ಕರ್ನಾಟಕ

ಲಿಂಗಾಯತ ಸ್ವತಂತ್ರ ಧರ್ಮ ಸಮಾವೇಶ: ಹೋರಾಟಕ್ಕೆ ಸ್ವಾಮೀಜಿಗಳ ನಿರ್ಧಾರ: ವೀರಶೈವ ಮಹಾಸಭಾ ನಿರ್ಲಕ್ಷ್ಯಕ್ಕೆ ವಿರೋಧ

Pinterest LinkedIn Tumblr

hub

ಹುಬ್ಬಳ್ಳಿ: ‘ಯುಪಿಎ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವದಲ್ಲಿ ‘ಸನಾತನ ಧರ್ಮ’ ಎಂದು ಬರೆದು, ಅಖಿಲ ಭಾರತ ವೀರ­ಶೈವ ಮಹಾಸಭಾ ಮಾಡಿದ ಯಡವಟ್ಟಿನಿಂದಾಗಿಯೇ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಸಿಗುವ ಅವಕಾಶ ಕೈ ತಪ್ಪಿತು’ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವಲಿಂಗಾಯತ ಮಹಾಸಭಾದ ವತಿಯಿಂದ ಭಾನುವಾರ ನಗರದಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದೆ. ಅತ್ತ ಸಚಿವ ಸ್ಥಾನಕ್ಕೂ, ಇತ್ತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ  ಸ್ಥಾನಕ್ಕೂ ನ್ಯಾಯ ಒದಗಿಸಲು ಆಗುತ್ತಿಲ್ಲ. ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಪಡೆ­ಯಲು ಮಾಡಬೇಕಾದ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ’ ಎಂದರು.

‘ವೀರಶೈವ ಎಂಬುದು ಶೈವ ಧರ್ಮದ ಒಂದು ಶಾಖೆ ಮಾತ್ರ, ಆದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರಾಗಿದ್ದು, ವಚನ ಸಾಹಿತ್ಯ, ಭಿನ್ನ ಸಾಮಾಜಿಕ ರಚನೆ ಇವೆಲ್ಲಾ ಪ್ರತ್ಯೇಕತೆಗೆ ಸಾಕ್ಷಿಯಾಗಿದೆ. ಲಿಂಗಾಯತರಿಗೆ ಕಾಶಿ, ರಾಮೇಶ್ವರ, ಶ್ರೀಶೈಲ, ಧರ್ಮಸ್ಥಳ, ತಿರುಪತಿ ಧಾರ್ಮಿಕ ಕ್ಷೇತ್ರಗಳು ಅಲ್ಲ. ಬದಲಿಗೆ ಬಸವಕಲ್ಯಾಣ ಹಾಗೂ ಕೂಡಲಸಂಗಮ ಧರ್ಮಕ್ಷೇತ್ರಗಳಾಗಿವೆ. ಸ್ವಂತಿಕೆ ಹಾಗೂ ಆತ್ಮಗೌರವ ಇಲ್ಲದಿರುವುದು ಸಮುದಾಯದ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಠಾಧೀಶರಾದ ನಾವು ಬಸವಣ್ಣನ ಆಶಯ­ಗಳನ್ನು ಮರೆತಿದ್ದೇವೆ. ಆತ ತೋರಿಸಿದ ದಾರಿಯಲ್ಲಿ ಶೇ 10­ರಷ್ಟಾದರೂ ಸಾಗುವ ಪ್ರಯತ್ನ­ವನ್ನು ಗದಗ–ಡಂಬಳ ಮಠದಿಂದ ಮಾಡಲಾಗು­ತ್ತಿದೆ. ಅದರ ಭಾಗವಾಗಿ ಮದುವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರಿಂದ ಪಾದ ಪೂಜೆ ಮಾಡಿಸಿಕೊಳ್ಳುವುದನ್ನು ನಿಲ್ಲಿಸಿದ್ದೇವೆ’ ಎಂದರು.

ಸಮಾವೇಶ ಉದ್ಘಾಟಿಸಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಬ್ರಿಟಿಷರು ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಆ ಸ್ಥಾನಮಾನ ಇಲ್ಲವಾಗಿ ಹಿಂದೂಗಳ ಗುಲಾಮರಾಗಿದ್ದೇವೆ. ಮಗು ಅಳದಿದ್ದರೆ ತಾಯಿಯೂ ಹಾಲು ಕೊಡುವುದಿಲ್ಲ. ರಾಜಸ್ತಾನ, ಗುಜರಾತ್‌ನಲ್ಲಿ ನಡೆದ ಗುಜ್ಜರ್‌ ಮಾದರಿಯ ಹೋರಾಟದ ರೀತಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.

ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಅಖಿಲ ಭಾರತ ವೀರಶೈವ ಮಹಾಸಭಾವನ್ನು ಲಿಂಗಾಯತ ಮಹಾ­ಸಭಾ ಎಂದು ಬದಲಾಯಿಸಬೇಕಿದೆ. ವೈದಿಕ ಧರ್ಮದ ಶಾಖೆಯಾದ ವೀರಶೈವವನ್ನು ಜೊತೆಗಿ­ಟ್ಟು­ಕೊಂಡರೆ ಲಿಂಗಾಯತರು ಕಲ್ಲು ಕಟ್ಟಿಕೊಂಡು ನೀರಿಗೆ ಧುಮುಕಿದಂತೆ’ ಎಂದು ಎಚ್ಚರಿಸಿದರು.

Write A Comment