ಕರ್ನಾಟಕ

ಸದನದಲ್ಲಿ ಮೊಬೈಲ್ ನಿಷೇಧ: ಪ್ರಭು ಚವಾಣ್ ಒಂದು ದಿನ ಅಮಾನತು, ನೀತಿ ಸಂಹಿತೆಗೆ ಸಮಿತಿ ರಚನೆ

Pinterest LinkedIn Tumblr

13assembly

ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಮೊಬೈಲ್‌­ನಲ್ಲಿ ಪ್ರಿಯಾಂಕಾ ಗಾಂಧಿ ಚಿತ್ರ ವೀಕ್ಷಿಸುತ್ತಿದ್ದ ಬಿಜೆಪಿ ಶಾಸಕ ಪ್ರಭು ಚವಾಣ್ ಅವರನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಶುಕ್ರವಾರ ದಿನದ ಮಟ್ಟಿಗೆ ಅಮಾನತುಗೊಳಿಸಿದರು.

ವಸತಿ ಸಚಿವ ಎಂ.ಎಚ್.ಅಂಬರೀಷ್ ಮತ್ತು ಕಾಂಗ್ರೆಸ್ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಕೂಡ ಬುಧವಾರ ಸದನದ ಕಲಾಪದ ವೇಳೆ ಮೊಬೈಲ್ ವೀಕ್ಷಿಸಿರುವುದು ಗಮನಕ್ಕೆ ಬಂದಿದೆ ಎಂದು ದೃಢಪಡಿಸಿದ ಸ್ಪೀಕರ್, ಮುಂದೆ ಈ ರೀತಿ ಅಸಭ್ಯವಾಗಿ ವರ್ತಿಸದಂತೆ ಇಬ್ಬರಿಗೂ ಸದ­ನದಲ್ಲಿಯೇ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

ಇನ್ನು ಮುಂದೆ ಕಲಾಪದ ವೇಳೆ ಯಾವುದೇ ಶಾಸಕರು ಮೊಬೈಲ್ ಬಳಸದಂತೆ ನಿಷೇಧಿಸಲಾ­ಗಿದೆ ಎಂದು ಪ್ರಕಟಿಸಿದರು.
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಮುಂದು­ವರಿಸಿದರು. ಆಗ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ‘ಬುಧವಾರ ನಡೆದ ಘಟನೆ ಪುನರಾವರ್ತನೆ ಆಗಬಾರದು. ನಾವು ಧರಣಿಯನ್ನು ಹಿಂದಕ್ಕೆ ಪಡೆಯುತ್ತೇವೆ. ಈ ವಿಷಯ­ದಲ್ಲಿ ನೀವು ನೀಡುವ ತೀರ್ಪಿಗೆ ತಲೆಬಾಗುತ್ತೇವೆ’ ಎಂದರು.

ಬಳಿಕ ನಿರ್ಣಯ ಪ್ರಕಟಿಸಿದ ಸ್ಪೀಕರ್, ‘ಪ್ರಭು ಚವಾಣ್ ಬುಧವಾರ ಕಲಾಪದ ವೇಳೆ ತಮ್ಮ ಮೊಬೈಲ್‌­ನಲ್ಲಿದ್ದ ಚಿತ್ರವನ್ನು ಅಸಭ್ಯವಾಗಿ ವೀಕ್ಷಿಸಿ­ದ್ದಾರೆ ಎಂಬುದು ಮನವರಿಕೆಯಾಗಿದೆ. ಈ ಬಗ್ಗೆ ಸಭಾನಾಯಕರು, ವಿರೋಧ ಪಕ್ಷದ ನಾಯಕರು ಮತ್ತು ವಿವಿಧ ಪಕ್ಷಗಳ ಮುಖಂಡರ ಜೊತೆ ಚರ್ಚಿಸಿದ್ದೇನೆ’ ಎಂದರು.

ಅವರು ಅಮಾನತು ಆದೇಶ ಪ್ರಕಟಿಸುತ್ತಿದ್ದಂತೆ ಚವಾಣ್ ಬಳಿ ಹೋದ ವಿಧಾನಸಭೆಯ ಸಿಬ್ಬಂದಿ, ಸದನದಿಂದ ಹೊರಹೋಗುವಂತೆ ಸೂಚಿಸಿದರು. ಆಗ ಚವಾಣ್‌, ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಕಡೆ ನೋಡಿದರು. ಅವರೂ ಸಹ ಹೊರ ನಡೆಯುವಂತೆ ಸನ್ನೆ ಮಾಡಿದರು. ಬಳಿಕ ಚವಾಣ್ ವಿಧಾನಸಭೆಯಿಂದ ಹೊರ ಹೋದರು.

ನಿಷೇಧ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂವರು ಸಚಿವರು ಸದನದಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣ ನಡೆದಿತ್ತು. ಆಗ ಘಟನೆ ಕುರಿತು ವಿಚಾರಣೆ ನಡೆಸಲು ಅಂದಿನ ಶಾಸಕ ಶ್ರೀಶೈಲಪ್ಪ ಬಿದರೂರು ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಈ ಸಮಿತಿ 2012ರ ಡಿಸೆಂಬರ್ 7ರಂದು ವರದಿ ಸಲ್ಲಿಸಿತ್ತು. ಆ ಸಮಿತಿಯ ಶಿಫಾರಸಿನಂತೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ಸ್ಪೀಕರ್‌ ತಿಳಿಸಿದರು. ಸಮಿತಿಯ ಸಲಹೆಯಂತೆ ವಿಧಾನಸಭೆಯಲ್ಲಿ ನೀತಿಸಂಹಿತೆ ಸಮಿತಿಯನ್ನು ರಚಿಸುವುದಾಗಿಯೂ ಹೇಳಿದರು.

Write A Comment