ಕರ್ನಾಟಕ

ಕುಡಿದು ಬಸ್ ಓಡಿಸಿದ ಕೆಎಸ್‌ಆರ್‌ಟಿಸಿ ಚಾಲಕ; ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ

Pinterest LinkedIn Tumblr

drive

ಕೆಜಿಎಫ್‌ (ಕೋಲಾರ ಜಿಲ್ಲೆ): ನಗರ­ದಿಂದ ಚೆನ್ನೈಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕನೊಬ್ಬ ಕುಡಿದು, ಬಸ್ ಓಡಿಸಿದ್ದರಿಂದ ಪ್ರಯಾ­ಣಿ­ಕರೇ ಆತನನ್ನು ತಮಿಳುನಾಡು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.

ಚಾಲಕ ಭೀಮಪ್ಪ ಉಡುಮನಿ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಂದ ಬೆಳಿಗ್ಗೆ 8.30ಕ್ಕೆ ಚೆನ್ನೈಗೆ ತೆರಳುವ ಬಸ್‌ನಲ್ಲಿ ಸುಮಾರು 60 ಪ್ರಯಾಣಿಕರಿದ್ದರು. ಮಾರ್ಗ ಮಧ್ಯದ ನಾಯಕನೇರಿ ಹತ್ತಿರದ ಹೋಟೆ­ಲ್‌­ನಲ್ಲಿ ಉಪಾಹಾರಕ್ಕಾಗಿ ಬಸ್‌ ನಿಲ್ಲಿಸಿದ ಚಾಲಕ  ಮದ್ಯ ಸೇವಿಸಿದ್ದಾನೆ.

ಅಲ್ಲಿಂದ ಗುಡಿಯಾತ್ತಂ ಕಾಡಿನ ಘಾಟಿ ರಸ್ತೆಯಲ್ಲಿ ಸಾಗುವಾಗ ಬಸ್‌ ಅಡ್ಡಾದಿಡ್ಡಿ ಚಲಿಸುತ್ತಿರುವುದನ್ನು ಗಮ­ನಿಸಿದ ಪ್ರಯಾಣಿಕರು, ನಿಲ್ಲಿಸುವಂತೆ ಸೂಚಿಸಿ, ಚಾಲಕನನ್ನು ಬಾನೆಟ್ ಮೇಲೆ ಮಲಗಿಸಿದ್ದಾರೆ. ಪ್ರಯಾಣಿಕರಾದ ನಿರ್ಮಲ್ ಎಂಬುವವರು ಗುಡಿಯಾತ್ತಂ­ವರೆಗೆ ಬಸ್ ಓಡಿಸಿ­ಕೊಂಡು ಹೋಗಿ, ಭೀಮಪ್ಪನನ್ನು ಪೊಲೀ­ಸರ ವಶಕ್ಕೆ ಒಪ್ಪಿಸಿದ್ದಾರೆ.

ಇಡೀ ಘಟನೆ ಬಗ್ಗೆ ಮಾಹಿತಿ ಪಡೆದ ಕೆಜಿಎಫ್‌ ಡಿಪೊ ವ್ಯವಸ್ಥಾಪಕ ಒ.ವೈ. ರಮೇಶ್‌ ಅವರು ಬದಲಿ ಸಿಬ್ಬಂದಿ­ಯೊಂ­ದಿಗೆ ಗುಡಿಯಾತ್ತಂಗೆ ಹೋಗಿ ಬಸ್‌ ತೆರಳಲು ಅವಕಾಶ ಮಾಡಿ­ಕೊಟ್ಟರು. ಪ್ರಯಾಣಿಕರು ಒಂದೂವರೆ ಗಂಟೆ ತಡವಾಗಿ ಚೆನ್ನೈ ತಲುಪಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಭೀಮಪ್ಪ ಮಾರ್ಗ ಮಧ್ಯದಲ್ಲಿ ಕುಡಿದು ಬಸ್‌ ಓಡಿಸಿರುವುದು ದೃಢಪಟ್ಟಿದೆ. ಗುಡಿಯಾತ್ತಂ ಪೊಲೀಸರು ಈಗಾಗಲೇ ಆತನ ಮೇಲೆ ಮದ್ಯಸೇವನೆ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಮೊಕದ್ದಮೆ ದಾಖಲು ಮಾಡಿದ್ದಾರೆ. ಪೊಲೀಸರು ಮತ್ತು ಪ್ರಯಾಣಿಕರ ಹೇಳಿಕೆ ಪಡೆದಿದ್ದು, ಚಾಲಕನ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಡಿಪೊ ವ್ಯವಸ್ಥಾಪಕ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಲಕನ ಕುಡಿತದ ಅವಾಂತರವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

Write A Comment