ಕರ್ನಾಟಕ

ರಾಘವೇಶ್ವರಶ್ರೀ ವಿರುದ್ಧ ಚಾರ್ಜ್‌ಶೀಟ್

Pinterest LinkedIn Tumblr

raghaveshwara-shree01

ಬೆಂಗಳೂರು: ‘ಅತ್ಯಾಚಾರದ ಆರೋಪದಡಿಯಲ್ಲೇ ನಾವೀಗ ರಾಘವೇಶ್ವರ ಭಾರತೀ ಸ್ವಾಮೀಜಿ  ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುತ್ತೇವೆ…’

ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು ಶುಕ್ರವಾರ ಹೈಕೋರ್ಟಿಗೆ ಈ ಸ್ಪಷ್ಟನೆ ನೀಡುವುದರ ಜೊತೆ ಜೊತೆಗೇ, ‘ಸ್ವಾಮೀಜಿ ಸಿಐಡಿ ತನಿಖೆಗೆ ಸಹಕರಿಸುತ್ತಿಲ್ಲ’ ಎಂಬ ಗಂಭೀರ ಆರೋಪ ಮಾಡಿ­ದರು. ರಾಮ­ಕಥಾ ಗಾಯಕಿ­ ಹೊರಿ­ಸಿರುವ ಅತ್ಯಾಚಾ­ರದ ಆರೋಪ­ವನ್ನು ರದ್ದುಗೊಳಿ­ಸು­ವಂತೆ ರಾಘ­ವೇಶ್ವರ ಶ್ರೀಗಳು ಕೋರಿರುವ ಮೇಲ್ಮ­ನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್.­ವಘೇಲಾ ಹಾಗೂ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಪೀಠವು ಶುಕ್ರವಾರ ನಡೆಸಿತು. ಸ್ವಾಮೀಜಿ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, ‘ಪೀಠದ ಘನತೆ ಕುಗ್ಗಿಸಲು ರಾಮಕಥಾ ಗಾಯಕಿ ಸುಳ್ಳು ದೂರನ್ನು ವ್ಯವಸ್ಥಿತವಾಗಿ ಹೆಣೆದಿದ್ದಾರೆ’ ಎಂದು ದೂಷಿಸಿದರು.

ಆಗ ಮುಖ್ಯ ನ್ಯಾಯಮೂರ್ತಿಗಳು, ‘ನೀವೀಗ ನಡೆಸುತ್ತಿರುವ ಸಿಐಡಿ ತನಿಖೆ ಆರೋಪಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವುದಕ್ಕೆ ಸಾಕಾಗುತ್ತ­ದೆಯೇ’ ಎಂದು ಅಡ್ವೊಕೇಟ್ ಜನರಲ್‌ರನ್ನು ಪ್ರಶ್ನಿಸಿದರು.

ಆಗ ಅಡ್ವೊಕೇಟ್ ಜನರಲ್ ಅವರು, ‘ಹೌದು ಸಾಕಾಗುತ್ತದೆ. ಆದಾಗ್ಯೂ ಆರೋಪಿಯು ಬಾಕಿ ಇರುವ ಕೆಲ ವೈದ್ಯಕೀಯ ಪರೀಕ್ಷೆಗಳಿಗೆ ತನಿಖಾ ಸಂಸ್ಥೆಯ ಜೊತೆ ಸಹಕರಿಸುತ್ತಿಲ್ಲ’ ಎಂದು ದೂರಿದರು.

‘ಹಾಗಾದರೆ ಈತನಕ ನಡೆಸಿರುವ ವೈದ್ಯಕೀಯ ಪರೀಕ್ಷೆಯ ವರದಿ ಏನು ಹೇಳುತ್ತದೆ. ನಿಮ್ಮ ಬಳಿ ಡಿಎನ್ಎ ವರದಿ ಇದೆಯೇ’ ಎಂದು ಮುಖ್ಯ ನ್ಯಾಯ­ಮೂರ್ತಿಗಳು ಮರು ಪ್ರಶ್ನೆ ಹಾಕಿದರು.

ಆಗ ಸಿಐಡಿ ತನಿಖಾ ಅಧಿಕಾರಿಗಳು ಅಡ್ವೊಕೇಟ್ ಜನರಲ್ ಅವರಿಗೆ ಮುಚ್ಚಿದ ಎರಡು ಲಕೋಟೆಗಳನ್ನು ನೀಡಿದರು. ರವಿವರ್ಮ ಕುಮಾರ್ ಲಕೋಟೆಯನ್ನು ನ್ಯಾಯ­­ಪೀಠಕ್ಕೆ ಒಪ್ಪಿಸಲು ಮುಂದಾದರು. ಆದರೆ ಮುಖ್ಯ ನ್ಯಾಯ­ಮೂರ್ತಿಗಳು ಅವನ್ನು ಸ್ವೀಕರಿಸದೆ, ‘ವರದಿ ಏನು ಹೇಳುತ್ತದೆ. ನೀವೇ ಓದಿ ತಿಳಿಸಿ’
ಎಂದು ಸೂಚಿಸಿದರು.

