ಕರ್ನಾಟಕ

ಬೆಂಗಳೂರು: ಜಪಾನೀಸ್‌ ಲಾಂಗ್ವೇಜ್‌ ಸ್ಕೂಲ್‌ನ 30ನೇ ವಾರ್ಷಿಕೋತ್ಸವ ಸಮಾರಂಭ; ಜಪಾನಿ ಹಾಡು ಹಾಡಿದ ರಾಯಲ್‌ ಎಕೋ

Pinterest LinkedIn Tumblr

japan

ಬೆಂಗಳೂರು: ಭಾರತ ಮತ್ತು ಜಪಾನ್‌ ಸಂಸ್ಕೃತಿಗಳ ಸಮ್ಮಿಲನಕ್ಕೆ ನಗರದ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನ ಸಭಾಂಗಣ ಮಂಗಳವಾರ ಸಾಕ್ಷಿಯಾಯಿತು! ಜಪಾನ್‌ ಭಾಷೆ, ಸಂಸ್ಕೃತಿ ಮತ್ತು ಬೆಂಗ­ಳೂರಿಗರ ನಡುವಣ ಕೊಂಡಿ­ಯಾ­ಗಿ­­ರುವ ಜಪಾನೀಸ್‌ ಲಾಂಗ್ವೇಜ್‌ ಸ್ಕೂಲ್‌ನ (ಜೆಎಲ್‌ಎಸ್‌) 30ನೇ ವಾರ್ಷಿ­­ಕೋತ್ಸವ ಕಾರ್ಯಕ್ರಮದಲ್ಲಿ ಈ ಅಪ­ರೂಪದ ಸನ್ನಿವೇಶ ಸೃಷ್ಟಿ­ಯಾಯಿತು.

ಬೆಂಗಳೂರು ಜನತೆಗೆ  ಜಪಾನಿನ ಭಾಷೆ ಮತ್ತು ಅಲ್ಲಿನ ಸಂಸ್ಕೃತಿಯ ಪರಿ­ಚಯ ಮಾಡಿಸುವ ಉದ್ದೇಶದಿಂದ ಜಪಾನಿ ಭಾಷಾ ತಜ್ಞ ಎಚ್‌. ಗಣೇಶ್‌ ಅವರು 1984ರಲ್ಲಿ ಸ್ಥಾಪಿಸಿದ್ದ ಜಪಾ­ನೀಸ್‌ ಲಾಂಗ್ವೇಜ್‌ ಸ್ಕೂಲ್‌, 30ನೇ ವಸಂತ­ಗಳನ್ನು ಪೂರೈಸುತ್ತಿರುವ ಸಂಭ್ರ­ಮ­ವನ್ನು ಹಂಚಿಕೊಳ್ಳಲು ಆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು ಸರಳ ಸಮಾರಂಭ­ವನ್ನು ಹಮ್ಮಿ­ಕೊಂಡಿತ್ತು.

ನಗರದಲ್ಲಿರುವ ಜಪಾನಿನ ಕಾನ್ಸು­ಲೇಟ್‌ನ ಮುಖ್ಯಸ್ಥ ನೊಬುವಾಕಿ ಯಮ­ಮೊಟೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜಪಾನೀಸ್‌ ಲಾಂಗ್ವೇಜ್‌ ಸ್ಕೂಲ್‌ ಮಾಡು­ತ್ತಿರುವ ಕಾರ್ಯವನ್ನು ಶ್ಲಾಘಿ­ಸಿದ ಅವರು, ‘ವಿದೇಶಗಳಲ್ಲಿ ಜಪಾನ್‌ ಭಾಷೆಗಳನ್ನು ಪ್ರಚುರ ಪಡಿಸು­ವುದು ನಮ್ಮ ಸರ್ಕಾರದ ನೀತಿಗಳಲ್ಲಿ ಒಂದು. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಪಾನಿ ಭಾಷೆ ಕಲಿ­ಯುತ್ತಿರುವುದು ಸಂತಸ ತಂದಿದೆ ಭಾರತದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಪಾನಿಗೆ ಭೇಟಿ ನೀಡಬೇಕು’ ಎಂದು ಆಶಿಸಿದರು.

