ಕರ್ನಾಟಕ

ಗ್ರಾಮ ಸ್ವಾವಲಂಬನೆಗೆ ಪೀಠತ್ಯಾಗದ ನಿರ್ಧಾರ; ಕನೇರಿ ಸಿದ್ಧಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ

Pinterest LinkedIn Tumblr

peeta

ಬೆಳಗಾವಿ: ಗ್ರಾಮಗಳ ಸ್ವಾವಲಂಬನೆ ಮತ್ತು ಸಾವಯವ ಕೃಷಿ ಜನಪ್ರಿಯ­ಗೊಳಿಸು­ವುದಕ್ಕಾಗಿ ಸ್ವಾಮೀಜಿಯೊಬ್ಬರು ಪೀಠತ್ಯಾಗಕ್ಕೆ ಸಿದ್ಧರಾಗಿದ್ದಾರೆ.

ಇಲ್ಲಿಂದ 100 ಕಿ.ಮೀ ದೂರದ­ಲ್ಲಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ. ಬರುವ ಶಿವರಾತ್ರಿ ನಂತರ ಅವರು ಪೀಠದ ಜವಾಬ್ದಾರಿಯನ್ನು ಉಪ್ಪಿನ ಕಾಡಸಿ­ದ್ದೇಶ್ವರ ಸ್ವಾಮೀಜಿ ಅವರಿಗೆ ವಹಿಸಿ ತಾವು ಸಂಪೂರ್ಣವಾಗಿ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವ ಜವಾಬ್ದಾರಿ ಹೊರಲಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲ್ಲೂಕಿನ ಕನೇರಿ ಸಿದ್ಧಗಿರಿ ಮಠಕ್ಕೆ 1,300 ವರ್ಷಗಳ ಇತಿಹಾಸವಿದೆ. ಇಲ್ಲಿ ಪುರಾತನ ಶಿವನ ದೇವಾಲಯವಿದೆ. ಸದ್ಯಕ್ಕೆ ಇದು ಯಾತ್ರಾ ಮತ್ತು ಪ್ರವಾಸಿ ತಾಣವೂ ಆಗಿದೆ. ಶಿಲಾವನ, ಗ್ರಾಮೀಣ ಬದುಕಿನ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುವ ಮೂಲಕ ಕೇವಲ ಪುಣ್ಯಕ್ಷೇತ್ರ-ವಾಗಿದ್ದ ಕನೇರಿಯನ್ನು ಪ್ರವಾಸಿ ತಾಣವ­ನ್ನಾಗಿಯೂ ಕಾಡಸಿದ್ದೇಶ್ವರ ಸ್ವಾಮೀಜಿ ಪರಿವರ್ತಿಸಿದ್ದಾರೆ.

ಕಳೆದ 28 ವರ್ಷಗಳಿಂದ ಸಿದ್ಧಗಿರಿ ಮಠವನ್ನು ಮುನ್ನಡೆಸಿದ ಕಾಡಸಿದ್ದೇ-ಶ್ವರ ಸ್ವಾಮೀಜಿ ಈಗ ಮಠದ ಜವಾಬ್ದಾರಿ­ಯಿಂದ ನಿವೃತ್ತಿ ಪಡೆದು ಸಂಪೂರ್ಣ-ವಾಗಿ ತಮ್ಮನ್ನು ಗ್ರಾಮ ಸ್ವರಾಜ್ಯದತ್ತ ತೊಡಗಿಸಿಕೊಳ್ಳಲು ಬಯಸಿದ್ದಾರೆ.

‘ಸರ್ಕಾರಿ ನೌಕರರಿಗೆ ನಿವೃತ್ತಿ ಇದೆ. ಉಳಿದ ಎಲ್ಲ ನೌಕರರಿಗೂ ನಿವೃತ್ತಿ ಇದೆ. ನಮಗೂ ನಿವೃತ್ತಿ ಬೇಕು ಅನ್ನಿಸಿತು. ಆದರೆ ಈ ನಿವೃತ್ತಿ ಕೇವಲ ಮಠದ ಜವಾಬ್ದಾರಿಯಿಂದಲೇ ಹೊರತು ಸಾಮಾ­ಜಿಕ ಕಾರ್ಯಗಳಿಂದ ಅಲ್ಲ’ ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪೀಠದಲ್ಲಿ ಇದ್ದುಕೊಂಡೇ ಸಾಮಾ­ಜಿಕ ಕೆಲಸಗಳನ್ನು ಮಾಡಬಹುದಲ್ಲ ಎಂಬ ಪ್ರಶ್ನೆಗೆ ‘ಪೀಠದಲ್ಲಿ ಇದ್ದು-ಕೊಂಡು ಏನೇನು ಮಾಡಬಹುದೋ ಅದೆಲ್ಲ­ವನ್ನೂ ಮಾಡಿದ್ದೇವೆ. ದೇಸಿ ಗೋ ತಳಿಗಳ ಸಂವರ್ಧನೆಗೆ ಗೋಶಾಲೆ ತೆರೆಯಲಾಗಿದೆ. 700ಕ್ಕೂ ಹೆಚ್ಚಿನ ಗೋವುಗಳು ಇಲ್ಲಿವೆ. 150ಕ್ಕೂ ಹೆಚ್ಚು ತಳಿಯ ಹಸುಗಳಿವೆ. ಮಠದ ಸುತ್ತಲಿನ 100 ಗ್ರಾಮಗಳಲ್ಲಿ ಗೋ ಸಂವ­ರ್ಧನೆಯ ಬಗ್ಗೆ, ಸಾವಯವ ಕೃಷಿಯ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ನಿರಂತರ-ವಾಗಿ ನಡೆಯುತ್ತಿದೆ. ರೈತರಿಗೆ ತರಬೇತಿ ನೀಡಲಾಗುತ್ತಿದೆ.