ಸಕಾರಾತ್ಮಕ ವರದಿ: ತಕ್ಷಣವೇ ವರದಿಯನ್ನು ಮುಚ್ಚಿದ ಲಕೋಟೆಯಿಂದ ತೆರೆದ ಅಡ್ವೊಕೇಟ್ ಜನರಲ್ ಅವರು ಸ್ಥೂಲವಾಗಿ ನಾಲ್ಕಾರು ಪುಟಗಳ ಮೇಲೆ ಕಣ್ಣಾಡಿಸಿದರು. ನಂತರ ಮುಖ್ಯ ನ್ಯಾಯ­ಮೂರ್ತಿ­ಗಳತ್ತ ತಿರುಗಿ, ವೈದ್ಯಕೀಯ ಪರೀಕ್ಷೆಯ ವರದಿ ಸಕಾರಾತ್ಮಕವಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯ­ಮೂರ್ತಿ­ಗಳು, ‘ಹಾಗಾದರೆ ಆರೋಪ ಪಟ್ಟಿ ಸಲ್ಲಿಸಲು ಈಗಿ­ರುವ ಸಾಕ್ಷ್ಯ ಸಾಕಾಗುತ್ತದೆಯಲ್ಲವೇ’ ಎಂದು ಕೇಳಿದರು.
ರವಿವರ್ಮ ಕುಮಾರ್ ‘ಹೌದು’ ಎಂದು ಹೇಳುತ್ತಿ­ದ್ದಂತೆಯೇ ‘ಅಂದರೆ ಯಾವ ಆರೋಪದಡಿ ಆರೋಪ ಪಟ್ಟಿ ಸಲ್ಲಿಸುತ್ತೀರಿ’ ಎಂದರು.

‘ಭಾರತೀಯ ದಂಡ ಸಂಹಿತೆ ಕಲಂ 376ರ (ಮಹಿಳೆಯ ಮೇಲಿನ ಅತ್ಯಾಚಾರ) ಅಡಿಯಲ್ಲಿಯೇ ಆರೋಪ ಪಟ್ಟಿ ಸಲ್ಲಿಸುತ್ತೇವೆ’ ಎಂದು ರವಿವರ್ಮ ಕುಮಾರ್ ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಬಿ.ವಿ.­ಆಚಾರ್ಯ ಅವರನ್ನು ‘ಮತ್ತೇಕೆ ನೀವು ವಾದ ಮುಂದುವರಿಸುತ್ತೀರಿ? ಪ್ರಾಸಿಕ್ಯೂಷನ್ ಐಪಿಸಿ ಕಲಂ 376ರ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸುತ್ತಿದೆ ಎಂದು ಹೇಳುತ್ತಿರುವಾಗ ವಾದ ಮುಂದುವರಿಸುವ ಅಗತ್ಯವಿದೆಯೇ’ ಎಂದು ಕೇಳಿದರು.

ಇದಕ್ಕೆ ಆಚಾರ್ಯ ಅವರು, ‘ಹೌದು. ಇದೊಂದು ದುರುದ್ದೇಶ ಪೂರಿತ ಹಾಗೂ ಪೂರ್ವ ತಯಾರಿ­ಯಿಂದ ಕೂಡಿದ ಸಂಚಿನ ದೂರು. ಸಂತ್ರಸ್ತೆ ಮತ್ತು ಆಕೆಯ ಪತಿ ದೂರು ಸಲ್ಲಿಸುವ ಮೊದಲು ಕಾನೂನು ತಜ್ಞರನ್ನು, ಜ್ಯೋತಿಷಿ­ಗಳನ್ನು ಅಷ್ಟೇಕೆ ಸಂತ್ರಸ್ತೆಯ ಜಾತಕವನ್ನೂ ನೋಡಿಕೊಂಡು ವ್ಯವಸ್ಥಿತವಾಗಿ ತಯಾರಿಸಿದ್ದಾರೆ. ದೂರಿನ ಬಹಳಷ್ಟು ಕಡೆ ಒಂದರಿಂದ ಮತ್ತೊಂದು ಪ್ಯಾರಾ ನಡುವೆ ಖಾಲಿ ಸ್ಥಳವಿತ್ತು.

ಈ ಸ್ಥಳವನ್ನು ನಂತರ ಅನುಕೂಲಕರ ರೀತಿಯಲ್ಲಿ ಭರ್ತಿ ಮಾಡಲಾಗಿದೆ. ಸಂತ್ರಸ್ತೆಯ ಐಪಾಡ್, ಐಫೋನ್,  ಪತಿಯೊಂದಿಗೆ ನಡೆಸಿದ ಇಮೇಲ್ ಸಂವಹನಗಳು ನಮ್ಮ  ಈ ಅನುಮಾನ­ಗಳನ್ನು  ಬಲಗೊಳಿಸುವಂತಿವೆ. ಸ್ವಾಮೀಜಿ­ಯ­ವರನ್ನು ಪೀಠತ್ಯಾಗ ಮಾಡಿಸಿ ಜೈಲಿಗೆ ಕಳಿಸಲೇಬೇಕು ಎಂಬುದೇ ಸಂತ್ರಸ್ತೆಯ ಏಕೈಕ ದುರುದ್ದೇಶವಾಗಿದೆ’ ಎಂದು ಪ್ರತಿಪಾದಿಸಿದರು. ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡ­ಲಾಯಿತು.

Write A Comment