ನಿವೃತ್ತ ಐಪಿಎಸ್‌ ಅಧಿಕಾರಿ ಜೀಜಾ ಹರಿಸಿಂಗ್‌, ಸ್ಕೂಲ್‌ನ ಹಳೆ ವಿದ್ಯಾರ್ಥಿ, ವೃತ್ತಿಯಲ್ಲಿ ವೈದ್ಯರಾಗಿರುವ ಸುಧೀರ್‌ ವಿನೇಕರ್ ಅವರು ಸ್ಕೂಲ್‌ನ ಸಂಸ್ಥಾಪಕ ಎಚ್‌.ಗಣೇಶ್‌ ಅವರೊಂದಿಗಿನ ಒಡ­ನಾಟ­­­ವನ್ನು ಸ್ಮರಿಸಿದರು. ಎಚ್‌. ಗಣೇಶ್‌ ಪುತ್ರರಾದ ಮನ­ಮೋಹನ್‌ ಗಣೇಶ್‌, ಪ್ರಸನ್ನ ಕುಮಾರ್‌ ಮಾತ­ನಾಡಿದರು. ಕಾರ್ಯ­ಕ್ರಮದ ಕೊನೆಯಲ್ಲಿ ವಿದುಷಿ ಗೀತಾ ನಾವಳೆ ಅವರ ವೀಣಾ ವಾದನ ಮತ್ತು ‘ರಾಯಲ್‌ ಎಕೋ’ ಎಂಬ ಜಪಾನಿ ತಂಡ ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಇಡೀ ಸಮಾರಂಭವನ್ನು ಮತ್ತಷ್ಟು ಕಳೆ ಕಟ್ಟುವಂತೆ ಮಾಡಿತು.

ಕರ್ನಾಟಕದಲ್ಲಿ 300 ಜಪಾನ್‌ ಕಂಪೆನಿಗಳು
ಕಾರ್ಯಕ್ರಮದಲ್ಲಿ ಜಪಾನ್‌ ಮತ್ತು ಭಾರ­ತದ ನಡುವಣ ದ್ವಿಪಕ್ಷೀಯ ಸಂಬಂಧ­ಗಳ ಬಗ್ಗೆ ವಿವರಣೆ ನೀಡಿದ ಜೆಸಿಎಸ್‌ಎಸ್‌ ಕನ್ಸಲ್ಟಿಂಗ್‌ ಪ್ರೈ. ಲಿ ನ ಮಸಕಾಜು ಕುಬೋಕಿ, 30 ವರ್ಷಗಳ ಅವಧಿ­ಯಲ್ಲಿ ಎರಡೂ ರಾಷ್ಟ್ರಗಳ ನಡು­ವಣ ವ್ಯಾಪಾರ ಸಂಬಂಧದಲ್ಲಿ ಆಗಿರುವ ಪ್ರಗತಿ­ಯನ್ನು ಅಂಕಿ ಸಂಖ್ಯೆಗಳ ಸಮೇತ ವಿವರಿಸಿದರು. 1980ರಲ್ಲಿ ಉಭಯ ರಾಷ್ಟ್ರಗಳ ನಡು­­ವಣ ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₨10,540 ಕೋಟಿ ಇದ್ದರೆ, 2013ರಲ್ಲಿ ಈ ಮೌಲ್ಯ ₨1,01,060­ಕ್ಕೆ ಏರಿತ್ತು ಎಂದರು.

2003ರಲ್ಲಿ ಜಪಾನಿನ 231 ಕಂಪೆನಿ­ಗಳು ಭಾರತದಲ್ಲಿ ಕಾರ್ಯ­ನಿರ್ವಹಿಸು­ತ್ತಿ­ದ್ದವು. 2013ರಲ್ಲಿ ಈ ಸಂಖ್ಯೆ 1072ಕ್ಕೆ  ಏರಿದೆ ಎಂದರು. ಕರ್ನಾಟಕದಲ್ಲಿ 2008­ರಲ್ಲಿ 104 ಕಂಪೆನಿಗಳಿದ್ದವು. ಈಗ 300 ಕಂಪೆನಿ­ಗಳಿವೆ. ಸದ್ಯ ಭಾರತದಲ್ಲಿ 7885 ಜಪಾನಿ­-ಯರು ನೆಲೆಸಿದ್ದು, ಬೆಂಗಳೂರಿ­ನಲ್ಲೇ 1,120 ಮಂದಿ ಇದ್ದಾರೆ ಎಂದು ವಿವರಿಸಿದರು.

Write A Comment