ಆಯುರ್ವೇದ ಮತ್ತು ಆತ್ಯಾಧುನಿಕ ಆಸ್ಪತ್ರೆ ತೆರೆಯಲಾಗಿದೆ. ಹಳ್ಳಿಯ ಜನಜೀವನ ಬಿಂಬಿಸುವ ವಸ್ತು ಸಂಗ್ರಹಾ­ಲಯ ಮಾಡಲಾಗಿದೆ. 30 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗಿದೆ. ಇವೆಲ್ಲಾ ಮಠದ ಜವಾಬ್ದಾರಿಯ ಜೊತೆಗೇ ಮಾಡಿದ್ದರೂ ಇನ್ನೂ ಹೆಚ್ಚಿನ ಸಾಮಾಜಿಕ ಕೆಲಸಗಳಲ್ಲಿ ತೊಡಗಿ­ಕೊಳ್ಳಲು ಪೀಠತ್ಯಾಗ ಅನಿವಾರ್ಯ. ಪೀಠದಲ್ಲಿ ಇದ್ದರೆ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸ-ಲೇ-ಬೇಕು. ಪೂಜೆ ಮಾಡಲೇ ಬೇಕು. ಭಕ್ತರ ಮನೆಗಳಿಗೆ ಹೋಗಿ ಧಾರ್ಮಿಕ ಪ್ರವಚನ ನೀಡ­ಬೇಕು. ಈ ಜವಾಬ್ದಾರಿಗಳಿಂದ ಕಳಚಿಕೊಂಡು ನಾವು ಈಗ ಸಂಪೂರ್ಣ­ವಾಗಿ ಸ್ವಾವಲಂಬಿ ಗ್ರಾಮ ನಿರ್ಮಾಣದ ಕನಸು ಕಾಣುತ್ತಿದ್ದೇವೆ’ ಎಂದು ಉತ್ತರಿಸಿದರು.

ಈಗಾಗಲೇ ಕಾಡಸಿದ್ದೇಶ್ವರ ಸ್ವಾಮೀಜಿ ಮಠದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಶೇಳಕೆವಾಡಿ ಗ್ರಾಮವನ್ನು ದತ್ತು ಪಡೆದು ಅದನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಿದ್ದಾರೆ. ಈ ಗ್ರಾಮದಲ್ಲಿ ಕಳೆದ 5 ವರ್ಷದಲ್ಲಿ ಒಂದೂ ಅಪರಾಧ ಕೃತ್ಯವಾಗಿಲ್ಲ. ಇಡೀ ಗ್ರಾಮ ‘ಬಯೋಗ್ಯಾಸ್‌’ ಸೌಲಭ್ಯ ಪಡೆದುಕೊಂಡಿದೆ. ಶೌಚಾಲಯ ಮತ್ತು ಒಳಚರಂಡಿ ವ್ಯವಸ್ಥೆ ಇದೆ.  ಗಂಡು ಹೆಣ್ಣಿನ ಅನುಪಾತ ಸಮಾನವಾಗಿದೆ. ಎಲ್ಲ ಮಕ್ಕಳಿಗೆ ಶಿಕ್ಷಣ, ಸ್ವಚ್ಛತೆ ಎಲ್ಲವನ್ನೂ ಸಾಧಿಸಲಾಗಿದೆ. ‘ದೇಶದ ಎಲ್ಲ ಗ್ರಾಮಗಳೂ ಹೀಗೆಯೇ ಆಗಬೇಕು ಎನ್ನುವುದು ನಮ್ಮ ಕನಸು. ಗ್ರಾಮ ಸ್ವರಾಜ್ಯವಾದರೆ ದೇಶ ಸ್ವಾವಲಂಬಿ­ಯಾಗುತ್ತದೆ’ ಎನ್ನುತ್ತಾರೆ ಸ್ವಾಮೀಜಿ.

