ಕರ್ನಾಟಕ

ಸಂಧಾನ ಯಶಸ್ವಿ: ಜರುಗಿದ ಅಂತ್ಯಕ್ರಿಯೆ; ಪೊಲೀಸ್‌ ಬಲಕ್ಕೆ ಬೆದರಿದ ಕಟ್ಟಿಗೇನಹಳ್ಳಿ ಗ್ರಾಮ

Pinterest LinkedIn Tumblr

police

ಕಟ್ಟಿಗೇನಹಳ್ಳಿ (ತುಮಕೂರು ತಾಲ್ಲೂಕು): ಅಜ್ಜಗೊಂಡನಹಳ್ಳಿ ಘನ­ತ್ಯಾಜ್ಯ ಘಟಕ ವಿರೋಧಿಸಿ ಶಿವಕುಮಾರ್‌ ಆತ್ಮಹತ್ಯೆ ನಂತರ ತಾಲ್ಲೂಕಿನ ಕಟ್ಟಿಗೇನ­ಹಳ್ಳಿ ಗ್ರಾಮದಲ್ಲಿ 48 ಗಂಟೆಗಳಿಂದ ಉಂಟಾಗಿದ್ದ ಉದ್ವಿಗ್ನತೆ ಭಾನುವಾರ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರ ನೇತೃತ್ವದ ಸಂಧಾನ ಸಭೆಯಲ್ಲಿ ಶಮನಗೊಂಡಿತು.

ಗ್ರಾಮಕ್ಕೆ ಕಾಲಿಡಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸಹಿತ ಪೊಲೀಸ್‌ ಅಧಿಕಾರಿಗಳು ಹೆದರಿ­ದರು. ರಾತ್ರಿ ಪೊಲೀಸ್ ಬಲ ಪ್ರಯೋಗಿಸಿ ಶವ ಸಂಸ್ಕಾರ ನಡೆಸುವ  ಕಾರ್ಯತಂತ್ರ ಕೂಡ ರೂಪಿಸಲಾಗಿತ್ತು. ಆದರೆ ಕೊನೆಗೆ ಸಂಧಾನಕ್ಕೆ ಒಪ್ಪಿದ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು. ಶವ ಸಂಸ್ಕಾರದ ವೇಳೆ ಕುಟುಂಬದವರನ್ನು ಬಿಟ್ಟರೆ  ಪೊಲೀಸ್‌ ಪಡೆಯೇ ತುಂಬಿ ಹೋಗಿತ್ತು. ಶವದ ಹತ್ತಿರ ಹೋಗಲು ಗ್ರಾಮದವರಿಗೆ ಆಗಲಿಲ್ಲ.

ಕೋಡಿಹಳ್ಳಿ ಚಂದ್ರಶೇಖರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ  ಆರ್‌.ಲಕ್ಷ್ಮಣ್‌, ಕಾರ್ತಿಕ್‌ರೆಡ್ಡಿ ಹಾಗೂ ಗ್ರಾಮದ ಮುಖಂಡರ ಸಹಭಾಗಿತ್ವ­ದಲ್ಲಿ ಮೃತ ಶಿವಕುಮಾರ್‌ ಅವರ ತೋಟ­ದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.

ಸಂಜೆ 6.30ಕ್ಕೆ ಸಶಸ್ತ್ರಧಾರಿ ಪೊಲೀಸರು ಗ್ರಾಮ ಪ್ರವೇಶಿಸಿ­ದಾಗ ಗ್ರಾಮ­ಸ್ಥರು ಹೆದರಲಾರಂಭಿಸಿ­ದರು. ಆದರೆ ಕೋಡಿಹಳ್ಳಿ ಚಂದ್ರ­ಶೇಖರ್‌, ಪ್ರಾಂತ ರೈತ ಸಂಘದ  ಬಿ.ಉಮೇಶ್‌, ಉಪ ವಿಭಾಗಾಧಿಕಾರಿ ಕೆ.ಎಲ್‌.­ಆನಂದ್‌ ಗ್ರಾಮಸ್ಥರಿಗೆ ಧೈರ್ಯ ಹೇಳಿದರು.

‘ಶನಿವಾರ ರಾತ್ರಿ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ನಡೆದ ಘಟನೆ ದುರದೃಷ್ಟಕರ. ಮೃತ ಶಿವ­ಕುಮಾರ್‌ ಕುಟುಂಬಕ್ಕೆ ಸರ್ಕಾರ ಎಲ್ಲಾ ರೀತಿಯ ಪರಿಹಾರ ಒದಗಿಸಲಿದೆ. ಜತೆಗೆ ಕಸ ವಿಲೇವಾರಿ ಸಮಸ್ಯೆ ಕುರಿತು ರಾಜ್ಯ­ವ್ಯಾಪಿ ಆಂದೋಲನ ನಡೆಸುವ ಕುರಿತು ಶಿವಮೊಗ್ಗದಲ್ಲಿ ಸೋಮವಾರ ರೈತ ಸಂಘ ಸಭೆ ನಡೆಸಲಿದೆ.

ದ್ವೇಷ, ಪ್ರತಿಕಾರಕ್ಕೆ ಆಸ್ಪದ ನೀಡದೇ ಅಂತ್ಯ­ಸಂಸ್ಕಾರಕ್ಕೆ ಅವಕಾಶ ನೀಡಬೇಕು’ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಕೆ.ಎಲ್‌.ಆನಂದ್ ಮಾತನಾಡಿ, ‘ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಹಾಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಅಜ್ಜಗೊಂಡನಹಳ್ಳಿ ತ್ಯಾಜ್ಯ ಘಟಕ ಸ್ಥಾವರ ವಿರೋಧಿಸಿ ಸುತ್ತಮುತ್ತಲ ಗ್ರಾಮಸ್ಥರು ನಡೆಸುತ್ತಿರುವ ಹೋರಾ­ಟದಲ್ಲಿ ಪೊಲೀಸರು ಮೊದಲಿನಿಂದಲೂ ಜೊತೆಗಿದ್ದರು. ಎಂದಿಗೂ ಹೋರಾಟ ಕಿತ್ತುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಆದರೆ ನಿನ್ನೆ ನಡೆದ ಆಕಸ್ಮಿಕ ಘಟನೆ ನೋವಿನ ಸಂಗತಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸುವುದಿಲ್ಲ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಲಕ್ಷ್ಮಣ್‌ ಭರವಸೆ ನೀಡಿದರು.

ಗ್ರಾಮದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ. ಪೊಲೀಸ್‌ ಬಂದೋ ಬಸ್ತ್‌, ಗಸ್ತು ಹಾಕಿಲ್ಲ.

Write A Comment