ಬೆಂಗಳೂರು: ಕೇರಳದಿಂದ ನಗರಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳವು ಮಾಡುತ್ತಿದ್ದ ಮಹಮದ್ ರೌಫ್ (23) ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿ, ಚಿನ್ನಾಭರಣ ಸೇರಿದಂತೆ ರೂ. 8 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕೇರಳದ ಮಾಲೂರು ಗ್ರಾಮದ ರೌಫ್, ನಗರದ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದೂವರೆ ವರ್ಷಗಳ ಹಿಂದೆ ಕೆಲಸ ಬಿಟ್ಟು ರಾಜ್ಯಕ್ಕೆ ಮರಳಿದ್ದ ಈತ, ಆಗಾಗ್ಗೆ ನಗರಕ್ಕೆ ಬಂದು ಕಳವು ಮಾಡಿಕೊಂಡು ಹೋಗುತ್ತಿದ್ದ.
ಸಭ್ಯನಂತೆ ಉಡುಪು ಧರಿಸಿ ನಗರಕ್ಕೆ ಬರುತ್ತಿದ್ದ ರೌಫ್, ಬೆಳಿಗ್ಗೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡಿಕೊಂಡು ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ರಾತ್ರಿ ವೇಳೆ ಆ ಮನೆಗಳ ಬೀಗ ಮುರಿದು ಹಣ– ಆಭರಣ ದೋಚುತ್ತಿದ್ದ. ಇದೇ ರೀತಿ ಸುಮಾರು ಹತ್ತು ಪ್ರಕರಣಗಳಲ್ಲಿ ರೌಫ್ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ಇತ್ತೀಚೆಗೆ ಬಸವೇಶ್ವರನಗರದ ಅಶೋಕ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಹಾಗೂ ಡೆಬಿಟ್ ಕಾರ್ಡ್ ದೋಚಿದ್ದ. ಈ ಸಂಬಂಧ ಅಶೋಕ್ ಅವರು ಬಸವೇಶ್ವರನಗರ ಠಾಣೆಗೆ ದೂರು ಕೊಟ್ಟಿದ್ದರು.
ದೂರುದಾರರು ಆ ಡೆಬಿಟ್ ಕಾರ್ಡ್ ಮೇಲೆಯೇ ರಹಸ್ಯ ಸಂಖ್ಯೆ (ಪಾಸ್ವರ್ಡ್) ಬರೆದಿದ್ದರು. ಹೀಗಾಗಿ ಆರೋಪಿ ಕಣ್ಣೂರು ಜಿಲ್ಲೆಯ ಎಟಿಎಂ ಘಟಕದಲ್ಲಿ ಹಣ ಡ್ರಾ ಮಾಡಿದ್ದ. ಈ ಸಂಬಂಧ ಅಶೋಕ್ ಅವರ ಮೊಬೈಲ್ಗೆ ಸಂದೇಶ ಬಂದಿತ್ತು. ಕೂಡಲೇ ಮತ್ತೆ ಪೊಲೀಸರನ್ನು ಭೇಟಿಯಾದ ಅವರು, ಆರೋಪಿ ಹಣ ಡ್ರಾ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ, ಕಣ್ಣೂರಿನ ಎಟಿಎಂ ಘಟಕದಿಂದ ಹಣ ಡ್ರಾ ಆಗಿರುವ ಸಂಗತಿ ಗೊತ್ತಾಯಿತು. ನಂತರ ಒಂದು ತಂಡ ಅಲ್ಲಿಗೆ ತೆರಳಿ, ಎಟಿಎಂ ಘಟಕದ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ರೌಫ್ನ ಚಹರೆ ತೆಗೆದುಕೊಂಡಿತು. ಬಳಿಕ ನಗರದ ಎಲ್ಲ ಠಾಣೆಗಳಿಗೂ ಆತನ ಭಾವಚಿತ್ರ ರವಾನಿಸಲಾಯಿತು. ಆಗ ಆಡುಗೋಡಿ ಪೊಲೀಸರು ಆತನನ್ನು ಗುರುತಿಸಿದರು ಎಂದು ಹಿರಿಯ ಅಧಿಕಾರಿಗಳು ಹೇಳಿದರು.
‘ಆರೋಪಿಯು 2013ರಲ್ಲಿ ಆಡುಗೋಡಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಈ ಪ್ರಕರಣ ಸಂಬಂಧ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆರೋಪಿ ಕೇರಳಕ್ಕೆ ಹಿಂದಿರುಗಿದ್ದ. ಆತನ ಪೂರ್ವಾಪರದ ವಿವರಗಳು ಠಾಣೆಯಲ್ಲಿ ಇದ್ದುದರಿಂದ ತಂಡವನ್ನು ಕೇರಳಕ್ಕೆ ಕಳುಹಿಸಲಾಯಿತು. ಆತ ಸಂಬಂಧಿಕರ ಮದುವೆ ಸಮಾರಂಭಕ್ಕಾಗಿ ಕಣ್ಣೂರಿಗೆ ತೆರಳುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಲಾಯಿತು. 201 ಗ್ರಾಂ ಚಿನ್ನಾಭರಣ, ಮೂರು ಲ್ಯಾಪ್ಟಾಪ್ ಹಾಗೂ ಬೈಕನ್ನು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.