ಕೇವಲ ಒಂದು ಎಕರೆ ಕೃಷಿ ಜಮೀನಿ­ನಲ್ಲಿ ಒಂದು ಕುಟುಂಬ ಸ್ವತಂತ್ರವಾಗಿ ಬದುಕುವ ಹಾಗೆ ಮಾಡುವುದು ಅವರ ಗುರಿ. ಅದಕ್ಕಾಗಿ ಪ್ರಾತ್ಯಕ್ಷಿಕೆಯನ್ನು ಅವರು ಇಲ್ಲಿ ಮಾಡಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಒಂದು ಕುಟುಂಬಕ್ಕೆ ಬೇಕಾಗುವ ಎಲ್ಲ ದವಸಧಾನ್ಯಗಳನ್ನೂ ಬೆಳೆಯಲು ಸಾಧ್ಯವಿದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಂತರ ಬೆಳೆಯ ಮೂಲಕ ಪ್ರತಿ ದಿನ ರೈತನಿಗೆ ಕನಿಷ್ಠ ₨ 400 ಆದಾಯ ಬರುವ ಹಾಗೆ ಮಾಡಿದ್ದಾರೆ. ಎಲ್ಲಿಯೂ ರಾಸಾಯನಿಕ ಗೊಬ್ಬರವನ್ನು ಬಳಸದೆ ಕೇವಲ ಸಾವಯವ ಗೊಬ್ಬರ ಮತ್ತು ವಿಧಾನದ ಮೂಲಕವೇ ಎಲ್ಲವನ್ನೂ ಬೆಳೆದಿದ್ದಾರೆ. ‘ಕೇವಲ ಕೃಷಿ ಸಾವಯವ ಆದರೆ ಸಾಲದು. ರೈತರ ಬದುಕೂ ಸಾವಯವ ಆಗಬೇಕು. ದೇಶದ ಎಲ್ಲ ರೈತರೂ ಹೀಗೆ ಸ್ವಾವಲಂಬಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ’ ಎನ್ನುವುದು ಅವರ ಅಭಿಪ್ರಾಯ.

‘ಮಠದ ಪೀಠಾಧಿಪತಿಯಾಗಿ ಪೂಜೆ ಪುನಸ್ಕಾರ, ಆಶೀರ್ವಾದ ಪ್ರವಚನ­ಗಳಲ್ಲಿಯೇ ಕಳೆದು ಹೋದರೆ ನಮ್ಮ ಈ ಎಲ್ಲ ಕನಸುಗಳು ನನಸಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಮೂರು ವರ್ಷದ ಹಿಂದೆಯೇ ಪೀಠತ್ಯಾಗದ ಮನಸ್ಸು ಮಾಡಿ ಹೊಸ ಪೀಠಾಧಿಪತಿಯನ್ನೂ ಗುರುತಿಸಲಾಗಿದೆ. ಅವರು ವಿಜಯ­ಪುರದ ಸಿದ್ದೇಶ್ವರ ಸ್ವಾಮೀಜಿ ಅವರ ಜ್ಞಾನ ಯೋಗಾಶ್ರಮದಲ್ಲಿ ಅಧ್ಯ-ಯನ ನಡೆಸಿದ್ದಾರೆ. ಬರುವ ಶಿವರಾತ್ರಿಯ ದಿನ ಅವರಿಗೆ ಎಲ್ಲ ಜವಾಬ್ದಾರಿಯನ್ನು ಕೊಟ್ಟು ನಾವು ಸಂಪೂರ್ಣವಾಗಿ ರೈತ ಸಮುದಾಯದ ಸೇವೆಯಲ್ಲಿ ತೊಡ­ಗುತ್ತೇವೆ. ಗ್ರಾಮಗಳ ಸಮಗ್ರ ಅಭಿ-ವೃದ್ಧಿಗೆ ಕಂಕಣಬದ್ಧರಾಗುತ್ತೇವೆ. ಯುವಜನ ಸಂಘಟನೆ, ರೈತರ ತರಬೇತಿಯೇ ನಮ್ಮ ಗುರಿ’ ಎಂದರು.

ಜ.19ರಿಂದ ಭಾರತೀಯ ಸಂಸ್ಕೃತಿ ಉತ್ಸವ
ಭಾರತ ವಿಕಾಸ ಸಂಗಮದ 4ನೇ ಸಮ್ಮೇಳನ 2015ರ ಜನವರಿ 19-ರಿಂದ 25ರವರೆಗೆ ಕನೇರಿಯಲ್ಲಿ ನಡೆಯಲಿದೆ. ಸುಮಾರು ನೂರು ಎಕರೆ ಜಾಗದಲ್ಲಿ ಇದಕ್ಕಾಗಿ ತಯಾರಿ ನಡೆಸಲಾಗಿದೆ. ಕೃಷಿ, ವಾರಕರಿ, ಯುವಜನ, ಮಾತೃಶಕ್ತಿ ಉತ್ಸವ, ಆರೋಗ್ಯ ಉತ್ಸವಗಳು ಇಲ್ಲಿ ನಡೆಯಲಿವೆ. ಸುಮಾರು 10 ಲಕ್ಷ ಮಂದಿ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 50 ಎಕರೆ ಪ್ರದೇಶದಲ್ಲಿ ಕೃಷಿ ಪ್ರದರ್ಶನ ನಡೆಯಲಿದೆ.  ಮಾಹಿತಿಗೆ ದೂರ-ವಾಣಿ 094036 67177 ಸಂಪರ್ಕಿಸಬಹುದು.

Write A Comment