್ರ ಮಹತ್ತರವಾಗಿದ್ದು, ಸರ್ಕಾರವೂ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಬಾಕಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಟಿ ಮೆಂಡನ್ ಹೇಳಿದರು.Kundapura_Taluk_Yuvajana Mela

ಕಾಳಾವರ ಗ್ರಾಮ ಪಂಚಾಯಿತಿಯ ಅಸೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ ಕುಂದಾಪುರತ ಹಾಗೂ ಶ್ರೀ ನಂದಿಕೇಶ್ವರ ಯುವಕ ಮಂಡಲ ಅಸೋಡು ಇವರ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಕುಂದಾಪುರ ತಾಲೂಕು ಮಟ್ಟದ ಯುವಜನ ಮೇಳ ಜಾನಪದ ಯುವ ಸಂಪದ 2014-15ನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಯಾವುದೇ ಕೆಲಸ ಮಾಡಬೇಕಾದರೆ ಆಯಾಸವಾಗದ ರೀತಿಯಲ್ಲಿ ಜನಪದ ಹಾಡುಗಳನ್ನು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಅವರು ಅಂದು ನೀಡಿದ ಬಳುವಳಿ ಇಂದೂ ಕೂಡಾ ಜನಮಾನಸದಲ್ಲಿದ್ದರೂ ಅದನ್ನು ಉಳಿಸಿ ಬೆಳೆಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು. ಇಂತಹಾ ಕಾರ್ಯಕ್ರಮಗಳಲ್ಲಿ ಸ್ಪರ್ಧೆಗಳನ್ನು ಸ್ಪರ್ಧೆಯೆಂಬಂತೆ ಕಾಣದೇ ಭಾಗವಹಿಸುವಿಕೆಗೆ ಆಧ್ಯತೆ ನೀಡುವಂತಾದಾಗ ಮಾತ್ರ ಗ್ರಾಮೀಣ ಭಾಗದ ಪ್ರತಿಭೆಗಳಿಗೂ ಹೆಚ್ಚು ಅವಕಾಶ ಸಿಗಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಶಿಕಷಣ ಸ್ಥಾಯಿ ಸಮಿತಿಯ ಮಾಜೀ ಅಧ್ಯಕ್ಷ ಗಣಪತಿ ಟಿ ಶ್ರೀಯಾನ್ ಮಾತನಾಡಿ, ಇಂದಿನ ದಿನಗಳಲ್ಲಿ ವಾಟ್ಸ್ ಅಪ್ ಇಂಟರ್ ನೆಟ್ ಬಳಕೆಯಿಂದ ಮಕ್ಕಳು ಹಳೆಯ ಜಾನಪದ ಸಂಸ್ಕೃತಿ ಬಗ್ಗೆ ಒಲವು ತೋರದಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಇಂತಹಾ ಕಾರ್ಯಕ್ರಮಗಳು ಪ್ರತಿಭೆಗಳನ್ನು ಗುರುತಿಸುವಲ್ಲಿ ಪೂರಕವಾಗಿದೆ. ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಯುವ ಸಂಘಟನೆಗಳು ಹೆಚ್ಚು ಪ್ರಯತ್ನಶೀಲವಾಗಬೇಕು ಎಂದರು. ಅಕ್ಷರ ಜ್ಞಾನವಿಲ್ಲದವರೂ ಕೂಡಾ ಹಿಂದೆ ಜನಪದ ಕಲೆಯನ್ನು ಬಾಯಿಂದ ಬಾಯಿಗೆ ಕರಗತ ಮಾಡಿಕೊಳ್ಳುತ್ತಾ ಬಂದಿದ್ದು, ಇದನ್ನು ಉಳಿಸುವಲ್ಲಿ ಯುವ ಜನತೆ ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದರು.

ಕುಂದಾಪುರ ತಾಲೂಕು ಪಂಚಾಯಿತಿಯ ಅಧ್ಯಕ್ಷ ಭಾಸ್ಕರ ಬಿಲ್ಲವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ದೀಪಕ್‌ಕುಮಾರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮ ಶೆಟ್ಟಿಗಾರ್, ಶ್ರೀ ನಂದಿಕೇಶ್ವರ ಯುವಕ ಮಂಡಲ ಅಸೋಡು ಇದರ ಗೌರವಾಧ್ಯಕ್ಷ ರವಿರಾಜ ಶೆಟ್ಟಿ, ಅಧ್ಯಕ್ಷ ಟಿ. ಸುಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ನಂದಿಕೇಶ್ವರ ಯುವಕಮಂಡಲದ ಕಾರ್ಯದರ್ಶಿ ಸಂತೋಷ್ ಕುಮಾರ್ ಎ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಮ ಮತ್ತು ತಂಡ ಪ್ರಾರ್ಥಿಸಿದರು. ಉಪನ್ಯಾಸಕ ಕೆ. ಉದಯ ಕುಮಾರ್ ಶೆಟ್ಟಿ ನಿರೂಪಿಸಿದರು.

ನಂತರ ಯುವಕ ಯುವತಿಯರಿಗಾಗಿ ಭಾವಗೀತೆ, ಗೀಗೀ ಪದ, ಲಾವಣಿ, ಜನಪದ ಗೀತೆ, ಜಾನಪದ ನೃತ್ಯ, ಶೋಬಾನೆ, ಕೋಲಾಟ, ರಂಗಗೀತೆ, ರಾಗಿ ಬೀಸುವ ಪದಗಳು, ಭಜನೆ, ವೀರಗಾಸೆ, ಏಕಪಾತ್ರಾಭಿನಯ, ಡೊಳ್ಳು ಕುಣಿತ, ಚರ್ಮವಾದ್ಯ ಹಾಗೂ ಯಕ್ಷಗಾನ ಸ್ಪರ್ಧೆಗಳು ನಡೆದವು.

 

Write A Comment